ರೋಹಿತ್ ಶೆಟ್ಟಿ ತಂದೆ ಫೈಟರ್ ಶೆಟ್ಟಿ ಬದುಕು ದುರಂತ ಅಂತ್ಯ ಕಂಡಿದ್ದೇಗೆ? ಏನದು ಘಟನೆ?
ಬಾಲಿವುಡ್‌ನಲ್ಲಿ ದುಬಾರಿ ಆಕ್ಷನ್ ಸಿನಿಮಾಗಳನ್ನು ನಿರ್ದೇಶಿಸೋ ರೋಹಿತ್ ಶೆಟ್ಟಿ ಸಿನಿಪ್ರಿಯರಿಗೆ ಚಿರಪರಿಚಿತ. ಹಾಗೇ ಅವರ ತಂದೆ ಎಂ.ಬಿ. ಶೆಟ್ಟಿ ಅಥವಾ ಫೈಟರ್ ಶೆಟ್ಟಿ ಕೂಡ ಅಷ್ಟೇ ಜನಪ್ರಿಯ. ಬಾಲಿವುಡ್ ಹಾಗೂ ಕನ್ನಡದ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿರುವ ಎಂ.ಬಿ. ಶೆಟ್ಟಿ ಮೂಲತ: ಕರ್ನಾಟಕದ ಉಡುಪಿಯರು.
ಮನೆಯಲ್ಲಿ ಕಡು ಬಡತನ. ಹೀಗಾಗಿ ಅಂದಿನ ಬಾಂಬೆಗೆ ಹೋಗಿ ಕೆಲಸ ಮಾಡುವುದಕ್ಕೆ ಶುರು ಮಾಡಿದ್ದರು. ಬಳಿಕ ಸಿನಿಮಾ ಮಂದಿಯ ಕಣ್ಣಿಗೆ ಬಿದ್ದು, ಫೈಟರ್ ಆಗಿ ಕೆಲಸ ಮಾಡುವ ಅವಕಾಶ ಗಿಟ್ಟಿಸಿಕೊಂಡಿದ್ದರು. ಇಲ್ಲಿಂದ ಎಂ.ಬಿ. ಶೆಟ್ಟಿಯ ಬದುಕು ಬ್ಯುಸಿಯಾಗಿತ್ತು. ಹಿಂದಿ ಸಿನಿಮಾಗಳಲ್ಲಿ ಫೈಟರ್ ಆಗಿ, ನಟನಾಗಿ ಕಾಣಿಸಿಕೊಳ್ಳುವುದಕ್ಕೆ ಶುರು ಮಾಡಿದ್ದರು.

ಹಿಂದಿ ಸಿನಿಮಾಗಳ ಜೊತೆ ಕನ್ನಡದ ಹಲವು ಸಿನಿಮಾಗಳಲ್ಲೂ ನಟಿಸಿದ್ದರು. ಕೆಲವು ಸಿನಿಮಾಗಳಿಗೆ ಆಕ್ಷನ್ ಡೈರೆಕ್ಟರ್ ಆಗಿಯೂ ಕೆಲಸ ಮಾಡಿದ್ದರು. ಬದುಕು ಬ್ಯುಸಿಯಾಗಿದ್ದರು ಹಾಯ್ ಆಗಿ ಸಾಗುತ್ತಿತ್ತು. ಎಲ್ಲವೂ ಸರಿಯಾದ ಹಾದಿಯಲ್ಲಿಯೇ ಸಾಗುತ್ತಿರುವಾಗ ಫೈಟರ್ ಶೆಟ್ಟಿಯ ಬದುಕಿನಲ್ಲೊಂದು ದುರಂತ ನಡೆದು ಹೋಯ್ತು. ಅಲ್ಲಿಂದ ಮಾನಸಿಕವಾಗಿ ಕುಗ್ಗಿದ್ದ ಫೈಟರ್ ಶೆಟ್ಟಿ ಆ ದುರ್ಘಟನೆಯಿಂದ ಹೊರಬರಲೇ ಇಲ್ಲ. ಅಷ್ಟಕ್ಕೂ ಫೈಟರ್ ಶೆಟ್ಟಿ ಬದುಕಿನಲ್ಲಿ ಅಂತಹದ್ದೇನಾಯ್ತು? ತಂದೆ ಸತ್ತಾಗ ಕೇವಲ 8 ವರ್ಷದವನಾಗಿದ್ದ ರೋಹಿತ್ ಶೆಟ್ಟಿ ಬದುಕು ಕಟ್ಟಿಕೊಂಡಿದ್ದೇಗೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
70ರ ದಶಕದಲ್ಲಿ ಎಂ.ಬಿ. ಶೆಟ್ಟಿ ಜನಪ್ರಿಯ ಆಕ್ಷನ್ ಡೈರೆಕ್ಟರ್ ಆಗಿದ್ದರು. ಹಾಗೇ ಹಲವು ಸಿನಿಮಾಗಳಲ್ಲಿ ಖಳನಾಯಕನಾಗಿ ನಟಿಸುತ್ತಿದ್ದರು. ಅಮಿತಾಭ್ ಬಚ್ಚನ್, ಧರ್ಮೇಂದ್ರ, ಶತ್ರುಘ್ನ ಸಿನ್ಹಾರಂತಹ ದಿಗ್ಗಜರ ಸಿನಿಮಾಗಳಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಕನ್ನಡದ ಹಲವು ಸಿನಿಮಾಗಳಲ್ಲಿ ಖಳನಾಯಕನಾಗಿ ಫೈಟರ್ ಶೆಟ್ಟಿ ಅವರನ್ನು ನೋಡಬಹುದಾಗಿದೆ.

1980ರಲ್ಲಿ ವಿನೋದ್ ಖನ್ನಾ, ಶತ್ರುಘ್ನ ಸಿನ್ಹಾ ನಟಿಸುತ್ತಿದ್ದ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಬಾಂಬೆ 405 ಮೈಲ್ಸ್' ನಲ್ಲಿ ಫೈಟರ್ ಶೆಟ್ಟಿ ಕೆಲಸ ಮಾಡುತ್ತಿದ್ದರು. ಒಂದು ಆಕ್ಷನ್ ಸೀನ್ ಅನ್ನು ಫೈಟರ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದರು. ಈ ವೇಳೆ ಶತ್ರುಘ್ನ ಸಿನ್ಹಾಗೆ ಸ್ಟಂಟ್‌ಮ್ಯಾನ್ ಆಗಿದ್ದ ಮನ್ಸೂರ್ ಅವರನ್ನು ಮುಂದಿಟ್ಟುಕೊಂಡು ಆಕ್ಷನ್ ಸೀನ್ ಶೂಟ್ ಮಾಡುತ್ತಿದ್ದರು.
ಸ್ಟಂಟ್‌ಮ್ಯಾನ್ ಮನ್ಸೂರ್ ಓಡಿ ಬಂದು ಹಾರುವ ಬೇಕಿತ್ತು. ಬಳಿಕ ಬಾಂಬ್ ಬ್ಲಾಸ್ ಆಗಬೇಕಿತ್ತು. ಆದರೆ, ಇಲ್ಲಿ ದೊಡ್ಡ ಎಡವಟ್ಟು ಆಗಿತ್ತು. ಸ್ಟಂಟ್‌ಮ್ಯಾನ್ ಹಾರುವುದಕ್ಕೂ ಮುನ್ನವೇ ಬಾಂಬ್ ಬ್ಲಾಸ್ಟ್ ಮಾಡಲಾಗಿತ್ತು. ಇದರಿಂದ ಸ್ಟಂಟ್‌ಮ್ಯಾನ್ ದೇಹ ಸುಟ್ಟು ಹೋಗಿ ಸಾವನ್ನಪ್ಪಿದ್ದನು. ಈ ದುರಂತ ಫೈಟರ್ ಶೆಟ್ಟಿಯನ್ನು ಇನ್ನಿಲ್ಲದಂತೆ ಕಾಡುವುದಕ್ಕೆ ಶುರುವಾಗಿತ್ತು.
ತನ್ನಿಂದಲೇ ಸ್ಟಂಟ್‌ಮ್ಯಾನ್ ಸಾವಾಗಿ ಎಂದು ಕೊರಗುವುದಕ್ಕೆ ಶುರು ಮಾಡಿದ್ದರು. ಮದ್ಯಪಾನ ಮಾಡುವುದ ಹೆಚ್ಚಾಯ್ತು. ಯಶಸ್ಸಿನ ಉತ್ತುಂಗದಲ್ಲಿದ್ದ ಫೈಟರ್ ಶೆಟ್ಟಿ ಒಂದೊಂದಾಗೇ ಅವಕಾಶಗಳನ್ನು ಕಳೆದುಕೊಳ್ಳುತ್ತಾ ಹೋದರು. ಸ್ಟಂಟ್‌ಮ್ಯಾನ್ ಮನ್ಸೂರ್ ಸಾವನ್ನಪ್ಪಿ ಒಂದೇ ವರ್ಷದಲ್ಲಿ ಲಿವರ್ ಸಮಸ್ಯೆಯಿಂದ ಕೊನೆಯುಸಿರೆಳೆದರು. ಹೀಗೆ ಒಬ್ಬ ಅದ್ಭುತ ಸಾಹಸ ನಿರ್ದೇಶಕನ ಬದುಕು ಕೇವಲ 51 ವಯಸ್ಸಿನಲ್ಲಿ ದುರಂತ ಅಂತ್ಯ ಕಂಡಿತ್ತು.
700 ಸಿನಿಮಾಗಳಿಗೆ ಕೆಲಸ ಮಾಡಿದ್ದ ಫೈಟರ್ ಶೆಟ್ಟಿಗೆ ಇಬ್ಬರು ಪತ್ನಿಯರು. ಮೊದಲು ಪತ್ನಿ ವಿನೋಧಿನಿ. ಎರಡನೇ ಪತ್ನಿ ರತ್ನಾ. ಇಬ್ಬರಲ್ಲಿ ಎರಡನೇ ಪತ್ನಿ ರತ್ನಾ ಕೂಡ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಇವರ ಮಗನೇ ಬಾಲಿವುಡ್‌ನ ಸ್ಟಾರ್ ನಿರ್ದೇಶಕ ರೋಹಿತ್ ಶೆಟ್ಟಿ. ತಂದೆ ಸತ್ತಾಗ ಈತನಿಗೆ ಕೇವಲ 8 ವರ್ಷ. ಅಲ್ಲಿಂದ ಕಷ್ಟದಲ್ಲೇ ಬದುಕಿದ್ದ ರೋಹಿತ್ ಇಂದು ಅದ್ಭುತ ಬದುಕು ಕಟ್ಟಿಕೊಂಡಿದ್ದಾರೆ.


Click it and Unblock the Notifications











