'ಮನಸ್ಸು ಮಲ್ಲಿಗೆ' ನಿಂತೋಯ್ತು.. ಭಕ್ತಿ ಪ್ರಧಾನ ಸಿನಿಮಾ ಶುರುವಾಯ್ತು: ಅಣ್ಣಾವ್ರು 'ಭಕ್ತಕುಂಬಾರ'ನಾಗಿದ್ದು ಹೇಗೆ?
ಅಣ್ಣಾವ್ರ ಸಿನಿಮಾ ಈಗಲೂ ಟಿವಿಯಲ್ಲಿ ಬಂದರೆ, ಕಣ್ಣು ಮಿಟುಕಿಸದೇ ನೋಡುವ ಜನರು ಅದೆಷ್ಟೋ ಮಂದಿ ಸಿಗ್ತಾರೆ. ಅದರಲ್ಲೂ ರಾಜ್‌ಕುಮಾರ್ ಮಾಡಿದಂತಹ ಭಕ್ತ ಪ್ರಧಾನ ಸಿನಿಮಾಗಳನ್ನು ಮೀರಿಸುವುದಕ್ಕೆ ಯಾರಿಂದಲೂ ಸಾಧ್ಯವೇ ಇಲ್ಲ.
ಡಾ.ರಾಜ್‌ಕುಮಾರ್ ನಟಿಸಿದ ಭಕ್ತಿ ಪ್ರಧಾನ ಸಿನಿಮಾಗಳಲ್ಲಿ 'ಭಕ್ತಕುಂಬಾರ' ಸಿನಿಮಾ ಕೂಡ ಒಂದು. ಬೇರೆ ಯಾವುದೋ ಸಿನಿಮಾ ಮಾಡುವುದಕ್ಕೆ ಹೋಗಿ 'ಭಕ್ತಕುಂಬಾರ' ಹುಟ್ಟಿದ್ದ ಕಥೆಯೇ ಸಖತ್ ಇಂಟ್ರೆಸ್ಟಿಂಗ್. ಡಾ.ರಾಜ್‌ಕುಮಾರ್, ಲೀಲಾವತಿ ಜೊತೆಯಾಗಿ ನಟಿಸಿದ ಈ ಸಿನಿಮಾ ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾಗಳಲ್ಲೊಂದು.

ಅಷ್ಟಕ್ಕೂ 'ಭಕ್ತಕುಂಬಾರ' ಶುರುವಾಗಿದ್ದು ಹೇಗೆ? ಈ ಸಿನಿಮಾದ ನಿರ್ಮಾಪಕಿ ಯಾರು? ಈ ಸಿನಿಮಾಗೂ ಮುನ್ನ ಆರಂಭ ಆಗಿದ್ದ ಸಿನಿಮಾ ಯಾವುದು? ಆ ಸಿನಿಮಾ ಯಾಕೆ ಅಣ್ಣಾವ್ರು ಬೇಡ ಅಂದ್ರು? ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ಆರಂಭದಲ್ಲಿ ಅಣ್ಣಾವ್ರಿಗೆ 'ಭಕ್ತಕುಂಬಾರ' ಬೇಡ ಅಂದಿದ್ದೇಕೆ? ಇವೆಲ್ಲವನ್ನೂ ಹಿರಿಯ ಪತ್ರಕರ್ತ ಎನ್ ಎಸ್ ಶ್ರೀಧರ ಮೂರ್ತಿಯವರು ಮಾಣಿಕ್ಯ ಯೂಟ್ಯೂಬ್ ಚಾನೆಲ್‌ಗೆ ವಿವರಿಸಿದ್ದಾರೆ. ಅದರ ಹೈಲೈಟ್ಸ್ ಇಲ್ಲಿದೆ.
"ಅಣ್ಣಾವ್ರೇ ನಿಮಗೊಂದು ಸಿನಿಮಾ ಮಾಡಬೇಕು"
ಡಾ.ರಾಜ್‌ಕುಮಾರ್ ಯಶಸ್ಸಿನ ಉತ್ತುಂಗದಲ್ಲಿದ್ದ ಕಾಲ. ಬಾಂಡ್ ಸಿನಿಮಾಗಳನ್ನು ಮಾಡಿ ಸಿನಿಪ್ರಿಯರನ್ನು ರಂಜಿಸುತ್ತಿದ್ದರು. ಆಗ ತೆಲುಗು ನಟಿ ಕೃಷ್ಣವೇಣಿ ಅಣ್ಣಾವ್ರಿಗೆ ಸಿನಿಮಾ ಮಾಡಬೇಕು ಅಂತ ಬಂದಿದ್ದರು. ಆಗ ಒಂದು ಸಿನಿಮಾ ಶುರುವಾಗಿತ್ತು. ಇದರಲ್ಲಿ ಅಣ್ಣಾವ್ರ ಡಾಕ್ಟರ್ ಪಾತ್ರದಲ್ಲಿ ನಟಿಸಬೇಕಿತ್ತು. ಕೆಲ ದಿನ ಶೂಟಿಂಗ್ ಮಾಡಿದ ಬಳಿಕ ಆ ಸಿನಿಮಾಕ್ಕೆ ಬ್ರೇಕ್ ಹಾಕಲಾಗಿತ್ತು.

"ಮನಸ್ಸು ಮಲ್ಲಿಗೆ ಅಂತ ಒಂದು ಸಿನಿಮಾ. ಅದರಲ್ಲಿ ಅಣ್ಣಾವ್ರು ಡಾಕ್ಟರ್. ಆಮೇಲೆ ಒಂದು ಆರು ದಿನ ಆದ್ಮೇಲೆ ಮಾರಾ ಮಾರಿ ಫೈಟಿಂಗ್ ಸೀನ್. ಫೈಟಿಂಗ್ ಸೀನ್ ಮುಗಿಸಿಕೊಂಡು ಬರುವಾಗ ಅಣ್ಣಾವ್ರು ಪಾರ್ವತಮ್ಮ ಅವರಿಗೆ ಹೀಗೆ ಹೇಳಿದ್ರು. ಪಾರ್ವತಿ ಡಾಕ್ಟ್ರು ಅಂದ್ರೆ ಒಂದು ಕಲ್ಪನೆ ಇದೆ ನಮಗೆ. ಡಾಕ್ಟರ್ ಹಿಂಗೆ ಬೀದಿ ಜಗಳ ಮಾಡೋದು ಯಾಕೋ ಸರಿಯಿಲ್ಲ ಇದು. ಡಾಕ್ಟ್ರು ಬಗ್ಗೆ ಜನರಿಗೊಂದು ನಂಬಿಕೆ ಇರುತ್ತೆ. ಡಾಕ್ಟರ್ ಡಾಕ್ಟ್ರು ಕೆಲಸ ಮಾಡಬೇಕು. ಫೈಟರ್ ಕೆಲಸ ಅಲ್ಲ." ಅಂತ ಅಣ್ಣಾವ್ರು ಹೇಳಿದ್ದರು.
"ಅಣ್ಣಾವ್ರಿಗೆ ಸಿನಿಮಾ ಇಷ್ಟ ಆಗುತ್ತಿಲ್ಲ"
'ಮನಸ್ಸು ಮಲ್ಲಿಗೆ' ಸಿನಿಮಾ ಅಣ್ಣಾವ್ರಿಗೆ ಇಷ್ಟ ಆಗಿರಲಿಲ್ಲ. ಆಗ ಪಾರ್ವತಮ್ಮ ಅವರು ಕೃಷ್ಣವೇಣಿಯನ್ನು ಕರೆದು ಸಿನಿಮಾ ನಿಲ್ಲಿಸುವಂತೆ ಮನವಿ ಮಾಡಿದ್ದರು. ಈ ಸಿನಿಮಾ ನಿಂತಿದ್ದೇ 'ಭಕ್ತಕುಂಬಾರ' ಸಿನಿಮಾ ಹುಟ್ಟಿಕೊಳ್ಳುವುದಕ್ಕೆ ಕಾರಣವಾಯ್ತು ಎನ್ನುತ್ತಾರೆ ಶ್ರೀಧರ ಮೂರ್ತಿ.
"ಕೃಷ್ಣವೇಣಿಯವರನ್ನು ಕರೆದು ಪಾರ್ವತಮ್ಮ ಹೇಳಿದ್ರು. ಇಲ್ಲಾ ಇದು ಅಣ್ಣಾವ್ರಿಗೆ ಇಷ್ಟ ಆಗುತ್ತಿಲ್ಲ. ಈ ಕಥೆ ಇಷ್ಟ ಆಗುತ್ತಿಲ್ಲ ಅಂದ್ರು. ಆಗ ಕೃಷ್ಣವೇಣಿ ಅಣ್ಣ ನೀವು ಯಾವ ಕಥೆ ಹೇಳ್ತಿರೋ ಆ ಕಥೆ ಮಾಡುತ್ತೇನೆ ನಾನು ಅಂತ ಹೇಳಿದ್ರು. ಗಂಧದ ಗುಡಿ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬರುವಾಗ ಭಕ್ತಕುಂಬಾರ ಕಥೆಯನ್ನು ಪಾರ್ವತಮ್ಮ ಅವರಿಗೆ ಹೇಳಿದ್ರು. ನಾವು ಗುಬ್ಬಿ ಕಂಪನಿಯಲ್ಲಿ ಈ ನಾಟಕ ಮಾಡುತ್ತಿದ್ದೆವು. ಇದನ್ನು ಏನಾದರೂ ಮಾಡುವುದಕ್ಕೆ ಸಾಧ್ಯನಾ? ಕೃಷ್ಣವೇಣಿ ಹೇಗಿದ್ದರೂ ಕಾಲ್‌ಶೀಟ್ ತೆಗೆದುಕೊಂಡಿದ್ದಾರಲ್ಲ. ಮಾಡೋಕೆ ಸಾಧ್ಯನಾ?" ಅಣ್ಣಾವ್ರು ಪತ್ನಿ ಪಾರ್ವತಮ್ಮ ಅವರ ಬಳಿ ಕೇಳಿದ್ದರು
"ಹುಣಸೂರು ಕೃಷ್ಣಮೂರ್ತಿ ಮಾಡುವುದಾದರೆ ಮಾಡು"
ಸತ್ಯ ಹರಿಶ್ವಂದ್ರ ಆದ್ಮೇಲೆ ಹಣಸೂರು ಕೃಷ್ಣಮೂರ್ತಿ ಹಾಗೂ ಡಾ.ರಾಜ್‌ಕುಮಾರ್ ಕಾಂಬಿನೇಷನ್ ಬಂದಿರಲಿಲ್ಲ. ಹೀಗಾಗಿ ಅಣ್ಣಾವ್ರು ಅವರ ಅಮ್ಮ ಬಳಿ ಭಕ್ತಕುಂಬಾರ ಸಿನಿಮಾ ಬಗ್ಗೆ ಹೇಳಿದ್ದರು. ಆಗ ಹುಣಸೂರು ಕೃಷ್ಣಮೂರ್ತಿಗಳು ಮಾಡೋದಾದರೇ ಮಾಡು. ಇಲ್ಲಾ ಅಂದರೆ ಬೇಡ ಎಂದಿದ್ದರು.
"ರಾಜ್‌ಕುಮಾರ್ ತಾಯಿಗೆ ಭಕ್ತಕುಂಬಾರ ನಾಟಕ ಇಷ್ಟ. ಅವರ ಬಳಿ ಹೋಗಿ ಹೇಳಿದ್ರು. ಆಗ ನೋಡು ಭಕ್ತಕುಂಬಾರ ಸಿನಿಮಾ ಮಾಡುತ್ತಿರೋದು ತುಂಬಾ ಸಂತೋಷಾನೇ. ಆದರೆ, ಅದನ್ನು ಹುಣಸೂರು ಕೃಷ್ಣಮೂರ್ತಿಗಳು ಮಾಡೋದಾದರೇ ಮಾತ್ರ ಮಾಡು." ಎಂದು ಹೇಳಿದ್ದಾಗಿ ಶ್ರೀಧರ ಮೂರ್ತಿಯವರು ಮಾಣಿಕ್ಯ ಯೂಟ್ಯೂಬ್ ಚಾನೆಲ್‌ಗೆ ಮಾಹಿತಿ ನೀಡಿದ್ದಾರೆ.
"ಬಾಂಡ್ ಸಿನಿಮಾ ಮಾಡುತ್ತಿದ್ದೀರಿ ಬೇಡ"
'ಭಕ್ತಕುಂಬಾರ' ಸಿನಿಮಾ ಮಾಡುತ್ತೇನೆ ಅಂತ ಹೇಳಿದಾಗ ಹುಣಸೂರು ಕೃಷ್ಣಮೂರ್ತಿಗಳು ಅಣ್ಣಾವ್ರಿಗೆ ಸಲಹೆ ನೀಡಿದ್ದರು. ಆ ಸಲಹೆ ಬಳಿಕವೂ ಸಿನಿಮಾ ಮಾಡೋಕೆ ಡಾ.ರಾಜ್‌ಕುಮಾರ್ ನಿರ್ಧರಿಸಿದ್ದರು. ಬಳಿಕ ಅದು ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು.
"ಹುಣಸೂರು ಅವರಿಗೆ ಭಕ್ತಕುಂಬಾರ ಮಾಡಬೇಕು ಅಂತ ಹೇಳಿ ಕಳುಹಿಸಿದ್ರು. ಆಗ ಹುಣಸೂರು, ಅಣ್ಣಾ ನೀವು ಭಕ್ತಕುಂಬಾರ ಮಾಡೋದೇನೋ ಸಂತೋಷ, ಈಗ ಬಾಂಡ್ ಸಿನಿಮಾ ಮಾಡುತ್ತಿದ್ದೀರಿ. ಬಾಂಡ್ ಸಿನಿಮಾದಲ್ಲಿ ಜನ ನಿಮ್ಮನ್ನು ಒಪ್ಪಿಕೊಂಡಿದ್ದಾರೆ. ಅದರ ಮಧ್ಯೆ ವಿಠ್ಠಲ ಅಂತ ತಂಬೂರಿ ಹಿಡಿದುಕೊಂಡು ಪಾರ್ಟ್ ಮಾಡೋದು ಯಾಕೋ ಸರಿ ಕಾಣಲ್ಲ. ಸ್ವಲ್ಪ ವಯಸ್ಸಾಗಲಿ ಆಮೇಲೆ ಮಾಡೋಣ. ಆಗ ಅಣ್ಣಾವ್ರು ನೋಡಪ್ಪ ಈಗ ನನಗೆ ಮನಸ್ಸಿದೆ. ವಯಸ್ಸಾದ ಮೇಲೆ ಮನಸ್ಸು ಇರುತ್ತೋ ಇಲ್ವೋ ಯಾರಿಗೆ ಗೊತ್ತು. ಭಕ್ತಕುಂಬಾರ ಮಾಡಿಬಿಡೋಣ ಅಂತ ಹೇಳಿದ್ರು." ಹೀಗೆ ಭಕ್ತಕುಂಬಾರ ಶುರುವಾಯ್ತು ಅಂತ ಹಿರಿಯ ಪತ್ರಕರ್ತ ಶ್ರೀಧರ ಮೂರ್ತಿ ರಿವೀಲ್ ಮಾಡಿದ್ದಾರೆ.


Click it and Unblock the Notifications











