11 ದಿನಗಳಲ್ಲಿ ಕಾಶಿನಾಥ್ 'ಲವ್ ಟ್ರೈನಿಂಗ್' ಸಿನಿಮಾ ಮುಗಿದಿದ್ದೇಗೆ? ಇದರ ಡೈರೆಕ್ಟರ್ ಯಾರು?
ಕನ್ನಡ ಚಿತ್ರರಂಗದ ಲೆಜೆಂಡ್ ಕಾಶಿನಾಥ್ ಸಿನಿಮಾ ಶೈಲಿಯೇ ಬೇರೆ. ಎಲ್ಲರೂ ಒಂದು ದಾರಿ ಹಿಡಿದಿದ್ದರೆ, ಕಾಶಿನಾಥ್ ಸಿನಿಮಾ ಮೇಕಿಂಗ್ ಸ್ಟೈಲ್ ಬೇರೆನೇ ಇರುತ್ತಿತ್ತು. ಹಾಗಂತ ಎಲ್ಲಾ ಸಿನಿಮಾಗಳನ್ನು ಅವರೇ ನಿರ್ದೇಶನ ಮಾಡಿದ್ದಾರೆ ಅಂತಲ್ಲ. ಕಾಶಿನಾಥ್ ಸಿನಿಮಾಗೆ ಬೇರೆ ನಿರ್ದೇಶಕರು ಕೂಡ ಆಕ್ಷನ್ ಕಟ್ ಹೇಳಿದ್ದಾರೆ.
ಒಬ್ಬ ಲೆಜೆಂಡರಿ ನಿರ್ದೇಶಕ ಕಾಶಿನಾಥ್‌ಗೆ ಆಕ್ಷನ್ ಕಟ್ ಹೇಳುವಾಗ ಸಾಕಷ್ಟು ಮಂದಿಗೆ ಅಳುಕು ಇರುತ್ತೆ. ಇಂತಹ ಡೈರೆಕ್ಟರ್ ಕಮ್ ನಟನಿಗೆ ಹೇಗಪ್ಪಾ ಆಕ್ಷನ್ ಕಟ್ ಹೇಳೋದು ಅನ್ನೋ ಭಯವಿರುತ್ತೆ. ಆದರೆ, ಕಾಶಿನಾಥ್ ನಿರ್ದೇಶಕನಲ್ಲದೆ, ಬರೀ ನಟನಾಗಿದ್ದಾಗ ಅವರಿಗೆ ಆಕ್ಷನ್ ಕಟ್ ಹೇಳುವುದು ತೀರಾ ಸುಲಭವಾಗಿತ್ತು.

ಅತೀ ಕಡಿಮೆ ಸಮಯದಲ್ಲಿ ಕಾಶಿನಾಥ್ ಸಿನಿಮಾಗಳನ್ನು ಮಾಡಿ ಮುಗಿಸಿದ್ದಾರೆ. ಅಂತಹದ್ದೊಂದು ಸಿನಿಮಾ 'ಲವ್ ಟ್ರೈನಿಂಗ್'. 1993ರಲ್ಲಿ 'ಲವ್ ಟ್ರೈನಿಂಗ್' ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾವನ್ನು ಕೇವಲ 11 ದಿನಗಳಲ್ಲಿ ಶೂಟಿಂಗ್ ಮುಗಿಸಲಾಗಿತ್ತು. ಈ ಸಿನಿಮಾ ಕಾನ್ಸೆಪ್ಟ್ ಹುಟ್ಟಿದ್ದು ಹೇಗೆ? 11 ದಿನಗಳಲ್ಲಿ ಮುಗಿಸಿದ್ದು ಹೇಗೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
90ರ ದಶಕದಲ್ಲಿ ಕಾಶಿನಾಥ್ ನಟಿಸಿದ 'ಲವ್ ಟ್ರೈನಿಂಗ್' ಸಿನಿಮಾ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಅಂದಿನ ಕಾಲಕ್ಕೆ ಇದು ತೀರಾ ವಿಭಿನ್ನ ಕಾನ್ಸೆಪ್ಟ್ ಅಂತ ಅನಿಸಿಕೊಂಡಿತ್ತು. ಜನರು ಕೂಡ ಮೆಚ್ಚಿಕೊಂಡಿದ್ದರು. ಈ ಸ್ಮಾಲ್ ಬಜೆಟ್ ಸಿನಿಮಾ ಬಾಕ್ಸಾಫೀಸ್‌ನಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈ ಸಿನಿಮಾ ಆಕ್ಷನ್ ಕಟ್ ಹೇಳಿದ್ದು, ಮಾಲಾಶ್ರೀಯ 'ರಾಣಿ ಮಹಾರಾಣಿ' ಸಿನಿಮಾ ನಿರ್ದೇಶಿಸಿದ್ದ ಬಿ ರಾಮಮೂರ್ತಿ.
"ಕಾಶಿನಾಥ್ ಅಂತಹ ನಿರ್ದೇಶಕರನ್ನು ಇಟ್ಕೊಂಡು ಕೆಲಸ ಮಾಡುವಾಗ ಮಾತ್ರ ಯಾವ ಮಟ್ಟಕ್ಕೆ ಸಿನಿಮಾ ಮಾಡುತ್ತೇನೆ ಅನ್ನೋದು ಗೊತ್ತಿರಲಿಲ್ಲ. ಲವ್ ಟ್ರೈನಿಂಗ್ ಮಾಡಿದಾಗ ಅವರೊಬ್ಬ ಅದಾಗಲೇ ಪರಿಚಿತರಾದ ನಿರ್ದೇಶಕರು. ಯಾರೂ ಅದೂವರೆಗೂ ಅಂತಹ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡಿರಲಿಲ್ಲ. ನಾನು ಕಥೆ ಮಾಡಿಕೊಂಡಾಗಲೆಲ್ಲ ಬಹಳ ಖುಷಿ ಪಟ್ಟರು. ಇವತ್ತೂ ನಾನು ಎಲ್ಲಿಗೆ ಹೋದರೂ ಲವ್ ಟ್ರೈನಿಂಗ್ ಅಂತಲೇ ಗುರುತಿಸುತ್ತಾರೆ." ಎಂದು ನಿರ್ದೇಶಕರು ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.

ಒಂದು ಸಿನಿಮಾವನ್ನು 11 ದಿನಗಳಲ್ಲಿ ಮುಗಿಸೋದು ತೀರಾ ಕಷ್ಟ. ಅದರಲ್ಲೂ ಕಾಶಿನಾಥ್ ಜೊತೆ ಶಿವರಾಂ, ರಮೇಶ್ ಭಟ್, ಬಿರಾದರ್ ಅಂತ ನಟರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ದೊಡ್ಡ ಸ್ಟಾರ್ ಕಾಸ್ಟ್ ಇದ್ದ ಈ ಸಿನಿಮಾವನ್ನು ನಿರ್ದೇಶಕ ಬಿ. ರಾಮಮೂರ್ತಿ ಕೇವಲ 11 ದಿನಗಳಲ್ಲಿ ಮುಗಿಸಿದ್ದರು.
"ಅವರೊಬ್ಬರ ಪಕ್ಕಾ ನಿರ್ದೇಶಕನಾಗಿದ್ದರೂ, ಇನ್ನೊಬ್ಬ ನಿರ್ದೇಶಕನಿಗೆ ತೊಂದರೆ ಕೊಡುವುದಿಲ್ಲ. ನಾವು ಏನು ಹೇಳುತ್ತೇವೆಯೋ ಅದನ್ನು ಆಕ್ಟ್ ಮಾಡಿ ಹೋಗುತ್ತಾರಷ್ಟೇ. ಯಾಕೆ? ಏನು? ಅನ್ನೋದನ್ನು ಯಾರೂ ಪ್ರಶ್ನೆ ಮಾಡಿಲ್ಲ. ಆ ಇಡೀ ಸಿನಿಮಾವನ್ನು 11 ದಿನಗಳಲ್ಲಿ ಸಿನಿಮಾ ಮಾಡಿದ್ದೇನೆ. ನಮ್ಮ ತಂದೆಯವರೇ ಪ್ರೊಡಕ್ಷನ್ ಮಾಡಿದ್ದರು. 11 ದಿನಗಳಲ್ಲಿ ಒಳ್ಳೆಯ ಸಿನಿಮಾ ಮಾಡಬಹುದು ಅಂತ ತೋರಿಸಿಕೊಟ್ಟ ಸಿನಿಮಾ ಅದು." ಎಂದು ರಾಮಮೂರ್ತಿ ಹೇಳಿಕೊಂಡಿದ್ದಾರೆ.
ಅಷ್ಟಕ್ಕೂ ಈ ಕಾನ್ಸೆಪ್ಟ್ ಹುಟ್ಟಿದ್ದು ಕಾರು ಡ್ರೈವಿಂಗ್ ಸ್ಕೂಲ್‌ನಿಂದ. 90ರ ದಶಕದಲ್ಲಿ ಕಾರ್ ಟ್ರೈವಿಂಗ್ ಹೊಸ ಪರಿಕಲ್ಪನೆಯಾಗಿತ್ತು. ಇದನ್ನೇ ಇಟ್ಕೊಂಡು ಲವ್ ಟ್ರೈನಿಂಗ್ ಕಥೆ ಹೆಣೆಯಲಾಗಿತ್ತು. ಇದಕ್ಕೆ ಉಪೇಂದ್ರ ಡೈಲಾಗ್ಸ್ ಬರೆದಿದ್ದರು. "ಆಗ ಬೆಂಗಳೂರಿನಲ್ಲಿ ಕಾರ್ ಡ್ರೈವಿಂಗ್ ಹೊಸತು. ಕಾರು ಚಲಾಯಿಸೋಕೆ ಬಾರದವರಿಗೆ ಕಾರು ಓಡಿಸುವುದು ಹೇಳಿ ಕೊಡುತ್ತಾರೆ ಅಲ್ವಾ? ಈಗ ಎದುರುಗಡೆ ಮನೆ ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದೇನೆ. ನನಗೆ ಹೇಳುವುದಕ್ಕೆ ಅಳುಕು. ಅದನ್ನು ಹೇಳಿಕೊಡುವುದಕ್ಕೆ ಗುರು ಬೇಕಲ್ಲ. ಹಾಗೆ ಕಾನ್ಸೆಪ್ಟ್ ಬಂದಿದ್ದು. ಕಾಶಿನಾಥ್ ಅವರು ಮಾಡುತ್ತಿದ್ದಾರೆ ಅಂದಾಗ ಉಪೇಂದ್ರ ಅವರು ಡೈಲಾಗ್ ಬರೆದುಕೊಟ್ಟರು." ಎಂದು ಬಿ. ರಾಮಮೂರ್ತಿ ಹೇಳಿದ್ದರು.


Click it and Unblock the Notifications











