'ಶ್..!!!' ಸಿನಿಮಾದ ನಟಿ ಮೇಘನಾ ಎಲ್ ಹೋದರು? ನಟನೆಯಿಂದ ದೂರ ಉಳಿಯೋದಕ್ಕೆ ಏನು ಕಾರಣ?
ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಹಾರರ್ ಸಿನಿಮಾಗಳಲ್ಲಿ 'ಶ್ !!!' ಮುಂಚೂಣಿಯಲ್ಲಿ ಇರುತ್ತೆ. ಉಪೇಂದ್ರ ನಿರ್ದೇಶಿಸಿದ್ದ ಈ ಸಿನಿಮಾ ಬಗ್ಗೆ ಇಂದಿನ ಪೀಳಿಗೆ ಕೂಡ ಇಷ್ಟ ಪಟ್ಟಿದೆ. ಯಾಕಂದ್ರೆ, ಕನ್ನಡದಲ್ಲಿ ನಿರ್ಮಾಣವಾದ ಬೆಸ್ಟ್ ಹಾರರ್ ಸಿನಿಮಾವಿದು. ಈ ಸಿನಿಮಾ ಒಂದೊಂದು ದೃಶ್ಯವೂ ಇಂದಿಗೂ ಥ್ರಿಲ್ಲಿಂಗ್ ಅಂತ ಅನಿಸುತ್ತೆ.
ಈ ಸಿನಿಮಾ ಮೂವರಿಗೆ ತುಂಬಾನೇ ಹೆಸರು ತಂದುಕೊಟ್ಟಿತ್ತು. ಹೀರೊ ಕುಮಾರ್ ಗೋವಿಂದ್ ಈ ಸಿನಿಮಾ ಮೂಲಕ ಫೇಮಸ್ ಆಗಿದ್ದರು. ಉಪೇಂದ್ರ ನಿರ್ದೇಶನಕ್ಕೆ ಚಪ್ಪಾಳೆಗಳು ಬಿದ್ದಿದ್ದವು. ಇವರಿಬ್ಬರ ಜೊತೆ ನಾಯಕಿಯಾಗಿ ಇದೇ ಸಿನಿಮಾದಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಮೇಘನಾ ಗಮನ ಸೆಳೆದಿದ್ದರು.

'ಶ್' ಸಿನಿಮಾದ ಬೆಟ್ಟಿಂಗ್ ಭಾರತಿ ಪಾತ್ರದಲ್ಲಿ ಮೇಘನಾ ನಟಿಸಿದ್ದರು. ಈ ಪಾತ್ರ ಇಂದಿಗೂ ಸಿನಿಪ್ರಿಯರ ಜನಮಾನಸದಲ್ಲಿ ಉಳಿದು ಹೋಗಿದೆ. ಇದೇ ನಟಿ 'ಶ್' ಬಳಿಕ ಕನ್ನಡದಲ್ಲಿ ಬ್ಯೂಸಿಯಾಗಿದ್ದರು. 'ಮಂಡ್ಯ ಗಂಡು', 'ಆನಂದ ಜ್ಯೋತಿ', 'ಚಿನ್ನ ನೀ ನಗುತಿರು', 'ಹೊಸ ಲವ್‌ಸ್ಟೋರಿ'ಯಂತಹ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಸಿನಿಮಾಗಳು ಗೆದ್ದಿದ್ದರೂ ನಟನೆಯಿಂದ ದೂರವೇ ಉಳಿದಿದ್ದರು. ಅಷ್ಟಕ್ಕೂ ಈ ನಟಿ ನಟನೆ ಬಿಟ್ಟಿದ್ದು ಏಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಮೇಘನಾ ನಟಿಸಿದ 'ಶ್' ಸಿನಿಮಾವನ್ನು ಯಾರೂ ಮರೆಯುವಂತಿಲ್ಲ. ಇಂದಿಗೂ ಢವ ಢವ ಹಾಡು ಅದೆಷ್ಟು ಯುವಕರ ಎದೆಯಲ್ಲಿ ಗುನುಗುತ್ತಿದೆಯೋ ಗೊತ್ತಿಲ್ಲ. ಅಂದ್ಹಾಗೆ, ಮೇಘನಾ ಮೂಲ ಹೆಸರು ಬಬಿತಾ ವಿಶ್ವನಾಥ್. ಈ ಸಿನಿಮಾಗಾಗಿ ಸ್ವತ: ಉಪ್ಪಿನೇ ಅವರ ಹೆಸರನ್ನು ಮೇಘನಾ ಅಂತ ಬದಲಾಯಿಸಿದ್ದರು.
ಬಿಬಿತಾ ವಿಶ್ವನಾಥ್ ಅನ್ನೋ ಹೆಸರು ಬದಲಾಗಿದ್ದೇ ಒಂದು ಇಂಟ್ರೆಸ್ಟಿಂಗ್ ಕಥೆ. ಒಂದು ವರ್ಷದ ಹಿಂದೆ ಈ ನಟಿ ರಘುರಾಮ್ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಆ ವೇಳೆ ತಮ್ಮ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಹೆಸರು, ವೃತ್ತಿ ಬದುಕು, ನಟನೆಯಿಂದ ದೂರು ಉಳಿದಿದ್ದೇಕೆ? ಈಗೇನು ಮಾಡುತ್ತಿದ್ದಾರೆ? ಅನ್ನೋದನ್ನು ರಿವೀಲ್ ಮಾಡಿದ್ದಾರೆ.
ನಟಿ ಮೇಘನಾ ದ್ವಿತೀಯ ವರ್ಷದ ಡಿಗ್ರಿ ಮಾಡುವಾಗ 'ಶ್' ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಇವರ ಸಂಬಂಧಿ ಸಿನಿಮಾರಂಗದಲ್ಲೇ ಇದ್ದಿದ್ದರಿಂದ ಕ್ರೇಜಿ ಸ್ಟಾರ್ ರವಿಚಂದ್ರನ್‌ಗೆ ಈ ನಟಿಯ ಫೋಟೊಗಳನ್ನು ತಲುಪಿಸಿದ್ದರು. ಆ ವೇಳೆ ರವಿಚಂದ್ರನ್ ಹಾಗೂ ನಟ ಕುಮಾರ್ ಗೋವಿಂದ್ ಆತ್ಮೀಯರಾಗಿದ್ದರು. ಇದೇ ವೇಳೆ 'ಶ್' ಸಿನಿಮಾದ ತಯಾರಿ ನಡೆಯುತ್ತಿದ್ದರಿಂದ ಕುಮಾರ್ ಗೋವಿಂದ್ ಕಣ್ಣಿಗೆ ಈ ಫೋಟೊ ಬಿದ್ದು, ಬಳಿಕ ಅದು ಉಪೇಂದ್ರಗೆ ತಲುಪಿತ್ತು.

ಆಗಿನ್ನೂ ಬಿಬಿತಾ ವಿಶ್ವನಾಥ್ ಆಗಿದ್ದವರ ಹೆಸರನ್ನು ಬದಲಾಯಿಸುವುದಕ್ಕೆ ಉಪ್ಪಿ ಮುಂದಾಗಿದ್ದರು. ಇದೇ ಸಂದರ್ಭದಲ್ಲಿ "ಮೇಘ ಬಂದು ಮೇಘ.." ಅನ್ನೋ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಅದೇ ಹಾಡಿನ ಹೆಸರನ್ನೇ ಇವರಿಗೆ ಇಟ್ಟರು ಎಂದು ಸ್ವತ: ನಟಿ ಮೇಘನಾ ರಘುರಾವ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.
'ಶ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ ನಟಿ ಇದ್ದಕ್ಕಿಂತ ನಟನೆಯಿಂದ ದೂರವೇ ಉಳಿದು ಬಿಟ್ಟರು. ಮತ್ತೆ ಸಿನಿಮಾಗಳ ಕಡೆಗೆ ಮುಖ ಮಾಡಲೇ ಇಲ್ಲ. ತನ್ನ ದಾರಿಯನ್ನೇ ಬದಲಿಸಿದರು. ಶಿಕ್ಷಕಿಯಾಗಿ ವೃತ್ತಿ ಬದುಕನ್ನು ಮುಂದುವರೆಸಿದರು. ಮಕ್ಕಳೊಂದಿಗೆ ಇರುವುದಕ್ಕೆ ಹೆಚ್ಚು ಇಷ್ಟ ಪಟ್ಟರು. ಅಸಲಿಗೆ ಸಿನಿಮಾದಿಂದ ಯಾಕೆ ದೂರು ಆದರು ಅನ್ನೋದನ್ನು ನಿರೂಪಕ ರಘುರಾವ್ ಅವರೊಂದಿಗೆ ಹೀಗೆ ಹೇಳಿಕೊಂಡಿದ್ದರು.
"ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ ಆ ಘಳಿಗೆ ಇಷ್ಟ ಆಯ್ತು. ಆದರೆ, ಎಲ್ಲೋ ನನಗೆ ಈ ಸಿಂಪಲ್ ಲೈಫ್ ಅನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅಂತ ಅನಿಸುತ್ತಿತ್ತು. ಚಿಕ್ಕ ಚಿಕ್ಕ ಫ್ರೀಡಂ, ಅಲ್ಲಿ ಇಲ್ಲಿ ಓಡಾಡೋದು ಮಿಸ್ ಮಾಡಿಕೊಳ್ಳುತ್ತಿದ್ದೆ. ಆ ಮೇಲೆ ಎಜ್ಯುಕೇಷನ್ ಫೀಲ್ಡ್ ನನಗೆ ಖುಷಿ ಕೊಟ್ಟಿತ್ತು. ಯಾಕಂದ್ರೆ, ಮಕ್ಕಳ ಜೊತೆ ಮಕ್ಕಳಾಗಿ ಇರಬಹುದು ಅಂತ ಅನಿಸಿತ್ತು." ಎಂದು ಮೇಘನಾ ಹೇಳಿಕೊಂಡಿದ್ದರು.
ಸದ್ಯ ಶಿಕ್ಷಣ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ. ಸಂದರ್ಶನದ ಸಮಯದಲ್ಲಿ ಸುಮಾರು 12 ಶಾಲೆಗಳನ್ನು ಕಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಇವರಿಗೆ ರತಿದೇವಿ ಅನ್ನುವ ಒಬ್ಬಳು ಮಗಳು ಇದ್ದಾಳೆ. ಆಕೆ ಡಿಜಿಟಲ್ ಆರ್ಟ್ ಫೀಲ್ಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.


Click it and Unblock the Notifications











