"ಆಫ್ರಿಕಾದಲ್ಲಿ ಶೀಲಾ.. ಭಾರತದಲ್ಲಿ ಸಾಲ"; ಈ ಹೆಡ್‌ಲೈನ್ ನೋಡಿ ಬಿದ್ದು ಬಿದ್ದು ನಕ್ಕಿದ್ದ ದ್ವಾರಕೀಶ್
ಕನ್ನಡದ 'ಪ್ರಚಂಡ ಕುಳ್ಳ' ಅಂತ ಅಭಿಮಾನಿಗಳು ಸುಮ್ಮನೆ ಬಿರುದು ಕೊಟ್ಟಿಲ್ಲ. ಕನ್ನಡ ಕುಳ್ಳ ಅಂತ ಕನ್ನಡದ ಸಿನಿಮಾ ಮಂದಿ ಪುಕ್ಕಟೆಯಾಗಿ ಕರೆದಿಲ್ಲ. ದ್ವಾರಕೀಶ್ ನಿಜಕ್ಕೂ ಈ ಎಲ್ಲಾ ಬಿರುದಿಗೂ ಅರ್ಹರು. ಒಂದು ಕಾಲದಲ್ಲಿ ದ್ವಾರಕೀಶ್ ಯಾವುದಾದರೂ ಹೊಸ ಸಿನಿಮಾಗೆ ಕೈ ಹಾಕಿದ್ದಾರೆ ಅಂದರೆ, ಎಲ್ಲಾ ನಿರ್ಮಾಣ ಸಂಸ್ಥೆಗಳ ಕಣ್ಣು ಅದರ ಮೇಲೆಯೇ ಇರುತ್ತಿತ್ತು.
ದ್ವಾರಕೀಶ್ ಸಿನಿಮಾವನ್ನು ನೋಡುತ್ತಿದ್ದ ರೀತಿಯೇ ಬೇರೆ ಇತ್ತು. ಸತತ ಗೆಲುವು ಕಂಡಿದ್ದ ದ್ವಾರಕೀಶ್ ಕನ್ನಡ ಚಿತ್ರರಂಗದಲ್ಲಿ ಹೊಸತನವನ್ನು ತರುವುದಕ್ಕೆ ಹೊರಟ್ಟಿದ್ದವರು. ಇಂತಹ ಪ್ರಯತ್ನಗಳಲ್ಲಿ 'ಆಫ್ರಿಕಾದಲ್ಲಿ ಶೀಲಾ' ಸಿನಿಮಾ ಕೂಡ ಒಂದು. ಒಂದೇ ತರಹದ ಸಿನಿಮಾಗಳನ್ನು ನೋಡುತ್ತಿದ್ದ ಪ್ರೇಕ್ಷಕರಿಗೆ ಅಭಿರುಚಿಯನ್ನು ಬದಲಿಸಿದ ಹೆಗ್ಗಳಿಕೆ ದ್ವಾರಕೀಶ್ ಅವರಿಗೆ ಸಲ್ಲುತ್ತೆ.

ದ್ವಾರಕೀಶ್ ಸೋಲಿಗೆ ಅಂಜಿದವರಲ್ಲ. ಹಾಗಾಗಿಯೇ ಪ್ರಯೋಗಗಳನ್ನು ನಿಲ್ಲಿಸಿದವರೂ ಅಲ್ಲ. ಇಂತಹ ಪ್ರಯೋಗಳಲ್ಲಿ 'ಆಫ್ರಿಕಾದಲ್ಲಿ ಶೀಲಾ' ಸಿನಿಮಾ ಕೂಡ ಒಂದು. ಇದು ಆಫ್ರಿಕಾದ ಕಾಡುಗಳಲ್ಲಿ ಚಿತ್ರೀಕರಣ ಮಾಡಿದ ಮೊದಲ ಸಿನಿಮಾ. ಅದೂವರೆಗೂ ಯಾರೂ ಇಂತಹ ಪ್ರಯತ್ನಕ್ಕೆ ಕೈ ಹಾಕಿಲ್ಲ. ಆಗ ಇಡೀ ಭಾರತೀಯ ಚಿತ್ರರಂಗವೇ 'ಆಫ್ರಿಕಾದಲ್ಲಿ ಶೀಲಾ' ಸಿನಿಮಾ ಕಡೆ ಮುಖ ಮಾಡಿ ನೋಡಿತ್ತು. ದುರಾದೃಷ್ಟವಶಾತ್ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ.
ಆದರೆ, 'ಆಫ್ರಿಕಾದಲ್ಲಿ ಶೀಲಾ' ಕನ್ನಡ ಚಿತ್ರರಂಗದಲ್ಲಿ ಆದ ವಿಶಿಷ್ಟ ಪ್ರಯತ್ನ. ಇತ್ತೀಚೆಗೆ ಬಂದ ಹೀರೊಗಳು ವಿದೇಶದಲ್ಲಿ ಚಿತ್ರೀಕರಣ ಮಾಡುವುದನ್ನು ನೋಡಿದ್ದೇವೆ. ದರ್ಶನ್, ಸುದೀಪ್, ಯಶ್, ಪುನೀತ್ ರಾಜ್‌ಕುಮಾರ್ ಅಂತಹ ಸ್ಟಾರ್ ನಟರು ಪ್ರತಿ ಸಿನಿಮಾದಲ್ಲಿ ಒಂದು ಹಾಡಿಗಾದರೂ ವಿದೇಶ ಪ್ರಯಾಣ ಮಾಡುತ್ತಿದ್ದರು. ಅದಕ್ಕೆ ಅಡಿಪಾಯ ಹಾಕಿಕೊಟ್ಟಿದ್ದೇ ದ್ವಾರಕೀಶ್.

'ಆಫ್ರಿಕಾದಲ್ಲಿ ಶೀಲಾ' ಸಿನಿಮಾ ದ್ವಾರಕೀಶ್ ಅವರ ಮಹತ್ವಾಕಾಂಕ್ಷೆ ಸಿನಿಮಾ ಆಗಿತ್ತು. 1984ರಲ್ಲಿ ಹಾಲಿವುಡ್‌ನಲ್ಲಿ 'ಶೀನಾ' ಅನ್ನುವ ಸಿನಿಮಾ ರಿಲೀಸ್ ಆಗಿತ್ತು. ಆ ಸಿನಿಮಾವನ್ನು ನೋಡಿದ್ದ ದ್ವಾರಕೀಶ್ ಇಂತಹದ್ದೇ ಫ್ಯಾಂಟಸಿ ಅಡ್ವೇಂಚರ್ ಸಿನಿಮಾವನ್ನು ಕನ್ನಡದಲ್ಲಿಯೂ ನಿರ್ಮಾಣ ಮಾಡಬೇಕು ಅಂತ ಹೊರಟಿದ್ದರು. ಅದೇ 'ಆಫ್ರಿಕಾದಲ್ಲಿ ಶೀಲಾ'. ಹೀಗಾಗಿ ಆಫ್ರಿಕಾದ ಕಾಡುಗಳನ್ನು ಚಿತ್ರೀಕರಣ ಮಾಡುವುದಕ್ಕೆ ಆಯ್ಕೆ ಮಾಡಿಕೊಂಡರು. ಇಡೀ ಸಿನಿಮಾವನ್ನು ಅಲ್ಲಿಯೇ ಚಿತ್ರೀಕರಣ ಮಾಡಿದರು.
ಆಫ್ರಿಕಾದ ಕಾಡುಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡುವುದಕ್ಕೆ ಧೈರ್ಯ ಮಾಡುವುದಕ್ಕೆ ಕಾರಣ 'ಸಿಂಗಾಪುರದಲ್ಲಿ ರಾಜ ಕುಳ್ಳ'. ಈ ಸಿನಿಮಾ ವಿದೇಶದಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಇದು ವಿದೇಶದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನಿಮಾ. ಈ ಸಿನಿಮಾಗೆ ಜನರಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಇದೇ ಜೋಷ್‌ನಲ್ಲಿ 'ಆಫ್ರಿಕಾದಲ್ಲಿ ಶೀಲಾ' ಸಿನಿಮಾಗೆ ಕೈ ಹಾಕಿದ್ದರು. ಚರಣ್ ರಾಜ್ ನಾಯಕನಾಗಿ ನಟಿಸಿದ್ದರೆ, ಸಾಹಿಲಾ ಚಡ್ಡಾ ಶೀಲಾ ಪಾತ್ರದಲ್ಲಿ ನಟಿಸಿದ್ದರು. ಆದರೆ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಖಾಡೆ ಮಲಗಿತ್ತು.
'ಆಫ್ರಿಕಾದಲ್ಲಿ ಶೀಲಾ' ಹೀನಾಯವಾಗಿ ಸೋತಿತ್ತು. ಆಗ ಪತ್ರಕರ್ತರು "ಆಫ್ರಿಕಾದಲ್ಲಿ ಶೀಲಾ.. ಭಾರತದಲ್ಲಿ ಸಾಲ" ಅಂತ ಹೈಡ್‌ಲೈನ್ ಕೊಟ್ಟು ಬರೆದಿದ್ದರು. ಇದನ್ನು ನೋಡಿದ ದ್ವಾರಕೀಶ್ ಬಿದ್ದು ಬಿದ್ದಿ ನಕ್ಕಿದ್ದರು. ಒಬ್ಬ ನಿರ್ಮಾಪಕನಾಗಿ ಸೋಲನ್ನು ಅಷ್ಟೇ ಸಮಾನವಾಗಿ ಸ್ವೀಕರಿಸಿದ್ದರು. ಆ ಸೋಲನ್ನು ಅಷ್ಟೆ ಓಪನ್ ಆಗಿ ಸ್ವೀಕರಿಸಿದ್ದರು. ತನ್ನ ಮಹತ್ವಕಾಂಕ್ಷೆ ಸಿನಿಮಾ ಸೋತ ಬೇಸರವಿತ್ತೇ ವಿನ: ನೋವಿರಲಿಲ್ಲ. ಮತ್ತೆ ಗೆದ್ದೇ ಗೆಲ್ಲುತ್ತೇನೆ ಅನ್ನೋ ಆಶಾಭಾವನೆ ಇಟ್ಟುಕೊಂಡಿದ್ದರು.


Click it and Unblock the Notifications











