'ಯಜಮಾನ' ನೋಡಿ ವಿಷ್ಣುಗೆ ವರನಟ ಕರೆ; ಫೋನ್ ಮಾಡಿದ್ದು ಅಣ್ಣಾವ್ರ ಸರಳತೆ.. ಅವರನ್ನ ಹೊಗಳಿದ್ದು ದಾದ ವಿನಮ್ರತೆ
ಸ್ಯಾಂಡಲ್‌ವುಡ್‌ನ ಸೂಪರ್‌ಸ್ಟಾರ್‌ಗಳ ನಡುವಿನ ಪೈಪೋಟಿ, ವೈರತ್ವದ ಬಗ್ಗೆ ಅವರ ಅಭಿಮಾನಿಗಳೇ ಮಾತಾಡುತ್ತಾರೆ. ಕೆಲವೊಮ್ಮೆ ಅವರ ಅಭಿಮಾನಿಗಳು ಪರಸ್ಪರ ಕಿತ್ತಾಡಿಕೊಂಡಿದ್ದು ಇದೆ. ಇಂದಿಗೂ ಸೂಪರ್‌ಸ್ಟಾರ್‌ಗಳ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಿತ್ತಾಡುವುದನ್ನು ನೋಡುತ್ತೇವೆ. ಹಾಗೇ ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ನಡುವೆ ವೈಮನಸ್ಸು ಇತ್ತು ಅನ್ನೋದು ಹಲವರ ನಂಬಿಕೆ.
ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ಇಬ್ಬರೂ ಅಗಲಿ ವರ್ಷಗಳೇ ಆಗಿವೆ. ಆದರೂ ಈ ಬಗ್ಗೆ ಇಂದಿಗೂ ಚರ್ಚೆಯಾಗುತ್ತಲೇ ಇರುತ್ತೆ. ಕನ್ನಡ ಚಿತ್ರರಂಗದ ಇಬ್ಬರು ದೈತ್ಯರ ನಡುವೆ ನಿಜಕ್ಕೂ ವೈಮಸ್ಸು ಇತ್ತಾ? ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿರಲಿಲ್ಲವೇ? 'ಗಂಧದ ಗುಡಿ' ಘಟನೆಯೇ ಇಷ್ಟಕ್ಕೆಲ್ಲ ಕಾರಣವೇ? ಈ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ.

ಆದರೆ, ವಿಷ್ಣುವರ್ಧನ್ ನೀಡಿದ ಒಂದು ಸಂದರ್ಶನ ಈ ಎಲ್ಲಾ ಊಹಾ-ಪೋಹಗಳಿಗೆ ತೆರೆ ಎಳೆದುಬಿಡುತ್ತೆ. ವಿಷ್ಣುದಾದ ಇಂಗ್ಲಿಷ್‌ನಲ್ಲಿ ನೀಡಿದ ಒಂದು ಸಂದರ್ಶನದ ಒಂದು ತುಣುಕು ಈಗ ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾದ ಹರಿದಾಡುತ್ತಿದೆ. ಇದರಲ್ಲಿ ವಿಷ್ಣುವರ್ಧನ್ ಅಣ್ಣಾವ್ರನ್ನು ಹಾಡಿ ಹೊಗಳಿದ್ದಾರೆ. 'ಯಜಮಾನ' ಸಿನಿಮಾ ನೋಡಿ ಅಣ್ಣಾವ್ರು ಹೇಳಿದ ಮಾತುಗಳನ್ನು ನೆನೆಪಿಸಿಕೊಂಡಿದ್ದಾರೆ. ಆ ತುಣುಕಿನ ಸಾರಾಂಶ ಹೀಗಿದೆ.
'ಯಜಮಾನ' ನೋಡಿ ದಾದ ಕರೆ
ವಿಷ್ಣುವರ್ಧನ್ ವೃತ್ತಿ ಬದುಕಿನಲ್ಲಿ 'ಯಜಮಾನ' ಹೊಸ ಚರಿತ್ರೆಯನ್ನೇ ಸೃಷ್ಟಿಸಿತ್ತು. ಜನರು ಮುಗಿಬಿದ್ದು ಸಿನಿಮಾ ನೋಡಿದ್ದರು. ಅಣ್ಣಾವ್ರು ಕೂಡ ಈ ಸಿನಿಮಾವನ್ನು ನೋಡಿ ಖುಷಿ ಪಟ್ಟಿದ್ದರು. ಹಾಗಂತ ಸಿನಿಮಾ ನೋಡಿ ಸುಮ್ಮನಾಗಲಿಲ್ಲ. ಸೀದಾ ವಿಷ್ಣುದಾದ ಕರೆ ಮಾಡಿ ನಿಮ್ಮೊಂದಿಗೆ ಮಾತಾಡಬೇಕು ಅಂದಿದ್ದರು. ಆ ಘಟನೆಯನ್ನು ವಿಷ್ಣುದಾದ ಸಂದರ್ಶನ್‌ನಲ್ಲಿ ನೆನಪಿಸಿಕೊಂಡಿದ್ದಾರೆ.
"ನಾನು ಮೈಸೂರಿನಲ್ಲಿ ಕೋಟಿಗೊಬ್ಬ ಸಿನಿಮಾದ ಶೂಟಿಂಗ್ ಮಾಡುತ್ತಿದ್ದೆ. ಆಗ ಡಾ.ರಾಜ್‌ಕುಮಾರ್ ಅವರು ಫೋನ್ ಮಾಡಿದರು. ಮಿನಿ ಸಂತೋಷ್‌ನಲ್ಲಿ ಅವರಿಗಾಗಿ ಯಜಮಾನ ಸಿನಿಮಾದ ಪ್ರೊಜೆಕ್ಷನ್ ಹಾಕಿದ್ವಿ. ನಾನು ರೂಮ್‌ನಲ್ಲಿದ್ದೆ ಆಗ ರಾಜಣ್ಣ ನಿಮ್ಮೊಂದಿಗೆ ಮಾತಾಡಬೇಕಂತೆ ಅಂತ ಬಂದು ಕರೆದರು. ಅದು ನನಗೆ ಶಾಕ್ ಆಗಿತ್ತು. ನನಗೆ ನಂಬುವುದಕ್ಕೆ ಆಗಿರಲಿಲ್ಲ." ಎಂದು ದಾದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಫಸ್ಟ್ ಟೈಮ್ ವಿಷ್ಣುದಾದ ಜೊತೆ ಫೋನ್‌ನಲ್ಲಿ ಸಂಭಾಷಣೆ
"ಮೊದಲ ಬಾರಿಗೆ ರಾಜಣ್ಣ ನನ್ನೊಂದಿಗೆ ಫೋನ್‌ನಲ್ಲಿ ಮಾತಾಡಿದರು. ವಿಷ್ಣು ನಾನು ನಿಮ್ಮ ಸಿನಿಮಾ ನೋಡಿದೆ. ಆ ಸಿನಿಮಾವನ್ನು ನೋಡಿ ಹೇಳಲಾಗದ ಅನುಭವ ಆಗುತ್ತಿದೆ. ನಾನು ನಿಮ್ಮನ್ನು ನೋಡಬೇಕು ಅಂದರು. ಸರ್, ನಾನು ಮೈಸೂರಿನಲ್ಲಿ ಇದ್ದೇನೆ ಅಂದೆ. ಅದಕ್ಕೆ ಅವರು ನಾನು ಬಂದು ನಿಮ್ಮನ್ನು ನೋಡಬೇಕು ಅಂದರು. ಆಗ ನಾನು ನೀವು ನನ್ನನ್ನು ಮುಜುಗರಕ್ಕೆ ಒಳಪಡಿಸುತ್ತಿದ್ದೀರಿ. ನಾನು ಅಂತಹದ್ದೇನೂ ಮಾಡಿಲ್ಲ. ನಾನೇ ಬಂದು ನಿಮ್ಮನ್ನು ಕಾಣುತ್ತೇನೆ ಎಂದು ಹೇಳಿದೆ." ಎಂದು ವಿಷ್ಣುವರ್ಧನ್ ಸಂದರ್ಶನದಲ್ಲಿ ಹೇಳಿದ್ದರು.
ರಾಜಣ್ಣನ ಸಾಧನೆ ಮುಂದೆ ನಂದೇನೂ ಇಲ್ಲ
"ಅವರ ಸಾಧನೆಯ ಮುಂದೆ ನನ್ನ ಸಾಧನೆ ಏನು?. ಸಿನಿಮಾ ನೋಡಿ ಎಲ್ಲರೂ ಹೋದ ಮೇಲೂ ರಾಜ್‌ಕುಮಾರ್ ಅವರು 15 ನಿಮಿಷ ಸೈಲೆಂಟ್ ಆಗಿ ಅಲ್ಲೇ ಕೂತಿದ್ದರು ಅಂತ ನನಗೆ ನಿರ್ಮಾಪಕರು ಹೇಳಿದರು. ಅವರ ಮನಸ್ಸಿನಲ್ಲಿ ಏನಿತ್ತು? ಅನ್ನೋದು ನನಗೆ ಗೊತ್ತಿಲ್ಲ. ಅವರು ನಿಮ್ಮನ್ನು ಭೇಟಿ ಮಾಡಬೇಕು ಅಂತ ಹೇಳಿದಾಗಲೂ ಹಾಗೆ ಮಾಡಬೇಡಿ ಸರ್. ನಾನು ಬೆಂಗಳೂರಿಗೆ ಬಂದ ಕೂಡಲೇ ನಾನೇ ನಿಮಗೆ ಸಿಗುತ್ತೇನೆ ಎಂದು ಹೇಳಿದೆ. ಕನ್ನಡ ಚಿತ್ರರಂಗ ಅಂತ ಬಂದಾಗ ಯಾರಿದ್ದಾರೆ. ಇಷ್ಟು ದೀರ್ಘ ಕಾಲ ಚಿತ್ರರಂಗದಲ್ಲಿ ನಿಂತವರು ಯಾರಿದ್ದಾರೆ? ಅವರ ಜನಪ್ರಿಯತೆ. ಅವರ ಅಭಿನಯ. ಆ ತರ ಇನ್ನೊಬ್ಬ ವ್ಯಕ್ತಿ ಇಲ್ಲ." ಎಂದು ವಿಷ್ಣುದಾದ ಹೇಳಿದ್ದರು.


Click it and Unblock the Notifications











