'ಭಕ್ತ ಕನಕದಾಸ' ಸಿನಿಮಾದ ಶೂಟಿಂಗ್ ವೇಳೆ ಅಣ್ಣಾವ್ರು ಮುನಿಸಿಕೊಂಡಿದ್ದೇಕೆ? ಏನಿದು 'ಟೀ' ಕಥೆ?
ಇದು 'ಭಕ್ತ ಕನಕದಾಸ' ಚಿತ್ರದ ಚಿತ್ರೀಕರಣದ ಸಮಯದಲ್ಲಿ ನಡೆದ ಘಟನೆ. ಇದನ್ನು ಅಣ್ಣಾವ್ರೇ ಕನ್ನಡ ಚಿತ್ರರಂಗದ ಹಿರಿಯ ಫೋಟೊ ಜರ್ನಲಿಸ್ಟ್ ಹಾಗೂ ದೊಡ್ಮನೆಗೆ ಆತ್ಮೀಯರಾಗಿರುವ ಪ್ರವೀಣ್ ನಾಯಕ್ ಅವರೊಂದಿಗೆ ಹಂಚಿಕೊಂಡಿದ್ದರು. ಈ ಅಪರೂಪದ ಘಟನೆಯನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ರಾಜ್‌ಕುಮಾರ್ ಅವರು ಭರ್ಜರಿಯಾಗಿ ಊಟ ಮಾಡುತ್ತಾರೆ. ಊಟ ಆದ ತಕ್ಷಣ ಶೂಟಿಂಗ್ ಇರುತ್ತೆ. ಊಟ ಆದ್ಮೇಲೆ ಸಾಮಾನ್ಯವಾಗಿ ಏನಾಗುತ್ತೆ ಅಂತ ಗೊತ್ತು. ಅದರಲ್ಲೂ ಮೊಸರನ್ನ ತಿಂದರೆ ಹಾಗೆ ಕಣ್ಣು ಎಳೆಯುವುದಕ್ಕೆ ಶುರುವಾಗುತ್ತೆ. ಒಂದು ಅರ್ಧಗಂಟೆ ಮಲಗೋಣ ಅಂತ ಅನಿಸುತ್ತೆ. ಕಾಲ್ ಶೀಟ್ ಕೊಟ್ಟಿರುವುದರಿಂದ ರಾಜ್‌ಕುಮಾರ್ ಅವರು ಐದು ನಿಮಿಷವೂ ವ್ಯರ್ಥ ಮಾಡದೆ ಸ್ಪಾಟ್‌ಗೆ ಬರುತ್ತಾರೆ. ಹಾಗೆ ಅವರು ಬಂದರು. ಊಟ ಮಾಡಿದ್ದರಿಂದ ಅವರಿಗೆ ಸ್ವಲ್ಪ ಮೈ ಬಾರವಿತ್ತು.

ಆಗ ಪ್ರೊಡಕ್ಷನ್ ಹುಡುಗರನ್ನು ಕರೆಯುತ್ತಾರೆ. ಅಪ್ಪ ನಂಗೆ ಸ್ವಲ್ಪ ಟೀ ಕೊಡಪ್ಪ ಎಂದು ಹೇಳುತ್ತಾರೆ. ಟೀ ಕುಡಿದು ಮತ್ತೆ ಚೇತರಿಸಿಕೊಳ್ಳೋಣ. ಮತ್ತೆ ಎನರ್ಜಿ ತೆಗೆದುಕೊಂಡರೆ ಹುರುಷು ಬರುತ್ತೆ ಅನ್ನೋದು ಲೆಕ್ಕಾಚಾರವಾಗಿತ್ತು. ಹೀಗಾಗಿ ಟೀ ಕೇಳುತ್ತಾರೆ. "ಸುಮಾರು ಐದು-ಹತ್ತು ನಿಮಿಷ ಆಯ್ತು. ನನ್ನನ್ನು ನೋಡಿದರೆ ಸಾಕು ಆ ಹುಡುಗ ಆ ಕಡೆ ಹೋಗುತ್ತಿದ್ದ. ಏನಿದು ಒಂದು ಟೀ ಕೇಳಿದೆ ಅಷ್ಟೇ. 10 ರಿಂದ 15 ಬಾರಿ ಕೇಳಿದರೂ ಟೀ ಬರಲಿಲ್ಲ. ಆಗ ನನಗೆ ಯಾಕಾದರೂ ಟೀ ಕೇಳಿದೆನೋ ಅಂತ ಅನಿಸಿತು" ಎಂದು ಅಣ್ಣಾವ್ರು ಅಂದು ಪ್ರವೀಣ ನಾಯಕ್ ಅವರ ಬಳಿ ಹೇಳಿದ್ದರು. ಸಾಕಷ್ಟು ಬಾರಿ ಕಾದ ಮೇಲೆ ಟೀ ತಗೊಳ್ಳಿ ಎಂದು ಪ್ರೊಡಕ್ಷನ್ ಹುಡುಗ ಬಂದಾಗ ಬೇಡ ಎಂದು ಹೇಳುತ್ತಾರೆ. ಆ ವೇಳೆ ಅಣ್ಣಾವ್ರಿಗೆ ಕೋಪ ಬಂದಿರುತ್ತೆ.
ಅಣ್ಣ ಟೀ ತಗೊಳ್ಳಿ ಅಂತ ಬರುತ್ತಾರೆ. ಬೇಡ ಅಂತ ಹೇಳಿದೆ ತಾನೇ ಎಂದು ಗದರುತ್ತಾರೆ. "ಇವತ್ತಿಂದ ಈ ಕಂಪನಿಯಲ್ಲಿ, ಈ ಸಿನಿಮಾಗೆ ಕೆಲಸ ಮಾಡುತ್ತಿದ್ದೇನಲ್ಲ. ಊಟ, ತಿಂಡಿ, ಕಾಫಿ-ಟೀ ಏನೂ ಬೇಡ. ನಾನು ಮನೆಯಿಂದ ತರಿಸಿಕೊಳ್ಳುತ್ತೇನೆ. ತೆಗೆದುಕೊಂಡು ಹೋಗು ಎಂದು" ಪ್ರೊಡಕ್ಷನ್ ಹುಡುಗನ ಮೇಲೆ ರಾಜ್‌ಕುಮಾರ್ ಬೇಸರ ಹೊರ ಹಾಕಿದ್ದರು ಎಂದು ಪ್ರವೀಣ್ ನಾಯಕ್ ಹೇಳುತ್ತಾರೆ.
ಈ ಘಟನೆ ಆದ ಬಳಿಕ ಅಣ್ಣಾವ್ರು ಬೇರೆಯದ್ದೇ ಆಲೋಚನೆಯಲ್ಲಿ ಇರುತ್ತಾರೆ. ಈ ವಿಷಯವನ್ನು ಹುಡುಗ ನಿರ್ಮಾಪಕರಿಗೆ ಹೇಳುತ್ತಾನೆ. ಮಾರನೇ ದಿನ ನಿರ್ಮಾಪಕರು ಬಂದು ಗೊತ್ತಾಗಿಲ್ಲ. ಏನೋ ತಪ್ಪಾಗಿದೆ ಎಂದು ಹೇಳುತ್ತಾರೋ ಏನೋ ಅಂದುಕೊಂಡಿದ್ದರು. ಆದರೆ, ನಿರ್ಮಾಪಕರು ಬರಲೇ ಇಲ್ಲ. ಹೀಗಾಗಿ ಅಣ್ಣಾವ್ರು ಕೂಡ ಸರಿ ಬೇಡವೇ ಬೇಡ ಎಂದು ಬಿಟ್ಟು ಬಿಟ್ಟಿದ್ದರು. ಊಟ-ತಿಂಡಿ ಎಲ್ಲವನ್ನೂ ಮನೆಯಿಂದಲೇ ಕಟ್ಟಿಸಿಕೊಂಡು ಹೋಗುತ್ತಿದ್ದರು. ಇಡೀ ಸಿನಿಮಾ ಶೂಟಿಂಗ್ ಮುಗಿಯುವವರೆಗೂ ಏನನ್ನೂ ತೆಗೆದುಕೊಂಡಿರಲಿಲ್ಲ.
ಇದೆಲ್ಲ ಆಗಿ ಚಿತ್ರೀಕರಣದ ಕೊನೆಯ ದಿನ ಸಾಮಾನ್ಯವಾಗಿ ಇಡೀ ಸಿನಿಮಾ ತಂಡ ಇರುತ್ತೆ. ಅದನ್ನು ಸಿನಿಮಾ ಭಾಷೆಯಲ್ಲಿ ಕುಂಬಳಕಾಯಿ ಒಡೆಯುವ ದಿನ ಎನ್ನುತ್ತಾರೆ. ಆ ದಿನ ಕೂಡ ಟೀ ಬಂತು. ಆ ಹುಡುಗ ಟೀ ತೆಗೆದುಕೊಂಡು ಬಂದಿದ್ದ. ಅಣ್ಣಾವ್ರ ಬೇಡ ಅಂದರು. "ಆ ವೇಳೆ ಸಿನಿಮಾದ ಕ್ಯಾಮರಾಮ್ಯಾನ್ ಮಧುಸೂಧನ್ ಇದೆಲ್ಲವನ್ನೂ ನೋಡುತ್ತಿದ್ದರು. ಅಷ್ಟೂ ದಿನ ಇದೆಲ್ಲವನ್ನೂ ಗಮನಿಸುತ್ತಿದ್ದರು. ಆದರೆ ಮಾತಾಡುವುದು ಬೇಡ ಅಂದುಕೊಂಡಿದ್ದರು. ಅವತ್ತು ಹುಡುಗನ ಬಳಿಕ ಎರಡು ಕಪ್ ಟೀ ತೆಗೆದುಕೊಂಡು ಬಂದು ಅಣ್ಣ ಟೀ ತಗೊಳ್ಳಿ ಅಂದರು. ದಯವಿಟ್ಟು ನನಗೋಸ್ಕರ ತಗೊಳ್ಳಿ ಅಂದರು. ನಾನು ಅವರ ಮುಖ ನೋಡಿದೆ. ಎಂದೂ ಕಾಣದೆ ಇರುವ ಆ ಮಮತೆ, ಒಂದು ಪ್ರೀತಿ, ಆ ಮುಖದಲ್ಲಿ ಕರುಣಾ ಭಾವ ನೋಡಿದೆ. ನನಗೆ ಇಲ್ಲ ಅನ್ನುವುದಕ್ಕೆ ಮನಸ್ಸು ಬರಲಿಲ್ಲ. ಕೊಡಿ ಅಂದೆ, ತೆಗೆದುಕೊಂಡು ಕುಡಿದೆ. ಕುಡೀತಾ ಕುಡೀತಾ ನಾನು ಯೋಚನೆ ಮಾಡಿದೆ. ಬೇಕಿತ್ತಾ ಇವೆಲ್ಲ. ಕನಕದಾಸರ ಪಾತ್ರ ಮಾಡುತ್ತಿದ್ದೇನೆ. ಎಂತಹ ಸಂತರು ಅವರು. ದಾಸಾನು ದಾಸನ ಪಾತ್ರ ಮಾಡುತ್ತಿದ್ದೇನೆ. ನನಗೆ ಟೀ ಬರಲಿಲ್ಲ ಅನ್ನೋ ಕಾರಣಕ್ಕೆ ಇಷ್ಟೆಲ್ಲ ಗಲಾಟೆ ಮಾಡಿಕೊಂಡು ಬಿಟ್ನಲ್ಲ ಅಂತ ಅನಿಸಿತು. ನನ್ನ ಪಾಲಿಗೆ ಬಂದಿದ್ದು ನನಗೆ. ಅದು ಬೇಕು, ಇದು ಬೇಕು ಅಂತ ಏನೂ ಕೇಳುವುದಿಲ್ಲ. ಇನ್ನು ನಾನು ಕೇಳುವುದಿಲ್ಲ ಎಂದು ನಾನು ತೀರ್ಮಾನ ಮಾಡಿಕೊಂಡೆ. ಅವತ್ತಿಂದ ಯಾವುದೇ ವಸ್ತು ಇರಲಿ. ಅದು ಹೇಗಾದರೂ ಇರಲಿ. ಆ ಸಮಯಕ್ಕೆ ನನ್ನ ಮುಂದೆ ಏನು ಬರುತ್ತೋ ಅದನ್ನೇ ನಾನು ಪ್ರಸಾದ ಅಂತ ತೆಗೆದುಕೊಳ್ಳುತ್ತೇನೆ. ಅವತ್ತಿಂದ ಇವತ್ತಿನ ವರೆಗೂ ಏನು ಸಿಗುತ್ತೋ ಅದನ್ನು ತೆಗೆದುಕೊಳ್ಳುವುದು ಅಷ್ಟೇ" ಎಂದು ಅಣ್ಣಾವ್ರು ಅಂದು ಪ್ರವೀಣ್ ನಾಯಕ್ ಅವರ ಬಳಿ ಹೇಳಿ ಭಕ್ತ ಕನಕದಾಸ ಘಟನೆಯನ್ನು ನೆನಪಿಸಿಕೊಂಡಿದ್ದರು.


Click it and Unblock the Notifications