ಅಣ್ಣಾವ್ರು ಅದೆಷ್ಟೇ ಕಷ್ಟಪಟ್ರೂ ಕೆಂಪೇಗೌಡನ ಸಿನಿಮಾ ಸೆಟ್ಟೇರಲಿಲ್ಲ: ಎಲ್ಲಾ ಇದ್ರೂ ಶುರುವಾಗಿಲ್ಲ ಏಕೆ?
ಸಾಮಾಜಿಕ ಪಾತ್ರವಿರಲಿ. ಪೌರಾಣಿಕ ಪಾತ್ರವಿರಲಿ. ಇಲ್ಲಾ ಐತಿಹಾಸಿಕ ಪಾತ್ರವೇ ಆಗಿರಲಿ. ಡಾ.ರಾಜ್‌ಕುಮಾರ್ ಆ ಪಾತ್ರದಲ್ಲಿ ಆರಾಮಾಗಿ ನಟಿಸುತ್ತಿದ್ದರು. ಅದಕ್ಕೆ ರಾಜ್‌ಕುಮಾರ್ ಅಣ್ಣಾವ್ರು ಆಗಿದ್ದು, ವರನಟ ಅಂತ ಅನಿಸಿಕೊಂಡಿದ್ದು.
ಅಣ್ಣಾವ್ರು ನಟಿಸಿದ ಬಹುತೇಕ ಸಿನಿಮಾಗಳಲ್ಲಿ ಅವರು ಜೀವಿಸಿದ್ದಾರೆ. ಆದರೂ, ಅಣ್ಣಾವ್ರಿಗೆ ಕೆಲವು ಪಾತ್ರಗಳಲ್ಲಿ ನಟಿಸಬೇಕೆಂಬ ಆಸೆಯಿತ್ತು. ಆದರೆ, ಅದೆಷ್ಟೇ ಪ್ರಯತ್ನ ಪಟ್ಟರೂ ಆ ಸಿನಿಮಾಗಳು ಮಾತ್ರ ಸೆಟ್ಟೇರಿಸುವುದಕ್ಕೆ ಆಗಲೇ ಇಲ್ಲ. ಅದರಲ್ಲೊಂದು ಮಾಗಡಿ ಕೆಂಪೇಗೌಡನ ಪಾತ್ರ.

ವರನಟ ಡಾ.ರಾಜ್‌ಕುಮಾರ್‌ಗೆ ಈ ಪಾತ್ರ ಮಾಡಬೇಕು ಅನ್ನೋ ಆಸೆಯಿತ್ತು. ನಿರ್ಮಾಪಕರೂ ಕೂಡ ಸಿನಿಮಾ ಮಾಡುವುದಕ್ಕೆ ಮುಂದೆ ಬಂದಿದ್ದರು. ಅಣ್ಣಾವ್ರು ಕೂಡ ಕಾಲ್‌ಶೀಟ್ ಕೊಡುವುದಕ್ಕೆ ರೆಡಿಯಾಗಿದ್ದರು. ಅದೆಷ್ಟೇ ಪ್ರಯತ್ನ ಪಟ್ಟರೂ, ಈ ಸಿನಿಮಾ ಸೆಟ್ಟೇರಿಸುವುದಕ್ಕೆ ಮಾತ್ರ ಆಗಲಿಲ್ಲ. ಈ ಬಗ್ಗೆ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ರಾಮ್ ಕುಮಾರ್ ಅವರು ಕೆಲವು ಆಸಕ್ತಿಕರ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.
"ನಿಸ್ಸಾಯಕನಾಗಿಬಿಟ್ಟೆ" ಎಂದಿದ್ದ ಅಣ್ಣಾವ್ರು
"ಮೇಯರ್ ಮುತ್ತಣ್ಣ' ಒಂದು ದೃಶ್ಯದಲ್ಲಿ ಡಾ. ರಾಜ್‌ಕುಮಾರ್ ರಾತ್ರಿ 12 ಗಂಟೆಯಲ್ಲಿ 'ಕೆಂಪೇಗೌಡ'ನ ಕಾಲ ಕೆಳಗೆ ಮಲಗಿರುತ್ತಾರೆ. ಆಗ ಪೊಲೀಸರು ಬಂದು ಎಬ್ಬಿಸುತ್ತಾರೆ. ಆಗ ರಾಜ್‌ಕುಮಾರ್ ಪುಣ್ಯಾತ್ಮಕ ಕಾಲ ಕೆಳಗೆ ಮಲಗೋಕೂ ಬಿಡಲಿಲ್ವಲ್ಲ ಅಂತಾರೆ. ಹಾಗೇ ಅಣ್ಣಾವ್ರು ನಮ್ಮ ಬಳಿ ಆ ಪುಣ್ಯಾತ್ಮನ ಪಾತ್ರ ಮಾಡೋಕೆ ಆಗಲಿಲ್ಲಪ್ಪ" ಹೀಗೆ ಹೇಳುವ ಮೂಲಕ ರಾಜ್‌ಕುಮಾರ್ ಯಾಕೆ ಕೆಂಪೇಗೌಡನ ಪಾತ್ರ ಮಾಡಲು ಸಾಧ್ಯವಾಗಿಲ್ಲ ಅನ್ನೋದನ್ನು ರಾಮ್ ಕುಮಾರ್ ಸವಿಸ್ತಾರವಾಗಿ ಟೋಟಲ್ ಕನ್ನಡ ಯೂಟ್ಯೂಬ್‌ನಲ್ಲಿ ವಿವರಿಸಿದ್ದಾರೆ. ಅದರ ಸಾರಾಂಶ ಹೀಗಿದೆ.

"ಬೆಂಗಳೂರು ನಗರದ ನಿರ್ಮಾತೃ ಮಾಗಡಿ ಕೆಂಪೇಗೌಡ ಆ ಪುಣ್ಯಾತ್ಮನ ಪಾತ್ರ ಮಾಡೋಕೆ ಆಗಲಿಲ್ಲ. ನಾನು ತುಂಬಾ ನಿಸ್ಸಾಯಕನಾಗಿಬಿಟ್ಟೆ. ನಾನು ಕಡೆನೂ ಮಾತಾಡೋ ಹಾಗಿಲ್ಲ. ನಿರ್ಮಾಪಕರ ಕಡೆ ಹೋಗಲಾ? ಜನರ ಕಡೆ ಹೋಗಲಾ? ಇಲ್ಲಾ ನನ್ನ ಮನಸ್ಸಿನ ಹಾಗೆ ಹೋಗಲಾ? ಅಂದಿದ್ರು. ಅವರಿಗೆ ಕೆಂಪೇಗೌಡನ ಬಗ್ಗೆ ಸಿನಿಮಾ ಮಾಡುವ ಆಸೆ ತುಂಬಾ ಇತ್ತು." ಎಂದಿದ್ದಾರೆ.
"ಇತಿಹಾಸಕ್ಕೆ ಅಪಪ್ರಚಾರ ಮಾಡಬೇಡಿ"
ಮಾಗಡಿ ಕೆಂಪೇಗೌಡ ಸಿನಿಮಾ ಮಾಡುವುದಕ್ಕೆ ಅಣ್ಣಾವ್ರ ಕುಟುಂಬಸ್ಥರೇ ಮುಂದೆ ಬಂದಿದ್ದರಂತೆ. ಆಗ ರಾಜ್‌ಕುಮಾರ್ ಎರಡು ಷರತ್ತುಗಳನ್ನು ಹಾಕಿದ್ದರು. ಬೇಕಿದ್ದರೆ ಸಂಭಾವನೆ ಕಡಿಮೆ ತೆಗೆದುಕೊಳ್ಳುತ್ತೇನೆ ಎಂದಿದ್ದರಂತೆ.
"ರಾಜ್‌ಕುಮಾರ್ ಎರಡೇ ಮಾತು ಹೇಳಿದ್ದು. ನೋಡಿ ಇತಿಹಾಸಕ್ಕೆ ಅಪಪ್ರಚಾರ ಮಾಡಬೇಡಿ. ಚೆನ್ನಾಗಿ ಗೊತ್ತಿರೋರ ಬಳಿ ಸಾಹಿತ್ಯ ಬರೆಸಿ. ನಾನು ಮಾಡುತ್ತೇನೆ. ಬೇಕಿದ್ದರೆ ಸಂಭಾವನೆ ಕಡಿಮೆ ಕೊಡಿ. ಬೇಕಿದ್ದರೆ, ಸಿನಿಮಾ ಮುಗಿದ ಮೇಲೆ ಸಂಭಾವನೆ ಕೊಟ್ಟರೂ ಒಪ್ಪಿಗೆ ಎಂದಿದ್ದರು." ಎಂದು ರಾಮ್ ಕುಮಾರ್ ನೆನಪಿಸಿಕೊಂಡಿದ್ದಾರೆ.
ಮಾಗಡಿ ಕೆಂಪೇಗೌಡ ಸಿನಿಮಾಗೆ ತೊಡಕು ಆಗಿದ್ದೆಲ್ಲಿ?
ಕತೆ ವಿಚಾರದಲ್ಲಿ ಅಣ್ಣಾವ್ರು ತುಂಬಾನೇ ನಿಷ್ಠುರವಾಗಿದ್ದರು. ಮೊದಲು ಚಿತ್ರಕಥೆ ಮಾಡಲು ಹೇಳಿದ್ದರು. ಅದನ್ನು ಓದಿದೆ ಬಳಿಕ ಒಪ್ಪಿಗೆ ಆದರೆ, ಕಾಲ್‌ಶೀಟ್ ಕೊಡುತ್ತೇನೆ ಎಂದಿದ್ದರಂತೆ. ಆದರೆ, ಡಾ.ರಾಜ್‌ಕುಮಾರ್‌ಗೆ ಸ್ಕ್ರಿಪ್ಟ್ ಸಮಾಧಾನ ತಂದಿರಲಿಲ್ಲ. ಮತ್ತೆ ಕಥೆಯಲ್ಲಿ ಮಾರ್ಪಾಡುಗಳನ್ನು ಮಾಡಲಾಗಿತ್ತು.
"ನಿರ್ದೇಶಕರೊಬ್ಬರು ಹೇಳಿದ್ರು. ಮಾಗಡಿ ಕೆಂಪೇಗೌಡನ ಸಿನಿಮಾ ತೆಗೆಯೋದು ಕಷ್ಟ. ಆಗಿನ ಬೆಂಗಳೂರನ್ನು ತೋರಿಸಬೇಕು. ಮಾಗಡಿ ಕೆಂಪೇಗೌಡ ಅಂದ ಕೂಡಲೇ ಹಲಸೂರು, ಯಲಹಂಕ, ಕನಕಪುರ ಎಲ್ಲಾ ಬರುತ್ತೆ. ಈಗ ಅದು ಬೆಳೆದು ಬಿಟ್ಟಿದೆ. ಆ ಕಾಲ ಘಟ್ಟದಲ್ಲಿ ಏನಿರುತ್ತೆ ಅಂತ ಕಲಾಕಾರನಿಗೆ ಗೊತ್ತಿರುತ್ತೆ. ಅವನಿಂದ ಮೊದಲು ಸೆಟ್ಟು ನಿರ್ಮಿಸಿ ಎಂದರು. ಆಗ, ಕಲಾನಿರ್ದೇಶಕರು ಮೂರು ನಾಲ್ಕು ಲಕ್ಷ ಆಗುತ್ತೆ ಎಂದಿದ್ದರು. 6 ತಿಂಗಳು ಟೈಂ ಕೊಟ್ಟರು. ಸೆಟ್ ಮುಗಿದ ಕೂಡಲೇ ದುಡ್ಡು ಕೊಡುತ್ತೇನೆ ಅಂದರೆ ಆಗಲ್ಲ. ಒಂದೊಂದೇ ಮುಗೀತಾ ಮುಗೀತಾ ಇದ್ದಂತೆ ದುಡ್ಡುಕೊಡಿ. ಮೆಟಿರಿಯಲ್ ತರಿಸಿಕೊಡಿ. ನಮಗೆ ಲೇಬರ್ ಕೊಡಿ ಎಂದಿದ್ದರು. ಆಗ ನಿರ್ಮಾಪಕ ನಾನು ಇಷ್ಟೆಲ್ಲ ಯೋಚನೆ ಮಾಡಿ, ರಾಜ್‌ಕುಮಾರ್ ಚಿತ್ರಕಥೆ ಒಪ್ಪದೆ ಹೋದರೆ ಅಂತ ಅನಿಸಿತ್ತು. ಸರಿ, ಚಿತ್ರಕಥೆ ಆದ್ಮೇಲೆ ಅಂತ ನೋಡಿದರೆ, ಮತ್ತೆ ಆರು ತಿಂಗಳು ಕಾಯಬೇಕಿತ್ತು." ಹೀಗಾಗಿ ಮಾಗಡಿ ಕೆಂಪೇಗೌಡರ ಸಿನಿಮಾ ನಿಂತೇ ಹೋಯ್ತು ಎಂದು ರಾಮ್ ಕುಮಾರ್ ವಿವರಿಸಿದ್ದಾರೆ.


Click it and Unblock the Notifications











