ವಿಷ್ಣುದಾದ ಕೈಯಲ್ಲಿ ಕಡಗ ಇಲ್ಲದೆ ಹೊರಗೆ ಹೋಗುತ್ತಲೇ ಇರಲಿಲ್ಲ ಯಾಕೆ? ಈ ವಿಡಿಯೋದಲ್ಲಿ ನೋಡಿ!
ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಕುರಿತು ನೂರೆಂಟು ಇಂಟ್ರೆಸ್ಟಿಂಗ್ ವಿಷಯಗಳಿವೆ. ಇದೇ ಸೆಪ್ಟೆಂಬರ್ 18ರಂದು 75ನೇ ಹುಟ್ಟುಹಬ್ಬವಿರುವುದರಿಂದ ಅವರ ಅಭಿಮಾನಿಗಳು ಸಂಭ್ರಮಿಸುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ವಿಷ್ಣುದಾದನ ಅಮೃತಮಹೋತ್ಸವಕ್ಕೆ ತೆರೆಮರೆಯಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಕನ್ನಡ ಚಿತ್ರರಂಗದ ಸುಂದರ ನಟನಿಗೆ ಗೌರವ ಅರ್ಪಿಸುವುದಕ್ಕೆ ಇಡೀ ಚಿತ್ರರಂಗ ಒಂದಾಗುತ್ತಿದೆ.
ವಿಷ್ಣುದಾದ ಅವರದ್ದೇ ಒಂದು ಸ್ಟೈಲ್ ಇತ್ತು. ಅವರ ನಡಿಗೆ, ಅವರ ಮ್ಯಾನರಿಸಂ ಸಿನಿಪ್ರಿಯರಿಗೆ ತೆರೆಮೇಲೆ ಕಿಕ್ ಕೊಡುತ್ತಿತ್ತು. ಅದರಲ್ಲೂ ಅವರ ಕೈಯಲ್ಲಿ ಸದಾ ಇರುತ್ತಿದ್ದ ಆ ಬಳೆ ಅವರ ಸ್ಟೈಲ್‌ನ ಪ್ರಮುಖ ಆಕರ್ಷಣೆಯಾಗಿರುತ್ತಿತ್ತು. ಆಕ್ಷನ್ ಸೀನ್ ಆರಂಭ ಆಗುವುದಕ್ಕೂ ಮುನ್ನ ವಿಷ್ಣುದಾದ ಕೈ ಬಳೆಯನ್ನು ಮೇಲೇರಿಸಿಕೊಳ್ಳುತ್ತಾ, ಸಿಂಹ ನಡಿಗೆಯಲ್ಲಿ ಬರುತ್ತಿದ್ದರೆ, ಥಿಯೇಟರ್‌ನಲ್ಲಿ ಶಿಳ್ಳೆಗಳ ಸದ್ದು ಆಕಾಶಕ್ಕೆ ಮುಟ್ಟುತ್ತಿದ್ದವು.

ಆದರೆ, ಬಹಳಷ್ಟು ಮಂದಿಗೆ ವಿಷ್ಣುದಾದ ಈ ಕಡಗಯನ್ನು ಯಾಕೆ ಧರಿಸುತ್ತಿದ್ದರು. ಇದರ ಹಿನ್ನೆಲೆಯೇನು? ಎಂದಿನಿಂದ ಈ ಕಡಗ ಧರಿಸುತ್ತಿದ್ದಾರೆ? ಇದರ ಹಿಂದೆ ಏನಾದರೂ ಆಧ್ಯಾತ್ಮಿಕ ಹಿನ್ನೆಲೆ ಇದೆಯೇ? ಎಂಬ ನೂರಾರು ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಹೀಗಾಗಿ ಈ ಹಿಂದೆ ಇದ್ದ ಈಟಿವಿ ಕನ್ನಡಕ್ಕೆ ನೀಡಿದ್ದ ಸಂದರ್ಶನದಲ್ಲಿ ಖುದ್ದು ವಿಷ್ಣುದಾದನೇ ಈ ರಹಸ್ಯವನ್ನು ರಿವೀಲ್ ಮಾಡಿದ್ದರು. ಆ ವಿಡಿಯೋ ಹುಟ್ಟುಹಬ್ಬದ ಈ ಸಂಭ್ರಮದ ವೇಳೆ ಮತ್ತೆ ವೈರಲ್ ಆಗುತ್ತಿದೆ. ಹಾಗಿದ್ದರೆ ವಿಷ್ಣುವರ್ಧನ್ ಈ ವಿಡಿಯೋದಲ್ಲಿ ಏನು ಹೇಳಿದ್ದಾರೆ? ತಿಳಿಯುವುದಕ್ಕೆ ಮುಂದೆ ಓದಿ.
ವಿಷ್ಣುದಾದ ಕೈಯಲ್ಲಿ ಸದಾ ಇರುತ್ತಿದ್ದ ಈ ಕಡಗ ಅವರು ನುಡಿದಂತೆ ಕೊನೆಯ ದಿನದವರೆಗೂ ಇತ್ತು. ಹಾಗೆ ನೋಡುವುದಕ್ಕೆ ಹೋದರೆ, ವಿಷ್ಣುವರ್ಧನ್ ಅವರ ಅವಿಭಾಜ್ಯ ಅಂಗವಾಗಿತ್ತು. ಬಲಗೈಯಲ್ಲಿ ಈ ಕಡಗವನ್ನು ಧರಿಸುತ್ತಿದ್ದ ವಿಷ್ಣುದಾದ ಅದೆಷ್ಟೋ ಮಂದಿಗೆ ಪ್ರೇರಣೆಯಾಗಿದ್ದೂ ಇದೆ. ಇವರನ್ನು ನೋಡಿ ಕೈಗೆ ಕಡಗ ಧರಿಸಿದವರೂ ಇದ್ದರು. ಇದು ವಿಷ್ಣುಗೆ ಬಲ ನೀಡುತ್ತಿದ್ದರೆ, ಅವರ ಅಭಿಮಾನಿಗಳಿಗೆ ಸ್ಟೈಲ್ ಆಗಿ ಕಾಣಿಸುತ್ತಿತ್ತು. ಅಷ್ಟಕ್ಕೂ ಈ ಕಡಗವನ್ನು ಯಾರು ಕೊಟ್ಟಿದ್ದು? ಅಷ್ಟು ವರ್ಷ ಧರಿಸಿದ್ದರು? ಅನ್ನೋದನ್ನು ಅವರೇ ಈ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಅದರ ಸಾರಾಂಶ ಹೀಗಿದೆ.
ಗುರುದ್ವಾರದಲ್ಲಿ ವಿಷ್ಣುದಾದಗೆ ಕೊಟ್ಟಿದ್ದು
ವಿಷ್ಣುದಾದ ಒಮ್ಮೆ ಕಾರ್ಯಕ್ರಮಕ್ಕೆ ಬೀದರ್ ಹೋಗಿದ್ದರು. ಆ ವೇಳೆ ಅವರ ಆತ್ಮೀಯರು ಗುರುದ್ವಾರಕ್ಕೆ ಕರೆದುಕೊಂಡು ಹೋಗಿದ್ದರು. ಆ ವೇಳೆ ಗುರುಗಳು ನೀಡಿದ್ದರೆಂದು ವಿಷ್ಣುದಾದ ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. "ಈ ಬಳೆ ಬಂದು 1980ನೇ ಇಸವಿಯಲ್ಲಿ ಬೀದರ್‌ಗೆ ಹೋಗಿದ್ದೆ. ಅಲ್ಲೊಂದು ಗುರುದ್ವಾರವಿದೆ. ಅಲ್ಲಿ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಆ ವೇಳೆ ಗುರುದ್ವಾಕ್ಕೆ ಹೋದಾಗ ಅಲ್ಲಿನ ಗುರುಗಳು ನನಗೆ ಕೊಟ್ಟು, ಒಂದು ಕತ್ತಿಯನ್ನು ನೀಡಿದ್ದರು." ಎಂದು ಈ ವಿಡಿಯೋದಲ್ಲಿ ಡಾ.ವಿಷ್ಣುವರ್ಧನ್ ಹೇಳಿಕೊಂಡಿದ್ದಾರೆ.
ಕೈಯಲ್ಲಿ ಕಡಗ ಇಲ್ಲದೆ ಇದ್ದರೆ ಕಷ್ಟ
ಇದೇ ವಿಡಿಯೋದಲ್ಲಿ ಕೈಯಲ್ಲಿ ಕಡಗ ಇಲ್ಲದೆ ಹೋದರೆ, ಎಷ್ಟು ಕಷ್ಟ ಆಗುತ್ತೆ? ಅನ್ನೋದನ್ನು ಹೇಳಿಕೊಂಡಿದ್ದಾರೆ. "1980ನೇ ಇಸವಿಯಿಂದ ಅದು ನನ್ನ ಕೈನಲ್ಲಿ ಇದೆ. ಇನ್ನೊಂದು ಏನಾಗುತ್ತೆ ಅಂದೆ, ನಾನು ಎಡಗೈ ಬಳಸುತ್ತೇನೆ. ನನಗೆ ಬಲಗೈ ಮತ್ತು ಎಡಗೈನ ಭಾರದಲ್ಲಿ ಬದಲಾವಣೆ ಇರೋದ್ರಿಂದ ಅನಿವಾರ್ಯವಾಗಿ ನಾನು ಹಾಕಿಕೊಳ್ಳಲೇಬೇಕು. ಈ ಬಳೆಯನ್ನು ಹಾಕಿದಾಗ ಆ ಭಾರವನ್ನು ನಾನು ಬ್ಯಾಲೆನ್ಸ್ ಮಾಡುತ್ತೇನೆ. ಅದು ಇಲ್ಲದೆ ಹೋದರೆ ಕಷ್ಟ ಆಗುತ್ತೆ." ವಿಷ್ಣುದಾದ ಹೇಳಿದ್ದರು.
"ನನ್ನ ಜೊತೆನೇ ಕಡಗನೂ ಹೋಗುತ್ತೆ"
ಸುಮಾರು 29 ವರ್ಷಗಳ ಕಾಲ ವಿಷ್ಣುದಾದ ಈ ಕಡಗವನ್ನು ಧರಿಸಿದ್ದರು. ಕೈಯಲ್ಲಿ ಕಡಗ ಇಲ್ಲದೆ ಹೊರ ಹೋಗುತ್ತಲೇ ಇರಲಿಲ್ಲ. ಅದಕ್ಕೆ ಇದು ನನ್ನ ಅವಿಭಾಜ್ಯ ಅಂಗ ಎಂದು ಹೇಳಿಕೊಂಡಿದ್ದರು. "1980ನೇ ಇಸವಿಯಿಂದ ಇಲ್ಲಿವರೆಗೂ ಬಂದಿದೆ. ಇದು ನನ್ನ ಜೊತೆನೇ ಹೋಗುತ್ತೆ ಅಂತಾನೇ ಹೇಳೋದು. ಯಾಕಂದ್ರೆ, ಇದು ನನ್ನ ಅವಿಭಾಜ್ಯ ಅಂಗ ಆಗಿದೆ. ಇದು ಇಲ್ಲದೆ ನಾನು ಹೊರಗೆ ಹೋಗುವುದಕ್ಕೆ ಸಾಧ್ಯವೇ ಇಲ್ಲ. ಇದು ನನ್ನ ಕೈಯಲ್ಲಿ ಯಾವಾಗಲೂ ಇರಲೇಬೇಕು." ಎಂದು ಡಾ.ವಿಷ್ಣುವರ್ಧನ್ ಈ ಟಿವಿ ಕನ್ನಡಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.


Click it and Unblock the Notifications











