ಮದ್ಯ ಸೇವಿಸಿ ಶ್ರೀದೇವಿ ಮೇಕಪ್ ರೂಮಿಗೆ ಹೋಗಿದ್ದ ಸಂಜಯ್ ದತ್: ಮುಂದೇನಾಯ್ತು?
ಇದು ಎಂಬತ್ತರ ದಶಕದ ಕಥೆ.. ಆಗತಾನೇ ಸಂಜಯ್ ದತ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆಗ ಸಂಜಯ್ ದತ್ ಬಗ್ಗೆ ಒಳ್ಳೆ ಹೆಸರೇನು ಇರಲಿಲ್ಲ. ಬಾಲಿವುಡ್ ದಿಗ್ಗಜ ಸುನಿಲ್ ದತ್ ಮಗನಾಗಿದ್ದರೂ, ಕುಡಿತ, ಡ್ರಗ್ಸ್ ಸೇವನೆಯಿಂದ ಅಪಖ್ಯಾತಿಗೆ ಒಳಗಾಗಿದ್ದರು.
ಆದರೆ, ಸಂಜಯ್ ದತ್ ತನ್ನ ಮೊದಲ ಸಿನಿಮಾದಿಂದಲೇ ಬಾಲಿವುಡ್‌ನಲ್ಲಿ ಸ್ಟಾರ್ ಪಟ್ಟಕ್ಕೇರಿದ್ದರು. 1981ರಲ್ಲಿ ತೆರೆಕಂಡಿದ್ದ 'ರಾಕಿ' ಸಿನಿಮಾ ಸಂಜಯ್ ದತ್‌ಗೆ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಹೀಗಾಗಿ ಒಳ್ಳೊಳ್ಳೆ ಆಫರ್‌ಗಳು ಬಂದಿದ್ದವು.

ಸಂಜಯ್ ದತ್ ಮೊದಲ ಸಿನಿಮಾದಲ್ಲೇ ಸ್ಟಾರ್ ಆಗಿದ್ದೇನೋ ನಿಜ. ಆದರೆ, ಶ್ರೀದೇವಿ ಕಂಡರೆ ಬಲು ಇಷ್ಟವಿತ್ತು. ಬಾಲಿವುಡ್ 'ಚಾಂದಿನಿ'ಯ ದೊಡ್ಡ ಫ್ಯಾನ್ ಆಗಿದ್ದರು. ಹೀಗೊಮ್ಮೆ ಸಂಜಯ್ ದತ್ ಸಿನಿಮಾದ ಶೂಟಿಂಗ್ ಮಾಡುವಾಗ ಪಕ್ಕದ ಸೆಟ್ಟಿನಲ್ಲೇ ಶ್ರೀದೇವಿ ಕೂಡ ಶೂಟಿಂಗ್ ಮಾಡುತ್ತಿದ್ದರು. ಅದು ತಿಳಿಯುತ್ತಿದ್ದಂತೆ ಮದ್ಯದ ಮತ್ತಿನಲ್ಲಿದ್ದ ಸಂಜಯ್ ದತ್, ಶ್ರೀದೇವಿ ಭೇಟಿ ಮಾಡಲು ಮುಂದಾಗಿದ್ದರು. ಆ ಮೇಲೆ ಏನಾಯ್ತು ಅಂತ ತಿಳಿಯಲು ಮುಂದೆ ಓದಿ.
ಎಣ್ಣೆ ಏಟಲ್ಲಿ ಶ್ರೀದೇವಿ ರೂಮ್‌ಗೆ ನುಗ್ಗಿದ್ದ ಅಧೀರ
ಸಂಜಯ್ ದತ್ ಆರಂಭದ ದಿನಗಳಲ್ಲಿ ಖಿನ್ನತೆಯಿಂದ ಬಳಲುತ್ತಿದ್ದರು. ತಾಯಿಯನ್ನು ಕಳೆದುಕೊಂಡ ನೋವು ಅವರನ್ನು ಕೆಟ್ಟದಾರಿ ಹಿಡಿಯುವಂತೆ ಮಾಡಿತ್ತು. ಆದರೆ, ಇನ್ನೊಂದು ಕಡೆ ವೃತ್ತಿ ಮುಂದುವರೆದಿತ್ತು. ಶ್ರೀದೇವಿ ಅಭಿಮಾನಿಯಾಗಿದ್ದ ಅಧೀರ, ಅವರನ್ನು ಭೇಟಿ ಮಾಡೋಕೆ ಹಾತೊರೆಯುತ್ತಿದ್ದರು. ಇದೇ ವೇಳೆ ಶ್ರೀದೇವಿ ತಮ್ಮ ಸೆಟ್ಟಿನ ಪಕ್ಕದಲ್ಲಿದ್ದಾರೆ ಅಂತ ಗೊತ್ತಾಗುತ್ತಿದ್ದಂತೆ ಕುಡಿದ ಮತ್ತಿನಲ್ಲೇ ಭೇಟಿ ಮಾಡಲು ಹೊರಟ್ಟಿದರು.

ಆ ವೇಳೆ ಶ್ರೀದೇವಿ ಪಕ್ಕದ ಸೆಟ್ಟಿನಲ್ಲಿ 'ಹಿಮ್ಮತ್‌ವಾಲಾ' ಅನ್ನೋ ಸಿನಿಮಾದ ಶೂಟಿಂಗ್ ಬ್ಯುಸಿಯಾಗಿದ್ದರು. ಇದು ತಿಳಿಯುತ್ತಿದ್ದಂತೆ ಸಂಜಯ್ ದತ್‌ಗೆ ತಡೆದುಕೊಳ್ಳಲು ಸಾಧ್ಯವಾಗಲೇ ಇಲ್ಲ. ಅವರನ್ನು ಭೇಟಿ ಮಾಡಲು ಹೊರಟೇ ಬಿಟ್ಟಿದ್ದರು. ಮೇಕಪ್ ಮಾಡಿಕೊಳ್ಳುತ್ತಿದ್ದ ವೇಳೆ ಶ್ರೀದೇವಿ ರೂಮಿಗೆ ನುಗ್ಗಿದ್ದರು. ಅದನ್ನು ಅರಿತ ಶ್ರೀದೇವಿ ಏನು ಮಾಡಿದ್ದರು ಅನ್ನೋದನ್ನು ಸಂಜಯ್ ಹಲವು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಶ್ರೀದೇವಿ ಮಾಡಿದ್ದೇನು?
'ಹಿಮ್ಮತ್‌ವಾಲಾ' ಸೆಟ್ಟಿನಲ್ಲಿ ಶ್ರೀದೇವಿ ಇರಲಿಲ್ಲ. ಅಲ್ಲೆಲ್ಲಾ ಶ್ರೀದೇವಿಗಾಗಿ ಹುಡುಕಾಡಿದ ಸಂಜಯ್ ದತ್, ನೇರವಾಗಿ ಮೇಕಪ್ ರೂಮ್‌ಗೆ ಹೋಗುವುದಕ್ಕೆ ನಿರ್ಧರಿಸಿದ್ದರು. ಬಳಿಕ ಸೀದಾ ಮೇಕಪ್ ರೂಮ್‌ಗೆ ನುಗ್ಗಿದ್ದರು. ಶ್ರೀದೇವಿ ಬಾಗಿಲು ತೆಗೆಯುತ್ತಿದ್ದಂತೆ ಪರಿಸ್ಥಿತಿ ಅರಿವಿಗೆ ಬಂದಿತ್ತು. ತಕ್ಷಣವೇ ಬಾಗಿಲು ಹಾಕಿದ್ದರು. ಈ ಸಂಗತಿಯನ್ನು ಸ್ವತ: ಸಂಜಯ್ ದತ್ 1993ರಲ್ಲಿ ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಆ ವೇಳೆ ಇವನೊಂದಿಗೆ ಶ್ರೀದೇವಿ ಸಿನಿಮಾ ಮಾಡುವುದೇ ಇಲ್ಲ ಅಂತ ನಿರ್ಧರಿಸಿದಂತಿತ್ತು ಎಂದು ಸಂಜಯ್ ದತ್ ನೆನಪಿಸಿಕೊಂಡಿದ್ದರು. ಈ ಘಟನೆ ಬಳಿಕ ಶ್ರೀದೇವಿಯೊಂದಿಗೆ ಸಂಜಯ್ ಹಲವು ಬಾರಿ ಸಿನಿಮಾ ಮಾಡಲು ಪ್ರಯತ್ನಿಸಿದ್ದರು.
ಶ್ರೀದೇವಿ ಜೊತೆ ಸಂಜಯ್ ದತ್ ಸಿನಿಮಾ
ಸಂಜಯ್ ದತ್ ನಟಿಸುತ್ತಿದ್ದ 'ಸಮೀರ್' ಸಿನಿಮಾವನ್ನು ಒಪ್ಪಿಕೊಳ್ಳುವಂತೆ ಶ್ರೀದೇವಿ ಮೇಲೆ ಒತ್ತಡ ತರಲಾಗಿತ್ತು. ಈ ಸಿನಿಮಾದ ಶೂಟಿಂಗ್ ಕೂಡ ಮುಗಿದಿತ್ತು. ಆದರೆ, ಸಿನಿಮಾ ಬಿಡಗಡೆಯಾಗಲಿಲ್ಲ. ಶ್ರೀದೇವಿ ನಟಿಸಿದ 'ಖುದಾ ಗವಾ' ಸಿನಿಮಾದಲ್ಲೂ ಸಂಜಯ್ ದತ್ ನಟಿಸಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಕೈತಪ್ಪಿ ಹೋಯ್ತು ಎನ್ನಲಾಗಿದೆ.
1993ರಲ್ಲಿ ಮಹೇಶ್ ಭಟ್ ನಿರ್ದೇಶಿಸಿದ 'ಗುಮ್ರಾ' ಸಿನಿಮಾದಲ್ಲಿ ಕೊನೆಗೂ ಈ ಜೋಡಿ ಒಟ್ಟಿಗೆ ನಟಿಸಿತು. ಆದರೂ, ಈ ಸಿನಿಮಾದ ಸೆಟ್ಟಿನಲ್ಲಿ ಸಂಜಯ್ ದತ್ ಹಾಗೂ ಶ್ರೀದೇವಿ ಮಾತೇ ಆಡಲಿಲ್ಲ ಎಂದು ವರದಿ ಮಾಡಲಾಗಿತ್ತು. ಕರಣ್ ಜೋಹರ್ ಸಿನಿಮಾ 'ಕಳಂಕ್'ನಲ್ಲೂ ಶ್ರೀದೇವಿ ನಟಿಸಬೇಕಿತ್ತು. ಆದರೆ, ನಿಧನರಾದ ಬೆನ್ನಲ್ಲೇ ಆ ಪಾತ್ರದಲ್ಲಿ ಮಾಧುರಿ ದೀಕ್ಷಿತ್ ನಟಿಸಿದ್ದರು.


Click it and Unblock the Notifications











