"ಅಂತಿಮ ಯಾತ್ರೆ ಉದ್ದಕ್ಕೂ ಈ ಭೂಮಿ ಬಣ್ಣದ ಬುಗುರಿ ಹಾಕೊಂಡು ಹೋದ್ರು.. ಪಾಪ ವಿಷ್ಣುಗೆ ಗೊತ್ತಾಗಲೇ ಇಲ್ಲ"-ಹಂಸಲೇಖ
ನಾದ ಬ್ರಹ್ಮ ಹಂಸಲೇಖ ಕನ್ನಡ ಚಿತ್ರರಂಗದ ಒಂದು ಬಹುಮುಖ ಭಾಗ. ಚಿತ್ರರಂಗಕ್ಕೆ ಇವರು ಕೊಟ್ಟ ಹಾಡುಗಳು ಇನ್ನೆಷ್ಟೇ ಪೀಳಿಗೆಗಳು ಬಂದರೂ ಮೆಲುಕು ಹಾಕುತ್ತಲೇ ಇರುತ್ತಾರೆ. ಇಂದಿಗೂ ಹಂಸಲೇಖ ಹಾಗೂ ರವಿಚಂದ್ರನ್ ಅವರ ಕಾಂಬಿನೇಷನ್‌ನಲ್ಲಿ ಬಂದ ಹಾಡುಗಳೇ ಯುವ ಪ್ರೇಮಿಗಳ ಫೇವರಿಟ್. ಹಾಗಂತ ರವಿಚಂದ್ರನ್ ಅವರ ಸಿನಿಮಾಗಳಿಗಷ್ಟೇ ಸೀಮಿತವಾಗಿರಲಿಲ್ಲ. ಕನ್ನಡದ ಬಹುತೇಕ ಎಲ್ಲಾ ನಟರ ಸಿನಿಮಾಗಳಿಗೂ ಸಂಗೀತ ಸಂಯೋಜಿಸಿದ ಹೆಗ್ಗಳಿಕೆ ಇವರದ್ದು.
ಹಂಸಲೇಖ ಕೇವಲ ಟ್ಯೂನ್ ಅಷ್ಟೇ ಹಾಕುತ್ತಿರಲಿಲ್ಲ. ಇವರು ಸಾಹಿತ್ಯ ಕೂಡ ರಚಿಸುತ್ತಿದ್ದರಿಂದ ಹಾಡುಗಳು ಸೋಗಸಾಗಿ ಮೂಡಿಬರುತ್ತಿದ್ದವು. ತಾವೇ ಹಾಕಿದ ಟ್ಯೂನ್‌ಗಳಿಗೆ ಪದಗಳನ್ನು ಪೋಣಿಸುವುದು ಅವರಿಗೆ ನೀರು ಕುಡಿದಷ್ಟು ಸುಲಭ. ಹಾಗಂತ ಎಲ್ಲಾ ಹಾಡುಗಳು ನಿರಾಯಾಸವಾಗಿ ಹುಟ್ಟಿದ್ದೇನೂ ಅಲ್ಲ. ಕೆಲವು ಹಾಡುಗಳು ಹಂಸಲೇಖ ಪಾಲಿಗೆ ಆಗಿದ್ದೊಂದು ಮ್ಯಾಜಿಕ್. ಇಂತಹದ್ದೊಂದು ಹಾಡೇ ಈ ಭೂಮಿ ಬಣ್ಣದ ಬುಗುರಿ.

ಹಂಸಲೇಖ ಅವರ ಮೇಲೆ ವಿಷ್ಣುದಾದ ಸ್ವೀಟ್ ಆಗಿ ಮುನಿಸಿಕೊಂಡಿದ್ದರು. ನಿಮಗೆ ಆರ್ ಅಂದರೆ, ಇಷ್ಟು ಅವರಿಗೆ ಮಾತ್ರ ಒಳ್ಳೊಳ್ಳೆ ಹಾಡುಗಳನ್ನು ಕೊಡುತ್ತೀರಿ. ವಿ ಎಂದರೆ ನಿಮಗೆ ಇಷ್ಟವಿಲ್ಲ ಎಂದು ತಮಾಷೆಯಾಗಿ ಹೇಳಿದ್ದರಂತೆ. ಆನಂತ್ರ ಹುಟ್ಟಿದ ಹಾಡೇ 'ಮಹಾಕ್ಷತ್ರಿಯ' ಸಿನಿಮಾದ "ಈ ಭೂಮಿ ಬಣ್ಣದ ಬುಗುರಿ.." ಆದರೆ, ವಿಷ್ಣುವರ್ಧನ್ ಅವರ ಅಂತಿಮ ಯಾತ್ರೆಯ ಉದ್ದಕ್ಕೂ ಈ ಹಾಡನ್ನೇ ಹಾಕಿಕೊಂಡು ಹೋದರು ಎಂದು ಗೌರೀಶ್ ಅಕ್ಕಿ ಸ್ಟುಡಿಯೋ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಎಸ್.ವಿ ರಾಜೇಂದ್ರ ಸಿಂಗ್ ಬಾಬು ಕನ್ನಡ ಚಿತ್ರರಂಗದ ಮತ್ತೊಬ್ಬ ಡ್ರೀಮರ್. ಸಂಗೀತ ನಿರ್ದೇಶಕರಿಗೆ ಸಂದರ್ಭಗಳನ್ನ ಸರಕನ್ನೇ ಕೊಡುವ ನಿರ್ದೇಶಕ. ಅವರು ಒಂದು ಸಿನಿಮಾ ಮಾಡಬೇಕು ಸಾಕಷ್ಟು ಸಂಶೋಧನೆಗಳನ್ನು ಮಾಡಿರುತ್ತಾರೆ. ಅಷ್ಟೊಂದು ಅಧ್ಯಯನ ಮಾಡಿ ಸಿನಿಮಾಗೆ ಕೈ ಹಾಕುತ್ತಾರೆ ಅನ್ನೋದು ಹಂಸಲೇಖ ಅಭಿಪ್ರಾಯ." ಬಾಬು ಅವರು 'ದೋ ಆಂಖೇ ಬಾರಾ ಹಾತ್' ಎನ್ನುವ ಸಿನಿಮಾ ನೋಡಿದ್ದಾರಾ ಅಂತ ಕೇಳಿದರು. ಅದರ ಏ ಮಾಲಿಕ್ ತೇರೆ ಬಂದೆ ಹಮ್.. ಹಾಡು ಕೇಳಿದ್ದಾರಾ. ಅಂತಹ ಒಂದು ಹಾಡನ್ನು ವಿಷ್ಣುಗೆ ಕೊಡಬೇಕು. ನಾಲ್ಕು ಜನ ಖೈದಿಗಳನ್ನು ಅವರು ಪರಿವರ್ತನೆ ಮಾಡುತ್ತಾರೆ. ಅಂತಹದ್ದೊಂದು ಜೈಲರ್ ಕ್ಯಾರೆಕ್ಟರ್ ಮಾಡಿದ್ದೇನೆ" ಎಂದು ಹೇಳಿದ್ದರು.
ಹಂಸಲೇಖ ಅವರಿಗೆ ಗಾಯಕ ಶಾಂತಾ ರಾಮ್, ಸಂಗೀತ ನಿರ್ದೇಶಕ ವಸಂತ್ ದೇಸಾಯಿ ಅಂದರೆ ಇಷ್ಟವಿತ್ತು. ಅದೇ ಗುಂಗಿನಲ್ಲಿ ಒಂದು ಹಾಡು ಮಾಡೋಣ ಅಂತ ಯೋಚನೆ ಮಾಡುತ್ತಿದ್ದರು. "ನನಗೆ ಕ್ಷಣಿಕ ಕ್ಷಣಿಕ ಅನ್ನೋದು ಯಾವಾಗಲೂ ಕಾಡೋದು. ಪ್ರತಿಯೊಂದು ಸೆಕೆಂಡ್ ನನ್ನದಲ್ಲ ಅದು ಮುಂದಕ್ಕೆ ಹೋಗುತ್ತಿದೆ ಅಂತ. ಅವರು ಒಂದು ಪದ್ಯ ತಂದರು. ಲೈಫ್ ಈಸ್ ಎ ಗಾರ್ಡನ್, ಯು ಆರ್ ದಿ ಗಾರ್ಡಿಯನ್ ಅನ್ನೋ ಪದ್ಯವನ್ನು ಬಾಬು ಅವರು ತಂದರು. ನಾನು ಈ ಬಾಳು ಸುಂದರ ನಗರಿ. ನೀನಿದರ ಮೇಟಿ ಕಣೋ ಅಂತ ಹೇಳಿದೆ. ಚೆನ್ನಾಗಿದೆ ಹಂಸಲೇಖ ಅಂದರು. ರೆಕಾರ್ಡ್ ಮಾಡಿದ್ವಿ." ಎಂದು ಹಂಸಲೇಖ ಈ ಹಾಡಿನ ಇಂಟ್ರೆಸ್ಟಿಂಗ್ ಸ್ಟೋರಿಯನ್ನು ರಿವೀಲ್ ಮಾಡಿದ್ದಾರೆ.
ಹಾಗಂತ ಇಷ್ಟು ಸುಲಭಕ್ಕೆ ಹಾಡು ಮುಗಿದಿರಲಿಲ್ಲ. ಇನ್ನೂ ಏನೋ ಬೇಕು ಅಂತಹ ಹಂಸಲೇಖ ಅವರಿಗೆ ಅನಿಸುತ್ತಿತ್ತು. ಅತ್ತ ಎಸ್‌ಪಿಬಿ ಹಾಡುವುದಕ್ಕೆ ಬಂದೇ ಬಿಟ್ಟಿದ್ದರು. ಆ ವೇಳೆ ರಾಜೇಂದ್ರ ಸಿಂಗ್ ಬಾಬು ಈ ಹಾಡಿನ ಮೊದಲ ಶಾಟ್ ಬಗ್ಗೆ ಹೇಳಿದರು. ಆಗ ಹಂಸಲೇಖಗೆ ಮೊದಲ ಸಾಲು ಹೊಳೆದಿತ್ತು.

"ನಾನು ಅದು ಜನರಲ್ ಅಗಿ ಇಲ್ವಲ್ಲ. ಈ ಬಾಳು ಸುಂದರ ನಗರಿ ಅಂತ ಹೇಗೆ ನೇರವಾಗಿ ಹೇಳೋದು ಅಂತ ಯೋಚನೆ ಮಾಡುತ್ತಲೇ ಇದ್ದೆ. ಕೊನೆಗೆ ಎಸ್‌ಪಿಬಿ ಡೇಟ್ ಕೊಟ್ಬಿಟ್ರು. ಹಾಡುವುದಕ್ಕೂ ಬಂದು ಬಿಟ್ಟರು. ನಾವು ಎಲ್ಲೋ ಇದ್ವಿ. ಬಾಬು ಹೇಳ್ತಾನೇ ಇದ್ದರು. ಲಿರಿಕ್ಸ್ ಚರಣ ಬರೆದು ಬಿಡಿ ಅಂತಿದ್ದರು. ಇಲ್ಲ ಬಿಗಿನಿಂಗ್ ಏನೋ ಬೇರೆ ಬೇಕು ಅಂದರು. ಅಲ್ಲೊಂದು ಫ್ಲೂಟ್ ಬೀಟ್ ಹಾಕಿದ್ದೀರಲ್ಲ. ಅಲ್ಲಿಗೆ ನಾನು ವೇಲು ಅಂತ ಲಹರಿ ಹುಡುಗನನ್ನು ಹಾಕುತ್ತೇನೆ. ಅವನ ಕೈಯಲ್ಲಿ ಬುಗುರಿ ಹಾಕಿಸಿ ಶಾಟ್ ತೆಗೀತಿನಿ ಎಂದಿದರು. ನನಗೆ ಥಟ್ ಅಂತ ಹೊಳೆದು ಬಿಡ್ತು. ಆ ಶಾಟ್ ತೆಗೆಯುವುದೇ ಆದರೆ, ಈ ಭೂಮಿ ಬಣ್ಣದ ಬುಗುರಿ.. ಆ ಶಿವನೇ ಚಾಟಿ ಕಣೋ. ಈ ಬಾಳು ಸುಂದರ ನಗರಿ.. ನೀನಿದರ ಮೇಟಿ ಕಣೋ.. ಎಂದು ಬರೆದೆ. ಎಸ್‌ಪಿಬಿಯವರು ಬಿಸಿ ಬಿಸಿಯಾಗಿ ಬಂತಾ ಕೊಡಿ ಕೊಡಿ ಅಂತ ಆ ಹಾಡು ಮುಗಿಸಿದರು." ಎನ್ನುತ್ತಾರೆ ಹಂಸಲೇಖ.
ಇದೇ ಸಂದರ್ಶನದಲ್ಲಿ ಹಂಸಲೇಖ ಕಂಪೋಸ್ ಮಾಡಿದ ಹಾಡು ವಿಷ್ಣುದಾದನ ಅಂತಿಮ ಯಾತ್ರೆಯ ಯುದ್ಧಕ್ಕೂ ಅಭಿಮಾನಿಗಳು ಬಳಸಿದ್ದನ್ನು ನೆನಪಿಸಿಕೊಂಡಿದ್ದಾರೆ. "ವಿಷ್ಣುವರ್ಧನ್ ಹೇಳೋರು. ನಿಮಗೆ ಆರ್ ಅಂದರೆ ಇಷ್ಟ. ವಿ ಅಂದರೆ ಇಷ್ಟವಿಲ್ಲ. ಯಾಕೆ ಅಂತ ಕೇಳಿದರೆ, ಆರ್ ಅಂದ್ರೆ ರವಿಚಂದ್ರನ್ ಒಳ್ಳೆಯ ಹಾಡು ಕೊಡುತ್ತೀರ. ಆರ್ ಅಂದರೆ ರಾಜ್‌ಕುಮಾರ ಒಳ್ಳೆಯ ಹಾಡು ಕೊಡುತ್ತೀರ. ವಿ ಅಂದರೆ ವಿಷ್ಣುವರ್ಧನ್‌ಗೆ ಕೊಡುವುದೇ ಇಲ್ಲ ಅನ್ನೋರು. ಈ ಹಾಡು ಅವರ ಅಂತಿಮ ಯಾತ್ರೆಯಲ್ಲಿ ಉದ್ದಕ್ಕೂ ಹಾಕಿಕೊಂಡು ಹೋದರು. ಪಾಪ ಅದು ವಿಷ್ಣುಗೆ ಗೊತ್ತಿಲ್ಲ ಅಷ್ಟೇ." ಎಂದು ಹಂಸಲೇಖ ಈ ಹಾಡಿನ ಬಗ್ಗೆ ಹೇಳಿದ್ದಾರೆ.


Click it and Unblock the Notifications











