Narasimharaju: ಅಣ್ಣಾವ್ರು ಹಾಸ್ಯ ಚಕ್ರವರ್ತಿ ನರಸಿಂಹರಾಜು ಫ್ಯಾನ್ ಆಗಿದ್ದೇಗೆ? ವರನಟನನ್ನೇ ಸೆಳೆದ ಆ ಪಾತ್ರ ಯಾವುದು?
ಹಾಸ್ಯ ಚಕ್ರವರ್ತಿ ನರಸಿಂಹರಾಜು ಅಗಲಿ ನಾಲ್ಕು ದಶಕಗಳ ಮೇಲೆ ಆಗಿದೆ. ಆದರೂ, ಅವರ ಪಾತ್ರಗಳನ್ನು ಸಿನಿಪ್ರೇಮಿಗಳು ಮರೆತಿಲ್ಲ. ಅದೆಷ್ಟೇ ಪೀಳಿಗೆ ಬಂದರೂ ನರಸಿಂಹರಾಜು ನೆನೆಪು ಅಜರಾಮರವಾಗಿ ಇದ್ದೇ ಇರುತ್ತೆ. ಹಾಸ್ಯ ರತ್ನನ ಪಾತ್ರಗಳು ಕಣ್ಮುಂದೆ ಬಂದು ನಗಿಸುತ್ತಲೇ ಇರುತ್ತವೆ.
ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಪಾತ್ರಗಳಿಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟವರೇ ನರಸಿಂಹರಾಜು. ಒಂದು ಕಾಲದಲ್ಲಿ ಸೂಪರ್‌ಸ್ಟಾರ್‌ಗಳಿಗಿಂತ ಹೆಚ್ಚಾಗಿ ನರಸಿಂಹರಾಜು ಅವರಿಗೆ ಬೇಡಿಕೆ ಇತ್ತು. ಇವರ ಕಾಲ್‌ಶೀಟ್‌ಗಾಗಿ ಅಣ್ಣಾವ್ರ ಅಂತಹ ದಿಗ್ಗಜರೇ ಕಾದು ಕೂರುತ್ತಿದ್ದ ಕಾಲವೊಂದಿತ್ತು.

ಡಾ.ರಾಜ್‌ಕುಮಾರ್ ಹಾಗೂ ಹಾಸ್ಯ ಚಕ್ರವರ್ತಿ ನರಸಿಂಹರಾಜು ಇಬ್ಬರೂ ಏಕಕಾಲಕ್ಕೆ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. 'ಬೇಡರ ಕಣ್ಣಪ್ಪ' ಸಿನಿಮಾ ಇಬ್ಬರ ವೃತ್ತಿಗೆ ಅಡಿಪಾಯ ಹಾಕಿಕೊಟ್ಟಿತ್ತು. ಇದೇ ಸಿನಿಮಾದಲ್ಲಿ ನರಸಿಂಹರಾಜು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಪಾತ್ರದಲ್ಲಿ ನರಸಿಂಹರಾಜು ಅವರನ್ನು ನೋಡಿ ಸ್ವತ: ಅಣ್ಣಾವ್ರೇ ಫ್ಯಾನ್ ಆಗಿದ್ದರು. ಅದ್ಯಾಕೆ ಅನ್ನೋದನ್ನು ಸ್ವತ: ವರನಟನೇ ಮುಕ್ತವಾಗಿ ಹೇಳಿದ್ದಾರೆ.
ನರಸಿಂಹರಾಜುರನ್ನು ಅಣ್ಣಾವ್ರು ಮೊದಲು ನೋಡಿದ್ದೆಲ್ಲಿ?
ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಬಗ್ಗೆ ಸಾಕ್ಷಾ ಚಿತ್ರವೊಂದನ್ನು ಮಾಡಲಾಗಿತ್ತು. ಈ ವೇಳೆ ಅಣ್ಣಾವ್ರು ನರಸಿಂಹರಾಜು ಅವರ ಬಗ್ಗೆ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದರು. ಹಾಸ್ಯ ರತ್ನನನ್ನು ಮೊದಲು ಭೇಟಿ ಮಾಡಿದ್ದು ಎಲ್ಲಿ ಅನ್ನೋದನ್ನು ಸ್ವಾರಸ್ಯಕರವಾಗಿ ಹೇಳಿದ್ದರು. "ಕೃಷ್ಣರಾಜ ನಗರ ಅಂತ ಇದೆಯಲ್ಲ. ಅಲ್ಲೊಬ್ಬರು ಮಾಲೀಕರು ಕರ್ನಾಟಕ ನಾಟಕ ಸಭಾ ಅಂತ ಸಂಸ್ಥೆಯನ್ನು ಕಟ್ಟಿ ಒಳ್ಳೊಳ್ಳೆ ನಾಟಕಗಳನ್ನು ಆಡುತ್ತಿದ್ದರು. ಆ ಸಂಸ್ಥೆಯಲ್ಲಿ ನಮ್ಮ ಜಿವಿ ಅಯ್ಯರ್, ಬಾಲಣ್ಣ ಅವರು, ನರಸಿಂಹರಾಜು ಅವರು ಈ ಮೂವರು ಜನರು ಅಲ್ಲಿದ್ದರು. ಪ್ರಥಮ ನಾನು ಅಲ್ಲಿನೇ ಭೇಟಿ ಮಾಡಿದ್ದು." ಎಂದು ಅಣ್ಣಾವ್ರು ಹೇಳಿದ್ದರು.

"ಹಾಸ್ಯನೇ ಅವರ ಜೀವನ"
ಡಾ.ರಾಜ್‌ಕುಮಾರ್ ಹಾಗೂ ನರಸಿಂಹರಾಜು ಇಬ್ಬರದ್ದು ಒಳ್ಳೆ ಜೋಡಿ. ಇವರಿಬ್ಬರು ತೆರೆಮೇಲೆ ಬಂದರು ಅಂದರೆ, ಆ ಸಿನಿಮಾ ಗೆಲ್ಲೋದು ಪಕ್ಕಾ ಅಂತಲೇ ನಿರ್ಧಾರವಾಗಿ ಬಿಡುತ್ತಿತ್ತು. ಐತಿಹಾಸಿಕ ಪಾತ್ರವಿರಲಿ, ಬಾಂಡ್ ಸಿನಿಮಾವಿರಲಿ, ಇಲ್ಲ ಸಾಮಾಜಿಕ ಸಿನಿಮಾವೇ ಇರಲಿ. ಈ ಜೋಡಿ ತೆರೆಮೇಲೆ ಬಂದರೆ ಸಿನಿಮಾ ಗೆದ್ದಂತೆ. ನರಸಿಂಹರಾಜು ಹಾಸ್ಯ ಪ್ರಜ್ಞೆಗೆ ಆ ಮಟ್ಟಿಗೆ ಚಪ್ಪಾಳೆಗಳು ಸಿಗುತ್ತಿದ್ದವು. ಅದಕ್ಕೆ ಅಣ್ಣಾವ್ರು "ಹಾಸ್ಯನೇ ಅವರ ಜೀವನ ಅಂತ ಹೇಳಬಹುದು. ಅವರಿಗೆ ಹಾಸ್ಯ ಹೇಗೆ ಬಂತು? ಅವರು ಕಲಿತುಕೊಂಡ್ರಾ? ಇಲ್ಲ. ಅವರು ಹುಟ್ಟುತ್ತಲೇ ಹಾಸ್ಯ ಕಲಾವಿದರು." ಎಂದು ಹೇಳಿದ್ದರು.
ಕಾಶಿ ಪಾತ್ರ ನೋಡಿ ಫ್ಯಾನ್ ಆಗಿದ್ದ ವರನಟ
"ಅವರು ವಿಶೇಷವಾಗಿ ಸೆಳೆದಿದ್ದು ಅಂದರೆ, ಬೇಡರ ಕಣ್ಣಪ್ಪ ಸಿನಿಮಾದ ಕಾಶಿ ಪಾತ್ರ. ಅಲ್ಲಿಯೇ ನಾನು ಕಾಶಿಯ ಪಾತ್ರವನ್ನು ಅವರಿಂದ ನೋಡಿದ್ದು. ನಾನು ಆಗಿನಿಂದಲೇ ಅವರ ಅಭಿಮಾನಿಯಾಗಿಬಿಟ್ಟೆ. ಫ್ಯಾನ್ ಅಂತಾರಲ್ಲ ಆತರ ಫ್ಯಾನ್ ನಾನು. ಕಾಶಿ ಪಾತ್ರ ನಾನು ಇಲ್ಲಿವರೆಗೂ ನೋಡುವುದಕ್ಕೆ ಆಗಿಲ್ಲ. ಯಾರ ಕೈಯಲ್ಲೂ ಆ ಮಟ್ಟಿಗೆ ಮಾಡುವುದಕ್ಕೆ ಆಗಿಲ್ಲ. ಅವರು ಕಾಶಿನೇ ಆಗಿಬಿಡುತ್ತಿದ್ದರು." ಎಂದು ಅಣ್ಣಾವ್ರು ನರಸಿಂಹರಾಜು ಅವರಿಗೆ ಫ್ಯಾನ್ ಆಗಿದ್ದೇಗೆ ಎಂದು ಹೇಳಿದ್ದರು.
ಮಗನ ಬಗ್ಗೆ ಎಲ್ಲಿಲ್ಲದ ಪ್ರೀತಿ
"ನನಗೆ ಸ್ವಲ್ಪ ಕಣ್ಣು ಎಳೆಯುತ್ತಿತ್ತು. ದಿನಾ ಹಗಲು ರಾತ್ರಿ ಶೂಟಿಂಗ್. ನಾನು ಚೇರ್ ಒರಗಿಕೊಂಡು ಕೂತ್ತಿದ್ದೀನಿ. ನರಸಿಂಹರಾಜು ನನ್ನ ಪಕ್ಕದಲ್ಲಿ ಕೂತಿದ್ದರು. ಎದುರಿಗೆ ಬಾಲಣ್ಣ ಹಾಗೂ ಜಯಶ್ರೀ ಕೂತಿದ್ದಾರೆ. ಆಗ ಬಾಲಣ್ಣ ಇದ್ದೋರು ಏನ್ಮಾಡಿದ್ರು ಜಯಶ್ರೀ ನಿನ್ನ ಮಗನಿಗೆ ವಯಸ್ಸು ಎಷ್ಟಿರಬಹುದು ಅಂದ್ರು. ನರಸಿಂಹರಾಜು ಕಿವಿ ನೆಟ್ಟಗಾಗಿತ್ತು." ಎಂದು ಅಣ್ಣಾವ್ರ ಒಂದು ಪ್ರಸಂಗವನ್ನೂ ವಿವರಿಸಿದ್ದರು.


Click it and Unblock the Notifications











