ಮಗಳನ್ನು ಎಸ್‌ಎಂ ಕೃಷ್ಣಗೆ ಕೊಟ್ಟು ಮದುವೆ ಮಾಡಬೇಕು ಅನ್ನೋ ಅಮ್ಮನ ಆಸೆ ಈಡೇರಲಿಲ್ಲ; ಮಾತುಕತೆ ಬಳಿಕ ಏನಾಯ್ತು?
ಅಭಿನಯ ಸರಸ್ವತಿ ಬಿ.ಸರೋಜಾ ದೇವಿ ನಿನ್ನೆ (ಜುಲೈ 14) ಅಪಾರ ಅಭಿಮಾನಿ ಬಳಗವನ್ನು ಬಿಟ್ಟು ಅಗಲಿದ್ದಾರೆ. ನಾಲ್ಕು ಭಾಷೆಗಳಲ್ಲಿ ನಟಿಸಿ ಸ್ಟಾರ್ ಪಟ್ಟಕ್ಕೇರಿದ್ದ ಕನ್ನಡ ನಟಿಯ ಸಾಧನೆ ಕಮ್ಮಿಯೇನಲ್ಲ. ಇವರ ಕಾಲ ಬಹುತೇಕ ಎಲ್ಲಾ ಸೂಪರ್‌ಸ್ಟಾರ್‌ಗಳೊಂದಿಗೆ ಸರೋಜಾದೇವಿ ಬಣ್ಣ ಹಚ್ಚಿ ಮೆಚ್ಚುಗೆ ಗಳಿಸಿದ್ದರು. ಕನ್ನಡ, ತಮಿಳು ಭಾಷೆಗಳಲ್ಲಿ ನಿರಂತರವಾಗಿ ನಟಿಸುತ್ತಿದ್ದ ಸರೋಜಾ ದೇವಿ ಆಗಿನ ಕಾಲಕ್ಕೆ ಟಾಪ್‌ನಲ್ಲಿದ್ದರು.
ಸರೋಜಾ ದೇವಿ ಯಶಸ್ಸಿನ ಉತ್ತುಂಗದಲ್ಲಿ ಇದ್ದರು. ಇವರು ನಟಿಸಿದ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದ್ದವು. ಈಗಾಗಲೇ ಎಲ್ಲಾ ಭಾಷೆಗಳಲ್ಲಿಯೂ ಸರೋಜಾ ದೇವಿಯವರಿಗೆ ಬೇಡಿಕೆ ಇತ್ತು. ಇನ್ನೊಂದು ಕಡೆ ಅವರ ಅಮ್ಮನಿಗೆ ಮಗಳನ್ನು ಮದುವೆ ಮಾಡಬೇಕು ಅನ್ನೋ ಆಸೆ. ಸರೋಜಾ ದೇವಿ ಸ್ಟಾರ್ ಪಟ್ಟಕ್ಕೇರಿದ್ದರೂ, ನಡೆಯುತ್ತಿದ್ದದ್ದು ಮಾತ್ರ ಅಮ್ಮನ ಮಾತೇ.

ಸರೋಜಾ ದೇವಿಯ ಅಮ್ಮ ರುದ್ರಮ್ಮ ಮಗಳ ಬೆಳವಣಿಗೆ ಬಗ್ಗೆ ಹೆಮ್ಮೆಯಿತ್ತು. ಅವರು ಚನ್ನಪಟ್ಟಣದ ಭಾಗದ ಒಕ್ಕಲಿಗರಾಗಿದ್ದರಿಂದ ತಮ್ಮದೇ ಜಾತಿಯ ಒಳ್ಳೆಯ ಮನೆತನಕ್ಕೆ ಕೊಟ್ಟು ಮದುವೆ ಮಾಡಬೇಕು ಎಂಬ ಆಸೆಯಿತ್ತು. ಆಗಲೇ ಬಿ. ಸರೋಜಾದೇವಿ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಎಂ ಕೃಷ್ಣ ಅವರ ಹೆಸರು ಕೇಳಿ ಬಂದಿತ್ತು. ಒಂದು ಸುತ್ತಿನ ಮಾತುಕತೆ ಕೂಡ ನಡೆದಿತ್ತು ಎಂದೂ ಹೇಳುವವರು ಇದ್ದಾರೆ. ಆದರೆ, ಆ ಮದುವೆ ನೆರವೇರಲಿಲ್ಲ ಯಾಕೆ? ಸರೋಜಾದೇವಿ ಅಮ್ಮನ ಆಸೆ ಈಡೇರಲಿಲ್ಲ ಕಾರಣವೇನು? ಹಿರಿಯ ಪತ್ರಕರ್ತ ಕೆ ಜೆ ಕುಮಾರ್ ಕೆಲವು ಕಾರಣಗಳನ್ನು ಕೊಡುತ್ತಾರೆ.
ಮುಂದೆ ಓದಿ
ಬಿ. ಸರೋಜಾ ದೇವಿ ಹಾಗೂ ಎಸ್.ಎಂ. ಕೃಷ್ಣ ನಡುವೆ ಭಾವನಾತ್ಮಕ ಸಂಬಂಧವಿತ್ತಾ?
60ರ ದಶಕದಲ್ಲಿ ಇವರಿಬ್ಬರ ಬಗ್ಗೆ ಹಬ್ಬಿದ ಗುಸು ಗುಸು ಸುದ್ದಿಯೇನು?
ಎಸ್.ಎಂ. ಕೃಷ್ಣಗೆ ಮದುವೆ ಮಾಡಿಕೊಡುವುದಕ್ಕೆ ಬಯಸಿದ್ದರೇ ನಟಿಯ ಅಮ್ಮ?
ಮಾತುಕತೆಯವರೆಗೂ ಬಂದು ಬಳಿಕ ಮದುವೆಗೆ ಮುರಿದು ಬಿತ್ತೇ?
ಅದು 60ರ ದಶಕ ಒಂದು ಕಡೆ ಸರೋಜಾದೇವಿ, ಇನ್ನೊಂದು ಕಡೆ ಎಸ್.ಎಂ. ಕೃಷ್ಣ ತಮ್ಮ ವೃತ್ತಿ ಬದುಕಿನಲ್ಲಿ ಉತ್ತುಂಗಕ್ಕೆ ಏರುತ್ತಿದ್ದ ಕಾಲ. ಒಂದೇ ಸಮುದಾಯದವರಿಬ್ಬರು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಿದ್ದರು. ನಟಿ ಸರೋಜಾದೇವಿ ನಾಲ್ಕು ಭಾಷೆಯಲ್ಲಿ ಜನಪ್ರಿಯಾಗುತ್ತಿದ್ದರೆ, ಅತ್ತ ಎಸ್.ಎಂ ಕೃಷ್ಣ ರಾಜಕೀಯಕ್ಕೆ ಕಾಲಿಟ್ಟು ಬೆಳೆಯುತ್ತಿದ್ದರು. ಇಬ್ಬರೂ ನೋಡುವುದಕ್ಕೆ ಸುಂದರವಾಗಿದ್ದರು. ಈ ಹಂತದಲ್ಲಿ ಸಿನಿಮಾ ಹಾಗೂ ರಾಜಕೀಯ ವಲಯದಲ್ಲಿ ಇಬರಿಬ್ಬರ ಮದುವೆ ಬಗ್ಗೆ ಗುಸು ಗುಸು ಎದ್ದಿತ್ತು.
ನೋಡಿದವರು ಕೂಡ ಒಳ್ಳೆಯ ಜೋಡಿ ಎಂದೇ ಹೇಳುತ್ತಿದ್ದರು.
ಇಬ್ಬರೂ ತಮ್ಮ ವೃತ್ತಿ ಬದುಕಿನ ಉನ್ನತ ಸ್ಥಾನದಲ್ಲಿ ಇರುವಾಗಲೇ ಪ್ರೇಮಾಂಕುರವಾಗಿತ್ತು ಎಂಬ ಸುದ್ದಿನೂ ಓಡಾಡುತ್ತಿತ್ತು. ಆದರೆ, ಎಸ್.ಎಂ. ಕೃಷ್ಣ ಹಾಗೂ ಸರೋಜಾದೇವಿ ಇಬ್ಬರೂ ಪ್ರೀತಿಯಾಗಿತ್ತು ಎನ್ನುವ ಬಗ್ಗೆ ಎಲ್ಲರೂ ಹೇಳಿಕೊಂಡಿಲ್ಲ. ಆದರೆ, ಮದುವೆ ಬಗ್ಗೆ ಮಾತುಕತೆ ನಡೆದಿತ್ತು ಎನ್ನುವುದನ್ನು ಬಹಿರಂಗವಾಗಿ ಎಲ್ಲಿಯೂ ನಿರಾಕರಿಸಿಲ್ಲ ಎಂದು ಎಚ್. ವಿಶ್ವನಾಥ್ ಬರೆದ 'ಹಳ್ಳಿ ಹಕ್ಕಿ ಹಾಡು' ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

"ಎಸ್.ಎಂ.ಕೃಷ್ಣ ರಾಜಕೀಯದಲ್ಲಿ ಬೆಳೆಯುತ್ತಿದ್ದರು. ನೋಡಲು ತುಂಬಾನೇ ಸುಂದರವಾಗಿದ್ದರು. ಒಂದೇ ಕಮ್ಯೂನಿಟಿ ಆಗಿದ್ದರಿಂದ ಸರೋಜಾ ದೇವಿಯವರ ಅಮ್ಮನಿಗೆ ಇಂತಹದೊಂದು ಆಸೆಯಿತ್ತು. ತಮ್ಮ ಮಗಳನ್ನು ಎಸ್.ಎಂ. ಕೃಷ್ಣ ಅವರಿಗೆ ಮದುವೆ ಮಾಡಿಕೊಡಬೇಕು ಅಂತಿತ್ತು. ಆದರೆ, ಒಂದಿಷ್ಟು ಪ್ರಯತ್ನಗಳನ್ನು ಮಾಡಿದ್ದರು. ಆದರೆ, ಸಾಧ್ಯವಾಗಲಿಲ್ಲ. ಬಳಿಕ ಅವರೇ ಶ್ರೀಹರ್ಷ ಎಂಬ ಎಂಜಿನಿಯರ್ ಅನ್ನು ನೋಡಿ ಮದುವೆ ಮಾಡಿದರು. ಪತಿ ಶ್ರೀಹರ್ಷ ಅವರನ್ನೂ ಸರೋಜಾದೇವಿ ತುಂಬಾನೇ ಪ್ರೀತಿ ಮಾಡುತ್ತಿದ್ದರು. ಅವರು ಕೂಡ ಅಷ್ಟೇ ಪ್ರೀತಿಸುತ್ತಿದ್ದರು" ಎಂದು ಹಿರಿಯ ಪತ್ರಕರ್ತ ಕೆ ಜೆ ಕುಮಾರ್ ಫಿಲ್ಮಿಬೀಟ್ ಕನ್ನಡಕ್ಕೆ ತಿಳಿಸಿದ್ದಾರೆ.
ಎಸ್. ಎಂ. ಕೃಷ್ಣ ಹಾಗೂ ಬಿ.ಸರೋಜಾದೇವಿ ಎರಡೂ ಕುಟುಂಬಗಳು ಈ ಮದುವೆ ಬಗ್ಗೆ ಪ್ರಾಥಮಿಕ ಹಂತದ ಮಾತುಕತೆ ನಡೆಸಿದ್ದರು. ಆದರೆ, ಅದು ಮದುವೆವರೆಗೂ ತಲುಪಲಿಲ್ಲ. ಈಗಾಗಲೇ ವರದಿಯಾಗಿರುವ ಪ್ರಕಾರ, ಸಿನಿಮಾರಂಗದಲ್ಲಿದ್ದ ಬಿ.ಸರೋಜಾದೇವಿಯವರನ್ನು ಮನೆ ಸೊಸೆ ಮಾಡಿಕೊಳ್ಳಲು ಎಸ್.ಎಂ.ಕೃಷ್ಣ ಕುಟುಂಬವರು ಒಪ್ಪಲಿಲ್ಲ. ಹೀಗಾಗಿ ಮದುವೆ ಪ್ರಸ್ತಾಪ ಮುಂದುವರೆಯಲಿಲ್ಲ ಎಂದು ಎಸ್.ಎಂ.ಕೃಷ್ಣ ಸೋದರ ಎಸ್. ಎಂ. ಶಂಕರ್ ಅವರೇ ಮಾಹಿತಿ ನೀಡಿದ್ದರು.


Click it and Unblock the Notifications











