ಗಣೇಶ್ 'ಕೃಷ್ಣಂ ಪ್ರಣಯ ಸಖಿ'ಗೆ ಅಣ್ಣಾವ್ರ 'ಹೃದಯ ಸಂಗಮ' ಪ್ರೇರಣೆ? ಆದ್ರೆ ಪುಟ್ಟಣ್ಣ ಈ ಸಿನಿಮಾ ನಿರ್ದೇಶಿಸಲ್ಲ ಎಂದಿದ್ದೇಕೆ?
ಈ ವರ್ಷ ಕನ್ನಡದಲ್ಲಿ ತೆರೆಕಂಡ ಕೆಲವೇ ಕೆಲವು ಸೂಪರ್ ಹಿಟ್ ಸಿನಿಮಾಗಳ ಪೈಕಿ 'ಕೃಷ್ಣಂ ಪ್ರಣಯ ಸಖಿ' ಕೂಡ ಒಂದು. ಗೋಲ್ಡನ್ ಸ್ಟಾರ್‌ಗೆ ಈ ಸಿನಿಮಾ ಬಿಗ್ ಹಿಟ್ ಕೊಟ್ಟಿತ್ತು. ಒಂದೇ ಒಂದು ಹಾಡು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಬಂದಿತ್ತು. ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೂಪರ್ ಹಿಟ್ ಅಂತ ಸಾಬೀತಾಗಿತ್ತು.
ಈ ಸಿನಿಮಾ ನೋಡಿದವರಿಗೆ ಅಣ್ಣಾವ್ರ ಸಿನಿಮಾ ನೆನಪಾಗಿತ್ತು. ಅರೇ.. ಗಣೇಶ್ ಸಿನಿಮಾಗೂ ಅಣ್ಣಾವ್ರ ಸಿನಿಮಾಗೂ ಏನು ಸಂಬಂಧ? ಅಂತ ಅನಿಸುವುದು ಸಹಜ. 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ನೋಡಿದವರಿಗೆ 1972ರಲ್ಲಿ ತೆರೆಕಂಡ ಅಣ್ಣಾವ್ರ 'ಹೃದಯ ಸಂಗಮ' ಸಿನಿಮಾ ನೆನಪಾಗಿತ್ತು. ಸಾಕಷ್ಟು ಮಂದಿಗೆ ಇದೇ ಅನುಭವ ಆಗಿದೆ. ಈ ಸಿನಿಮಾದಲ್ಲಿ ರಾಜ್‌ಕುಮಾರ್ ಹಾಗೂ ಭಾರತಿ ಜೋಡಿಯಾಗಿ ನಟಿಸಿದ್ದರು.

'ಹೃದಯ ಸಂಗಮ' 70 ದಶಕದಲ್ಲಿ ತೆರೆಕಂಡ ವಿಶಿಷ್ಟ ಸಿನಿಮಾ. ಈ ಸಿನಿಮಾದಲ್ಲಿ ಹಲವು ವಿಶೇಷತೆಗಳು ಇವೆ. ಅಂದಿನ ಕಾಲಕ್ಕೆ ಕುಟುಂಬ ಸಮೇತ ನೋಡಬಹುದಾದ ಸಿನಿಮಾ ಇದಾಗಿತ್ತು. ಆ ಸಿನಿಮಾ ಛಾಯೆ ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿದ 'ಕೃಷ್ಣಂ ಪ್ರಣಯ ಸಖಿ' ಸಿನಿಮಾದಲ್ಲಿಯೂ ಕಾಣಿಸಿತ್ತು. ಅಷ್ಟಕ್ಕೂ 'ಹೃದಯ ಸಂಗಮ'ದ ಮೊದಲ ಟೈಟಲ್ ಬೇರೆನೇ ಇತ್ತು. ಪುಟ್ಟಣ್ಣ ಕಣಗಾಲ್ ಸಿನಿಮಾವನ್ನು ನಿರ್ದೇಶನ ಮಾಡಬೇಕಿತ್ತು. ಆದರೆ, ಅದು ಸಾಧ್ಯ ಆಗಲಿಲ್ಲಿ.
1972 ಅಂದರೆ, ಆಗಿನ್ನೂ ಬ್ಲಾಕ್ ಅಂಡ್ ವೈಟ್ ಜಮಾನ ಮುಗಿದಿರಲಿಲ್ಲ. ಅಂತಹ ಸಮಯದಲ್ಲಿ ನಿಧಾನವಾಗಿ ಸೆಮಿ ಆಕ್ಷನ್ ಸಿನಿಮಾಗಳು ಎಮರ್ಜ್ ಆಗುತ್ತಿದ್ದವು. ಈ ವೇಳೆ ವಿಲನ್‌ಗಳೇ ಇಲ್ಲದ ಒಂದು ಸಿನಿಮಾ ರಿಲೀಸ್ ಆಗಿತ್ತು. ಅದುವೇ 'ಹೃದಯ ಸಂಗಮ'. ಈ ಸಿನಿಮಾದ ಬಗ್ಗೆ ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಇಂಟ್ರೆಸ್ಟಿಂಗ್ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ. ಅದೇನು ಅಂತ ನೋಡುವುದಾದರೆ,

"ಹೃದಯ ಸಂಗಮ ಸಿನಿಮಾವನ್ನು ಮೂರು ಜನ ಸೋದರರು. ಎಚ್.ಎನ್. ಮುದ್ದುಕೃಷ್ಣ, ಎಚ್. ಎನ್. ಜಯಸಿಂಹ, ಎಚ್. ಎನ್. ಮಾರುತಿ ಈ ಮೂವರು ಎಂಜೆಎಂ ಪ್ರೊಡಕ್ಷನ್ ಅಡಿಯಲ್ಲಿ ತೆರೆಗೆ ತರುತ್ತಾರೆ. ಅದನ್ನು ಮತ್ತಿಬ್ಬರು ಸಹೋದರರು ಅಂದರೆ, ರಾಶಿ ಸಹೋದರರು ಎಂದೇ ಹೆಸರಾದಂತಹ ರಾಮನಾಥ ಹಾಗೂ ಶಿವರಾಂ ಅವರು ನಿರ್ದೇಶನ ಮಾಡುತ್ತಾರೆ.
ರಾಮನಾಥ್ ಕನ್ನಡಿಗರೇ ಆಗಿದ್ದರೂ ಸಹ ತಮಿಳು, ಮಲಯಾಳಂ ಹಾಗೂ ಹಿಂದಿ ಚಿತ್ರರಂಗಗಳಲ್ಲಿ ಅನೇಕ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಆದರೆ, ಕನ್ನಡದಲ್ಲಿ ಅಂತ ನಿರ್ದೇಶನ ಮಾಡಿದ್ದು ಇದೊಂದೇ ಸಿನಿಮಾ. ಇವರು ದಿವಂಗರ ಹಿರಿಯ ನಟ ಶಿವರಾಂ ಅವರ ಸಹೋದರ. ಇನ್ನು ಶಿವರಾಂ ಅವರು ಚಿತ್ರರಂಗದಲ್ಲಿ ಬೇರೆ ಕ್ಷೇತ್ರದಲ್ಲಿ ದುಡಿದಿದ್ದರೂ, ಸಹೋದರನ ಜೊತೆ ಸೇರಿಕೊಂಡು ನಿರ್ದೇಶಿಸಿದ್ದು ಇದೊಂದೇ ಸಿನಿಮಾ.
ಇನ್ನು ಈ ಸಿನಿಮಾವನ್ನು ರಾಶಿ ಸಹೋದರರು (ರಾಮನಾಥ್ ಮತ್ತು ಶಿವರಾಂ) ಪುಟ್ಟಣ್ಣ ಕಣಗಾಲ್ ಅವರಿಂದ ನಿರ್ದೇಶನ ಮಾಡಿಸಬೇಕು ಅಂತಿದ್ದರು. ಆ ಸಿನಿಮಾಗೆ ಮೊದಲು ಇಟ್ಟ ಹೆಸರು 'ಶ್ರೀಮಾನ್ ರಾಜಕುಮಾರ್'. ಆದರೆ, ಪುಟ್ಟಣ್ಣ ಕಣಗಾಲ್ ಆ ಸಿನಿಮಾವನ್ನು ನಿರ್ದೇಶನ ಮಾಡಲಿಲ್ಲ. "ಹೃದಯ ಸಂಗಮ ಸಿನಿಮಾವನ್ನು ಕೂಡ ರಾಶಿ ಸಹೋದರರು ತಮ್ಮ ಬ್ಯಾನರ್‌ನಲ್ಲಿ ಪುಟ್ಟಣ್ ಕಣಗಾಲ್ ಅವರಿಂದಲೇ ನಿರ್ದೇಶನ ಮಾಡಿಸಬೇಕು ಅಂತ ಅಂದುಕೊಂಡಿರುತ್ತಾರೆ. ಅದಕ್ಕೆ ಶ್ರೀಮಾನ್ ರಾಜಕುಮಾರ್ ಅಂತ ಹೆಸರು ಕೂಡ ಇಟ್ಟಿರುತ್ತಾರೆ. ಆದರೆ, ಕಾರಣಾಂತರದಿಂದ ಆ ಸಿನಿಮಾವನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಆಗ ರಾಶಿ ಸಹೋದರರೇ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಾರೆ." ಎಂದಿದ್ದಾರೆ.
ಇನ್ನು ಸಿನಿಮಾದ ಕತೆಯ ಬಗ್ಗೆ ಹೇಳುವುದಾದರೆ, 'ಹೃದಯ ಸಂಗಮ' ಸಿನಿಮಾದಲ್ಲಿ ಯಾವುದೇ ವಿಲನ್ ಇಲ್ಲ. ಇಲ್ಲಿ ಕಾಲವೇ ಒಂದು ರೀತಿಯ ವಿಲನ್. ರಾಜ್‌ಕುಮಾರ್ ಈ ಸಿನಿಮಾದಲ್ಲಿ ರಾಜಣ್ಣನಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ರಾಜ್‌ಕುಮಾರ್ ದ್ವಿಪಾತ್ರದಲ್ಲಿ ನಟಿಸಿರುವ ವಿಶೇಷವಾದ ಸಿನಿಮಾ. ಇಲ್ಲಿ ಎರಡು ಪಾತ್ರದಲ್ಲಿ ಕಾಣಿಸಿಕೊಳ್ಳುವ ರಾಜ್‌ಕುಮಾರ್ ಒಟ್ಟಿಗೆ ಕಾಣಿಸುವುದಿಲ್ಲ. ಆದರೆ, ಒಂದು ಪಾತ್ರ ಕತೆಗೆ ತಿರುವನ್ನು ಕೊಡುತ್ತದೆ.


Click it and Unblock the Notifications











