ವಿಷ್ಣುದಾದನ ಮೊದಲನೇ ಸಿನಿಮಾಗೂ.. ಕೊನೆಯ ಸಿನಿಮಾಗೂ ನಾಗರ ಹಾವಿನ ನಂಟು; ಗುರುಕಿರಣ್ ಬಿಟ್ಟಿಟ್ಟ ರಹಸ್ಯವೇನು?
ವಿಷ್ಣುವರ್ಧನ್ ನಟಿಸಿದ ಎರಡು ಸಿನಿಮಾಗಳನ್ನು ಅವರ ಅಭಿಮಾನಿಗಳು ಮರೆಯುವುದಕ್ಕೆ ಆಗುವುದಿಲ್ಲ. ಒಂದು 'ಆಪ್ತಮಿತ್ರ'. ಇನ್ನೊಂದು 'ಆಪ್ತರಕ್ಷಕ'. ಈ ಎರಡೂ ಸಿನಿಮಾಗಳು ವಿಷ್ಣುದಾದ ಹೊಸ ಇಮೇಜ್ ಕೊಟ್ಟ ಸಿನಿಮಾಗಳು ಅನ್ನೋದರಲ್ಲಿ ಎರಡು ಮಾತಿಲ್ಲ. ಆದರೆ, ಈ ಎರಡೂ ಸಿನಿಮಾಗಳ ಹಿಂದೆ ನಂಬುವುದಕ್ಕೆ ಅಸಾಧ್ಯವೆನಿಸುವ ಘಟನೆಗಳು ನಡೆದು ಹೋಗಿದೆ. ಆ ಘಟನೆಗಳು ಆಕಸ್ಮಿಕವೋ ಅಲ್ಲವೋ ಅನ್ನೋದು ಇಂದಿಗೂ ಆ ಸಿನಿಮಾದಲ್ಲಿ ಕೆಲಸ ಮಾಡಿದವರಿಗೆ ಗೊತ್ತಾಗಿಲ್ಲ.
'ಆಪ್ತಮಿತ್ರ' ಸಿನಿಮಾ ಮಾಡುವಾಗ ನಟಿ ಸೌಂದರ್ಯಾ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅದೇ 'ಆಪ್ತರಕ್ಷಕ' ರಿಲೀಸ್ ಆಗುವುದರೊಳಗೆ ವಿಷ್ಣುದಾದ ಇಹಲೋಕ ತ್ಯಜಿಸಿದ್ದರು. ಈ ವೇಳೆ ಈ ಎರಡೂ ಸಿನಿಮಾಗಳೇ ಇವರಿಬ್ಬರ ಸಾವಿಗೆ ಕಾರಣ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಇಷ್ಟೆಲ್ಲ ನಾಗವಲ್ಲಿಯೇ ಕಾರಣ ಅಂತಾನೂ ಸುದ್ದಿ ಹಬ್ಬಿತ್ತು. ಸಾಲದ್ದಕ್ಕೆ 'ಚಂದ್ರಮುಖಿ' ಬಳಿಕ ರಜನಿಕಾಂತ್ ಕೂಡ ಹೋಮ ಮಾಡಿಸಿದ್ದರು ಅಂತಾನೂ ಸುದ್ದಿ ಹಬ್ಬಿತ್ತು.

ಇಂತಹ ಘಟನೆಗಳು ಸಂಗೀತ ನಿರ್ದೇಶಕ ಗುರು ಕಿರಣ್ ಅನುಭವಕ್ಕೂ ಬಂದಿದೆ. 'ಆಪ್ತಮಿತ್ರ' ಹಾಗೂ 'ಆಪ್ತರಕ್ಷಕ' ಎರಡೂ ಸಿನಿಮಾಗಳಿಗೂ ಗುರುಕಿರಣ್ ಸಂಗೀತ ನೀಡಿದ್ದರು. ಈ ವೇಳೆ ಅವರಿಗಾಗಿ ಅನುಭವಗಳನ್ನು ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದ ವೇಳೆ ಶೇರ್ ಮಾಡಿಕೊಂಡಿದ್ದಾರೆ. ವಿಷ್ಣುದಾದ ನಾಗರಹಾವಿನ ನಂಟಿನ ಬಗ್ಗೆ ಗುರುಕಿರಣ್ ನೆನಪಿಸಿಕೊಂಡ ಘಟನೆ ಏನು? ತಿಳಿಯಲು ಮುಂದೆ ಓದಿ.
ವಿಷ್ಣುದಾದಾ ವೃತ್ತಿ ಬದುಕಿನಲ್ಲಿ ಮೆಗಾ ಸೂಪರ್ ಹಿಟ್ ಸಿನಿಮಾಗಳಲ್ಲಿ 'ಆಪ್ತಮಿತ್ರ' ಕೂಡ ಒಂದು. ಈ ಸಿನಿಮಾದಲ್ಲಿ ಗುರುಕಿರಣ್ ಸಂಗೀತ ಅಷ್ಟೇ ಪ್ರಮುಖ ಪಾತ್ರವಹಿಸಿತ್ತು. ಇನ್ನು ಕೊನೆಯ ಸಿನಿಮಾಗೂ ಗುರುಕಿರಣ್ ಅವರೇ ಸಂಗೀತ ನೀಡಿದ್ದರು. ಆ ವೇಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. "ಆಪ್ತಮಿತ್ರ ಟೈಮ್‌ನಲ್ಲಿ ನನಗೆ ವಿಷ್ಣುವರ್ಧನ್ ಅವರ ಟಚ್ ಕೂಡ ಇರಲಿಲ್ಲ. ಆಪ್ತ ರಕ್ಷಕ ಸಮಯದಲ್ಲಿ ನಾನು ಹಾಗೂ ವಿಷ್ಣು ಸರ್ ತುಂಬಾನೇ ಕ್ಲೋಸ್ ಆಗಿದ್ವಿ. ಆಪ್ತರಕ್ಷಕ ಕಥೆ ಮೂರನೇ ವರ್ಷನ್ ಓಕೆ ಆಗಿದ್ದು, ಮೊದಲ ಎರಡು ವರ್ಷನ್ ನನಗೂ ಇಷ್ಟ ಆಗಲಿಲ್ಲ. ವಿಷ್ಣು ಸರ್‌ಗೂ ಇಷ್ಟ ಆಗಿರಲಿಲ್ಲ. ವಿಷ್ಣು ಸರ್‌ಗೆ ಈ ಸಿನಿಮಾ ಹಿಟ್ ಆಗಲೇಬೇಕು ಅಂತ ಇತ್ತು." ಎಂದು ಗುರುಕಿರಣ್ ಹೇಳಿದ್ದಾರೆ.
ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಕೆಲವು ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. ತಮ್ಮ ಕೈ ಮೀರಿ ನಡೆದು ಹೋದ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. "ನನಗೆ ಇದೊಂದು ಅರ್ಥಾನೇ ಆಗಿಲ್ಲ. ಗುರು ಮೂರು ಸೀನ್ ಎತ್ತಿಬಿಡೋದು ಒಳ್ಳೆಯದಲ್ವಾ? ಅಂದಿದ್ದರು. ನಾನು ಏನು ಹೇಳೋದು ನಿರ್ದೇಶಕರು ಕ್ಯಾಪ್ಟನ್ ಆಫ್ ದಿ ಶಿಪ್. ಗುರು ಅವರಿಗೆ ಹೇಳ್ಬಿಡು ಅದು ಚೆನ್ನಾಗಿಲ್ಲ ಅಂತ ಎಷ್ಟೋ ಸಾರಿ ಹೇಳಿದ್ದರು. ಆ ಸೀನ್‌ಗಳನ್ನು ಹಾಗೆ ಇಟ್ಟಿದ್ದರು. ನೀವು ನಂಬುತ್ತಿರೋ ಇಲ್ಲವೋ ಗೊತ್ತಿಲ್ಲ. ವಿಷ್ಣು ಸರ್ ಯಾವ ಸೀನ್ ಬಗ್ಗೆ ಹೇಳಿದ್ದರೋ ಅದೆಲ್ಲವನ್ನೂ ಸೆನ್ಸಾರ್‌ನವರು ಕತ್ತರಿ ಹಾಕಿ ಎತ್ತಿದ್ದರು. ಇದಕ್ಕೆ ಏನಂತಿರಾ?" ಎಂದು ಆಪ್ತರಕ್ಷಕ ಸಮಯದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಇನ್ನು ವಿಷ್ಣುವರ್ಧನ್ ನಟಿಸಿದ ಮೊದಲ ಸಿನಿಮಾ 'ನಾಗರ ಹಾವು'. ಕೊನೆಯ ಸಿನಿಮಾ 'ಆಪ್ತರಕ್ಷಕ'. ಈ ಎರಡೂ ಸಿನಿಮಾಗಳಿಗೂ ನಾಗರಹಾವಿನ ಸೀನ್ ಇವೆ. ಆ ಸೀನ್‌ಗಳು ವಿಷ್ಣುದಾದ ಉಗಮ ಹಾಗೂ ಅಂತ್ಯದ ಬಗ್ಗೆ ಸುಳಿವು ನೀಡಿತ್ತಾ? ಈ ಪ್ರಶ್ನೆಗೆ ಉತ್ತರವಿಲ್ಲ ಎನ್ನುತ್ತಾರೆ. "ನಾಗರ ಹಾವು ಮೊದಲ ಸೀನ್‌ನಲ್ಲೇ ಹುತ್ತದಿಂದ ಹೊರಗೆ ಬರುತ್ತೆ. ಆಪ್ತರಕ್ಷಕ ಕೊನೆ ಸೀನ್‌ಗೆ ಮಣ್ಣಿನ ಒಳಗೆ ಒಂದು ಹಾವು ಹೋಗುತ್ತೆ. ನಾಗರ ಹಾವಿಂದ ವಿಷ್ಣು ದಾದಾ ಎಂಟ್ರಿ. ಇದು ವಿಷ್ಣುದಾದ ಅವರ ಕೊನೆ ಸೀನ್. ಇದೆಕ್ಕೆ ಏನಂತಿರಾ? ಕೆಲವೊಂದಕ್ಕೆಲ್ಲ ಅರ್ಥ ಹುಡುಕಿದರೆ ಏನೂ ಸಿಗಲ್ಲ. ವಿಚಿತ್ರ ಅಂತ ಅನಿಸುತ್ತೆ" ಎಂದಿದ್ದಾರೆ.
ಹಾಗೇ 'ಆಪ್ತರಕ್ಷಕ' ಬಳಿಕ ವಿಷ್ಣುದಾದ ಇಹಲೋಕ ತ್ಯಜಿಸಿದಾಗ ಇಡೀ ಚಿತ್ರತಂಡ ಭಯಬಿದ್ದಿತ್ತಂತೆ. "ಅವಿನಾಶ್ ಅವರಿಗೆ ನನಗೆ ಹೆದರಿಸಿದ್ದರು. ಅವಿನಾಶ್ ಅವರು ಪೂಜೆಯನ್ನೆಲ್ಲ ಮಾಡಿಸಿದ್ದರು. ಆಮೇಲೆ ಡಬ್ಬಿಂಗ್ ಆರ್ಟಿಸ್ಟ್‌ಗೆ ಹೆದರಿಸಿದ್ದರು. ಅವರು ಇನ್ಮುಂದೆ ನಾನು ಮಾಡಲ್ಲ ಅಂತ ಅವರು ಕೂತಿದ್ದರು. ಅಲ್ಲಿಗೆ ಆಯಸ್ಸು ಮುಗಿದಿದ್ದರೆ ಏನೂ ಮಾಡುವುದಕ್ಕೆ ಆಗುವುದಿಲ್ಲ. ಇಬ್ಬರದ್ದೂ ಸಹಜ ಸಾವು ಅಲ್ಲ. ಅದನ್ನು ಒಪ್ಪಿಕೊಳ್ಳುತ್ತೇನೆ. ಹಾಗಂತ ಸಿನಿಮಾಗಳ ಮೇಲೆ ದೂರುವುದಕ್ಕೆ ಆಗುವುದಿಲ್ಲ." ಎಂದು ಗುರುಕಿರಣ್ ಹೇಳುತ್ತಾರೆ.


Click it and Unblock the Notifications











