ಭಾರತಿಯವರನ್ನು ವಿಷ್ಣುದಾದ ಮೊದಲು ಭೇಟಿಯಾಗಿದ್ದು ಎಲ್ಲಿ? ಇಬ್ಬರ ನಡುವೆ ಪ್ರೀತಿ-ಪ್ರೇಮ ಹುಟ್ಟಿದ್ದೇಗೆ?
ಸ್ಯಾಂಡಲ್‌ವುಡ್ ಕಂಡ ತಾರಾ ಜೋಡಿಗಳಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಹಾಗೂ ಭಾರತಿ ವಿಷ್ಣುವರ್ಧನ್ ಲವ್ ಸ್ಟೋರಿ ಸಖತ್ ಇಂಟ್ರೆಸ್ಟಿಂಗ್. ವಿಷ್ಣುದಾದ ಅದಾಗಲೇ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅವರ 'ನಾಗರ ಹಾವು' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತ್ತು. ಇಲ್ಲಿಂದ ಕನ್ನಡ ಚಿತ್ರರಂಗಕ್ಕೆ ಒಬ್ಬ ಹೊಸ ನಟ ಸಿಕ್ಕಿದಂತಾಗಿತ್ತು.
ಕನ್ನಡ ಚಿತ್ರರಂಗಕ್ಕೆ ವಿಷ್ಣುವರ್ಧನ್ ಅವರಿಗಿಂತಲೂ ಭಾರತಿ ಸೀನಿಯರ್. ಅದಾಗಲೇ ಅಣ್ಣಾವ್ರೊಂದಿಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಹೀಗಿದ್ದರೂ, ಇವರಿಬ್ಬರು ಭೇಟಿ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಹಾಗೇ ವಿಷ್ಣು-ಭಾರತಿ ಜೋಡಿ ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದೆ. ಅಂದಹಾಗೆ 'ಮನೆ ಬೆಳಗಿದ ಸೊಸೆ' ಸಿನಿಮಾದಿಂದ ವಿಷ್ಣುವರ್ಧನ್ ಹಾಗೂ ಭಾರತಿಯವರ ಸಿನಿಮಾ ಯಾನ ಆರಂಭ ಆಗಿತ್ತು.

ಭಾರತಿ ಹಾಗೂ ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಒಂದು ಅಪರೂಪದ ಜೋಡಿ. ಇವರಿಬ್ಬರ ಭೇಟಿಯೇ ಸಖತ್ ಇಂಟ್ರೆಸ್ಟಿಂಗ್. ಹಾಗಿದ್ದರೆ ಆ ಭೇಟಿ ಹೇಗಾಯ್ತು? ಇಬ್ಬರ ನಡುವೆ ಪ್ರೀತಿ ಹುಟ್ಟಿದ್ದು ಹೇಗೆ? ಈ ಬಗ್ಗೆ ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಕೆಲವು ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ವಿಷ್ಣುವರ್ಧನ್ ಹಾಗೂ ಭಾರತಿ ಇಬ್ಬರೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ದೇವರ ಗುಡಿ', 'ಅಣ್ಣಾ ಅತ್ತಿಗೆ', 'ಒಂದೇ ರೂಪ ಎರಡು ಗುಣ', 'ಭಾಗ್ಯ ಜ್ಯೋತಿ', 'ನಾಗರಹೊಳೆ', 'ಬಂಗಾರದ ಜಿಂಕೆ' ಸಿನಿಮಾಗಳಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಆದರೆ, ಈ ಸಿನಿಮಾಗಳಲ್ಲಿ ನಟಿಸುವುದಕ್ಕೂ ಮುನ್ನವೇ ಇಬ್ಬರ ಭೇಟಿಯಾಗಿತ್ತು.

"ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ದೂರದ ಬೆಟ್ಟ ಸಿನಿಮಾದ ಶೂಟಿಂಗ್ ನಡೆಯುತ್ತಿರುತ್ತೆ. ಅಂದು ರಾಜ್‌ಕುಮಾರ್ ತಮ್ಮ ಭಾಗ ಚಿತ್ರೀಕರಣ ಮುಗಿಸಿ ಹೊರಟು ಹೋಗಿರುತ್ತಾರೆ. ಭಾರತಿಯವರ ಭಾಗದ ಚಿತ್ರೀಕರಣ ನಡೆಯುತ್ತಿರುತ್ತೆ. ಆ ಸೆಟ್ಟಿಗೆ ವಿಷ್ಣು ಅವರು ಭಾರತಿಯವರನ್ನು ಭೇಟಿ ಮಾಡುವ ಸಲುವಾಗಿಯೇ ಬರುತ್ತಾರೆ. ಯಾಕಂದ್ರೆ, ಅವರ ನಾಗರಹಾವು ಸಿನಿಮಾ 100 ದಿನಗಳ ಸಂಭ್ರಮ ಕಂಡಿರುತ್ತೆ. ಆ ಕಾರ್ಯಕ್ರಮಕ್ಕೆ ಭಾರತಿಯವರನ್ನು ಆಹ್ವಾನ ಮಾಡುವುದಕ್ಕೆ ವಿಷ್ಣುವರ್ಧನ್ ಬಂದಿರುತ್ತಾರೆ." ಎಂದು ಹರಿಹರಪುರ ಮಂಜುನಾಥ್ ಹೇಳಿದ್ದಾರೆ.
ಭಾರತಿಯವರು 'ನಾಗರ ಹಾವು' 100ನೇ ದಿನದ ಕಾರ್ಯಕ್ರಮದಲ್ಲಿ ಸಂತೋಷದಿಂದ ಭಾಗವಹಿಸುತ್ತಾರೆ. ಬಳಿಕ ಈ ಜೋಡಿ ಒಟ್ಟಿಗೆ ಮೊದಲ ಸಿನಿಮಾದಲ್ಲಿ ನಟಿಸುತ್ತೆ. " ಆ ಬಳಿಕ ಮನೆ ಬೆಳಗಿದ ಸೊಸೆ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸುವ ಅವಕಾಶ ಸಿಗುತ್ತೆ. ಆಗ ವಿಷ್ಣುವರ್ಧನ್ ಅವರಿಗೂ ಸಂಗೀತದಲ್ಲಿ ಆಸಕ್ತಿ ಇರುತ್ತೆ. ಭಾರತಿಯವರು ಸಂಗೀತ ಕಲಿತಿರುತ್ತಾರೆ. ಹಾಗೇ ಜೆಮಿನಿ ಗಣೇಶನ್ ಜೊತೆ ನಟಿಸಿದ ಸಿನಿಮಾದಲ್ಲಿ ಹಾಡನ್ನು ಹಾಡಿರುತ್ತಾರೆ. ಇಬ್ಬರಿಗೂ ಆಸಕ್ತಿ ಇರುವುದರಿಂದ ಸೆಟ್ಟಿನಲ್ಲಿ ಬಿಡುವಿನ ವೇಳೆ ಸಂಗೀತ ವಿನೀಮಯದಲ್ಲಿ ತೊಡಗಿರುತ್ತಾರೆ. ಇಲ್ಲಿಂದ ಸ್ನೇಹ ಬೆಳೆಯುತ್ತೆ." ಎಂದು ಸ್ವಾರಸ್ಯಕರ ಸಂಗತಿಯನ್ನು ಹಂಚಿಕೊಂಡಿದ್ದಾರೆ.
ವಿಷ್ಣುವರ್ಧನ್ ಹಾಗೂ ಭಾರತಿ ಅಭಿನಯದ 'ಮನೆ ಬೆಳಗಿದ ಸೊಸೆ' ಸಿನಿಮಾ ಯಶಸ್ಸು ಕಂಡಿತ್ತು. ಈ ಯಶಸ್ಸಿನ ಬಳಿಕ ಹಲವು ಮಂದಿ ನಿರ್ಮಾಪಕರು ಇಬ್ಬರಿಗೂ ಒಟ್ಟಿಗೆ ನಟಿಸುವಂತೆ ಆಫರ್ ಕೊಟ್ಟಿದ್ದರು. ಹೀಗಾಗಿ ಈ ಸಿನಿಮಾ ಶೂಟಿಂಗ್ ವೇಳೆ ಸ್ನೇಹ, ಪ್ರೀತಿಗೆ ತಿರುಗುತ್ತೆ. ವಿಷ್ಣುವರ್ಧನ್ ತಂದೆಗೆ ಭಾರತಿಯೊಂದಿಗೆ ನಟಿಸಿದ ಸಿನಿಮಾ ನೋಡಬೇಕು ಅನ್ನೋ ಆಸೆಯಿರುತ್ತೆ. ಆದರೆ, 'ಮನೆ ಬೆಳಗಿದ ಸೊಸೆ' ಸಿನಿಮಾ ಬಿಡುಗಡೆಗೂ ಮುನ್ನವೇ ಇಹಲೋಕ ತ್ಯಜಿಸಿದ್ದರು.
ಇತ್ತ ಭಾರತಿಯವರ ಪೋಷಕರಿಗೂ ವಿಷ್ಣುವರ್ಧನ್ ಅವರ ಮೇಲೆ ಒಳ್ಳೆಯ ಅಭಿಪ್ರಾಯವಿತ್ತು. ಹೀಗಾಗಿ ಗುರು ಹಿರಿಯರ ಸಮ್ಮುಖದಲ್ಲಿ ಕುಚಲಾಂಬ ಕಲ್ಯಾಣ ಮಂಟಪದಲ್ಲಿ ಫೆಬ್ರವರಿ 27ನೇ ತಾರೀಕು, 1975ರಲ್ಲಿ ವಿಷ್ಣುದಾದ ಹಾಗೂ ಭಾರತಿಯವರ ಮದುವೆ ನಡೆಯುತ್ತೆ.


Click it and Unblock the Notifications











