ಕನ್ನಡದಲ್ಲಿ 50 ಸಿನಿಮಾ ನಿರ್ದೇಶಿಸಿದ್ದು ನಾಲ್ಕು ಮಂದಿಯಷ್ಟೇ; ಒಬ್ರು ಎಸ್ ನಾರಾಯಣ್.. ಉಳಿದ ಮೂವರು ಯಾರು?
ಯಾವುದೇ ಚಿತ್ರರಂಗದಲ್ಲಿ ಆಗಲಿ ಸಿನಿಮಾ ಹೀರೊಗಳು, ಪೋಷಕ ಕಲಾವಿದರು ಆರಾಮಾಗಿ 50, 100, 200 ಸಿನಿಮಾಗಳಲ್ಲಿ ಕೆಲಸ ಮಾಡುತ್ತಾರೆ. ಅದೇ ನಿರ್ದೇಶಕರ ಪರಿಸ್ಥಿತಿ ಬೇರೆನೇ ಇರುತ್ತೆ. ಅವರು 50 ಸಿನಿಮಾಗಳನ್ನು ನಿರ್ದೇಶಿಸಿದರೆ ದೊಡ್ಡ ಮಾತು. ಅದೇ ಅವರ ಅತೀ ದೊಡ್ಡ ಸಾಧನೆ ಎನ್ನಬಹುದು. ಕನ್ನಡದಲ್ಲಿ ಇಂತಹ ಸಾಧನೆ ಮಾಡಿದವರು ಬೆರಳೆಣಿಕೆಯಷ್ಟು ಮಾತ್ರ.
ಇತ್ತೀಚೆಗಷ್ಟೇ ಕಲಾ ಸಾಮ್ರಾಟ್ ಎಸ್ ನಾರಾಯಣ್ 50 ಸಿನಿಮಾಗಳನ್ನು ನಿರ್ದೇಶಿಸಿ ಈ ಸಾಧನೆಯ ಪಟ್ಟಿ ಸೇರಿದ್ದಾರೆ. ಇವರು ಕನ್ನಡ ಚಿತ್ರರಂಗದಲ್ಲಿ 50 ಸಿನಿಮಾಗಳನ್ನು ನಿರ್ದೇಶಿಸಿದ ನಿರ್ದೇಶಕರಲ್ಲಿ ನಾಲ್ಕನೆಯವರು. ಕನ್ನಡದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರೋ ಕಲಾ ಸಾಮ್ರಾಟ್ ಬ್ಯಾಕ್ ಟು ಬ್ಯಾಕ್ ಯಶಸ್ಸುಗಳನ್ನು ಕಂಡವರು.
"ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ನನಗೆ ಸಿಕ್ಕ ಮಾಹಿತಿ ಪ್ರಕಾರ, ನಾಲ್ಕು ಜನ 50 ಸಂಖ್ಯೆ ಮುಟ್ಟಿರೋದು. ಅದರಲ್ಲಿ ಮೂರನೇಯವರು ನನ್ನ ಗುರುಗಳು ಭಾರ್ಗವ ಅವರು. ನಾಲ್ಕನೆಯವನು ನಾನು. ನನಗೆ ಅದೊಂದು ಖುಷಿಯಿದೆ. ಗುರುವಿನ ಜೊತೆಯಲ್ಲಿ ಸಂಖ್ಯೆ ಮುಟ್ಟಿದ್ದೀನಿ ಅಂತ. ಸಾಧನೆ ಮಾಡುವುದಕ್ಕೆ ಆಗುವುದಿಲ್ಲ. ನಿರ್ದೇಶಕರು ಸಂಖ್ಯೆಯಲ್ಲಿ 50 ಸಿನಿಮಾ ಮುಟ್ಟುವುದು ಕಷ್ಟ." ಎಂದು ಎಸ್. ನಾರಾಯಣ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಹಾಗಿದ್ದರೆ ಉಳಿದ ಮೂವರು ನಿರ್ದೇಶಕರು ಯಾರು?

ವಿಜಯ ರೆಡ್ಡಿ
ದಕ್ಷಿಣ ಭಾರತ ಚಿತ್ರರಂಗ ಕಂಡ ಅತ್ಯದ್ಬುತ ನಿರ್ದೇಶಕರಲ್ಲಿ ವಿಜಯ ರೆಡ್ಡಿ ಕೂಡ ಒಬ್ಬರು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಆದರೆ, ಕನ್ನಡದಲ್ಲಿ ಅತೀ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಡಾ.ರಾಜ್‌ಕುಮಾರ್ ಜೊತೆ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದು, 'ಗಂಧದ ಗುಡಿ', 'ಮಯೂರ', 'ಸನಾಧಿ ಅಪ್ಪಣ್ಣ', 'ನಾ ನಿನ್ನ ಮರೆಯಲಾರೆ' ಅಂತಹ ಸೂಪರ್ ಹಿಟ್ ಸಿನಿಮಾಗಳು ಸಿಕ್ಕಿವೆ. ಡಾ.ರಾಜ್‌ಕುಮಾರ್ ಅವರ 150ನೇ ಸಿನಿಮಾ 'ಗಂಧದ ಗುಡಿ' ಹಾಗೂ ಡಾ.ವಿಷ್ಣುವರ್ಧನ್ ಅವರ 150ನೇ ಸಿನಿಮಾ 'ಮೋಜುಗಾರ ಸೊಗಸುಗಾರ' ಸಿನಿಮಾವನ್ನು ನಿರ್ದೇಶನ ಮಾಡಿದ ಹೆಗ್ಗಳಿಕೆ ಇವರದ್ದು.

ಭಾರ್ಗವ
50 ಸಿನಿಮಾಗಳನ್ನು ನಿರ್ದೇಶನ ಮಾಡಿದ ಮತ್ತೊಬ್ಬ ಕನ್ನಡದ ಡೈರೆಕ್ಟರ್ ಭಾರ್ಗವ. 1977ರಲ್ಲಿ ಡಾ.ರಾಜ್‌ಕುಮಾರ್ ಹಾಗೂ ಬಿ. ಸರೋಜಾ ದೇವಿ ನಟಿಸಿದ 'ಭಾಗ್ಯವಂತರು' ಸಿನಿಮಾ ಮೂಲಕ ನಿರ್ದೇಶನಕ್ಕೆ ಉಳಿದಿದ್ದರು. ಇಲ್ಲಿಂದ ಒಂದರ ಹಿಂದೊಂದು ಸಿನಿಮಾಗಳನ್ನು ನಿರ್ದೇಶನ ಮಾಡಿ ಗೆದ್ದಿದ್ದಾರೆ. 'ಅಸಾಧ್ಯ ಅಳಿಯ', 'ಗುರು ಶಿಷ್ಯರು', 'ಒಂದೇ ಗುರಿ', 'ಜೀವನ ಚಕ್ರ', 'ಕರ್ಣ', 'ಗಂಡುಗಲಿ ಕುಮಾರರಾಮ'ದಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿ ಗೆದ್ದಿದ್ದಾರೆ. ಇವರು ಎಸ್.ನಾರಾಯಣ್ ಗುರುಗಳು ಕೂಡ ಹೌದು..

ಓಂ ಸಾಯಿ ಪ್ರಕಾಶ್,
ಅಣ್ಣ ತಂಗಿ ಸಿನಿಮಾಗಳ ಮೂಲಕ ಜನಪ್ರಿಯರಾಗಿದ್ದ ನಿರ್ದೇಶಕ ಓಂ ಸಾಯಿ ಪ್ರಕಾಶ್. 'ಅಣ್ಣ ತಂಗಿ', 'ತವರಿಗೆ ಬಾ ತಂಗಿ', 'ಗೋಲ್ಮಾಲ್ ರಾಧಾಕೃಷ್ಣ', 'ರೌಡಿ ಮತ್ತು ಎಂಎಲ್‌ಎ' ಅಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇವರೂ ಕೂಡ ಕನ್ನಡ, ತೆಲುಗು ಭಾಷೆಯ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇವರೂ ಕೂಡ 50 ಸಿನಿಮಾಗಳನ್ನು ನಿರ್ದೇಶನ ಮಾಡಿದ ನಿರ್ದೇಶಕರ ಪಟ್ಟಿಯಲ್ಲಿದ್ದಾರೆ.

ಎಸ್ ನಾರಾಯಣ್
ಕಲಾ ಸಾಮ್ರಾಟ್ ಎಸ್.ನಾರಾಯಣ್ 5ಡಿ ಸಿನಿಮಾ ಮೂಲಕ 50 ಸಿನಿಮಾಗಳನ್ನು ಪೂರೈಸಿದ್ದಾರೆ. ವೇಳೆ ಐತಿಹಾಸಿಕ, ಪೌರಾಣಿಕ ಸಿನಿಮಾಗಳನ್ನು ನಿರ್ದೇಶನ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ. "ನನಗೆ ಇನ್ನು ತೃಪ್ತಿ ಸಿಕ್ಕಿಲ್ಲ. ಯಾಕಂದ್ರೆ ನಾನು ಮಾಡಬೇಕಾದ ಸಿನಿಮಾಗಳು ಇನ್ನೂ ಬಾಕಿ ಇದೆ. ಇವೆಲ್ಲ ನನಗೆ ಬಂದ ಅವಕಾಶಗಳು. ನಾನು ಮಾಡಬೇಕು ಅಂತಿರೋ ಸಿನಿಮಾಗಳು ಬೇರೆ ಇದೆ. ನಾನು ಐತಿಹಾಸಿಕ ಸಿನಿಮಾ ಮಾಡಬೇಕು. ಪೌರಾಣಿಕ ಸಿನಿಮಾ ಮಾಡಬೇಕು. ಅದರ ಬಗ್ಗೆ ಎಲ್ಲಾ ತುಂಬಾ ಓದಿಕೊಂಡಿದ್ದೇನೆ. ಹಾಗಾಗಿ ನಾನು ಅಂತಹ ಸಿನಿಮಾಗಳನ್ನು ಮಾಡಬೇಕು. ಹಾಗೆ ಮಾಡಿದಾಗ ನನ್ನ ವೃತ್ತಿ ಜೀವನ ಪರಿಪೂರ್ಣ ಆಗುತ್ತೆ." ಎಂದಿದ್ದಾರೆ.

50ರ ಹೊಸ್ತಿಲಲ್ಲಿ ಓಂ ಪ್ರಕಾಶ್ ರಾವ್
ಇನ್ನು ಓಂ ಪ್ರಕಾಶ್ ರಾವ್ 50ರ ಹೊಸ್ತಿಲಲ್ಲಿ ಇದ್ದಾರೆ. ಈಗಾಗಲೇ 49 ಸಿನಿಮಾಗಳನ್ನು ನಿರ್ದೇಶನ ಮಾಡಿರೋ ಓಂ ಪ್ರಕಾಶ್ ರಾವ್ 50ನೇ ಸಿನಿಮಾವನ್ನು ಅನೌನ್ಸ್ ಮಾಡಬೇಕಿದೆ. ಸದ್ಯ 'ಫಿನಿಕ್ಸ್' ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ಇದು ಅವರ 49ನೇ ಸಿನಿಮಾ. ಇವರು 50 ಸಿನಿಮಾ ಪೂರೈಸಿದ ಐದನೇ ನಿರ್ದೇಶಕ ಆಗಬಹುದು.


Click it and Unblock the Notifications











