ಬಾಲ್ಯದಲ್ಲಿ ಮಹಾ ಕೋಪಿಷ್ಠನಾಗದ್ದ ಅಪ್ಪು 'ದೇವತಾ ಮನುಷ್ಯ'ನಾಗಿದ್ದು ಹೇಗೆ?
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಎರಡೂವರೆ ವರ್ಷಗಳಾಗಿವೆ. ಇಷ್ಟೂ ದಿನ ಅವರ ಅಭಿಮಾನಿಗಳು ಅಪ್ಪುವನ್ನು ನೆನಪಿಸಿಕೊಂಡ ದಿನವೇ ಇಲ್ಲ. ಪ್ರತಿ ಕ್ಷಣವೂ ಪುನೀತ್ ರಾಜ್‌ಕುಮಾರ್ ಜಪ ಮಾಡುತ್ತಲೇ ಇದ್ದಾರೆ. ಇನ್ನು ಮಾರ್ಚ್ 17ಕ್ಕೆ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವಿದೆ. ಹೀಗಾಗಿ ಅಭಿಮಾನಿಗಳು ಈಗಾಗಲೇ ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಪುನೀತ್ ರಾಜ್‌ಕುಮಾರ್ ವ್ಯಕ್ತಿತ್ವ ಅವರನ್ನು ಹತ್ತಿರದಿಂದ ಬಲ್ಲವರಿಗೆ ಒಂದೊಂದು ಹಂತದಲ್ಲಿ ಒಂದೊಂದು ರೀತಿ ಕಂಡಿದೆ. ಪುನೀತ್ ಬಾಲ್ಯದಲ್ಲಿ ಇದ್ದ ರೀತಿ ಸಿನಿಮಾಗೆ ಬಂದ ಬಳಿಕ ಇರಲಿಲ್ಲ. ಬಾಲ್ಯದಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಮಹಾಕೋಪಿಷ್ಠನಾಗಿದ್ದರು ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ.

ಅಣ್ಣಾವ್ರ ನಿರ್ಮಾಣ ಕಂಪನಿಯಲ್ಲಿ ನಿರ್ಮಾಣ ಆಗಿದ್ದ ಹಲವು ಸಿನಿಮಾಗಳಲ್ಲಿ ಚಿಕ್ಕಣ್ಣ ಸಹಾಯಕರಾಗಿ ಕೆಲಸ ಮಾಡಿದ್ದರು. ಇತ್ತೀಚೆಗೆ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಪುನೀತ್ ರಾಜ್‌ಕುಮಾರ್‌ಗೆ ಬಾಲ್ಯದ ದಿನಗಳಲ್ಲಿ ಸಿಕ್ಕಾಪಟ್ಟೆ ಕೋಪವಿತ್ತು ಎಂದು ಹೇಳಿದ್ದಾರೆ. ಈ ಸಂದರ್ಶನದ ಝಲಕ್ ಇಲ್ಲಿದೆ.
"ಅಪ್ಪು ಶಾರ್ಟ್ ಟೆಂಪರ್ ಆಗಿದ್ರು"
ಪುನೀತ್‌ರಾಜ್‌ಕುಮಾರ್ ಬಾಲ್ಯದ ದಿನಗಳಲ್ಲಿ ಸಿಕ್ಕಾಪಟ್ಟೆ ಶಾರ್ಟ್ ಟೆಂಪರ್ ಆಗಿದ್ದರು ಅನ್ನೋ ವಿಷಯವನ್ನು ಚಿಕ್ಕಣ್ಣ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದರು. "ಅಪ್ಪು ಚಿಕ್ಕ ವಯಸ್ಸಿನಿಂದಲೇ ಸಿಕ್ಕಾಪಟ್ಟೆ ಕೋಪಿಷ್ಠ. ಸಿಕ್ಕಾಪಟ್ಟೆ ಶಾರ್ಟ್ ಟೆಂಪರ್. ರಿಮೋಟ್ ಕಂಟ್ರೋಲ್ ಕಾರು ಬೇಕಿತ್ತು. ಅದು ಸಿಂಗಾಪುರದಿಂದ ಬರುತ್ತಿತ್ತು. ನಾನು ವಸಂತ ಗೀತ ಸಿನಿಮಾಗೆ ಕೆಲಸ ಮಾಡಿದೆ. ಭಕ್ತ ಪ್ರಹ್ಲಾದ ಸಿನಿಮಾಗೂ ಕೆಲಸ ಮಾಡಿದೆ. ಅವರ ಇನ್ನೊಂದು ಮುಖವನ್ನು ನೋಡಿದ್ದು 15-16 ವರ್ಷಗಳಾದ್ಮೇಲೆ. ಆ ಮನುಷ್ಯ ಚೇಂಜ್ ಆದ. ಅಷ್ಟು ಕೋಪವಿತ್ತು. ಕೋಟ್ಯಾಧಿಪತಿಯಿಂದ ಬದಲಾದರು ಅಂತ ಅನಿಸುತ್ತಿದೆ." ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಅಣ್ಣಾವ್ರ ಹಿತವಚನ
ಪುನೀತ್ ರಾಜ್‌ಕುಮಾರ್ ಕಾಲಕ್ರಮೇಣ ಬದಲಾದರು. ಅದಕ್ಕೆ ಕಾರಣ ಅಣ್ಣಾವ್ರು. ಅವರನ್ನು ಜೊತೆಯಲ್ಲಿ ಇಟ್ಟುಕೊಂಡು ಅವರನ್ನು ತಿದ್ಧಿದರು ಎಂದು ಚಿಕ್ಕಣ್ಣ ಅಭಿಪ್ರಾಯ ಪಟ್ಟಿದ್ದಾರೆ. "18-20 ವರ್ಷ ಆದ್ಮೇಲೆ ಅಣ್ಣಾವ್ರ ಜೊತೆಯಲ್ಲಿ ಇದ್ದರು. ಅಣ್ಣಾವ್ರು ಕೆಲವೊಂದನ್ನು ಹೇಳಿರಬಹುದು ಅನಿಸುತ್ತೆ. ಯಾರ ಮನಸ್ಸನ್ನು ನೋಯಿಸಬಾರದು. ಅದೆಲ್ಲವನ್ನೂ ಅವರ ಅಳವಡಿಸಿಕೊಂಡರು. ಅಲ್ಲಿಂದ ಪುನೀತ್ ರಾಜ್‌ಕುಮಾರ್ ಚೇಂಜ್ ಆದರು ಅಂತ ಅನಿಸುತ್ತಿದೆ." ಎಂದಿದ್ದಾರೆ.

ಅಣ್ಣಾವ್ರ ಮೇಲಷ್ಟೇ ಭಯವಿತ್ತು
ಅಪ್ಪು ಅದೆಷ್ಟು ಕೋಪಿಷ್ಠನಾಗಿದ್ದರು ಅನ್ನೋದಕ್ಕೆ ಚಿಕ್ಕಣ್ಣ ಚಿಕ್ಕದೊಂದು ಉದಾಹರಣೆ ಕೊಟ್ಟು ವಿವರಿಸಿದ್ದಾರೆ. "ಊಟ ಬಡಿಸಬೇಕಾದರೆ, ಊಟ ತೆಗೆದುಕೊಂಡು ಬಾರಲೇ.. ಎಷ್ಟೋ ಲೇಟಲೇ.. ಅಂತ ಅಡುಗೆ ಮಾಡುವವರಿಗೆ ಹೇಳುತ್ತಿದ್ದರು. ಬಾರೀ ಕೋಪವಿತ್ತು. ಅಣ್ಣಾವ್ರು ಒಬ್ಬರಿಗೆ ಹೆದರುತ್ತಿದ್ದಿದ್ದು. ಅಲ್ಲೊಬ್ಬರು ಕೃಷ್ಣಮೂರ್ತಿ ಸ್ವಾಮಿ ಅಂತಿದ್ದರು. ಅಯ್ಯೋ ಉಚ್ಚೆ ಹುಯ್ದು ಹಾಗೇ ಬರುತ್ತಾನೆ. ಅವನ ಕಾಲಿಗೆ ನಮಸ್ಕಾರ ಮಾಡೋದಿಲ್ಲ ಅನ್ನುತ್ತಿದ್ದ. ಕಂಡವರ ಕಾಲಿಗೆಲ್ಲ ಬೀಳುವುದಿಲ್ಲ ಎನ್ನುತ್ತಿದ್ದ. ಅಷ್ಟು ಕೋಪಿಷ್ಟ. ಅಣ್ಣಾವ್ರು, ಏ.. ಅಪ್ಪಾಜಿ ಅಂತಿದ್ರು. ಸೈಲೆಂಟ್ ಆಗೋರು" ಎಂದು ಚಿಕ್ಕಣ್ಣ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
'ದೇವತಾ ಮನುಷ್ಯ'ನಾದ ಅಪ್ಪು
ಪುನೀತ್ ರಾಜ್‌ಕುಮಾರ್ ಅವರನ್ನು ಬಾಲ್ಯದಿಂದಲೂ ಚಿಕ್ಕಣ್ಣ ನೋಡಿದ್ದರು. ಅವರ ಕೋಪವನ್ನು ಕಂಡಿದ್ದರು. ಆದರೆ, ಬೆಳೆಯುತ್ತಾ? ಅಪ್ಪು ಬದಲಾದ ರೀತಿ ಕಂಡು ಬೆರಗಾಗಿದ್ದೂ ಇದೆ. "5 ವರ್ಷವಿದ್ದಾಗಲೇ ಬಾರಿ ಕೋಪ. ಅದು ಹೇಗೆ ದೇವತಾ ಮನುಷ್ಯನಾದ ಅನ್ನೋದು ನಮಗೆ ನಂಬುವುದಕ್ಕೆ ಆಗುತ್ತಿಲ್ಲ. ಅವರು ಹೀರೊ ಆದ್ಮೇಲೆ ಅಣ್ಣಾವ್ರನ್ನು ಕರೆದುಕೊಂಡೇ ಹೋಗುತ್ತಿದ್ದರು. ಅಣ್ಣಾವ್ರು ಆ ವೇಳೆ ಎಲ್ಲದನ್ನೂ ಹೇಳಿದ್ದರು ಅನಿಸುತ್ತಿದೆ. ಅಣ್ಣಾವ್ರು ಅಂದ ಅಪ್ಪುಗೆ ತುಂಬಾನೇ ಇಷ್ಟವಿತ್ತು." ಎಂದು ಚಿಕ್ಕಣ್ಣ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.


Click it and Unblock the Notifications











