'ಸಾಮ್ರಾಟ್' ಸಿನಿಮಾದ "ನಮ್ ಕಡಿ ಸಾಂಬಾರ್ ಅಂದ್ರೆ" ಹಾಡು ರವಿಚಂದ್ರನ್ ಚಿತ್ರಕ್ಕೆ ಮಾಡಿದ್ದು; ಇಲ್ಲಿಗೆ ಹೇಗೆ ಬಂತು?
ಎಂ. ರಾಜಶೇಖರ್ ವಿತರಕರಾಗಿದ್ದವರು ಸಿನಿಮಾ ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದರು. ಡಾ.ವಿಷ್ಣುವರ್ಧನ್ ಆ ಸಿನಿಮಾ ಹೀರೋ. ಅದುವೇ 'ಸಾಮ್ರಾಟ್'. ಈ ಸಿನಿಮಾವನ್ನು ನಾಗಣ್ಣ ನಿರ್ದೇಶನ ಮಾಡುತ್ತಿದ್ದರು. ವಿಷ್ಣುದಾದಾಗೆ ಈ ಸಿನಿಮಾದಲ್ಲಿ ಸೌಮ್ಯಾ ಕುಲಕರ್ಣಿ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಒಂದು ಹಾಡು ಇಂದಿಗೂ ಜನರು ಮರೆತಿಲ್ಲ. "ನಮ್ ಕಡಿ ಸಾಂಬಾರ್ ಅಂದ್ರೆ..." ಅನ್ನೋ ಹಾಡನ್ನು ಯಾರು ಮರೆಯೋಕೆ ಸಾಧ್ಯ
ವಿಷ್ಣುವರ್ಧನ್ ಹಾಗೂ ವಿನಯ ಪ್ರಸಾದ್ ಅವರ ಕಾಂಬಿನೇಷನ್‌ನಲ್ಲಿ ಬಂದ ಈ ಹಾಡು ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳುತ್ತಾರೆ. ಆದರೆ, 'ಸಾಮ್ರಾಟ್' ಸಿನಿಮಾದಲ್ಲಿ ಈ ಹಾಡು ಇರಲಿಲ್ಲ. ಹಂಸಲೇಖ ಯಾವಾಗ ಸಂಗೀತ ನಿರ್ದೇಶಕರಾಗಿ ಬಂದರೋ ಆಗ ಈ ಹಾಡನ್ನು ಸಿನಿಮಾದಲ್ಲಿ ಸೇರಿಸುವ ಬಗ್ಗೆ ಚರ್ಚೆ ನಡೆಯುತ್ತೆ. ಚಿತ್ರರಂಗಕ್ಕೆ ಈ ಹಾಡು ಇಷ್ಟ ಆಗಿದ್ದರೂ, ಎಲ್ಲಿ ಸೇರಿಸುವುದು ಅನ್ನೋದು ಗೊಂದಲವಿತ್ತು.

ವಿಷ್ಣುದಾದಗಂತೂ "ನಮ್ ಕಡಿ ಸಾಂಬಾರ್.." ಅಂದರೆ ಎನ್ನುವ ಹಾಡು ಬಲು ಇಷ್ಟ ಆಗಿತ್ತು. ಹೀಗಾಗಿ ಹಂಸಲೇಖ ಅವರೇ ಒಂದು ಐಡಿಯಾವನ್ನು ಕೊಟ್ಟರು. ಅಂದ್ಹಾಗೆ, ಈ ಹಾಡಿನ ಬಗ್ಗೆ ಇನ್ನೊಂದು ಇಂಟ್ರೆಸ್ಟಿಂಗ್ ವಿಷಯವಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾಗಾಗಿ ಈ ಹಾಡನ್ನು ಕಂಪೋಸ್ ಮಾಡಿದ್ದರು. ಆದರೆ, ಅದನ್ನು ಆ ಸಿನಿಮಾದಲ್ಲಿ ಬಳಸಲು ಸಾಧ್ಯವಾಗಿರಲಿಲ್ಲ. ಹಾಗಿದ್ದರೆ, ಆ ರವಿಚಂದ್ರನ್ ಸಿನಿಮಾ ಯಾವುದು? ಈ ಹಾಡನ್ನು ಬಳಸಿಕೊಂಡಿದ್ದು ಹೇಗೆ?
ಕೇಜಿಸ್ಟಾರ್ ರವಿಚಂದ್ರನ್ ಅವರ ಶೇ.85ರಷ್ಟು ಸಿನಿಮಾಗಳಿಗೆ ಹಂಸಲೇಖ ಅವರೇ ಟ್ಯೂನ್ ಹಾಕಿದ್ದಾರೆ. ಹೀಗೆ ರವಿಚಂದ್ರನ್ ಅವರಿಗೆ ಹಿಡಿಸುವವರೆಗೂ ಹಾಡುಗಳು ಓಕೆ ಆಗುತ್ತಿರಲಿಲ್ಲ. ಇನ್ನು ಕೆಲವೊಮ್ಮೆ ಚೆನ್ನಾಗಿದೆ ಅಂತ ಅನಿಸಿದರೂ, ಅದನ್ನು ಬಳಸಿಕೊಳ್ಳುವುದಕ್ಕೆ ಆಗುತ್ತಿರಲಿಲ್ಲ. ಹೀಗೆ ಉಳಿದುಕೊಂಡ ಒಂದು ಹಾಡೇ 'ಸಾಮ್ರಾಟ್' ಸಿನಿಮಾದ "ನಮ್ ಕಡಿ ಸಾಂಬಾರ ಅಂದ್ರೆ..". ಇದನ್ನು ಹಂಸಲೇಖ ಹೇಗೆ ಬಳಸಿಕೊಂಡರು ಅನ್ನೋದನ್ನು ಹಿರಿಯ ಪತ್ರಕರ್ತ ಎನ್ ಎಸ್ ಶ್ರೀಧರ ಮೂರ್ತಿ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಸ್ವಾರಸ್ಯಕರವಾಗಿ ಹೇಳಿಕೊಂಡಿದ್ದಾರೆ.
"ಸಾಮ್ರಾಟ್ ಸಿನಿಮಾದ ಹಾಡಿನ ಕಂಪೋಸಿಂಗ್‌ನಲ್ಲಿ ಇರುವಾಗಲೇ ಹಂಸಲೇಖ ಚಿನ್ನಗೆ ಒಂದು ಹಾಡು ಬರೆದಿದ್ದೆ, ನಮ್ ಕಡೆ ಸಾಂಬಾರ್ ಅಂದ್ರೆ.. ಈ ಹಾಡನ್ನು ಬಳಸಿಕೊಳ್ಳುವುದಕ್ಕೆ ಆಗಲಿಲ್ಲ. ನಿಮ್ಮ ಸಿನಿಮಾದಲ್ಲಿ ಬಳಸಿಕೊಳ್ಳಬಹುದಾ ನೋಡಿ ಎಂದರು. ವಿಷ್ಣುವರ್ಧನ್‌ಗೆ ಬಹಳ ಇಷ್ಟ ಆಗಿತ್ತು. ನಾಗಣ್ಣ ಅವರಿಗೂ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. ಆದರೆ, ಈ ಹಾಡನ್ನು ಬಳಸಿಕೊಳ್ಳುವುದಕ್ಕೆ ಜಾಗವಿಲ್ಲ ಎಂದರು ನಾಗಣ್ಣ. ಹಂಸಲೇಖ ಸ್ಪೆಸ್ ಮಾಡಿದರೆ ಆಯ್ತು ಬಿಡಿ. ವಿನಯ ಪ್ರಸಾದ್ ಅವರನ್ನು ಕರೆಯುತ್ತೇನೆ. ಯಾಕಂದ್ರೆ, ಅವರಿಗೆ ಈ ಹಾಡು ಹಾಡುವುದಕ್ಕೆ ಬಹಳ ಇಷ್ಟ" ಎಂದು ಹಂಸಲೇಖ ಹೇಳಿದ ಮೇಲೆ ಈ ಹಾಡು ಸಾಮ್ರಾಟ್ ಸಿನಿಮಾಗೆ ಬಂತು.

ಹಂಸಲೇಖ ಕಂಪೋಸ್ ಮಾಡಿದ ಈ ಹಾಡಿನಲ್ಲೊಂದು ವಿಶೇಷವಿದೆ. ಜಾನಪದ ಶೈಲಿಯಲ್ಲಿ ಈ ಹಾಡನ್ನು ಕಂಪೋಸ್ ಮಾಡಿದ್ದಾರೆ. ಹೀಗಾಗಿ ಈ ಹಾಡು ಇಂದಿಗೂ ನೆನಪಿನಲ್ಲಿ ಉಳಿಯುವಂತೆ ಮಾಡಿದೆ. ಅಲ್ಲದೇ ಹಂಸಲೇಖ ದೇಸಿ ಸಂಗೀತ ನಿರ್ದೇಶಕ ಅನ್ನೋದನ್ನು ಹಾಡು ಕೇಳಿದವರಿಗೂ ಅರಿವಾಗುತ್ತೆ.
"ವಿಷ್ಣುವರ್ಧನ್ ಹಾಗೂ ವಿನಯ ಪ್ರಸಾದ್ ಅವರ ನಟನೆಯಲ್ಲಿ ಈ ಹಾಡು ಬಳಕೆ ಆಯ್ತು. ಇವತ್ತಿಗೂ ಬಹಳ ಜನಪ್ರಿಯವಾದ ಹಾಡು ಇದು. ಈ ಹಾಡಿನಲ್ಲಿ ಜಾನಪದವನ್ನು ಎಷ್ಟು ಅಧ್ಯಯನ ಮಾಡಿದ್ದಾರೆ. ಹಂಸಲೇಖ ಅವರನ್ನು ದೇಸಿ ಅಂತ ಕರೆಯುವುದು ಅದಕ್ಕೆ. ದೇಸಿ ಟ್ಯೂನ್‌ಗಳನ್ನು ಈ ಹಾಡುಗಳಲ್ಲಿ ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಎಸ್‌ಪಿಬಿ ಮತ್ತು ಮಾಲ್ಗುಡಿ ಶುಭ ಕೂಡ ಅಷ್ಟೇ ಚೆನ್ನಾಗಿ ಹಾಡಿದ್ದಾರೆ. ಇವತ್ತಿಗೂ ಜನಪ್ರಿಯತೆ ಪಡೆದ ಹಾಡು ಇದು. ಈ ಹಾಡು ಹಂಸಲೇಖ ಕೊಟ್ಟಿರುವ ವಿಶಿಷ್ಟ ಗೀತೆ ಅಂತಲೇ ಹೇಳಬಹುದು." ಎನ್ನುತ್ತಾರೆ ಎನ್.ಎಸ್. ಶ್ರೀಧರಮೂರ್ತಿ.


Click it and Unblock the Notifications











