'ದುನಿಯಾ' ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ವಿಜಯ್-ಸೂರಿಗೆ ಸಿಕ್ಕ ಸಂಭಾವನೆ ಏಷ್ಟು?
ಕನ್ನಡ ಚಿತ್ರರಂಗ ಹಲವು ಬಾರಿ ಸಂಕಷ್ಟಕ್ಕೆ ಸಿಲುಕಿದೆ. ಇನ್ನೇನು ಈ ಚಿತ್ರರಂಗದ ಕಥೆ ಮುಗಿದೇ ಹೋಯ್ತು ಅನ್ನುವಾಗ ಕೆಲವು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಜೋರಾಗಿ ಸದ್ದು ಮಾಡಿವೆ. ಹೊಸ ಹೊಸ ಹೀರೋಗಳು ಚಿತ್ರರಂಗಕ್ಕೆ ಪರಿಚಯವಾಗಿದ್ದಾರೆ. ಸ್ಯಾಂಡಲ್‌ವುಡ್‌ನ ದಿಕ್ಕನ್ನೇ ಬದಲಿಸಿದ್ದಾರೆ. ಹೀಗೆ ದಿಕ್ಕನ್ನು ಕನ್ನಡ ಚಿತ್ರರಂಗದ ದಿಕ್ಕನ್ನು ಬದಲಿಸಿದ ಸಿನಿಮಾ 'ದುನಿಯಾ'.
ಆಗತಾನೇ 'ಮುಂಗಾರು ಮಳೆ' ಸಿನಿಮಾ ಸಿಕ್ಕಾಪಟ್ಟೆ ಜೋರಾಗಿ ಸದ್ದು ಮಾಡಿತ್ತು. ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿತ್ತು. ಅದರ ಬೆನ್ನಲ್ಲೇ ರಿಲೀಸ್ ಆಗಿದ್ದ ಸಿನಿಮಾ 'ದುನಿಯಾ'. ಒಂದ್ಕಡೆ ಲವ್ ಸ್ಟೋರಿ ಸದ್ದು ಮಾಡುತ್ತಿದ್ದರೆ, ಇನ್ನೊಂದು ಕಡೆ ಮಾಸ್ ಸಿನಿಮಾ ಥಿಯೇಟರ್‌ಗಳಲ್ಲಿ ಸೌಂಡು ಮಾಡುತ್ತಿತ್ತು. ದುನಿಯಾ ಕನ್ನಡ ಚಿತ್ರರಂಗ ಟ್ರೆಂಡ್ ಸೆಟ್ಟರ್ ಸಿನಿಮಾ ಆಯ್ತು.

2007ರಲ್ಲಿ ಕನ್ನಡ ಚಿತ್ರರಂಗದಲ್ಲಿ ಆ ಮಟ್ಟಿಗೆ ಸದ್ದು ಮಾಡಿದ 'ದುನಿಯಾ' ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದು ಎಷ್ಟು? ದುನಿಯಾ ವಿಜಯ್‌ಗೆ ಹಾಗೂ ದುನಿಯಾ ಸೂರಿಗೆ ಅಂದು ಸಿಕ್ಕಿದ ಸಂಭಾವನೆ ಎಷ್ಟು? ನಿರ್ಮಾಪಕರು ಕೋರ್ಟು, ಕೇಸು ಕಚೇರಿ ಅಂತ ಅಲೆದಾಡಿದ್ದು ಯಾಕೆ? ಅಂತಹದ್ದು ಏನಾಯ್ತು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ದುನಿಯಾ ಸಿನಿಮಾವನ್ನು ದುನಿಯಾ ವಿಜಯ್ ಅವರ ಅಕ್ಕನ ಗಂಡನೇ ಅಂದರೆ, ಲೂಸ್ ಮಾದ ಯೋಗಿಯ ತಂದೆ ಸಿದ್ದರಾಜು ನಿರ್ಮಾಣ ಮಾಡಿದ್ದರು. ದುನಿಯಾ ವಿಜಯ್ ಈ ಸಿನಿಮಾ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟಿದ್ದರು. ಇತ್ತೀಚೆಗೆ ಡೈಲಿ ಮಾಧ್ಯಮ ಯೂಟ್ಯೂಬ್ ಚಾನೆಲ್‌ಗೆ ನಿರ್ಮಾಪಕ ಸಿದ್ದರಾಜು ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ದುನಿಯಾ ಚಿತ್ರದ ಬಾಕ್ಸಾಫಿಸ್ ಕಲೆಕ್ಷನ್, ಸಂಭಾವನೆ ಬಗ್ಗೆ ಮಾತಾಡಿದ್ದಾರೆ.

"ದುನಿಯಾ ಸಿನಿಮಾ ರಿಲೀಸ್ ಮಾಡುವಾಗ 18 ಪ್ರಿಂಟ್ ಹಾಕಿದ್ವಿ. ಮುಂದಿನ ವಾರಗಳಿಂದ 28 ಆಯ್ತು, 38 ಆಯ್ತು, 48 ಆಯ್ತು. ಹೀಗೆ ಪ್ರತಿವಾರ ಹತ್ತು ಪ್ರಿಂಟ್‌ಗಳು ಹೆಚ್ಚಾಗುತ್ತಾ ಹೋಯ್ತು. ಆಗ ಮೊದಲು ಜಿಲ್ಲೆಗೆ ಹಾಕೋದು, ಆಮೇಲೆ ತಾಲೂಕಿಗೆ ಬರೋದು, ಆಮೇಲೆ ಹೋಬಳಿಗೆ ಬರೋದು ಮಾಡುತಿದ್ವಿ. ಈಗ ಹಾಗಿಲ್ಲ ಎಲ್ಲಿ ಬೇಕಾದರೂ ನೋಡುತ್ತಾರೆ ಹಾಗಾಗಿದೆ." ಎಂದು ಸಿನಿಮಾ ರಿಲೀಸ್ ಮಾಡಿದ್ದನ್ನು ವಿವರಿಸಿದ್ದಾರೆ.
ಬಳಿಕ 'ದುನಿಯಾ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಎಷ್ಟು ಗಳಿಕೆ ಮಾಡ್ತು ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ದುನಿಯಾದಲ್ಲಿ 10 ರಿಂದ 12 ಕೋಟಿ ಸಂಪಾದನೆ ಮಾಡಿದ್ದೀವಿ. ನನ್ನ ಒಬ್ಬನ ಶೇರ್ ಅಲ್ಲ. ಎಲ್ಲಾ ಸೇರಿ ಅಷ್ಟು ಮಾಡಿದ್ದೇವೆ. ಆ ಸಿನಿಮಾದಿಂದಲೇ ಎಲ್ಲರೂ ಬದುಕಿದ್ವಿ. ಜಯಣ್ಣ ಫಿಲಂಸ್ ಇರಬಹುದು, ಲೋಕೇಶ್ ಇರಬಹುದು ಎಲ್ಲರಿಗೂ ಚೆನ್ನಾಗಿ ಆಯ್ತು." ಎಂದಿದ್ದಾರೆ.
ಇನ್ನು 'ದುನಿಯಾ' ಸಿನಿಮಾ ಬಳಿಕೆ ಯಾರಿಗೆ ಎಷ್ಟೆಷ್ಟು ಹಣ ಹಿಂತಿರುಗಿಸಿದ್ದರು ಅನ್ನೋದನ್ನು ಹೇಳಿದ್ದಾರೆ. ಈ ವೇಳೆ ಕೋರ್ಟ್, ಕಚೇರಿ ಅಂತ ಅಲೆದಾಡಿದ್ಯಾಕೆ ಅನ್ನೋ ವಿಷಯ ರಿವೀಲ್ ಮಾಡಿದ್ದಾರೆ. "ನಮ್ಮ ಮಾವನವರಿಗೆ ಕೊಡಬೇಕಿತ್ತು ಕೊಟ್ವಿ. ಲೋಕೇಶ್ ಅಂತ ಅವರು 9 ಲಕ್ಷ ಕೊಟ್ಟಿದ್ದರು. ಅವರ ನನ್ನನ್ನು ಕೋರ್ಟ್‌ನಲ್ಲಿ ಕೇಸ್ ಹಾಕಿ ನಿಲ್ಲಿಸಿದರು. 75 ಲಕ್ಷ ಕೊಟ್ಟೆ. ಪ್ರಸಾದ್ ಲ್ಯಾಬ್‌ನಲ್ಲಿ ಅಗ್ರಿಮೆಂಟ್ ಮಾಡಿದಾಗ ಸಮಾನ ಶೇರ್ ಅಂತ ಮಾಡಿದ್ವಿ. ಸಿನಿಮಾ ಮುಗಿಯುವ ತನ 9 ಲಕ್ಷ ರೂಪಾಯಿ ಕೊಡುವುದಕ್ಕೆ ಅಷ್ಟೇ ಆಗೋದು ಅಂದರು. ರಿಲೀಸ್ ಆದ್ಮೇಲೆ ಪೇಪರ್‌ನಲ್ಲಿ ನಾನು ಸಮಾನ ಪಾರ್ಟನರ್ ಎಂದು ಕೇಸ್ ಹಾಕಿದರು. ದುಡ್ಡು ಬಂದಾಗಲೂ ಕಷ್ಟಗಳು ಬಂದಿವೆ" ಎಂದು ಹೇಳಿಕೊಂಡಿದ್ದಾರೆ.
ಇನ್ನು ಪೇಮೆಂಟ್ ವಿಷಯಕ್ಕೆ ಬಂದರೆ, ದುನಿಯಾ ವಿಜಯ್, ದುನಿಯಾ ಸೂರಿ ಯಾರಿಗೆಲ್ಲ ಎಷ್ಟೆಷ್ಟು ಸಂಭಾವನೆ ಕೊಟ್ಟಿದ್ದರು ಅನ್ನೋದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. "ದುನಿಯಾ ವಿಜಯ್ ಯಾವತ್ತೂ ಪೇಮೆಂಟ್ ಹೇಳಿಲ್ಲ. ನಾವು ಕೊಟ್ಟಿಲ್ಲ. ಸಿನಿಮಾ ಶೂಟಿಂಗ್ ವೇಳೆ ಒಂದಿಷ್ಟು ಪೆಟ್ರೋಲ್ ಅದು ಇದು ಖರ್ಚು ಅಂತ ಕೊಟ್ಟಿದ್ದೇವೆ ಅಷ್ಟೇ. ಗೆದ್ದಮೇಲೂ ಕೇಳಿಲ್ಲ. ಸೂರಿಗೆ ಸಿನಿಮಾ ಮುಗಿಯುವ ತನ 1 ಲಕ್ಷ 20 ಸಾವಿರ ಕೊಟ್ಟಿದ್ದೇನೆ ಅಷ್ಟೇ. ಸಿನಿಮಾ ರಿಲೀಸ್ ಆದ್ಮೇಲೆ ತಲಘಟ್ಟಪುರದಲ್ಲಿ ಒಂದು ಮನೆ ಕೊಡಿಸಿದೆ. 47 ಲಕ್ಷ ರೂಪಾಯಿ ಆಯ್ತು. ಆದರೆ ಇಷ್ಟು ವರ್ಷ ಆದರೂ ನನ್ನ ಮಗನಿಗೊಂದು ಸಿನಿಮಾ ಮಾಡಿಲ್ಲ ಅಂತ ಬೇಜಾರಿದೆ." ಎನ್ನುತ್ತಾರೆ ಸಿದ್ಧರಾಜು.


Click it and Unblock the Notifications











