ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯಿಂದ ರಾಜ್‌ಕುಮಾರ್‌ಗೆ ಸಿಕ್ಕಿದ್ದ ಹಣವೆಷ್ಟು? ಅದನ್ನ ಏನು ಮಾಡಿದ್ರು?
ಡಾ.ರಾಜ್‌ಕುಮಾರ್ ಕನ್ನಡ ಚಿತ್ರರಂಗಕ್ಕೆ ನೀಡಿದ ಸೇವೆ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸುಮಾರು 50 ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ನಟನಾಗಿ, ಗಾಯಕನಾಗಿ ಗುರುತಿಸಿಕೊಂಡಿದ್ದವರು ಅಣ್ಣಾವ್ರು. ಈ ಮೇರು ನಟ ಸೇವೆಯನ್ನು ಗುರುತಿಸಿ ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳು ಬಂದಿವೆ. ಕರ್ನಾಟಕ ಅಷ್ಟೇ ಅಲ್ಲದೆ ಪಕ್ಕದ ರಾಜ್ಯದಿಂದಲೂ ಪ್ರಶಸ್ತಿಗಳು ಇವರನ್ನು ಅರಿಸಿಕೊಂಡು ಬಂದಿವೆ.
ಭಾರತದಲ್ಲಿ ಸಿನಿಮಾ ಕ್ಷೇತ್ರದಿಂದ ನೀಡಲಾಗುವ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಅಣ್ಣಾವ್ರಿಗೆ ನೀಡಿ ಗೌರವಿಸಲಾಗಿದೆ. 1995ರಲ್ಲಿ ವರನಟನಿಗೆ 43ನೇ ದಾದಾ ಸಾಹೇಬ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಅಣ್ಣಾವ್ರಿಗೆ ತಡವಾಗಿ ಈ ಪ್ರಶಸ್ತಿ ಬಂತು ಅಂತ ಅನಿಸಿದ್ದರೂ, ಪ್ರಶಸ್ತಿ ಸಿಕ್ಕದ ಸಂಭ್ರಮ ಅವರ ಅಭಿಮಾನಿಗಳಲ್ಲಿ ಮನೆ ಮಾಡಿತ್ತು.

ವೈವಿಧ್ಯಮಯ ಪಾತ್ರಗಳ ಮೂಲಕ ಸುಮಾರು ಐದು ದಶಕಗಳ ಕಾಲ ರಂಜಿಸಿದ ನಟ ಡಾ.ರಾಜ್‌ಕುಮಾರ್. ಇಂದಿಗೂ ಇಂತಹ ಮತ್ತೊಬ್ಬ ನಟನನ್ನು ನೋಡಲು ಸಾಧ್ಯವಾಗಿಲ್ಲ. ಆದರೆ, ಪ್ರತಿಯೊಂದು ಪ್ರಶಸ್ತಿಗೂ ಒಂದು ಬೆಲೆ ಅಂತ ಇರುತ್ತೆ. 1995ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಾಗ ಅಣ್ಣಾವ್ರಿಗೆ ಎಷ್ಟು ಹಣ ಬಂದಿತ್ತು? ಆ ಹಣವನ್ನು ಅಣ್ಣಾವ್ರು ಏನು ಮಾಡಿದರು? ಅನ್ನೋದನ್ನು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿರುವ ಡಾ.ಮಹೇಶ್ ಜೋಶಿ ಒಮ್ಮೆ ಹೇಳಿಕೊಂಡಿದ್ದರು.
ದಾದಾ ಸಾಹೇಬ್ ಪ್ರಶಸ್ತಿಯನ್ನು ಪಡೆದುಕೊಳ್ಳಬೇಕು ಅನ್ನೋದು ಭಾರತದಲ್ಲಿರುವ ಬಹುತೇಕ ಎಲ್ಲಾ ಕಲಾವಿದರ ಕನಸು. ಸಿನಿಮಾ ಕ್ಷೇತ್ರದಲ್ಲಿ ಭಾರತದಲ್ಲಿ ನೀಡಲಾಗುವ ಅತ್ಯುನ್ನತ ಪ್ರಶಸ್ತಿಯಿದು. ಅಣ್ಣಾವ್ರಿಗೆ ಈ ಪ್ರಶಸ್ತಿ ಬಂದಾಗ ಇಡೀ ರಾಜ್ಯವೇ ಕುಣಿದು ಕುಪ್ಪಳಿಸಿತ್ತು. ಅಣ್ಣಾವ್ರು ರಾಷ್ಟ್ರಪತಿಗಳ ಕೈಯಿಂದ ಅತ್ಯುನ್ನತ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದರೆ, ಇತ್ತ ಅಭಿಮಾನಿಗಳು ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದರು.

ಅಂದ್ಹಾಗೆ, ಅಣ್ಣಾವ್ರಿಗೆ ದಾದಾ ಸಾಹೇಬ್ ಪ್ರಶಸ್ತಿ ಬಂದಾಗ ಅವರಿಗೆ ಒಂದು ಲಕ್ಷ ರೂಪಾಯಿಯನ್ನು ನಗದು ನೀಡಿದ್ದರು ಎಂದು ಡಾ.ಮಹೇಶ್ ಜೋಶಿ ಅವರು ಹೇಳಿಕೊಂಡಿದ್ದಾರೆ. ಹಣವನ್ನು ಅಣ್ಣಾವ್ರು ಮನೆಗೆ ತೆಗೆದುಕೊಂಡು ಹೋಗಿರಲಿಲ್ಲ. ಅದನ್ನು ಒಂದೊಳ್ಳೆಯ ಕೆಲಸಕ್ಕೆ ಬಳಸಿಕೊಂಡಿದ್ದರು. ಈಗ ಬಗ್ಗೆ ಡಾ.ಮಹೇಶ್ ಜೋಶಿ ವೇದಿಕೆ ಮೇಲೆ ಹೇಳಿದ್ದನ್ನು ಟೋಟಲ್ ಕನ್ನಡ ಯುಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
"ಕನ್ನಡ ಸಾಹಿತ್ಯ ಪರಿಷತ್ ಮೇಲೆ ಅಣ್ಣಾವ್ರು ಅಪಾರವಾದ ಗೌರವವನ್ನು ಹೊಂದಿದ್ದರು. ಯಾಕಂದ್ರೆ, ನಾನೇ ಸಾಕ್ಷಿಯಾಗಿದ್ದೀನಿ. ರಾಜ್‌ಕುಮಾರ್‌ಗೆ ದಾದಾ ಸಾಹೇಬ್ ಪ್ರಶಸ್ತಿಯಿದ ಒಂದು ಲಕ್ಷ ಬಹುಮಾನವಿತ್ತು. ದೆಹಲಿಯಿಂದ ಬಂದ್ಮೇಲೆ ನೇರವಾಗಿ ಕನ್ನಡ ಸಾಹಿತ್ಯ ಪರಿಷತ್‌ಗೆ ಬಂದು ದತ್ತಿಯನ್ನು ಇಟ್ಟಿದ್ದಾರೆ." ಎಂದು ಹೇಳಿದ್ದಾರೆ. ತಮಗೆ ಬಂದ ಅತ್ಯುನ್ನತ ಪ್ರಶಸ್ತಿಯ ಹಣವನ್ನು ಕನ್ನಡದ ಸಂಸ್ಥೆಗೆ ನೀಡಿ ದೊಡ್ಡ ತನ ಮೆರಿದ್ದರು.
ಅಣ್ಣಾವ್ರು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಅಗಲಿ 18 ವರ್ಷಗಳಾಗಿವೆ. ಇಷ್ಟು ವರ್ಷಗಳಾದರೂ ರಾಜ್‌ಕುಮಾರ್ ಅವರ ಇಂತಹ ಸ್ವಾರಸ್ಯಕರ ಸಂಗತಿಗಳನ್ನು ಹೇಳಿಕೊಳ್ಳುತ್ತಲೇ ಇದ್ದಾರೆ. ಸದ್ಯ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯ ಜೊತೆ ನೀಡಲಾಗುವ ಹಣದ ಮೊತ್ತವನ್ನು ಏರಿಕೆ ಮಾಡಲಾಗಿದೆ. 1 ಲಕ್ಷದಿಂದ 10 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ ಎನ್ನಲಾಗಿದೆ.


Click it and Unblock the Notifications











