ಪಂಡರೀಬಾಯಿ ಕೈ ಕಳೆದುಕೊಂಡಾಗ ರಜನಿ ಕೊಟ್ಟ ಹಣವೆಷ್ಟು? ರಾಜ್‌ಕುಮಾರ್ ಮಾಡಿದ ಸಹಾಯವೇನು?
ಕನ್ನಡ ಚಿತ್ರರಂಗದ ಮೊದಲ ಯಶಸ್ವಿ ನಾಯಕಿ ಪಂಡರೀಬಾಯಿ. ಮೂರು ದಶಕಗಳ ಕಾಲ ಚಿತ್ರರಂಗದಲ್ಲಿ ನಾಯಕಿಯಾಗಿ ದುಡಿದ ಈ ನಟಿ ದಿಗ್ಗಜರೊಂದಿಗೆ ಕೆಲಸ ಮಾಡಿದ್ದರು. ಡಾ. ರಾಜ್‌ಕುಮಾರ್, ಎಂಜಿಆರ್ ಹಾಗೂ ಶಿವಾಜಿ ಗಣೇಶ್ ಮೂವರಿಗೆ ನಾಯಕಿಯಾಗಿಯೂ, ತಾಯಿಯಾಗಿಯೂ ನಟಿಸಿ ಜನರ ಮನಸ್ಸು ಗೆದ್ದಿದ್ದರು. 50ರ ದಶಕದಿಂದ 70ರ ದಶಕದವರೆಗೂ ಪಂಡರೀಬಾಯಿ ಮಿಂಚಿದ್ದರು.
ನಾಯಕಿಯಾಗಿ ನಟಿಸುವ ಕಾಲ ಮುಗಿದಿದ ಬಳಿಕವೂ ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದರು. ತಾಯಿ ಪಾತ್ರದಲ್ಲಿ ಮಿಂಚಿದ್ದರು. ಹೀಗಾಗಿ ಇವರನ್ನು ಕನ್ನಡ ಚಿತ್ರರಂಗದ ಅಮ್ಮ ಎಂದೂ ಕರೆಯುತ್ತಾರೆ. ಪಂಡರೀಬಾಯಿ ದಿಗ್ಗಜರಿಗೆ ಅಮ್ಮನಾಗಿ ನಟಿಸಿಯೂ ಸೈ ಎನಿಸಿಕೊಂಡಿದ್ದರು. ಸುಮಾರು ಒಂದು ಸಾವಿರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರೂ ಈ ನಟಿಯ ಕೊನೆಯ ದಿನಗಳು ನೆಮ್ಮದಿಯಾಗಿ ಇರಲಿಲ್ಲ.

ಪಂಡರೀಬಾಯಿ ಅಂದರೆ, ಕನ್ನಡದ ನಟರಿಗೆ ಎಲ್ಲಿಲ್ಲದ ಗೌರವ. ಇವರೊಂದಿಗೆ ಸೂಪರ್‌ಸ್ಟಾರ್ ರಜನಿಕಾಂತ್ ಕೂಡ ವಿಶೇಷವಾದ ಗೌರವವನ್ನು ಹೊಂದಿದ್ದರು. ಪಂಡರೀಬಾಯಿ ಅಪಘಾತದಲ್ಲಿ ಕೈಯನ್ನು ಕಳೆದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಅವರ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಸರಿಯಾಗಿರಲಿಲ್ಲ. ಈ ವೇಳೆ ರಜನಿಕಾಂತ್ ಆಗಿನ ಕಾಲಕ್ಕೆ ದೊಡ್ಡ ಮೊತ್ತದ ಹಣವನ್ನು ನೀಡಿದ್ದರು. ಈ ವಿಷಯವನ್ನು ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಹೌದು, ಪಂಡರೀಬಾಯಿ ಅಂದರೆ ಸೂಪರ್‌ಸ್ಟಾರ್‌ಗೆ ಗುರುವಿನ ಭಾವನೆ. ಹೀಗಾಗಿ ಚಿತ್ರರಂಗದಲ್ಲಿ ಅವರನ್ನು ತುಂಬಾನೇ ಗೌರವದಿಂದ ಕಾಣುತ್ತಿದ್ದರು. ಈ ಕಾರಣಕ್ಕೆ ಪಂಡರೀಬಾಯಿ ಅಪಘಾತದಲ್ಲಿ ಕೈ ಕಳೆದುಕೊಂಡಾಗ ಆಸ್ಪತ್ರೆಯ ವೆಚ್ಚ ಬರಿಸುವುದಕ್ಕೆ ನೆರವಾಗಿದ್ದರು ಎಂದು ಟೋಟಲ್ ಕನ್ನಡ ಯೂಟ್ಯೂಬ್‌ನಲ್ಲಿ ಮಾಹಿತಿ ನೀಡಿದ್ದಾರೆ. "ರಜನಿಕಾಂತ್ ಅವರಿಗೂ ಪಂಡರೀಬಾಯಿ ಅವರ ಮೇಲೆ ಗೌರವವಿತ್ತು. ಪಂಡರೀಬಾಯಿಯವರು ಅಪಘಾತದಲ್ಲಿ ಕೈಯನ್ನು ಕಳೆದುಕೊಂಡಾಗ ಅವರ ಆಸ್ಪತ್ರೆಯ ವೆಚ್ಚಕ್ಕೆಂದು 40 ಲಕ್ಷ ರೂಪಾಯಿಯನ್ನು ರಜನಿಕಾಂತ್ ಅವರು ಕೊಟ್ಟು ಸಹಕರಿಸಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು" ಎಂದಿದ್ದಾರೆ.

ರಜನಿಕಾಂತ್ ಅಷ್ಟೇ ಅಲ್ಲ. ರಾಜ್‌ಕುಮಾರ್ ಅವರಿಗೂ ಪಂಡರೀಬಾಯಿ ಅಂದರೆ ಗುರು ಭಾವನೆಯಿತ್ತು. ಅಣ್ಣಾವ್ರ ಮೊದಲನೇ ಸಿನಿಮಾ 'ಬೇಡರ ಕಣ್ಣಪ್ಪ' ಮಾಡುವಾಗ ಅವರಿಗೆ ಅದರ ವ್ಯಾಕರಣ ಗೊತ್ತಿರಲಿಲ್ಲ. ನಿರ್ದೇಶಕ ಎಚ್‌ಎಲ್‌ಎನ್ ಸಿಂಹ ಅವರು ಇಂಗ್ಲಿಷ್‌ನಲ್ಲಿ ಸೂಚನೆ ಕೊಡುತ್ತಿದ್ದರಂತೆ. ಇದು ಅಣ್ಣಾವ್ರಿಗೆ ಅರ್ಥ ಆಗುತ್ತಿರಲಿಲ್ಲ. ಆಗ ಪಂಡರೀಬಾಯಿಯವರೇ ಅವರ ನೆರವಿಗೆ ನಿಂತಿದ್ದರು. ಹೀಗಾಗಿ ರಾಜ್‌ಕುಮಾರ್ ಅವರಿಗೆ ಪಂಡರೀಭಾಯಿ ಅಂದರೆ ಗುರು ಭಾವನೆ. ಹೀಗಾಗಿ ಪಂಡರೀಬಾಯಿ ನಿರ್ಮಾಣಕ್ಕೆ ತೊಡಗಿಕೊಂಡಾಗ ಕಾಲ್‌ಶೀಟ್ ಕೊಟ್ಟಿದ್ದರು.
"ಪಂಡರೀಬಾಯಿ ತೇಜಸ್ವಿನಿ ಅನ್ನೋ ಸಿನಿಮಾ ನಿರ್ಮಾಣ ಮಾಡುವಾಗ ಅಣ್ಣಾವ್ರು ಕಾಲ್‌ಶೀಟ್ ಕೊಡುತ್ತಾರೆ. ಆ ಸಿನಿಮಾದ ನಂತರ ಎಷ್ಟೋ ವರ್ಷಗಳಾದ್ಮೇಲೆ ಅನ್ನಪೂರ್ಣ ಸಿನಿಮಾ ತೆಗೆಯುವಾಗ ಪಂಡರೀಬಾಯಿ ಅವರು ರಾಜ್‌ಕುಮಾರ್ ಅವರ ಬಳಿ ಹೋಗುತ್ತಾರೆ. ಅವರಿಗೆ ಹೇಗಪ್ಪ ಕಾಲ್‌ಶೀಟ್ ಕೇಳುವುದು ಅನ್ನೋ ಸಂಕೋಚ. ಯಾಕಂದ್ರೆ, ತೇಜಸ್ವಿನಿ ಸಿನಿಮಾದ ಸಂಭಾವನೆಯನ್ನು ಅವರು ಕೊಟ್ಟಿರುವುದಿಲ್ಲ. ಆದರೆ, ರಾಜ್‌ಕುಮಾರ್ ಅವರು ಹೊಸ ಸಿನಿಮಾ ತೆಗೆಯುತ್ತಿದ್ದೀರ. ಹಳೆಯದ್ದೆಲ್ಲ ಯಾಕೆ ಎಂದು ಅವರೇ ಸಮಾಧಾನ ಮಾಡಿ ಕಳುಹಿಸಿದ್ದನ್ನು ನೆನಪಿಸಿಕೊಂಡಿದ್ದಾರೆ.
"ರಾಜ್‌ಕುಮಾರ್ ಯಶಸ್ಸಿನ ಉತ್ತುಂಗದಲ್ಲಿ ಇರುವಾಗ ಪಂಡರೀಬಾಯಿ ಅವರಿಗೆ ಆರ್ಥಿಕ ಸಂಕಷ್ಟ ಇರುತ್ತೆ. ಆಗ ಅವರು ಮತ್ತೆ ರಾಜ್‌ಕುಮಾರ್ ಅವರ ಮೊರೆ ಹೋಗುತ್ತಾರೆ. ಅವರು ನಿರ್ಮಾಣದ ಕೆರಳಿದ ಸಿಂಹ ಸಿನಿಮಾಗೆ ಕಾಲ್‌ಶೀಟ್ ಕೊಡುತ್ತಾರೆ. ಆ ಸಿನಿಮಾವನ್ನು ಯಶಸ್ವಿಗೊಳಿಸುತ್ತಾರೆ. ಪಂಡರೀಬಾಯಿ ಅವರು ಆರ್ಥಿಕ ಸಂಕಷ್ಟದಿಂದ ಹೊರಬರುತ್ತಾರೆ" ಎಂದು ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಹೇಳಿದ್ದಾರೆ.


Click it and Unblock the Notifications











