ಒಂದು ವೇಳೆ 'H2o'ಗೆ ಪಾರ್ವತಮ್ಮ ರಾಜ್‌ಕುಮಾರ್ ಗ್ರೀನ್ ಸಿಗ್ನಲ್ ನೀಡಿದ್ದರೆ? ವಿವಾದಾತ್ಮಕ ಸಿನಿಮಾವನ್ನು ಹಾಡಿ ಹೊಗಳುತ್ತಿದ್ದರೇನೋ
ರಿಯಲ್ ಸ್ಟಾರ್ ಉಪೇಂದ್ರ, ಪ್ರಭುದೇವ ಹಾಗೂ ಪ್ರಿಯಾಂಕಾ ನಟಿಸಿದ 'H2o' ಭಾರತೀಯ ಚಿತ್ರರಂಗ ಕಂಡ ಅತ್ಯುತ್ತಮ ಸಿನಿಮಾ. ಇಂತಹದ್ದೊಂದು ಕಲ್ಪನೆಯನ್ನು ಇಟ್ಟುಕೊಂಡು ಸಿನಿಮಾ ಮಾಡುವುದಕ್ಕೆ ಉಪೇಂದ್ರ ಅವರಿಂದ ಮಾತ್ರ ಸಾಧ್ಯ. ವಿಚಿತ್ರ, ವಿಶಿಷ್ಟ ಕಲ್ಪನೆಯನ್ನು ಇಟ್ಟುಕೊಂಡು ಸಿನಿಮಾ ಮಾಡೋ ಉಪ್ಪಿಗೆ ಇದೊಂದು ಚಾಲೆಂಜಿಂಗ್ ಸ್ಕ್ರಿಪ್ಟ್ ಆಗಿತ್ತು. ಈಗ ಹೊಗಳಿ ಕೊಂಡಾಡುವ ಜನರು, ಸಿನಿಮಾ ರಿಲೀಸ್ ಆದಾಗ ವಿವಾದವನ್ನೇ ಸೃಷ್ಟಿಸಿದ್ದರು. 'H2o' ರಿಲೀಸ್ ಆಗುತ್ತೋ ಇಲ್ವೋ ಅನ್ನುವಷ್ಟು ವಿವಾದವನ್ನು ಹುಟ್ಟಾಕಿತ್ತು.
ಇತ್ತೀಚೆಗೆ ಉಪೇಂದ್ರ ಅವರೇ ಈ ಸಿನಿಮಾ ಬಗ್ಗೆ ಎದ್ದಿದ್ದ ವಿವಾದದ ಕುರಿತು ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಒಂದೊಳ್ಳೆ ಸಿನಿಮಾ ವಿವಾದದಲ್ಲಿ ಕಳೆದು ಹೋಗಿದ್ದು ವಿಪರ್ಯಾಸ ಆದರೂ, ಉಪ್ಪಿಯ ಆರಂಭಿಕ ಕಲ್ಪನೆಯೇ ನಿಜವಾಗಿದ್ದರೆ, 'H2o' ಕೇವಲ ಕನ್ನಡ ಚಿತ್ರರಂಗ ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗ ಎಂದಿಗೂ ಮರೆಯದ ಸಿನಿಮಾ ಆಗುತ್ತಿತ್ತು.

ಹೈದರಾಬಾದ್‌ನಲ್ಲಿ ಉಪೇಂದ್ರ ತೆಲುಗು ಸಿನಿಮಾ ಮಾಡುವಾಗ 'H2o' ಹೊಳೆದಿತ್ತು. ಆಗ ಅವರ ಮನಸ್ಸಿನಲ್ಲಿ ಇದ್ದಿದ್ದರು ಡಾ.ರಾಜ್‌ಕುಮಾರ್ ಹಾಗೂ ಸೂಪರ್‌ಸ್ಟಾರ್ ರಜನಿಕಾಂತ್. ಇಬ್ಬರೂ ಈ ಸಿನಿಮಾದಲ್ಲಿ ನಟಿಸಿದರೆ 'H2o' ಮಾಡಬಹುದು ಅಂತ ಲೆಕ್ಕಚಾರ ಹಾಕಿದ್ದರು. ಬೆಂಗಳೂರಿಗೆ ಬಂದವರೇ ನೇರವಾಗಿ ಪಾರ್ವತಮ್ಮ ರಾಜ್‌ಕುಮಾರ್ ಅವರನ್ನು ಭೇಟಿ ಮಾಡಿ ಕಥೆ ಹೇಳಿದ್ದರು. ಒಂದು ವೇಳೆ ಅಂದು ಪಾರ್ವತಮ್ಮ ರಾಜ್‌ಕುಮಾರ್ ಗಟ್ಟಿ ಮನಸ್ಸು ಮಾಡಿ ಗ್ರೀನ್ ಸಿಗ್ನಲ್ ಕೊಟ್ಟಿದ್ದರೆ.. ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತಹ ಸಿನಿಮಾ ಆಗುತ್ತಿತ್ತು.
ಪಾರ್ವತಮ್ಮ ನಕ್ಕಿದ್ದು ಏಕೆ?
ಇತ್ತೀಚೆಗೆ ಕಿರಿಕ್ ಕೀರ್ತಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಉಪೇಂದ್ರ ಭಾಗವಹಿಸಿದ್ದರು. ಈ ವೇಳೆ 'H2o' ಬಗ್ಗೆ ಇಂಟ್ರೆಸ್ಟಿಂಗ್ ವಿಷಯವನ್ನು ಹಂಚಿಕೊಂಡಿದ್ದಾರೆ. ಒಂದು ಐಡಿಯಾ ಸ್ಪಾರ್ಕ್ ಆದ ಕೂಡಲೇ ಡಾ.ರಾಜ್‌ಕುಮಾರ್ ಹಾಗೂ ರಜನಿಕಾಂತ್ ಹಾಕಿಕೊಂಡು ಸಿನಿಮಾ ಮಾಡಿದರೆ ಹೇಗೆ ಅಂತ ಅಂದುಕೊಂಡಿದ್ದರು. ಅದೇ ಜೋಷ್‌ನಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಬಳಿ ಬಂದು ಕಥೆಯನ್ನು ಹೇಳಿದ್ದರು. ಆಗ ಪಾರ್ವತಮ್ಮ ರಾಜ್‌ಕುಮಾರ್ ನಕ್ಕು ಸುಮ್ಮನಾಗಿದ್ದರಂತೆ. ಅದ್ಯಾಕೆ ಅನ್ನೋದನ್ನು ಸಂದರ್ಶನದಲ್ಲಿ ಉಪೇಂದ್ರ ರಿವೀಲ್ ಮಾಡಿದ್ದಾರೆ.
"ನಾನು ಮೊದಲ ಆಲೋಚನೆ ಮಾಡಿದ್ದು, ಅಣ್ಣಾವ್ರು, ರಜಿನಿ ಸರ್ ಹಾಗೂ ಹಾವೇರಿ ತಾಯಿ ಅಂತ. ಈ ಕಲ್ಪನೆ ಬರುತ್ತಿದ್ದಂತೆ ಆಂಧ್ರದಲ್ಲಿ ಎಲ್ಲೋ ಇದ್ದೆ. ಕೂಡಲೇ ಫ್ಲೈಟ್ ಹತ್ತಿಕೊಂಡು ಬಂದು ಬಿಟ್ಟೆ. ಆಗ ನನಗೆ ಪ್ರಾಕ್ಟಿಕಲ್ ಅನುಭವ ಇಲ್ಲ. ಎಗ್ಸೈಟ್ ಆಗುತ್ತಿದ್ದಂತೆ ಓಡಿ ಹೋಗುತ್ತಿದ್ದೆ. ಅವರು ದಿಗ್ಗಜರು ನಗು ಬಂದಿರುತ್ತೆ. ಪಾರ್ವತಮ್ಮ ಅವರಿಗೆ ಕಥೆ ಹೇಳಿದೆ. ಆಯ್ತಪ್ಪ ನೋಡೋ ಅಂದ್ರು ನಕ್ಕೊಂಡು" ಎಂದು ಉಪ್ಪಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಒಂದು ವೇಳೆ ಪಾರ್ವತಮ್ಮ ಒಪ್ಪಿದ್ದರೇ?
'H2o' ಸಿನಿಮಾ ಬಿಡುಗಡೆ ವೇಳೆ ವಿವಾದಕ್ಕೆ ಸಿಲುಕಿತ್ತು. ಕಾವೇರಿಗೆ ಸಂಬಂಧಿಸಿದ ಕತೆಯಾಗಿದ್ದರಿಂದ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಗೆ ಅಡ್ಡಿಯೊಡ್ಡಿದ್ದರು. ಆ ವೇಳೆ ಉಪೇಂದ್ರ ಆಸ್ಟ್ರೇಲಿಯಾದಲ್ಲಿ ಇದ್ದರು. ನಿರ್ಮಾಪಕರು ತಮಿಳು ಡೈಲಾಗ್ ತೆಗೆದು ಕನ್ನಡದಲ್ಲಿ ಡಬ್ ಮಾಡಿ ರಿಲೀಸ್ ಮಾಡಿದ್ದರು. ಈ ಸಿನಿಮಾ ಬಳಿಕ ಉಪ್ಪಿ ಮೇಲೆ ಕೆಲ ಸಂಘಟನೆಗಳು ಆಕ್ರೋಶವನ್ನು ಹೊರ ಹಾಕಿದ್ದವು.
ಅದೇ ಒಂದು ವೇಳೆ ರಾಜ್‌ಕುಮಾರ್ ಹಾಗೂ ರಜನಿಕಾಂತ್ ಇಬ್ಬರೂ ಒಪ್ಪಿ ಸಿನಿಮಾ ಆಗಿದ್ದರೆ ಇಂತಹ ವಿವಾದ ಆಗುತ್ತಿತ್ತಾ? ಅನ್ನೋ ಪ್ರಶ್ನೆ ಈಗ ಮೂಡುತ್ತೆ. ಒಂದು ವೇಳೆ ಅವರಿಬ್ಬರೂ ಒಂದೇ ಸಿನಿಮಾದಲ್ಲಿ ನಟಿಸಿದ್ದರೆ, ದಕ್ಷಿಣ ಭಾರತದಲ್ಲಿ ಈ ಸಿನಿಮಾ ಹೊಸ ಚರಿತ್ರೆಯನ್ನೇ ಸೃಷ್ಟಿಸುತ್ತಿತ್ತು ಅನ್ನೋದು ಮಾತ್ರ ನೂರಕ್ಕೆ ನೂರು ಸತ್ಯ. ಭಾರತೀಯ ಚಿತ್ರರಂಗದ ಅತ್ಯುತ್ತಮ ಸಿನಿಮಾಗಳಲ್ಲಿ ಟಾಪ್‌ನಲ್ಲಿ ಇರುತ್ತಿತ್ತೇನೋ..
ಆದರೆ, ಕಾವೇರಿ ಕುರಿತ ಸಿನಿಮಾ ಆಗಿದ್ದರಿಂದ ಸ್ವಲ್ಪವೇ ಯಡವಟ್ಟು ಆಗಿದ್ದರೂ ಇಬ್ಬರು ದಿಗ್ಗಜರೂ ವಿವಾದಕ್ಕೆ ಸಿಕ್ಕಿಕೊಳ್ಳಬೇಕಿತ್ತು. ಹೀಗಾಗಿ ಪಾರ್ವತಮ್ಮ ರಾಜ್‌ಕುಮಾರ್ ಅಂದು ನಕ್ಕು ಸುಮ್ಮನಾಗಿದ್ದರು. ಆದರೂ ಒಂದು ಪ್ರಯತ್ನ ಆಗಿದ್ದರೆ, 'H2o' ಭಾರತೀಯ ಚಿತ್ರರಂಗದಲ್ಲಿ ಎವರ್‌ಗ್ರೀನ್ ಸಿನಿಮಾ ಆಗಿ ಉಳಿದು ಬಿಡುತ್ತಿತ್ತು.


Click it and Unblock the Notifications
