'ಬಾಯ್‌ಕಾಟ್' ಗೆಲ್ಲುತ್ತೋ, ಕಂಟೆಂಟ್ ಮುಖ್ಯವೋ: ಇದರ ಮೇಲೆ ನಿಂತಿದೆ ಶಾರುಖ್ ಖಾನ್ ಭವಿಷ್ಯ
'ಬಾಯ್‌ಕಾಟ್' ಎನ್ನುವ ಪದಕ್ಕೆ ವಿಶೇಷ ಅರ್ಥವಿರಲಿಲ್ಲ ಮತ್ತು ಅದಕ್ಕೆಂದೇ ಆದಂತಹ ವ್ಯಾಖ್ಯಾನವೂ ಇರಲಿಲ್ಲ. ಯಾವಾಗ, ಬಾಲಿವುಡ್ ಜಗತ್ತಿನ ಪ್ರತಿಭಾನ್ವಿತ ಯುವನಟ ಸುಶಾಂತ್ ಸಿಂಗ್ ರಜಪೂತ್ ಅಕಾಲಿಕ ಸಾವು, ಬಾಲಿವುಡ್ ಚಿತ್ರಗಳಿಗೆ ಮಾತ್ರ ಸೀಮಿತವಾದಂತೆ 'ಬಾಯ್‌ಕಾಟ್' ಎನ್ನುವ ಪದ/ಅಭಿಯಾನ ಹುಟ್ಟಿಕೊಂಡಿತು. ಈ ಹಿಂದೆ ಕೆಲವು ಹಿಂದಿ ಸಿನಿಮಾಗಳು ಇದರ ಬಿಸಿಯನ್ನು ಎದುರಿಸಿದ್ದರೂ, ಸುಶಾಂತ್ ಸಾವಿನ ನಂತರ, ಇದರ ಕಾವು ಇನ್ನಷ್ಟು ಹೆಚ್ಚಾಯಿತು.
ತ್ರಿವಳಿ ಖಾನ್‌ಗಳು ಬಾಲಿವುಡ್ ಜಗತ್ತನ್ನು ಆಳುತ್ತಿದ್ದ ವೇಳೆ ಯುವ ಅಥವಾ ಹೊಸ ಮುಖಗಳಿಗೆ ಆಗುತ್ತಿದ್ದ ತೊಂದರೆಗಳು/ನೆಪೋಟಿಸಂ ಒಂದಾಂದಾಗಿಯೇ ಹೊರ ಬರಲಾರಂಭಿಸಿತು. ಇದರೆ ಜೊತೆಗೆ, ಚಿತ್ರಗಳಲ್ಲಿ ಹಿಂದೂ ಸಂಸ್ಕೃತಿ/ಪದ್ದತಿ/ಚರಿತ್ರೆಗಳನ್ನು ತಿರುಚಿದ ಆರೋಪವನ್ನು ಬಾಲಿವುಡ್ ಸಿನಿಮಾಗಳು ಎದುರಿಸಲಾರಂಭಿಸಿದ ನಂತರ 'ಬಾಯ್‌ಕಾಟ್' ಎನ್ನುವ ಪದಕ್ಕೆ ಹಿಂದಿ ಸಿನಿಮಾಗಳು ಬೆಚ್ಚಿಬಿದ್ದವು.
ಬಾಲಿವುಡ್ ಬಾಯ್ಕಟ್ ಎನ್ನುವ ಅಭಿಯಾನದಿಂದಾಗಿ ಸಾಕಷ್ಟು ನಷ್ಟ ಮಾಡಿಕೊಂಡವರು ಎಂದರೆ ಅದರಲ್ಲಿ ಮಂಚೂಣಿಯಲ್ಲಿ ಬರುವುದು ಆಮಿರ್ ಖಾನ್ ಅವರ ಲೇಟೆಸ್ಟ್ ಸಿನಿಮಾಗಳು. ಅದರಲ್ಲಿ ಪ್ರಮುಖವಾಗಿ 'ಥಗ್ಸ್ ಆಫ್ ಹಿಂದೂಸ್ಥಾನ್' ಮತ್ತು 'ಲಾಲ್ ಸಿಂಗ್ ಚಡ್ಡಾ' ಸಿನಿಮಾಗಳು ಇನ್ನಿಲ್ಲದಂತೆ ನೆಲಕಚ್ಚಿದವು. ಈ ಚಿತ್ರಗಳು ಪ್ರೇಕ್ಷಕರ ನಿರೀಕ್ಷೆಯಂತಿತ್ತೇ ಎನ್ನುವ ಪ್ರಶ್ನೆ ಬಂದಾಗ, ಚಿತ್ರತಂಡದಿಂದ ಕಾನ್ಫಿಡೆನ್ಸ್ ಉತ್ತರ ಬರದೇ ಇರುವುದು ಚಿತ್ರದಲ್ಲಿ ಕೊರತೆ ಇತ್ತು ಎಂದೇ ರುಜುವಾತಾಗಿ ಹೋಗಿತ್ತು.

ಈಗ ಶಾರುಖ್ ಖಾನ್ ಅಭಿನಯದ ಬಹು ನಿರೀಕ್ಷಿತ ಪಠಾಣ್ ಸಿನಿಮಾದ ಸರದಿ, ಜನವರಿ 25ರಂದು ಸಿನಿಮಾ ಬಿಡುಗಡೆಗೊಳ್ಲಲಿದೆ. ಸಿನಿಮಾದ ಬಾಕ್ಸಾಫೀಸ್ ಲೆಕ್ಕಾಚಾರದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಕೋಟಿ ಕೋಟಿ ವ್ಯವಹಾರ ಮಾಡಬಹುದು ಎನ್ನುವ ಮಾತು ಚಾಲ್ತಿಯಲ್ಲಿದೆ. ಇದರ ನಡುವೆ ಚಿತ್ರತಂಡಕ್ಕಿದ್ದ 'ಬಾಯ್‌ಕಾಟ್' ತಕ್ಕಮಟ್ಟಿಗೆ ಕರಗಿದಂತಿದೆ.
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿರುವ 'ಪಠಾಣ್' ಸಿನಿಮಾದ ಹಾಡೊಂದು ಬಿಡುಗಡೆಯಾದ ನಂತರ ಚಿತ್ರದ ನಾಯಕಿ, ಆಕೆ ತೊಟ್ಟ ಬಟ್ಟೆಯ ಸುತ್ತಾಮುತ್ತ ಧಾರ್ಮಿಕ ಆಯಾಮದಲ್ಲಿ ಆರಂಭವಾದ ಚರ್ಚೆಗಳಿಂದಾಗಿ 'ಬಾಯ್‌ಕಾಟ್' ಪಠಾಣ್ ಎನ್ನುವ ಟ್ರೆಂಡ್ ಆರಂಭವಾಯಿತು. ಬಲಪಂಥೀಯ ನಂಬಿಕೆಯವರು ಉದ್ದೇಶಪೂರ್ವಕವಾಗಿಯೇ ಟ್ರೆಂಡ್ ಆರಂಭಿಸಿದ್ದಾರೆ ಎಂದು ಎಡಪಂಥೀಯರು ವಾದ ಮಂಡಿಸಲಾರಂಭಿಸಿದ್ದರಿಂದ ಈ ವಿವಾದ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಾ ಸಾಗಿತು.
ಬಾಲಿವುಡ್ 'ಬಾಯ್‌ಕಾಟ್' ಜೊತೆಗೆ ಬಾಲಿವುಡ್ ಗಂಧಗಿ ಎನ್ನುವ ಹ್ಯಾಶ್ ಟ್ಯಾಗ್ ಕೂಡಾ ಟ್ರೆಂಡ್‌ನಲ್ಲಿ ಸಾಗಿದ್ದರಿಂದ, ಮತ್ತೊಂದು ಸೋಲು ಎದುರಾಗ ಬಹುದೇ ಎನ್ನುವ ಭೀತಿಯಿಂದ ಶಾರುಖ್ ಖಾನ್ ಕಂಗಾಲಾಗಿ ಹೋಗಿದ್ದರು. ಈ ಅಭಿಯಾನಕ್ಕೆ ನೇರವಾಗಿ ಬಿಜೆಪಿಯ ಕೆಲವು ನಾಯಕರು ಮತ್ತು ಬಲಪಂಥೀಯ ಸಂಘಟನೆಯವರು ಸಾಥ್ ನೀಡಿದ ನಂತರದ ದಿನಗಳಲ್ಲಿ ಪ್ರಧಾನಿ ಮೋದಿಯವರು ನೀಡಿದ ಹೇಳಿಕೆಯಿಂದಾಗಿ, 'ಪಠಾಣ್' ಸಿನಿಮಾದವರು ನಿಟ್ಟುಸಿರು ಬಿಡುವಂತಾಯಿತು.

ಚಿತ್ರದ ಬಗ್ಗೆ ಅನಗತ್ಯವಾದ ಹೇಳಿಕೆಯನ್ನು ನೀಡಬೇಡಿ ಎಂದು ಪ್ರಧಾನಿ ಮೋದಿ, ಬಿಜೆಪಿಯ ಕಾರ್ಯಕರ್ತರಿಗೆ ಸೂಚನೆ ನೀಡಿದ ನಂತರ, 'ಬಾಯ್‌ಕಾಟ್' ಪಠಾಣ್ ಅಭಿಯಾನ ತೆರೆಮೆರೆಯಲ್ಲಿ ಸಾಗಲು ಆರಂಭವಾಯಿತು. 'ಪಠಾಣ್' ಸಿನಿಮಾದ ಹೆಸರನ್ನು ಪ್ರಸ್ತಾವಿಸದೇ ಮೋದಿ ಸೂಚನೆಯನ್ನು ನೀಡಿದ್ದರು ಕೂಡಾ ಇದು ಪರೋಕ್ಷವಾಗಿ ಶಾರುಖ್ ಚಿತ್ರಕ್ಕೆ ಸಿಕ್ಕ ಬೂಸ್ಟರ್ ಇದಾಗಿತ್ತು. ಚಿತ್ರತಂಡ ಕೂಡಾ ಪ್ರಧಾನಿಯವರು ಧನ್ಯವಾದವನ್ನು ಸಲ್ಲಿಸಿತ್ತು. ಇದು ಮೋದಿಯವರು ಶಾರುಖ್ ಚಿತ್ರದ ಮೂಲಕ ಅಲ್ಪಸಂಖ್ಯಾತರ ಮನಗೆಲ್ಲುವ ಪ್ರಯತ್ನ ಎಂದೂ ವಿಶ್ಲೇಷಿಸಲಾಯಿತು.
ಬಾಲಿವುಡ್ ನವರು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿದ್ದದು, ಅಸ್ಸಾಂನ ಮುಖ್ಯಮಂತ್ರಿ ಹೇಮಂತ್ ಬಿಸ್ವಾಸ್ ಕೂಡಾ ಶಾರೂಖ್ ನನಗೆ ಕರೆ ಮಾಡಿದ್ದರು ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಕರೆನೀಡಿದ್ದರೂ ಚಿತ್ರತಂಡಕ್ಕೆ ಇನ್ನೂ ಪ್ರತಿಭಟನೆಯ/'ಬಾಯ್‌ಕಾಟ್'ನ ಬಿಸಿ ಕಮ್ಮಿಯಾಗಿಲ್ಲ. ಇನ್ನೇನು ಎರಡು ದಿನದಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಒಂದು ವೇಳೆ ವಿವಾದಕಾರಿ ಸನ್ನಿವೇಶಗಳಿದ್ದರೆ ಚಿತ್ರಕ್ಕೆ ಇನ್ನಷ್ಟು ತೊಂದರೆಯಾಗಬಹುದು.
ದಕ್ಷಿಣದ ಸಾಲುಸಾಲು ಸಿನಿಮಾಗಳ ಮುಂದೆ ಮಂಡಿಯೂರುತ್ತಿರುವ ಬಾಲಿವುಡ್ ಸಿನಿಮಾಗಳಲ್ಲಿ ಕಂಟೆಂಟ್ ಕೊರತೆ ಕಾಡುತ್ತಿದೆ ಎನ್ನುವುದು ಚಿತ್ರ ನೋಡಿ ಹೊರಬಂದವವರ ಮಾತು. ಚಿತ್ರದ ಚಿಲ್ಲರೆ ಪ್ರಚಾರಕ್ಕಾಗಿ ಬಾಲಿವುಡ್ ಮಂದಿ ಆಕ್ಷೇಪಾರ್ಹ ಸನ್ನಿವೇಶ/ಹಾಡನ್ನು ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಆಪಾದನೆಯೂ ಕೂಡಾ ಇದೆ. ಚಿತ್ರ ಗೆಲ್ಲಬೇಕಾದರೆ ಬಲವಾದ ಕಂಟೆಂಟ್ ಮತ್ತು ನಿರೂಪಣೆ ಮುಖ್ಯ ಎನ್ನುವುದು ವೃತ್ತಿವರರ ಮಾತು. ಹಾಗಾಗಿ, 'ಬಾಯ್‌ಕಾಟ್' ಅಭಿಯಾನ ನಡೆದರೂ, ಕಂಟೆಂಟ್ ಕಿಂಗ್ ಎನ್ನುವುದೇ ಆದರೆ, ಅದರ ಮೇಲೆ ನಿಂತಿದೆ 'ಪಠಾಣ್' ಭವಿಷ್ಯ, ಶಾರೂಖ್ ಖಾನ್ ಸೋಲು, ಗೆಲುವು.


Click it and Unblock the Notifications











