"ಸಿನಿಮಾ ತಾರೆಯರ ಸೌಂದರ್ಯ ಸಾಬೂನು.. ಲಕ್ಸ್": ಜಯಂತಿಯನ್ನೂ ಜಯಿಸಿದ್ದ ಈ ಸಾಬೂನು.. ಕಥೆಯೇನು?
ಸಿನಿಮಾ ಸ್ಟಾರ್‌ಗಳು ಕೇವಲ ಸಿನಿಮಾದಿಂದಷ್ಟೇ ದುಡಿಯುವುದಿಲ್ಲ. ಅವರಿಗೆ ಹಣ ತಂದು ಕೊಡುವ ಮತ್ತೊಂದು ಕ್ಷೇತ್ರ ಜಾಹೀರಾತು. ಈಗಂತೂ ಜಾಹೀರಾತು ಕಂಪನಿಗಳು ಚಾಲ್ತಿಯಲ್ಲಿರೋ ನಟಿಯರಿಗೆ, ನಟರಿಗೆ ಕೋಟಿ ಕೋಟಿ ಕೊಟ್ಟು ಬ್ರ್ಯಾಂಡ್ ಅಂಬಾಸಿಡರ್ ಅಂತ ಮಾಡಿಕೊಳ್ಳುತ್ತಿವೆ.
ಸೂಪರ್‌ಸ್ಟಾರ್‌ಗಳು, ಬಹುಬೇಡಿಕೆಯ ನಟಿಯರು ಪ್ರತಿ ವರ್ಷ ಕಟ್ಟುವ ತೆರಿಗೆಯಲ್ಲಿ ಜಾಹೀರಾತಿನಿಂದ ಬಂದ ಪಾಲೂ ದೊಡ್ಡದಿರುತ್ತೆ. ಇನ್ನು ಕೆಲವರಿಗೆ ದೊಡ್ಡ ದೊಡ್ಡ ಬ್ರ್ಯಾಂಡ್‌ಗಳಲ್ಲಿ ಕಾಣಿಸಿಕೊಳ್ಳುವುದು ಪ್ರತಿಷ್ಠೆ. ಅಲ್ಲದೆ, ಹಣನ್ನೂ ಚೆನ್ನಾಗಿಯೇ ಸಿಗುತ್ತೆ. ಇಂತಹ ಬ್ರ್ಯಾಂಡ್‌ಗಳಲ್ಲೊಂದು 'ಲಕ್ಸ್' ಸಾಬೂನು.

'ಲಕ್ಸ್' ಸಾಬೂನಿಗೂ ಸಿನಿಮಾ ತಾರೆಯರಿಗೂ ಒಂದು ಒಂದು ನಂಟಿದೆ. ಈ ಸೋಪಿನ ಜಾಹೀರಾತು ಕೊಡುತ್ತಿದ್ದದ್ದೇ " ಫಿಲ್ಮಿ ಸಿತಾರೋಂಕಾ ಸೌಂದರ್ಯ ಸಾಬೂನ್" ಅಂದ್ರೆ, ಸಿನಿಮಾ ತಾರೆಯರು ಬಳಸುವ ಸೌಂದರ್ಯ ಸಾಬೂನು ಎಂದರ್ಥ. ಇಂತಹ ಶೀರ್ಷಿಕೆಯಿಂದಲೇ ಸಾಮಾನ್ಯರನ್ನು ಸೆಳೆಯುತ್ತಿದ್ದ ಬ್ರ್ಯಾಂಡ್‌ಗೆ ಬಾಲಿವುಡ್ ನಟಿಯರೇ ಹೆಚ್ಚಾಗಿ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಹಾಗೇ ನಮ್ಮ ಕನ್ನಡದ ನಟಿ ಜಯಂತಿ ಕೂಡ ರಾಯಬಾರಿ ಆಗಿದ್ದರು ಅನ್ನೋದೇ ವಿಶೇಷ.
"ಜಯಂತಿಯ ಜಯಿಸುವ ಗುಣಗಳು"
ಹೌದು.. ಲಕ್ಸ್ ಅಂತ ಬ್ರ್ಯಾಂಡ್‌ಗೆ ಜಯಂತಿ ಕೂಡ ರಾಯಬಾರಿ ಆಗಿದ್ದರು. 1909ರಲ್ಲಿ ಮೊದಲ ಜಾಹೀರಾತು ನೀಡಿದ್ದರು. ಅಂದಿನಿಂದಲೇ ಈ ಸೋಪಿನ ಜಾಹೀರಾತುಗಳಲ್ಲಿ ನಟಿಯರು ಕಾಣಿಸಿಕೊಂಡಿದ್ದಾರೆ. ಬಹುತೇಕ ಬಾಲಿವುಡ್ ನಟಿಯನ್ನೇ ತಮ್ಮ ರಾಯಬಾರಿ ಆಯ್ಕೆ ಮಾಡಿಕೊಂಡಿದ್ದ ಸಾಬೂನಿನ ಜಾಹೀರಾತಿನಲ್ಲಿ ಜಯಂತಿ ಕೂಡ ಕಾಣಿಸಿಕೊಂಡಿದ್ದರು. ಆ ಪೋಸ್ಟರ್ ಇಂದಿಗೂ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತವೆ.

ಕನ್ನಡದ ನಟಿ ಜಯಂತಿ 70-80ರ ದಶಕದಲ್ಲಿ ದಕ್ಷಿಣ ಭಾರತದಲ್ಲಿ ಬ್ಯುಸಿಯಾಗಿದ್ದ ನಟಿ. ಅದರಲ್ಲೂ ಕನ್ನಡದಲ್ಲಿ ಒಂದರ ಹಿಂದೊಂದು ಸಿನಿಮಾ ನಟಿಸಿ ಜನಪ್ರಿಯರಾಗಿದ್ದರು. ಹೀಗಾಗಿ ಹಿಂದೂಸ್ಥಾನ್ ಲಿವರ್ ಸಂಸ್ಥೆ ಕನ್ನಡದ ಮಾರುಕಟ್ಟೆಯನ್ನು ಸೆಳೆಯುವುದಕ್ಕೆ ಜಯಂತಿಯವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿಕೊಂಡಿತ್ತು. "ಜಯಂತಿಯ ಜಯಿಸುವ ಗುಣಗಳು" ಅಂತ ಶೀರ್ಷಿಕೆ ಬೇರೆ ಕೊಟ್ಟಿತ್ತು.
ಜಾಹೀರಾತಿನಲ್ಲಿ ಜಯಂತಿ ಸಹಿ
ಜಾಹೀರಾತು ಅಂದರೇನು ಬಣ್ಣದ ಬಣ್ಣದ ಮಾತುಗಳು ಇರುತ್ತವೆ. ಜನರನ್ನು ಸೆಳೆಯುವುದಕ್ಕೆ ಬೇಕಾಗಿರೋ ಪದಪುಂಜಗಳು ಹೇರಳವಾಗಿರುತ್ತೆ. ಕೆಲವೊಮ್ಮೆ ಇದು ಅತೀ ಎನಿಸಲೂಬಹುದು. ಇಲ್ಲಾ ಇಷ್ಟನೂ ಆಗಬಹುದು. ಅದು ಆಯಾ ವ್ಯಕ್ತಿಗೆ ಸಂಬಂಧಿಸಿದ್ದು. ಇನ್ನು ಜಯಂತಿ ಸೌಂದರ್ಯವನ್ನಿಟ್ಟುಕೊಂಡು ಲಕ್ಸ್ ಸಾಬೂನು ಕೊಟ್ಟ ಜಾಹೀರಾತು ಹೀಗಿತ್ತು.
"ಉತ್ತಮ ಅಭಿನಯದಿಂದ ಪ್ರೇಕ್ಷಕರು ಕಣ್ಣೀರು ತರಿಸುವಂತೆ ಮಾಡುತ್ತಾಳೆ. ತನ್ನ ಮಗನಿಗೆ ಆದರ್ಶ ತಾಯಿಯಾಗಿದ್ದಾಳೆ. ಬಿಸಿ ಬೇಳೆ ಹುಳಿ ಅನ್ನ ತಯಾರಿಸುವುದರಲ್ಲಿ ಎತ್ತಿದ ಕೈ.. ಲಕ್ಸ್ ಅಂದರೆ ಅಚ್ಚುಮೆಚ್ಚು.. ನನ್ನ ಮೈಕಾಂತಿಯನ್ನು ಕೋಮಲ ಹಾಗೂ ಸುಂದರವಾಗಿಡುವುದಕ್ಕೆ ನನಗೆ ಲಕ್ಸ್ ಬೇಕು" ಎನ್ನುತ್ತಾಳೆ ಜಯಂತಿ" ಎಂದು ಆಕೆಯ ಸಹಿಯೊಂದಿಗೆ ಲಕ್ಸ್ ಜಾಹೀರಾತು ನೀಡಿತ್ತು. ಇದೇ ಜಾಹೀರಾತಿನ ಫೋಟೊ ಈಗ ವೈರಲ್ ಆಗುತ್ತಿದೆ.
'ಲಕ್ಸ್' ಜಾಹೀರಾತಿನಲ್ಲಿ ಕಂಡ ಮೊದಲ ನಟಿ?
ಲಿವರ್ ಬದ್ರರ್ಸ್ 1909ರಲ್ಲಿ 'ಲಕ್ಸ್' ಅನ್ನು ಲಾಂಚ್ ಮಾಡಿದ್ದರು. ಈ ಸೋಪಿಗೆ ಮೊದಲ ಬಾರಿಗೆ ರಾಯಬಾರಿ ಆಗಿದ್ದವರು ಲೀಲಾ ಚಿಟ್ನಿಸ್. ಈಕೆ ಈ ಜಾಹೀರಾತಿನಲ್ಲಿ ಕಂಡ ಭಾರತದ ಮೊದಲ ನಾಯಕಿ. ಈ ಬ್ರ್ಯಾಂಡ್ ಬೆಳೆಯುತ್ತಿದ್ದಂತೆ ಬಾಲಿವುಡ್ ನಟಿಯನ್ನು ಕರೆತಂಡ ಜಾಹೀರಾತು ನೀಡಲು ಆರಂಭಿಸಿದ್ದರು. ಬಳಿಕ ಬಾಲಿವುಡ್ ಹಾಗೂ ದಕ್ಷಿಣ ಭಾರತದ ಹೀರೊಯಿನ್‌ಗಳಿಗೆ ಇದೂ ಒಂದು ಆದಾಯದ ಭಾಗವಾಯಿತು.
ಇದೂವರೆಗೂ ಐಶ್ವರ್ಯಾ ರೈ, ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್, ಆಸಿನ್, ಶ್ರಿಯಾ ಸರಣ್, ಕರೀನಾ ಕಪೂರ್ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ. ಸದ್ಯ ರಕುಲ್ ಪ್ರೀತ್ ಸಿಂಗ್ ಈ ಬ್ರ್ಯಾಂಡ್‌ನ ರಾಯಬಾರಿ. ಇಷ್ಟೇ ಅಲ್ಲದೆ ಶಾರುಖ್ ಖಾನ್ ಹಾಗೂ ಅಭಿಷೇಕ್ ಕೂಡ ಲಕ್ಸ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.


Click it and Unblock the Notifications











