ಕನ್ನಡತಿಯಾದರು ಜರ್ಮನಿಯ ಈ ಯುವತಿ: ಟಿಕ್‌ಟಾಕ್‌ನಲ್ಲಿಯೂ ಸ್ಟಾರ್ ಈಕೆ
ವಿದೇಶದಿಂದ ಬಂದವರು ಇಲ್ಲಿನ ಸಂಸ್ಕೃತಿ, ಆಹಾರ, ಸಂಪ್ರದಾಯಗಳನ್ನು ಮೆಚ್ಚಿಕೊಂಡು ಪಾಲಿಸುವುದು ಹೊಸದೇನಲ್ಲ. ಹೀಗೆ ಬಂದವರು ಭಾರತೀಯ ಸಂಸ್ಕೃತಿಯನ್ನು ಒಪ್ಪಿಕೊಳ್ಳುವುದಲ್ಲದೆ, ಇಲ್ಲಿನ ಭಾಷೆಯನ್ನೂ ಕಲಿಯುವ ಪ್ರಯತ್ನ ಮಾಡುತ್ತಾರೆ. ಕನ್ನಡಿಗರೇ ಕನ್ನಡ ಮಾತನಾಡುವುದಿಲ್ಲ, ಇನ್ನು ರಾಜ್ಯಕ್ಕೆ ಉದ್ಯೋಗಕ್ಕಾಗಿ ಬಂದ ಪರಭಾಷಿಕರು ಕನ್ನಡ ಕಲಿಯುತ್ತಾರೆಯೇ? ಈ ಪ್ರಶ್ನೆ ಭಾಷಾ ಪ್ರೇಮಿಗಳನ್ನು ಕಾಡುತ್ತಲೇ ಇರುತ್ತದೆ.
Recommended Video
ವಿದೇಶದಿಂದ ಬಂದ ಯುವತಿಯೊಬ್ಬರು, ಸ್ವಯಂ ಕಾರ್ಯಕರ್ತೆಯಾಗಿ ಶಾಲೆಯಲ್ಲಿ ಶಿಕ್ಷಕಿ ಕೆಲಸ ಮಾಡುತ್ತಿದ್ದಾರೆ. ಈಕೆ ಭಾರತವನ್ನು ಅರಿತುಕೊಳ್ಳುತ್ತಿದ್ದಾರೆ. ಹಿಂದಿ, ಕನ್ನಡ ಭಾಷೆಗಳನ್ನು ಕಲಿಯುತ್ತಿದ್ದಾರೆ. ಭಾರತೀಯ ನೃತ್ಯ ಪ್ರಾಕಾರಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಟಿಕ್ ಟಾಕ್‌ನಲ್ಲಿಯೂ ಸ್ಟಾರ್ ಆಗಿರುವ ಅವರು ಪಕ್ಕಾ ಮೈಸೂರು ಶೈಲಿಯಲ್ಲಿ ಕನ್ನಡ ಮಾತಾಡುವ ಪ್ರಯತ್ನದ ವಿಡಿಯೋಗಳನ್ನು ಮಾಡಿದ್ದಾರೆ. ಮುಂದೆ ಓದಿ...

ಮೈಸೂರಿನಲ್ಲಿ ಶಿಕ್ಷಕಿ ಕೆಲಸ
ಜರ್ಮನಿಯ ಜೆನಿಫರ್ ಕೋನಿಗ್ಸ್‌ಬರ್ಗರ್ ಎಂಬ ಮಹಿಳೆ ಪ್ರಸ್ತುತ ಮೈಸೂರಿನ ಶಾಲೆಯೊಂದರಲ್ಲಿ ಸ್ವಯಂ ಸೇವಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಮೈಸೂರು ಮತ್ತು ಕರ್ನಾಟಕದ ಬಗ್ಗೆ, ಇಲ್ಲಿನ ಭಾಷೆಯನ್ನು ತಿಳಿಯುವ ಪ್ರಯತ್ನ ಮಾಡುತ್ತಿದ್ದಾರೆ.

ಬಾಲಿವುಡ್ ಹಾಡುಗಳಿಗೆ ಡ್ಯಾನ್ಸ್
ಜೆನಿಫರ್ ಮತ್ತು ಅವರ ಸ್ನೇಹಿತೆ ಲೊಟಾಯಾ ಬಾಲಿವುಡ್‌ನ ಹಳೆಯ ಮತ್ತು ಹೊಸ ಹಾಡುಗಳಿಗೆ ಭಾರತೀಯ ಶೈಲಿಯಲ್ಲಿಯೇ ನರ್ತಿಸುವ ವಿಡಿಯೋವೊಂದು ವೈರಲ್ ಆಗಿತ್ತು. ಅದೇ ರೀತಿ ಟಿಕ್ ಟಾಕ್‌ನಲ್ಲಿ ಅವರು ಅನೇಕ ಬಾಲಿವುಡ್ ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತೀಯ ಸಂಪ್ರದಾಯವನ್ನು ಬಹಳ ಮೆಚ್ಚಿಕೊಂಡಿರುವ ಅವರು, ಸೀರೆ ಉಟ್ಟು ಫೋಟೊಗಳನ್ನು ತೆಗೆಸಿಕೊಂಡು ಸಂಭ್ರಮಿಸಿದ್ದಾರೆ.
ಅವರಿಗೆ ಸನ್ಮಾನ ಮಾಡಬೇಕು
ಜೆನಿಫರ್ ಅವರ ಟಿಕ್ ಟಾಕ್ ವಿಡಿಯೋಗಳು ಸಕತ್ ಜನಪ್ರಿಯವಾಗುತ್ತಿವೆ. ಅನೇಕ ಮಂದಿ ಅವರ ವಿಡಿಯೋಗಳನ್ನು ಹಂಚಿಕೊಂಡು, 'ನಮ್ಮ ಬೆಂಗಳೂರಿನಲ್ಲಿ ಶೋಕಿಗೆ ಇಂಗ್ಲಿಷ್ ಮಾತನಾಡುತ್ತಾರೆ. ಅಕ್ಕನ ಹೇಗಾದರೂ ಮಾಡಿ ಹಿಡಿದುಕೊಂಡು ಬಂದು ಸನ್ಮಾನ ಮಾಡಿ ಕಳಿಸಬೇಕಲ್ಲವಾ?' ಎಂದು ಹೇಳಿದ್ದಾರೆ.

ಇಂಗ್ಲಿಷ್, ಗಣಿತ ಹೇಳಿಕೊಡುತ್ತಿದ್ದಾರೆ
ಜೆನಿಫರ್ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸಲು ಭಾರತಕ್ಕೆ ಬಂದಿದ್ದಾರೆ. ಅವರ ಸಂಸ್ಥೆ ಅವರನ್ನು ಮೈಸೂರಿಗೆ ನಿಯೋಜನೆ ಮಾಡಿದೆ. ಅಲ್ಲಿ ಶಾಲೆಯಲ್ಲಿ ಇಂಗ್ಲಿಷ್, ಗಣಿತ, ಕ್ರಾಫ್ಟಿಂಗ್ ಮುಂತಾದವುಗಳಲ್ಲಿ ಕಲಿಸುತ್ತಿದ್ದಾರೆ. ಜತೆಗೆ ಅನಾಥ ಪ್ರಾಣಿಗಳ ಆರೈಕೆ, ವಿಶೇಷ ಮಕ್ಕಳ ಕಾಳಜಿ ಮಾಡುತ್ತಿದ್ದಾರೆ.

ಮೈಸೂರಿನ ಬಗ್ಗೆ ಪ್ರೀತಿ
ಅವರ ಫೇಸ್‌ಬುಕ್ ಮತ್ತು ಟಿಕ್ ಟಾಕ್ ಪ್ರೊಫೈಲ್‌ಗಳನ್ನು ನೋಡಿದರೆ ಅವರು ಭಾರತ ಮತ್ತು ಮೈಸೂರಿನ ಬಗ್ಗೆ ಎಷ್ಟು ಪ್ರೀತಿ ಇರಿಸಿಕೊಂಡಿದ್ದಾರೆ ಎನ್ನುವುದು ಅರಿವಾಗುತ್ತದೆ. ಕನ್ನಡ ಕೆಲವು ಪದಗಳನ್ನು ಮಾತನಾಡುತ್ತೇನೆ. ಅದರ ವ್ಯಾಕರಣ ಗೊತ್ತಿಲ್ಲ ಎನ್ನುವ ಅವರು, ಕನ್ನಡದಲ್ಲಿಯೇ ಮಾತನಾಡುತ್ತಾ ಅನೇಕ ಟಿಕ್ ಟಾಕ್ ವಿಡಿಯೋಗಳನ್ನು ಮಾಡಿದ್ದಾರೆ.

ಕನ್ನಡ ಕಲಿಯುತ್ತಿದ್ದಾರೆ
ಅವರ ಬಹುತೇಕ ವಿಡಿಯೋಗಳು ಟಿಕ್ ಟಾಕ್‌ನ ಇತರೆ ಫಾಲೋವರ್‌ಗಳಂತಿಲ್ಲ. ಅವರಲ್ಲಿ ಕಲಿಕೆಯ ಹುಮ್ಮಸ್ಸು ಕಾಣಿಸುತ್ತದೆ. ತಮ್ಮ ಕಲಿಕೆಯನ್ನು ತಮಾಷೆ ಮಾಡಿಕೊಳ್ಳುತ್ತಲೇ ಕನ್ನಡಿಗರ ಹೃದಯಕ್ಕೆ ಹತ್ತಿರವಾಗುತ್ತಿದ್ದಾರೆ. ನಮ್ಮ ನಾಡಗೀತೆ 'ಭಾರತ ಜನನಿಯ ತನುಜಾತೆ'ಯನ್ನೂ ಹಾಡಿ ಮನಗೆದ್ದಿದ್ದಾರೆ. ಕೆಲವು ದಿನಗಳಲ್ಲಿ ಸ್ಪಷ್ಟ ಕನ್ನಡ ಮಾತನಾಡುವುದನ್ನು ಕಲಿತರೆ ಅಚ್ಚರಿಯೂ ಇಲ್ಲ.


Click it and Unblock the Notifications











