"ಝೆರಾಕ್ಸ್ ಕಾಪಿ ಯಾಕೆ ಬೇಕು?" ಅಂತಿದ್ದ ಜೋ ಸೈಮನ್ ಒಂದೇ ಒಂದು ಸಿನಿಮಾ ರಿಮೇಕ್ ಮಾಡಿದ್ದೇಕೆ?
ವಿಷ್ಣುವರ್ಧನ್ ಹಾಗೂ ಜೋ ಸೈಮನ್ ಕಾಂಬಿನೇಷನ್ ಸಾಕಷ್ಟು ಯಶಸ್ವಿ ಸಿನಿಮಾಗಳನ್ನು ಕೊಟ್ಟಿವೆ. ಇವರಿಬ್ಬರ ಜೋಡಿ ಆಕ್ಷನ್ ಪ್ರಿಯನ್ನು ರಂಜಿಸಿದ್ದೇ ಹೆಚ್ಚು. ವಿಷ್ಣುದಾದಗೆ ಸಾಹಸ ಸಿಂಹ ಅಂತಹ ಬಿರುದು ತಂದುಕೊಟ್ಟಿದ್ದು ಕೂಡ ಇವರ ನಿರ್ದೇಶನದ ಸಿನಿಮಾದಿಂದಲೇ. ಆದರೆ, ಈ ಜೋಡಿ ಒಟ್ಟಿಗೆ ಸೇರಿ ಸಿನಿಮಾ ಮಾಡಿದರೆ, ಒಂದು ಗುಂಪು ಇವರ ಮೇಲೆ ಪ್ರಹಾರ ಮಾಡುವುದಕ್ಕೆ ಬರುತ್ತಿತ್ತು. ಹೀಗಾಗಿ ವಿಷ್ಣುದಾದ ಹಾಗೂ ಜೋ ಸೈಮನ್ ಇನ್ಮುಂದೆ ಒಟ್ಟಿಗೆ ಸಿನಿಮಾ ಮಾಡೋದೇ ಬೇಡ ಅಂತ ನಿರ್ಧರಿಸಿದ್ದರು. ಆದರೆ, 9 ವರ್ಷಗಳ ಬಳಿಕ ಮತ್ತೆ ಒಂದಾದರು.
ನಿರ್ಮಾಪಕ ಹಾಗೂ ಮಾಜಿ ಸಚಿವ ಎಸ್.ರಮೇಶ್ ಅವರು ಕರೆದು ಜೋ ಸೈಮನ್‌ಗೆ ಸಿನಿಮಾ ಮಾಡಬೇಕು ಅಂತ ಹೇಳಿದರು. ಆಗ ಅವರು ಮಿನಿಸ್ಟರ್ ಆಗಿದ್ದರು. ಆಗ ಜೋ ಸೈಮನ್ ಇಬ್ಬರೂ ಮಾತಾಡಿಕೊಂಡು ಸಿನಿಮಾ ಮಾಡೋದಿಲ್ಲ ಅನ್ನೋ ನಿರ್ಧಾರ ಮಾಡಿದ್ದೀವಿ. ತುಂಬಾನೇ ಗಲಾಟೆಗಳು ಆಗಿವೆ ಅಂತ ಹೇಳಿದರು. ಆದರೆ ರಮೇಶ್ ಅವರು ಬಿಡಲಿಲ್ಲ. ರಮೇಶ್ ಅವರು "ನಾನು ಎಲ್ಲಾ ಕೇಳಿದ್ದೀನಿ, ನೋಡಿದ್ದೀನಿ. ನಾನೊಬ್ಬ ಮಿನಿಸ್ಟರ್. ಅದು ಏನಾಗುತ್ತೋ ನಾನು ನೋಡ್ತೀನಿ" ಅಂತ ಹೇಳಿ ಸಿನಿಮಾ ಮಾಡಲು ಒತ್ತಡ ಹಾಕಿದ್ದರು.

ಈ ಸಂಭಾಷಣೆ ನಡೆಯುವ ವೇಳೆ ವಿಷ್ಣುವರ್ಧನ್ ಮುಂಬೈನಲ್ಲಿ ಇದ್ದರು. ಕೂಡಲೇ ರಮೇಶ್ ಸೀದಾ ವಿಷ್ಣುದಾದಗೆ ಫೋನ್ ಹಾಕಿದ್ದರು. ಆಗಲೂ ವಿಷ್ಣುವರ್ಧನ್ ಬೇಡ ಅಂತಾನೇ ಅಂದಿದ್ರಂತೆ. ಇತ್ತರ ರಮೇಶ್, ಜೋ ಸೈಮನ್‌ಗೆ ಮಾತಾಡಿ ಅಂತ ಪಟ್ಟು ಹಿಡಿದಿದ್ದರಂತೆ. ವಿಷ್ಣುದಾದಗೆ ಫೋನ್ ಮಾಡಿದಾಗ "ಬೇಡ ಜೋ 9 ವರ್ಷ ಆಗಿದೆ, ಬಿಟ್ಬಿಡಿ.. ಹೀಗೆ ಇರೋಣ" ಅಂದಿದ್ದರಂತೆ. ಆದರೆ, ರಮೇಶ್ ಅವರು ಕೇಳಲೇ ಇಲ್ಲ. ಹೀಗಾಗಿ ವಿಷ್ಣುದಾದ ವಿಧಿಯಿಲ್ಲದೆ ಈ ಸಿನಿಮಾದಿಂದ ತಪ್ಪಿಸಿಕೊಳ್ಳುವುದಕ್ಕೆ ಸಂಭಾವನೆ ಹೆಚ್ಚಿಗೆ ಹೇಳಿದ್ದರಂತೆ.
ನಿರ್ಮಾಪಕ ರಮೇಶ್ ಅದಕ್ಕೂ ಓಕೆ ಅಂದು ಅಡ್ವಾನ್ಸ್ ಕೂಡ ಮಾಡಿಬಿಟ್ಟರು. ನಾನೊಬ್ಬ ಮಿನಿಸ್ಟರ್ ಆಗಿ ಎಲ್ಲಾ ನೋಡಿಕೊಳ್ಳುತ್ತೇನೆ ಅಂದಾಗ ಬಲವಂತವಾಗಿ ವಿಷ್ಣುದಾದ ಒಪ್ಪಿಕೊಂಡರು. ಹೀಗೆ ಶುರುವಾಗಿದ್ದು 'ರವಿವರ್ಮ'. ಆದರೆ, ಅದು ರಿಮೇಕ್ ಸಿನಿಮಾ ಆಗಿತ್ತು. ತಮಿಳಿನಲ್ಲಿ 1991ರಲ್ಲಿ ತೆರೆ ಕಂಡಿದ್ದ 'ಬ್ರಹ್ಮ' ಸಿನಿಮಾ ರಿಮೇಕ್. ಜೋ ಸೈಮನ್ ತಮ್ಮ ವೃತ್ತಿ ಬದುಕಿನಲ್ಲೇ ನಿರ್ದೇಶಿಸಿದ ಏಕೈಕ ರಿಮೇಕ್ ಸಿನಿಮಾವಿದು. ಅದ್ಯಾಕೆ ರಿಮೇಕ್ ಸಿನಿಮಾ ಮಾಡಿದೆ ಅನ್ನೋದನ್ನು ಗೌರೀಶ್ ಅಕ್ಕಿ ಸ್ಡುಡಿಯೋಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
"ಎಷ್ಟೋ ರಿಮೇಕ್ ಸಿನಿಮಾಗಳು ಬಂತು ನಾನು ಒಂದೂ ಸಹ ರೀಮೇಕ್ ಮಾಡಲಿಲ್ಲ. ಈ ಸಿನಿಮಾ ಯಾಕೆ ಮಾಡಿದೆ ಅಂದರೆ, ವಿಷ್ಣು ಜೊತೆ ಸೇರುತ್ತಿದ್ದೇನಲ್ಲ ಅಂತ ಮಾಡಿದೆ. ರಮೇಶ್ ಅವರು ಈ ಸಿನಿಮಾ ರಿಮೇಕ್ ರೈಟ್ಸ್ ಅನ್ನು ಖರೀದಿ ಮಾಡಿಟ್ಟುಕೊಂಡಿದ್ದರು. ಅದಕ್ಕೆ ಒಂದೇ ಒಂದು ಸಿನಿಮಾ ನಾನು ರಿಮೇಕ್ ಮಾಡಿದೆ. ಎಷ್ಟು ಆಫರ್‌ಗಳು ಬಂದರೂ ನಾನು ಮಾಡಲಿಲ್ಲ. ನನಗೆ ನನ್ನದೇ ಕಾಪಿ ಬೇಕು.. ಝೆರಾಕ್ಸ್ ಕಾಪಿ ಯಾಕೆ ಬೇಕು? ಅನ್ನೋ ದಾಟಿ" ಎಂದು ನಿರ್ದೇಶಕ ಜೋ ಸೈಮನ್ ಹೇಳಿದ್ದರು.

ಜೋ ಸೈಮನ್ ಹಾಗೂ ವಿಷ್ಣುವರ್ಧನ್ ಸಿನಿಮಾದ ಡೈಲಾಗೋ, ಹಾಡೋ ಏನಾದರೂ ಒಂದು ಒಂದು ಗುಂಪಿನ ಆಕ್ರೋಶಕ್ಕೆ ಕಾರಣವಾಗುತ್ತಿತ್ತು. 'ರವಿವರ್ಮ'ದಲ್ಲೂ ಇಂತಹದ್ದೇ ಒಂದು ಹಾಡಿತ್ತು. "ರವಿವರ್ಮಾ ಸಿನಿಮಾದಲ್ಲಿ ಒಂದು ಹಾಡಿತ್ತು. ನಾನೇ ಬೇರೆ ನನ್ನ ಸ್ಟೈಲೇ ಬೇರೆ ಅಂತಿತ್ತು. ಈ ಹಾಡು ಹಾಕಿದಾಗ ವಿಷ್ಣುವರ್ಧನ್, ಜೋ ಯಾಕೆ ಇಂತಹ ಸಾಂಗ್ ಹಾಕ್ತೀಯಾ. ನಾನು ಬೈಸಿಕೊಳ್ಳೋದು. ನೀನು ಬೈಸಿಕೊಳ್ಳೋದು. ಬೇಕಾ ಇದೆಲ್ಲ ಅಂದಿದ್ರು" ಎಂದು ಜೋ ಸೈಮನ್ ಆ ಸಂಭಾಷಣೆಯನ್ನು ನೆನಪಿಸಿಕೊಂಡಿದ್ದರು.
ಇಂತಹದ್ದೇ ಇನ್ನೊಂದು ಘಟನೆಯನ್ನು ನೆನೆದಿದ್ದರು. "ಸಿಡಿದೆದ್ದ ಸಹೋದರರಲ್ಲಿ ಒಂದು ಹಾಡಿತ್ತು. ನನ್ನ ಸಮ ಯಾರಿಲ್ಲ. ನಂಗೆ ಯಾರ ಹಂಗಿಲ್ಲ ಅನ್ನೋ ಹಾಡಿತ್ತು. ಈ ಸಿನಿಮಾ ರಿಲೀಸ್ ಆದ್ಮೇಲೆ ಪ್ಯಾಲೇಸ್‌ನಲ್ಲಿ ಅಂಬರೀಶ್‌ದು ಒಂದು ಸಿನಿಮಾ ಶೂಟಿಂಗ್ ಮಾಡುತ್ತಿದ್ದೆ. ಇಡೀ ಗುಂಪು ಬಂತು. ಗಲಾಟೆ ಮಾಡುವುದಕ್ಕೆ ಶುರು ಮಾಡಿತ್ತು.. ನನ್ನ ಸಮ ಯಾರಿಲ್ಲ.. ನಂಗೆ ಯಾರ ಹಂಗಿಲ್ಲ ಅಂತ ಬರೆಸಿದ್ದಾನೆ. ಯಾರೂ ಇವರ ಸಮ ಇಲ್ವಾ? ಇವರೇನಾ? ಅದಕ್ಕೆ ಅಂಬರೀಶ್ ಹಾಡು ಬರೆದವರು ಉದಯ್ ಶಂಕರ್ ಅವರನ್ನು ಕೇಳಿ ಅಂದ್ರು. ಅದಕ್ಕೆ ಆ ಗುಂಪು ಅವರನ್ನೇ ಕೇಳಿಕೊಂಡು ಬಂದಿದ್ದೀವಿ ಅಂದರು. ಇವರೇ ಬರೆಸಿದ್ದರಂತೆ" ಎಂದು ಗಲಾಟೆ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ.
ಆದರೆ, 'ರವಿವರ್ಮ' ಸಿನಿಮಾ ರಿಲೀಸ್ ಆದ್ಮೇಲೆ ಅಂತಹ ಗಲಾಟೆಗಳನ್ನು ಯಾರೂ ಮಾಡಲಿಲ್ಲ. ಸಿನಿಮಾ ಆರಾಮಾಗಿ ಪ್ರದರ್ಶನ ಕಂಡಿತ್ತು. ಅಷ್ಟೋತ್ತಿಗಾಗಲೇ ಒಂದು ಜನರೇಷನ್ ಬದಲಾಗಿತ್ತು. ಎಲ್ಲವೂ ಸರಾಗವಾಗಿ ನಡೆದಿತ್ತು.


Click it and Unblock the Notifications











