KGF Real Story 'ಕೆಜಿಎಫ್' ಸಿನಿಮಾ ನೋಡಿದ್ದೀರಿ.. ರಿಯಲ್ ಕೆಜಿಎಫ್‌ನ ಕರಾಳ ಮುಖ ನೋಡಿದ್ದೀರಾ?

'ಕೆಜಿಎಫ್ ಚಾಪ್ಟರ್ 1' ರಿಲೀಸ್ ಆಗಿ ಕನ್ನಡ ಚಿತ್ರರಂಗದ ಗತಿಯನ್ನೇ ಬದಲಿಸಿದೆ. ಇತ್ತ ಇನ್ನೊಂದು 'ಕೆಜಿಎಫ್ 2' ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಮಧ್ಯೆ ಕರ್ನಾಟಕ ಅಷ್ಟೇ ಅಲ್ಲ. ಭಾರತ ಅಷ್ಟೇ ಅಲ್ಲ. ಇಡೀ ವಿಶ್ವವೇ 'ಕೆಜಿಎಫ್ 2' ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದೆ. ಕೆಲವರು ದಾಖಲೆ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಆದರೆ, ರಿಯಲ್ 'ಕೆಜಿಎಫ್' ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ಆದರೆ, ಕೆಜಿಎಫ್‌ಗೂ ಒಂದು ಇತಿಹಾಸವಿದೆ. ಕರ್ನಾಟಕಕ್ಕೆ ಚಿನ್ನದ ನಾಡು ಎಂಬ ಹೆಗ್ಗಳಿಕೆ ತಂದುಕೊಂಡ ಈ ಊರಿನ ಹಿನ್ನೆಲೆ, ಜನರು ಬದುಕು, ಕರಾಳ ಮುಖಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದು ತೀರಾ ವಿರಳ.

ಕರುನಾಡಿನ ಪುಟ್ಟ ಊರು 'ಕೆಜಿಎಫ್'. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿಗೆ ಸೇರಿರುವ ಜಗತ್ ಪ್ರಸಿದ್ಧ ನಗರವೇ ಈ 'ಕೆಜಿಎಫ್'. ಈ ಊರು ಹೊರಗಿನ ಕಣ್ಣಿಗೆ ಕಾಣುವಂತಹ ಚಿನ್ನದ ಗಣಿಯಷ್ಟೇ ಅಲ್ಲ. ಮೂರು ಭಿನ್ನ ಪ್ರಾಂತ್ಯಗಳು. ನಾಲ್ಕು ಭಿನ್ನ ಭಾಷಿಕರು, 40 ಗಣಿಗಳು, ಹದಿಮೂರು ಸಾವಿರ ಅಡಿ ಆಳ, ರಾಶಿ ರಾಶಿ ಚಿನ್ನದ ಸಂಪತ್ತು, ಆರು ಸಾವಿರ ಜೀತದಾಳುಗಳ ಸಾವು ಇವೆಲ್ಲವೂ ಕೆಜಿಎಫ್ ಸಿನಿಮಾ ನೋಡಿದವರಿಗೂ, ಕೆಜಿಎಫ್ ಸಿನಿಮಾ ಮಾಡಿದವರಿಗೂ ಗೊತ್ತಿರಲಿಕ್ಕಿಲ್ಲ. 'ಕೆಜಿಎಫ್' ಎಂಬ ಚಿನ್ನದ ಗಣಿಯ ಆಳಕ್ಕೆ ಇಳಿದು ಅಲ್ಲಿನ ವಾಸ್ತವವನ್ನು ಪುಟಗಳಿಗೆ ಪತ್ರಕರ್ತ ಆರ್. ಕೇಶವಮೂರ್ತಿ ಇಳಿಸಿದ್ದಾರೆ. ಅದುವೇ 'ಬಂಗಾರದ ಮನುಷ್ಯರು'. ಈ ಕೃತಿಯ ಬಗ್ಗೆ, ಕೆಜಿಎಫ್ ಊರಿನ ಬಗ್ಗೆ ಸ್ವತ: ಕೇಶವ ಮೂರ್ತಿ ಕೆಲವು ಅಚ್ಚರಿ ಮೂಡಿಸುವ ವಿಷಯಗಳನ್ನು ತೆರೆದಿಟ್ಟಿದ್ದಾರೆ.

ಚಿನ್ನದ ನಾಡು ಈ ಕೆಜಿಎಫ್

ಚಿನ್ನದ ನಾಡು ಈ ಕೆಜಿಎಫ್

ಆರ್. ಕೇಶವಮೂರ್ತಿ ಬಂಗಾರಪೇಟೆ ತಾಲೂಕಿನ ಕುಗ್ರಾಮ ಪುಲಿಪಾಪೇನಹಳ್ಳಿಯವರು. ಆದರೆ, ಇವರ ಬದುಕಿಗೆ ಹೊಸ ದಿಕ್ಕು, ಹೊಸ ದೆಸೆ ಹಾಗೂ ಸ್ನೇಹಿತರ ಬಳಗವನ್ನು ಕೊಟ್ಟಿದ್ದು ಕೆಜಿಎಫ್. ಹೀಗಾಗಿ ಒಮ್ಮೆ ಸತ್ತು, ಮತ್ತೊಮ್ಮೆ ಬದುಕಲು ಹೊರಟಿರುವ 'ಕೆಜಿಎಫ್' ಬಗ್ಗೆ ಯಾರೂ ತಿಳಿಯದ ವಿಷಯವನ್ನು ಕೇಶವಮೂರ್ತಿ ತಮ್ಮ 'ಬಂಗಾರದ ಮನುಷ್ಯರು' ಪುಸ್ತಕದಲ್ಲಿ ಅಚ್ಚುಕಟ್ಟಾಗಿ ಅಚ್ಚುತ್ತೊತ್ತಿದ್ದಾರೆ. ಇದು ಪುಸ್ತಕ ಓದುಗರಿಗೆ 'ಕೆಜಿಎಫ್' ಸಿನಿಮಾ ನೋಡಿದ್ದಕ್ಕಿಂತಲೂ ಅದ್ಬುತ ಎನಿಸಬಹುದು. ಅಷ್ಟಕ್ಕೂ ಕೇಶವಮೂರ್ತಿ ಅವರಿಗೆ 'ಬಂಗಾರದ ಮನುಷ್ಯರು' ಕೃತಿ ಬರೆಯಲು ಕಾರಣ ತನ್ನದೇ ಊರು 'ಕೆಜಿಎಫ್'.

'ಕೆಜಿಎಫ್‌ಗೊಂದು ಇತಿಹಾಸವಿದೆ'

'ಕೆಜಿಎಫ್‌ಗೊಂದು ಇತಿಹಾಸವಿದೆ'

"ನಾನು ಕೇಳಿದ ಮತ್ತು ಓದಿದ ಚರಿತ್ರೆಯೇ ಸ್ಫೂರ್ತಿ. ನಮ್ಮ ಕಾಲೇಜು 'ಕೆಜಿಎಫ್' ಗಣಿಯ ಗುಡ್ಡದಿಂದ ಕೂಗಲತೆ ದೂರದಲ್ಲಿತ್ತು. ಯಾವಾಗಲೂ ನನಗೆ ಅದರ ಬಗ್ಗೆ ಕುತೂಹಲ ಇತ್ತು. ಅದೇ ಸಮಯದಲ್ಲಿ ಗಣಿ ಉಳಿಸುವಂತೆ ನಡೆದ ಹೋರಾಟಗಳು. ನಮ್ಮ ಕಾಲೇಜು ವಿದ್ಯಾರ್ಥಿಗಳನ್ನೂ ಪ್ರಭಾವಿಸಿತ್ತು. ಆ ಸಂಘಟನೆಗಳ ಚಳವಳಿಗಳ ಭಾಗವಾಗಿ ಚಿನ್ನದ ಗಣಿ ಪ್ರದೇಶಗಳಲ್ಲಿ ಓಡಾಟ ಮತ್ತು ಅದರ ಕುರಿತು ನಾನು ಓದಿಕೊಂಡಿದ್ದನ್ನು ಈಗ ಪುಸ್ತಕ ರೂಪದಲ್ಲಿ ತಂದಿದ್ದೇನೆ. ಈಗ ಪುಸ್ತಕ ಬರಲಿಕ್ಕೆ 'ಕೆಜಿಎಫ್' ಸಿನಿಮಾ ಒಂದು ನೆಪ ಅಷ್ಟೆ. ಯಾಕೆಂದರೆ 'ಕೆಜಿಎಫ್' ಅಂದರೆ ಬರೀ ಸಿನಿಮಾ ಅಲ್ಲ, ಅದಕ್ಕೊಂದು ಇತಿಹಾಸ ಇದೆ ಎಂದು ಹೇಳಬೇಕು ಅನಿಸಿ ಈ ಪುಸ್ತಕ ಬರೆದೆ." ಎನ್ನುತ್ತಾರೆ ಲೇಖಕ ಆರ್ ಕೇಶವಮೂರ್ತಿ.

ಕಾರ್ಮಿಕರನ್ನು ಬೆತ್ತಲೆ ಮಾಡಿ ಚೆಕ್ ಮಾಡುತ್ತಿದ್ರು

ಕಾರ್ಮಿಕರನ್ನು ಬೆತ್ತಲೆ ಮಾಡಿ ಚೆಕ್ ಮಾಡುತ್ತಿದ್ರು

"ನನ್ನದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಒಂದು ಹಳ್ಳಿ ಪುಲಿಪಾಪೇನಹಳ್ಳಿ. ನನ್ನ ತಾಲೂಕಿಗೂ ಕೆಜಿಎಫ್‌ಗೂ ತುಂಬಾ ದೂರ ಇಲ್ಲ. ನಾನು ಓದಿದ್ದು ಕೆಜಿಎಫ್‌ನಲ್ಲಿ. ಈ ಮೊದಲೇ ಹೇಳಿದಂತೆ ಕಾಲೇಜು ದಿನಗಳಲ್ಲಿ ನಾನು ಕೆಜಿಎಫ್ ನಗರ ಸುತ್ತಿದ್ದು, ಅಲ್ಲಿನ ಗಣಿ ಕಾರ್ಮಿಕರ ಮನೆಗಳಿಗೆ ಹೋಗಿದ್ದು ಇನ್ನೂ ನೆನಪಿದೆ. ಕರಾಳತೆ ಎಂದರೆ ನೀವು ಕೆಜಿಎಫ್ ಸಿನಿಮಾದಲ್ಲಿ ಬರುವ ನರಾಚಿ ದೃಶ್ಯ ನೋಡಿದ್ದೀರಲ್ಲ, ಅದಕ್ಕಿಂತಲೂ ಕ್ರೂರ. ಐದು ಪೈಸೆ ಹೆಚ್ಚಿಸುವಂತೆ ಹೋರಾಟ ಮಾಡಿದ್ದಾರೆ. ಸಿಲ್ವರ್ ತಟ್ಟೆಯಲ್ಲಿ ಊಟ ಕೊಡಬೇಕು. ಸ್ಟೀಲ್ ತಟ್ಟೆಯಲ್ಲಿ ಊಟ ಕೊಡಿ ಅಂದ ಬೇಡಿಕೊಂಡಿದ್ದಾರೆ. ಚಿನ್ನ ಸಂಸ್ಕರಿಸುವ ವಿಭಾಗದಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಪ್ರತಿ ದಿನ ಸಂಜೆ ಹೊರಗೆ ಹೋಗುವಾಗ ಬೆತ್ತಲೆ ಮಾಡಿ ಚೆಕ್ ಮಾಡಿ ಹೊರಗೆ ಕಳುಹಿಸುತ್ತಿದ್ದರು. ತೀರಾ ಯಾರ ಮೇಲಾದರೂ ಅನುಮಾನ ಬಂದರೆ ಅಂಥವರಿಗೆ ಬೇದಿ ಮಾತ್ರೆ ಕೊಟ್ಟು ಶೌಚಾಲಕ್ಕೆ ಕಳುಹಿಸುತ್ತಿದ್ದರಂತೆ. ಅಂದರೆ ಹೊಟ್ಟೆಯಲ್ಲಿ ಚಿನ್ನ ಬಚ್ಚಿಟ್ಟಿಕೊಂಡಿರಬಹುದು ಎನ್ನುವ ಕಾರಣಕ್ಕೆ. ಇಂಥ ಅವಮಾನಗಳು ನಡೆದಿರುವ ದೊಡ್ಡ ಚರಿತ್ರೆಯೇ ಇದೆ. ಇದು ಚಿನ್ನ ಕೊಟ್ಟವರ ಬದುಕಿನ ಕೌರ್ಯ. ಈಗಲೂ ಅದೇ ಗೂಡಿನಂತಹ ಮನೆಗಳಲ್ಲೇ ವಾಸಿಸುತ್ತಿದ್ದಾರೆ. ತೀರಾ ದೊಡ್ಡ ಮನೆ ಎಂದರೆ 8-12 ಅಳತೆ ಇರುತ್ತದೆ. ದೇಶಕ್ಕೆ ಚಿನ್ನ ಕೊಟ್ಟವರ ಮನೆಗಳು ಸಿಮೆಂಟ್ ಶೀಟ್‌ಗಳಿಂದ ಮಾಡಿಕೊಂಡಿದ್ದಾರೆ ಎನ್ನುವುದೇ ತುಂಬಾ ಜನ ನಂಬಲ್ಲ. ಬಟ್ ಅದು ಸತ್ಯ." ಎಂದು ಕೆಜಿಎಫ್ ಕರಾಳತೆಯನ್ನು ಬಿಚ್ಚಿಡುತ್ತಾರೆ ಆರ್ ಕೇಶವಮೂರ್ತಿ.

'ಬಂಗಾರ ಮನುಷ್ಯರು' ಟೈಟಲ್ ಯಾಕೆ?

'ಬಂಗಾರ ಮನುಷ್ಯರು' ಟೈಟಲ್ ಯಾಕೆ?

"ಡಾ ರಾಜ್ ಕುಮಾರ್ ಅವರ 'ಬಂಗಾರದ ಮನುಷ್ಯ' ಸಿನಿಮಾ ನೋಡಿದ ಮೇಲೆ ಭೂಮಿ ಜೊತೆ ನಂಟು ಇರುವ ಪ್ರತಿಯೊಬ್ಬ ರೈತ ಕೂಡ ಬಂಗಾರದ ಮನುಷ್ಯ ಅನಿಸಿಕೊಂಡ. ದೇಶಕ್ಕೆ ಅನ್ನ ಕೊಡುವ ರೈತ ಪರದೆ ಮೇಲೆ 'ಬಂಗಾರದ ಮನುಷ್ಯ'ನಾದಾಗ ಅದೇ ದೇಶಕ್ಕೆ ಸಾವಿರಾರು ಕೆಜಿ ಚಿನ್ನ ಕೊಟ್ಟ ಕಾರ್ಮಿಕರು ಕೂಡ ಬಂಗಾರದ ಮನುಷ್ಯರೇ ಅಲ್ಲವೇ?" ಎನ್ನುತ್ತಾರೆ ಬಂಗಾರದ ಮನುಷ್ಯರು ಲೇಖಕ ಆರ್ ಕೇಶವಮೂರ್ತಿ.

ಕಾರ್ಮಿಕರು ಕೊಟ್ಟ ಮಾಹಿತಿ ಏನು?

ಕಾರ್ಮಿಕರು ಕೊಟ್ಟ ಮಾಹಿತಿ ಏನು?

"ಕೆಜಿಎಫ್ ಚಿನ್ನದ ಕಾರ್ಮಿಕರು ಮತ್ತು ಅಲ್ಲಿನ ಪ್ರದೇಶಗಳು ನನಗೆ ನಾಲ್ಕೈದು ವರ್ಷಗಳ ನಂಟು. ನಾನೇ ನೋಡಿದ ಕಾರ್ಮಿಕರ ಬದುಕನ್ನು ಹೇಳಲು ಆ ನಗರ ಜೊತೆಗಿನ ಓಡನಾಟ ಹೆಚ್ಚು ಅನುಕೂಲ ಆಯಿತು. 'ಕೆಜಿಎಫ್ ಚಾಪ್ಟರ್ 1' ಬಂದ ಮೇಲೆ ಕೆಜಿಎಫ್ ನಗರದ ಕುರಿತು ಪುಸ್ತಕ ಬರೆಯಬೇಕು ಎಂದುಕೊಂಡಾಗ ಮತ್ತೆ ನಾನು ಕೆಜಿಎಫ್‌ಗೆ ಹೋದೆ. ಒಂದು ವಾರ ಅಲ್ಲೇ ಇದ್ದು, ನನಗೆ ಪರಿಚಯ ಇರುವ ಕಾರ್ಮಿಕರ ಮನೆಗಳಿಗೆ ಹೋದೆ. ಅವರು ಹೇಳಿದ ಕತೆಗಳು, ಅವರೇ ಕೊಟ್ಟ ಹಳೆಯ ಫೋಟೋಗಳು, ಕೆಲ ಲೇಖನಗಳು ಇವೆಲ್ಲ ನನ್ನ ಅಧ್ಯಯನಕ್ಕೆ ಪೂರಕವಾಯಿತು. ಎರಡು ತಿಂಗಳಲ್ಲಿ ಪುಸ್ತಕ ಬರೆದು ಮುಗಿಸಿದೆ." ಅಂತ ತನ್ನ ಸಂಶೋಧನೆಯ ಮಾಹಿತಿ ಹಂಚಿಕೊಳ್ಳುತ್ತಾರೆ ಲೇಖಕ.

ವೆಬ್ ಸರಣಿ ಮಾಡಲು ಮುಂದಾಗಿದ್ದ ನಿರ್ಮಾಪಕ

ವೆಬ್ ಸರಣಿ ಮಾಡಲು ಮುಂದಾಗಿದ್ದ ನಿರ್ಮಾಪಕ

"ನಿಜ ಹೇಳಬೇಕು ಎಂದರೆ ಕೆಜಿಎಫ್ ನಗರದ ಬಗ್ಗೆ ಎಲ್ಲರಿಗೂ ಗೊತ್ತು. ನಾನು ಸಿನಿಮಾ ಬಂದ ಮೇಲೆ ಒಂದು ಪುಸ್ತಕ ಬರೆಯುತ್ತಿದ್ದೇನೆ ಅಷ್ಟೆ ಅಂದುಕೊಂಡೆ. ಆದರೆ, ಪುಸ್ತಕ ಬಂದ ಮೇಲೆ ಗೊತ್ತಾಗಿದ್ದು, ಕೆಜಿಎಫ್ ನಗರಕ್ಕೆ ಇಂಥದ್ದೊಂದು ಚರಿತ್ರೆ ಇದೆ ಎಂಬುದು ತುಂಬಾ ಜನಕ್ಕೆ ಗೊತ್ತಿಲ್ಲ ಎಂಬುದು. ಪುಸ್ತಕ ಬರೆಯುವುಕ್ಕೂ ಮೊದಲು ನಾನು ನಮ್ಮ ಪತ್ರಿಕೆಯಲ್ಲಿ ಲೇಖನ ಬರೆದಿದ್ದೆ. ಅದನ್ನು ಓದಿದ ಮೇಲೆ ನನ್ನ ಸ್ನೇಹಿತನೊಬ್ಬ ಬೈಕ್‌ನಲ್ಲಿ ಕೆಜಿಎಫ್‌ಗೆ ಹೋಗಿ ಸುತ್ತಾಡಿಕೊಂಡು ಬಂದಿದ್ದಾನೆ. ಸಾರ್ ಚಿನ್ನ ಕೊಟ್ಟವರ ಬದುಕು ಈ ರೀತಿ ಇದೆಯಾ ಎಂದು ಅಚ್ಚರಿ ಪಟ್ಟಿದ್ದಾರೆ. ಒಬ್ಬ ನಿರ್ಮಾಪಕರಂತೂ ಕೆಜಿಎಫ್ ಸಿನಿಮಾ ಬರಕ್ಕೂ ಮೊದಲೇ ನೀವು ಈ ಪುಸ್ತಕ ಬರೆದಿದ್ದರೆ ಖಂಡಿತ ನಾನು 10 ರಿಂದ 15 ಎಪಿಸೋಡ್ ವೆಬ್ ಸರಣಿ ಮಾಡುತ್ತಿದ್ದೆ ಅಂದರು." ಎಂಬ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.

ಕೆಜಿಎಫ್ ಸಿನಿಮಾನೇ ಚರಿತ್ರೆಯಲ್ಲ

ಕೆಜಿಎಫ್ ಸಿನಿಮಾನೇ ಚರಿತ್ರೆಯಲ್ಲ

"ಒಂದು ಸಿನಿಮಾ ಆಗಿ ನೋಡುವುದಾದರೆ ಸೂಪರ್. ಯಾಕೆಂದರೆ 'ಕೆಜಿಎಫ್' ಹೆಸರಿನ ಸಿನಿಮಾ ಕನ್ನಡ ಚಿತ್ರರಂಗದ ಹೆಮ್ಮೆ. ಭಾರತೀಯ ಚಿತ್ರರಂಗದಲ್ಲಿ ಕನ್ನಡ ಚಿತ್ರರಂಗದವನ್ನು ಒಂದು ಹೆಜ್ಜೆ ಮುಂದಕ್ಕೆ ಕರೆದುಕೊಂಡು ಹೋದ ಸಿನಿಮಾ. ಇದರಲ್ಲಿ ಎರಡು ಮಾತಿಲ್ಲ. ಸಿನಿಮಾ ಆಗಿ ನೋಡಿದರೆ ಅದು ಪ್ರತಿಯೊಬ್ಬರ ಹೆಮ್ಮೆ. ಆದರೆ, 'ಕೆಜಿಎಫ್' ಹೆಸರಿನ ಸಿನಿಮಾನೇ 'ಕೆಜಿಎಫ್' ಚರಿತ್ರೆ ಅಲ್ಲ. ಸಿನಿಮಾಗಿಂತಲೂ ಮಿಗಿಲಾದ ಚರಿತ್ರೆ ಕೆಜಿಎಫ್ ನಗರದಲ್ಲಿದೆ." ಎನ್ನುತ್ತಾರೆ ಆರ್‌ ಕೇಶವಮೂರ್ತಿ. ಕೆಜಿಎಫ್ ಇತಿಹಾಸದ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳುವ ಆಸಕ್ತಿ ಇದ್ದರೆ, 'ಬಂಗಾರದ ಮನುಷ್ಯರು' ಮತ್ತಷ್ಟು ಕುತೂಹಲ ಕೆರಳಿಸಬಹುದು.

More from Filmibeat

English summary
Journalist Keshavamurthy Wrote Bangarada Manushyaru About Real KGF Details Inside. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X