"ಗಂಡ ಸತ್ತಿದ್ದಾನೆ.. ಇನ್ನೊಬ್ಬನ ಜೊತೆ ಕುಣಿತಿದ್ದೀಯಾ?"; ಜೂಲಿ ಲಕ್ಷ್ಮಿಗೆ ಅಜ್ಜಿಯೊಬ್ಬರು ಬೈದಿದ್ದೇಕೆ?
ಬಹುಭಾಷಾ ನಟಿ ನಟಿ ಜೂಲಿ ಲಕ್ಷ್ಮಿ ಕನ್ನಡದಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅನಂತ್ ನಾಗ್ ಹಾಗೂ ಜೂಲಿ ಲಕ್ಷ್ಮಿ ಜೋಡಿ ಅತೀ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು ಒಂದು ವಿಶೇಷ. ಅನಂತ್ ನಾಗ್ ಅಷ್ಟೇ ಅಲ್ಲದೆ, ಡಾ.ರಾಜ್‌ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಹೀಗೆ ಕನ್ನಡದ ಸೂಪರ್‌ಸ್ಟಾರ್‌ಗಳ ಜೊತೆ ನಟಿಸಿರುವ ನಟಿ. ಇವರ ಸಿನಿಮಾಗಳನ್ನು ಇಂದಿಗೂ ಇಷ್ಟ ಪಡುತ್ತಾರೆ.
ಜೂಲಿ ಲಕ್ಷ್ಮಿ ಇತ್ತೀಚೆಗೆ ನ್ಯೂಸ್ ಫಸ್ಟ್ ಕನ್ನಡ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ಜೂಲಿ ಲಕ್ಷ್ಮಿ ಚಿತ್ರೀಕರಣದ ವೇಳೆ ನಡೆದ ಕೆಲವು ಸನ್ನಿವೇಶಗಳನ್ನು ಹಂಚಿಕೊಂಡಿದ್ದಾರ. ಅದರಲ್ಲೂ 'ಬೆಂಕಿಯ ಬಲೆ' ಹಾಗೂ ಅಂಬರೀಶ್ ಅವರ ಜೊತೆ ಮೈಸೂರಿನಲ್ಲಿ ನಟಿಸುವಾಗ ನಡೆದ ಘಟನೆಯನ್ನು ವಿವರಿಸಿದ್ದಾರೆ. ಆ ವೇಳೆ ಅಜ್ಜಿಯೊಂದು ನಟಿಯ ಜೊತೆ ನಡೆದುಕೊಂಡ ಮುಗ್ಧ ಕ್ಷಣಗಳನ್ನು ಈ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.

"ಬೆಂಕಿ ಬಲೆ ಸಿನಿಮಾದಲ್ಲಿ ಬಹಳಷ್ಟು ಚಾಲೆಂಜ್‌ಗಳು ಬಂದವು. ದೇವಸ್ಥಾನದಲ್ಲಿ ಶೂಟಿಂಗ್ ಮಾಡುವುದಕ್ಕೆ ಹೋದರೆ, ಪರ್ಮಿಷನ್ ಇಲ್ಲ ಅಂತ ಹೇಳಿದರು. ಜನರು ಬಂದು ಇಲ್ಲ ಪರ್ಮಿಷನ್ ಅನ್ನು ನಾವು ಕೊಡಿಸುತ್ತೇವೆ ಬನ್ನಿ ಅಂತ ಒಳಗೆ ಕರೆದುಕೊಂಡು ಹೋಗಿ ಸಾಂಗ್ ಶೂಟಿಂಗ್ ಮಾಡುವುದಕ್ಕೆ ಅನುವು ಮಾಡಿ ಕೊಟ್ಟರು. ಈತ ಚಾಲೆಂಜ್ ಎಲ್ಲಾ ನೋಡಿ ಆಯ್ತು. ಬೆಂಕಿ ಬಲೆಯ ಕೊನೆಯ ಸೀನ್ ಗಂಡ ಸತ್ತು ಹೋಗಿಬಿಟ್ಟ. ಅವನನ್ನು ಗಾಡಿಯಲ್ಲಿ ಹಾಕಿಕೊಂಡು ಹೋಗುತ್ತಾರೆ. ಆಮೇಲೆ ಸ್ಮಶಾನಕ್ಕೆ ಹೋಗುತ್ತಾರೆ. ಗಾಡಿಯವನು ಬಾ ಅಮ್ಮ ಇಲ್ಲೇ ಅಂತ ಕರೆಯುತ್ತಾರೆ. ಅವಳು ಅಲ್ಲೇ ಸತ್ತಿರುತ್ತಾಳೆ. ಇದು ಸೀನ್"
ಈ ಸೀನ್ ಅನ್ನು ಮೈಸೂರಿನ ಸಮೀಪ ಶೂಟಿಂಗ್ ಮಾಡಲಾಗಿತ್ತು. ಆ ಊರಿನ ಹೆಸರನ್ನು ಜೂಲಿ ಲಕ್ಷ್ಮಿ ಹೇಳಿಲ್ಲ. ಆದರೆ, ತುಂಬಾ ಸಿನಿಮಾದ ಶೂಟಿಂಗ್ ಅಲ್ಲಿ ನಡೆದಿದೆ ಎಂದಷ್ಟೇ ಹೇಳಿದ್ದಾರೆ.ಈ ದೃ ಶ್ಯದ ಶೂಟಿಂಗ್ ಮಾಡುವಾಗ ಇಡೀ ಊರೇ ಸೇರಿತ್ತು. ಅಲ್ಲಿಗೆ ಅಜ್ಜಿಯೊಬ್ಬರು ಬಂದಿದ್ದರು. ಮಧ್ಯಾಹ್ನ ಊಟ ಮಾಡುವಾಗ ಕೂರಿಸಿಕೊಂಡು ಊಟ ಹಾಕಿದ್ದರು. ಬೆಂಕಿಯ ಬಲೆ ಸಿನಿಮಾದಲ್ಲಿ ಲಕ್ಷ್ಮಿ ಡೆತ್ ಸೀನ್ ನೋಡುವಾಗ ಆ ಅಜ್ಜಿನೂ ಬಂದಿತ್ತು. ಆ ವೇಳೆ ಆ ಅಜ್ಜಿ ನಡೆದುಕೊಂಡಿದ್ದನ್ನು ಲಕ್ಷ್ಮಿ ವಿವರಿಸಿದ್ದಾರೆ.
"ಶೂಟಿಂಗ್ ಮುಗಿಸಿ ಬಂದೆ. ಆಗ ಲಿಂಬೆ ಹಣ್ಣು ತಂದು ನನಗೆ ಸುತ್ತಾಕಿ ಕರ್ಪೂರ ಹಾಕಿ, ಅರಿಶಿಣ ಹಾಕಿ ಕಾಲೆಲ್ಲ ತೊಳೆದು ಇಲ್ಲೆಲ್ಲಾದರೂ ಸ್ನಾನ ಮಾಡುವುದಕ್ಕೆ ಆದರೆ ಮಾಡಿ ಹೋಗಮ್ಮ. ಈತರ ಸತ್ತಿದ್ ಸೀನ್ ಎಲ್ಲಾ ಮಾಡಿಬಾರದು ಅಂದರು. ಅನಂತ್‌ನಾಗ್ ಅವರ ಹತ್ತಿರ ಹೇಳಿದರೆ, ಅವರು ನನ್ನ ಮುಖ ನೋಡಿ ಹೊರಟು ಹೋದರು. ಅವರಿಗೆ ನಂಬಿಕೆ ಇಲ್ಲ. ನಾನು ಸರಿ ಅಜ್ಜಿ ಅಂತ ಹೇಳಿ ಮನೆಗೆ ಹೋರಟು ಹೋದೆ."
ಬೆಂಕಿಯ ಬಲೆ ಸಿನಿಮಾ ಮುಗಿದಿತ್ತು. ಇದಾದ ಒಂದು ತಿಂಗಳ ಬಳಿಕ ಅದೇ ಜಾಗದಲ್ಲಿ ಲಕ್ಷ್ಮಿಯವರೇ ನಟಿಸುತ್ತಿದ್ದ ಇನ್ನೊಂದು ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಅದಕ್ಕೆ ಅಂಬರೀಶ್ ಹೀರೋ. ಅದೇ ಅಜ್ಜಿ ಅಲ್ಲಿಗೆ ಲಕ್ಷ್ಮಿಗೆ ಬಾಯಿಗೆ ಬಂದಂತೆ ಬೈಯ್ಯುವುದಕ್ಕೆ ಶುರು ಮಾಡಿತ್ತು. ಲಕ್ಷ್ಮಿಯವರ ಕೈ ಹಿಡಿದು ಕರೆದುಕೊಂಡು ಹೋಯ್ತು. ಆಮೇಲೆ ಏನಾಯ್ತು ಅನ್ನೋದನ್ನು ಅವರೇ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ.
"ಡ್ಯೂಯೆಟ್ ಶೂಟಿಂಗ್ ನಡೀತಿದೆ. ಬೇರೆ ಹೀರೋ ಅವರು ಅಂಬರೀಶ್. ಸಾಂಗ್ ತೆಗೆಯುವುದಕ್ಕೆ ಅಲ್ಲಿಗೆ ಹೋಗಿದ್ವಿ. ಅಲ್ಲಿಗೆ ಬಂದು ನಿನಗೆ ನಾಚಿಕೆ ಇಲ್ವಾ? ಥೂ ಅಂತ ಬೈಯ್ಯುವುದಕ್ಕೆ ಶುರು ಮಾಡಿತು. ಗಂಡ ಸತ್ತು ಒಂದು ತಿಂಗಳಾಗಿಲ್ಲ. ಆಗಲೇ ಬಂದು ಇವರ ಜೊತೆಗೆ ಡ್ಯೂಯೆಟ್ ಹಾಡುತ್ತಿದ್ದೀಯ? ನನಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ಅಜ್ಜಿ ನಿಜವಾಗಲೂ ನನ್ನ ಗಂಡ ಸತ್ತು ಹೋಗಿದ್ದಾನೆ ಅಂದುಕೊಂಡಿತ್ತು. ಜನರೆಲ್ಲರೂ ನಗುತ್ತಿದ್ದರು. ನನ್ನ ಗಂಡ ಸತ್ತು ಹೋಗಿದ್ದಾನೆ. ಈ ಯಮ್ಮ ತಪ್ಪು ಮಾಡುತ್ತಿದ್ದಾಳೆ ಅಂತ ಕೈ ಹಿಡಿದು ಆ ಅಜ್ಜಿ ಮನೆಗೆ ಕರೆದುಕೊಂಡು ಹೋಯ್ತು." ಎಂದು ಸುಂದರ ಗಳಿಗೆಯನ್ನು ನೆನಪಿಸಿಕೊಂಡಿದ್ದಾರೆ.


Click it and Unblock the Notifications











