ಬಾಲಣ್ಣ ನಿರ್ಮಿಸಬೇಕಿದ್ದ 'ಮಯೂರ' ನಿಂತಿದ್ದೇಕೆ? ಅಣ್ಣಾವ್ರು ಒಪ್ಪಿದರೂ ಆ ಸಿನಿಮಾ ಬೇರೆಯವರ ಪಾಲಾಗಿದ್ದೇಗೆ?
ಡಾ.ರಾಜ್‌ಕುಮಾರ್ ನಟಿಸಿದ ಸುಮಾರು 200 ಸಿನಿಮಾಗಳಲ್ಲಿ ಯಾವುದನ್ನೂ ಮರೆಯುವ ಹಾಗಿಲ್ಲ. ಆಡು ಮುಟ್ಟದ ಸೊಪ್ಪಿಲ್ಲ. ರಾಜ್‌ಕುಮಾರ್ ನಟಿಸದ ಸಿನಿಮಾವಿಲ್ಲ ಎನ್ನಬಹುದು. ಅಣ್ಣಾವ್ರ ವೃತ್ತಿ ಬದುಕಿನಲ್ಲಿ 'ಮಯೂರ' ಸಿನಿಮಾ ಒಂದು ಹೆಮ್ಮೆ. ಈ ಸಿನಿಮಾದ ಡೈಲಾಗ್, ಹಾಡು, ಪರ್ಫಾಮೆನ್ಸ್ ಅನ್ನು ಯಾರೂ ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಈ ಸಿನಿಮಾ ರಿಲೀಸ್ ಆಗಿ ಇದೇ ವರ್ಷ 50 ವರ್ಷಗಳನ್ನು ಪೂರೈಸಲಿದೆ. ಆದರೂ, ಈ ಸಿನಿಮಾವನ್ನು ಸಿನಿಪ್ರಿಯರ ಮಾನಸದಿಂದ ಮಾಸಿಲ್ಲ.
ಅಣ್ಣಾವ್ರಿಗೆ 'ಮಯೂರ'ನ ಪಾತ್ರ ಹೊಂದಿಕೊಂಡಿತ್ತು. 1975ರಲ್ಲಿ ತೆರೆಕಂಡಿದ್ದ ಸಿನಿಮಾ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಾಗ ಸಿನಿಮಾ ನೋಡುವುದಕ್ಕೆ ನೂಕುನುಗ್ಗಲು. ಮಯೂರನ ಅವತಾರದಲ್ಲಿ ಅಣ್ಣಾವ್ರನ್ನು ನೋಡುವುದಕ್ಕೆ ಜನರು ಮುಗಿಬಿದ್ದಿದ್ದರು. ಈ ಸಿನಿಮಾ ಥಿಯೆಟರ್‌ನಲ್ಲಿ ಸುಮಾರು 30 ವಾರಗಳ ಕಾಲ ಯಶಸ್ವಿಯಾಗಿ ಪದರ್ಶನ ಕಂಡಿತ್ತು ಎಂಬ ವರದಿಗಳಿವೆ. ಅಣ್ಣಾವ್ರನ್ನು ಮೇರು ನಟನನ್ನಾಗಿ ಮಾಡಿದ ಸಿನಿಮಾಗಳಲ್ಲಿ ಇದೂ ಕೂಡ ಒಂದು.

'ಮಯೂರ' ಸಿನಿಮಾ ಮಾಡಬೇಕು ಅಂತ ಮೊದಲು ಹೊರಟಿದ್ದು ಕನ್ನಡ ಚಿತ್ರರಂಗದ ಹಿರಿಯ ನಟ ದಿವಂಗತ ಬಾಲಕೃಷ್ಣ. ದೇವುಡು ನರಸಿಂಹ ಶಾಸ್ತ್ರಿ ಬರೆದ ಮಯೂರ ಕಾದಂಬರಿ ಅವರಿಗೆ ತುಂಬಾನೇ ಹಿಡಿಸಿತ್ತು. ಹೀಗಾಗಿ ಅಣ್ಣಾವ್ರ ಬಳಿ ಬಂದು 'ಮಯೂರ' ಮಾಡಲು ಒಪ್ಪಿಸಿದ್ದರು. ಆದಕ್ಕೆ ಅಣ್ಣಾವ್ರು ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಆದರೆ, ಬಾಲಕೃಷ್ಣ ಅವರ ಈ ಆಸೆ ಈಡೇರಲಿಲ್ಲ. ಕೊನೆಗೆ ಆ ಸಿನಿಮಾವನ್ನು ಡೈರೆಕ್ಟರ್ ವಿಜಯ್ ಡೈರೆಕ್ಟ್ ಮಾಡಿದ್ದರು. ಟಿ.ಪಿ.ವೇಣುಗೋಪಾಲ್ ನಿರ್ಮಾಣ ಮಾಡಿದ್ದರು. ಅಷ್ಟಕ್ಕೂ ಬಾಲಣ್ಣ ಯಾಕೆ ಈ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಆಗಲಿಲ್ಲ? ಎನ್ನುವುದನ್ನು ಅವರ ಅಪ್ಪಟ ಅಭಿಮಾನಿ ಹಾಲು ಜೇನು ರಾಮ್ ಕುಮಾರ್ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.
ಬಾಲಣ್ಣ ಅವರ ಈಡೇರದ ಆಸೆ
ಹಿರಿಯ ನಟ ದಿವಂಗತ ಬಾಲಕೃಷ್ಣ ಅವರು 'ಮಯೂರ' ಸಿನಿಮಾ ನಿರ್ಮಾಣ ಮಾಡದೇ ಹೋದರೂ, ಸಿನಿಮಾದಲ್ಲಿ ನಟಿಸಿದ್ದಾರೆ. ಅಣ್ಣಾವ್ರ ಪರಮಾಪ್ತನ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ, ಇವರದ್ದು ಮಯೂರ ನಿರ್ಮಾಣ ಮಾಡಬೇಕು ಎನ್ನುವ ಆಸೆ ಆಗಿತ್ತು. "ಬಾಲಕೃಷ್ಣ ಅವರದ್ದು ಈಡೇರದ ಆಸೆ ಅಂದರೆ ಮಯೂರ. ಅವರು ಇಮ್ಮಡಿ ಪುಲಕೇಶಿ ಸಿನಿಮಾ ಮಾಡುವಾಗ ರಾಜ್‌ಕುಮಾರ್ ಅವರ ಆಕ್ಟಿಂಗ್ ಎಲ್ಲಾ ನೋಡಿದ್ರಲ್ಲ. ಕಂಠೀರವದಲ್ಲಿ ಎಷ್ಟು ಚೆನ್ನಾಗಿ ಮಾಡಿದ್ದಾನೆ. ಇಮ್ಮಡಿ ಪುಲಕೇಶಿ ಸಿನಿಮಾದಲ್ಲಿ ನೋಡಿದ್ದೇನೆ. ರಾಜ್‌ಕುಮಾರ್‌ದು ಏನು ವೀರಾವೇಷ." ಎಂದು ಹಿರಿಯ ನಟ ದಿವಂಗತ ಬಾಲಕೃಷ್ಣ ರೋಮಾಂಚಿತರಾಗಿದ್ದರು. ಇದೇ ಮಯೂರ ಮಾಡಬೇಕು ಎನ್ನುವ ಆಸೆಗೆ ಕಾರಣವೆಂದು ಹಾಲು ಜೇನು ರಾಮ್ ಕುಮಾರ್ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳುತ್ತಾರೆ.

ಮಯೂರ ನಿರ್ಮಾಣ ಪ್ಲ್ಯಾನ್
"ರಾಜ್‌ಕುಮಾರ್ ಅವರ ಪ್ರತಿಭೆಯನ್ನು ನೋಡಿ ಒಂದು ಐತಿಹಾಸಿಕ ಸಿನಿಮಾ ತೆಗೆಯಬೇಕು ಅಂತ ಹೇಳಿ ಮಯೂರ ಕಾದಂಬರಿಯನ್ನು ಆರಿಸಿಕೊಂಡಿದ್ದರು. ಕು ರಾ ಸೀತಾರಾಮ ಶಾಸ್ತ್ರಿ ಹಾಗೂ ಸದಾಶಿವಯ್ಯ ಇಬ್ಬರನ್ನು ಕರೆಸಿ ಸಂಭಾಷಣೆ ಬರೆಸಿದ್ದರು. ಜೊತೆಗೆ ಹಾಡುಗಳನ್ನೂ ಬರೆಸಿದ್ದರು. ಜಿ ಕೆ ವೆಂಕಟೇಶ್ ಅವರನ್ನು ಕರೆಸಿ ಎರಡು ಹಾಡುಗಳಿಗೆ ರಾಗ ಸಂಯೋಜನೆಯನ್ನೂ ಮಾಡಿಸಿದರು. ರಣಧೀರ ಕಂಠೀರವ ಸಿನಿಮಾವನ್ನು ಡೈರೆಕ್ಟ್ ಮಾಡಿದ್ದ ಎನ್‌ಸಿ ರಾಜನ್ ಅವರೇ ಮಯೂರವನ್ನು ಮಾಡಬೇಕಿತ್ತು." ಎಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
'ಮಯೂರ' ಬಾಲಣ್ಣನ ಕೈತಪ್ಪಿದ್ದೇಗೆ?
'ಮಯೂರ' ಸಿನಿಮಾ ಮಾಡುವುದಕ್ಕೆ ರಾಜ್‌ಕುಮಾರ್ ಕೂಡ ಒಪ್ಪಿದ್ದರು. ಸ್ವಲ್ಪ ಹಣದ ಅವಶ್ಯಕತೆಯಿತ್ತು. ಆಗತಾನೇ ಬಾಲಣ್ಣ ಅಭಿಮಾನ್ ಸ್ಟುಡಿಯೋ ನಿರ್ಮಾಣ ಮಾಡಿದ್ದರು. ಹೀಗಾಗಿ ಅಣ್ಣಾವ್ರ ನೆರವನ್ನು ಪಡೆದು, ತಮ್ಮ ಸ್ಟುಡಿಯೋದಲ್ಲಿ ಎರಡು ಸಿನಿಮಾದ ಶೂಟಿಂಗ್ ಮಾಡುವಂತೆ ಮಾಡಿದ್ದರು. ಕೈ ದುಡ್ಡು ಬಂದಿತ್ತು. ಅಷ್ಟೋತ್ತಿಗೆ ಲೆಕ್ಕಾಚಾರವೆಲ್ಲ ಉಲ್ಟಾ ಆಗಿತ್ತು.
"ಈ ಸಿನಿಮಾ ರಾಜ್‌ಕುಮಾರ್ ಕೂಡ ಕಾಲ್‌ಶೀಟ್ ಕೊಟ್ಟಿದ್ದರು. ಆದರೆ, ಈ ಸಿನಿಮಾಗೆ ತುಂಬಾನೇ ಹಣ ಬೇಕಿತ್ತು. ಹಾಗಾಗಿ ಬಾಲಕೃಷ್ಣ ಅವರು ರಾಜ್‌ಕುಮಾರ್ ಅವರ ಬಳಿ ಹೋಗಿ ನನ್ನ ಅಭಿಮಾನ್ ಸ್ಟುಡಿಯೋದಲ್ಲಿ ಚಿತ್ರೀಕರಣ ಆಗುವಂತೆ ಮಾಡಪ್ಪ ಎಂದು ಹೇಳಿದರು. ರಾಜ್‌ಕುಮಾರ್ ಅವರು ಪುನರ್ಜನ್ಮ ಹಾಗೂ ಮಾರ್ಗದರ್ಶಿ ಚಿತ್ರೀಕರಣ ಆಗುವಂತೆ ಮಾಡಿದರು. ಆಗ ದುಡ್ಡೂ ಬಂತು. ಸಿನಿಮಾ ಶುರುವಾಗಬೇಕಿತ್ತು. ಅಷ್ಟರಲ್ಲಿ ರಾಜ್‌ಕುಮಾರ್ ಕೃಷ್ಣದೇವರಾಯ ಒಪ್ಪಿಕೊಂಡಿದ್ದರು. ಅದು ಕಪ್ಪು ಬಿಳುಪಿನಲ್ಲಿ ಇತ್ತು. ಅದನ್ನು ಪಂತುಲು ಅವರು ಕೊನೆಗೆ ಕಲರ್‌ನಲ್ಲಿ ತೆಗೆದರು. ಆಗ ಎಂಜಿಆರ್ ಅವರು ಇಂತಹ ಒಳ್ಳೆಯ ಸಿನಿಮಾ ಮಾಡುತ್ತಿದ್ದೀಯ. ನನ್ನ ತಮ್ಮನ ಸಿನಿಮಾ. ಬಣ್ಣದಲ್ಲಿ ಮಾಡು ಏನಾದರೂ ಆದರೆ, ಆ ನಷ್ಟವನ್ನು ನಾನು ತುಂಬಿ ಕೊಡುತ್ತೇನೆ ಎಂದು ಹೇಳಿದರು. ಅದನ್ನು ಯಾವಾಗ ಕಲರ್‌ನಲ್ಲಿ ಮಾಡಿದರೋ ಆಗ ಬಾಲಕೃಷ್ಣ ಮಯೂರ ಸಿನಿಮಾವನ್ನು ಕಪ್ಪು ಬಿಳುಪಿನಲ್ಲಿ ಯಾರಪ್ಪ ನೋಡುತ್ತಾರೆ ಅಂತ ಹೇಳಿ ಈ ಸಿನಿಮಾವನ್ನೇ ಕೈ ಬಿಟ್ಟರು." ಎನ್ನುತ್ತಾರೆ.
ಮಯೂರ ಸಿನಿಮಾದಲ್ಲಿ ನಟನೆ
"ಬಾಲಕೃಷ್ಣ ಅವರಿಗೆ ಕೊನೆಯವರೆಗೂ ಆಸೆಯಿತ್ತು. ರಾಜ್‌ಕುಮಾರ್ ಅವರು ಹೇಳಿದರು. ಬಾಲಕೃಷ್ಣ ಅವರಿಗೆ ಮಯೂರ ತುಂಬಾನೇ ಇಷ್ಟ. ಅವರಿಗೆ ಈ ಸಿನಿಮಾದಲ್ಲಿ ಏನಾದರೂ ಒಂದು ಪಾತ್ರವನ್ನು ಕೊಡಬೇಕು ಎಂದು ಒಂದು ಪಾತ್ರವನ್ನೂ ಕೊಡಿಸಿದರು. ಕೊನೆಗೆ ಅವರಿಗಾಗಿ ಪ್ರಾಣ ಕೊಡುವ ಆಪ್ತ ಸೇವಕನ ಪಾತ್ರ ಕೊಡಿಸಿದರು. ಹೀಗಾಗಿ ಇದು ಬಾಲಕೃಷ್ಣ ಅವರದ್ದು ಈಡೇರದ ಆಸೆ" ಎಂದು ಹಾಲು ಜೇನು ರಾಮ್ ಕುಮಾರ್ ಟೋಟಲ್ ಕನ್ನಡ ಯೂಟ್ಯೂನ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಅರಮನೆಯಲ್ಲಿ ಶೂಟ್ ಆದ ಕೊನೆ ಸಿನಿಮಾ?
ಇನ್ನು ಮಯೂರ ಸಿನಿಮಾದ ಹಲವು ವಿಶೇಷತೆಗಳಿವೆ. ವಿಕ್ಕಿಪಿಡಿಯ ಪ್ರಕಾರ, ಈ ಸಿನಿಮಾವನ್ನು 40 ರಿಂದ 45 ಲಕ್ಷ ರೂಪಾಯಿ ಬಜೆಟ್‌ನಲ್ಲಿ 50 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿತ್ತು. ಸುಮಾರು 30 ವಾರಗಳ ಕಾಲ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡ ಈ ಸಿನಿಮಾ ಬರೋಬ್ಬರಿ 3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದೆ. ಆ ಮಟ್ಟಿಗೆ ಯಶಸ್ಸು ಕಂಡ ಸಿನಿಮಾವಿದು.
ಇನ್ನೊಂದು ವಿಶೇಷವೆಂದರೆ, ಮೈಸೂರಿನ ಅರಮನೆಯಲ್ಲಿ ಚಿತ್ರೀಕರಣಗೊಂಡ ಕೊನೆಯ ಸಿನಿಮಾ 'ಮಯೂರ' ಎಂದು ನ್ಯೂಸ್ 18 ಕನ್ನಡದಲ್ಲಿ ವರದಿ ಮಾಡಲಾಗಿದೆ. 1975ರಲ್ಲಿ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟಿದ್ದೇ ಕೊನೆ. ಆನಂತರ ಯಾವುದೇ ಸಿನಿಮಾದ ಶೂಟಿಂಗ್ ಆಗಿಲ್ಲ ಎಂದು ಹೇಳಲಾಗಿದೆ. ಈ ಸಿನಿಮಾದಲ್ಲಿ ಅಣ್ಣಾವ್ರು ಕದಂಬ ವಂಶದ ರಾಜಕುಮಾರ ಮಯೂರ ಶರ್ಮನಾಗಿ ನಟಿಸಿದ್ದರು. ರಾಜ್‌ಕುಮಾರ್ ಅವರ ನಟನೆಗೆ, ಡೈಲಾಗ್ ಹೇಳುವ ಶೈಲಿಗೆ ಸಿನಿಮಾ ಪ್ರಿಯರು ಮರುಳಾಗಿದ್ದರು.
'ಬಾಹುಬಲಿ'ಗೂ ಸ್ಪೂರ್ತಿ
ತೆಲುಗು ಸ್ಟಾರ್ ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶಿಸಿದ 'ಬಾಹುಬಲಿ' ಸಿನಿಮಾಗೂ 'ಮಯೂರ'ವೇ ಎಂದೂ ಹೇಳಲಾಗಿದೆ. ಈ ಸಿನಿಮಾ ಡಾ.ರಾಜ್‌ಕುಮಾರ್‌ಗೆ ಜೋಡಿಯಾಗಿ ಮಂಜುಳಾ ನಟಿಸಿದ್ದರು. ಜೊತೆಗೆ ಪ್ರಣಯರಾಜ ಶ್ರೀನಾಥ್, ವಜ್ರಮುನಿ ತೂಗುದೀಪ ಶ್ರೀನಿವಾಸ್, ಎಂ.ಪಿ.ಶಂಕರ್, ಬಾಲಕೃಷ್ಣ, ಅಶ್ವಥ್, ಟೈಗರ್ ಪ್ರಭಾಕರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜಿ.ಕೆ. ವೆಂಕಟೇಶ್ ಸಂಗೀತ ನೀಡಿದ ಸಂಗೀತ ಇಂದಿನ ಪೀಳಿಗೆ ಕೂಡ ಮೆಲುಕು ಹಾಕುತ್ತಿದೆ.


Click it and Unblock the Notifications











