"ನಿವೇದಿತಾ ಜೈನ್ ಅಲ್ಪ ಆಯುಷಿ" ಎಂದಿದ್ದ ಕೇರಳದ ಮಂದಿ ಯಾರು? ಎಲ್ಲಿ ಏನು ಹೇಳಿದ್ದರು?
ಕನ್ನಡ ಚಿತ್ರರಂಗದಲ್ಲಿ ದುರಂತ ಅಂತ್ಯ ಕಂಡ ನಟಿಯರ ಪಟ್ಟಿಯಲ್ಲಿ ನಿವೇದಿತಾ ಜೈನ್ ಕೂಡ ಒಬ್ಬರು. ಇವರ ಸಾವಿನ ಬಗ್ಗೆ ಇಂದಿಗೂ ಸಾಕಷ್ಟು ಗೊಂದಲಗಳಿವೆ. ನಿವೇದಿತಾ ಜೈನ್ ಅವರದ್ದು ಆತ್ಮಹತ್ಯೆಯೋ.. ಇಲ್ಲ ಆಕಸ್ಮಿಕವೋ ಅನ್ನೋದು ಇನ್ನೂ ನಿಗೂಢವಾಗಿಯೇ ಇದೆ. ಆದರೆ, ಕನ್ನಡದ ನೀಳಕಾಯದ ಸುಂದರ ನಟಿಯನ್ನು ಕಳೆದುಕೊಂಡಿದ್ದು ಚಿತ್ರರಂಗಕ್ಕೆ ದೊಡ್ಡ ನಷ್ಟ ಅನ್ನುವುದರಲ್ಲಿ ಎರಡು ಮಾತಿಲ್ಲ.
ನಿವೇದಿತಾ ಜೈನ್ ಬದುಕಿದ್ದು ಕೇವಲ 19 ವರ್ಷ ಮಾತ್ರ. ಅಷ್ಟರಲ್ಲೇ ಸುಮಾರು 12ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಬದುಕಿದಿದ್ದರೆ, ನಿವೇದಿತಾ ಜೈನ್ ಬಾಲಿವುಡ್ ಸಿನಿಮಾದಲ್ಲೂ ನಟಿಸಬೇಕಿತ್ತು. ಅಷ್ಟರಲ್ಲೇ ನಿವೇದಿತಾ ಬಾಳಲ್ಲಿ ದುರಂತವೊಂದು ನಡೆದು ಹೋಗಿತ್ತು. ಆದರೆ, ನಿವೇದಿತಾ ಜೈನ್ ಸಾವಿನ ಬಗ್ಗೆ ನಟಿಗೆ ಕೇರಳದ ಅಪರಿಚಿತರು ಮೊದಲೇ ಸುಳಿವು ನೀಡಿದ್ದರಂತೆ. ಈ ವಿಷಯವನ್ನು ಸ್ವತ: ಅವರ ಅಮ್ಮ ಪ್ರಿಯಾ ಜೈನ್ ಸಂದರ್ಶಕ ರಘುರಾಮ್ ಅವರೊಂದಿಗಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ನಿರ್ದೇಶಕ ಕಮ್ ನಿರೂಪಕ ರಾಘುರಾಮ್ ಇತ್ತೀಚೆಗೆ ದಿವಂಗತ ನಟಿ ನಿವೇದಿತಾ ಜೈನ್ ಅವರ ಅಮ್ಮ ಪ್ರಿಯಾ ಜೈನ್ ಅವರನ್ನು ಹುಡುಕಿ ಸಂದರ್ಶನ ಮಾಡಿದ್ದಾರೆ. ಆ ವೇಳೆ ನಿವೇದಿತಾಗೆ ಅಲ್ಪ ಆಯುಷಿ ಎಂದು ಕೇರಳದ ಅಪರಿಚಿತ ವ್ಯಕ್ತಿಗಳು ಹೇಳಿದ್ದನ್ನು ನೆನಪಿಸಿಕೊಂಡಿದ್ದಾರೆ. ಹಾಗೇ ಅವರು ಹೇಳಿದಂತೆಯೇ ನಡೆದಿದೆ ಎಂದೂ ಹೇಳಿದ್ದಾರೆ.
ನಿವೇದಿತಾ ಜೈನ್ ಅತೀ ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. 14ನೇ ವಯಸ್ಸಿಗೆ ಮಿಸ್ ಬೆಂಗಳೂರು ಪಟ್ಟ ಗಿಟ್ಟಸಿಕೊಂಡಿದ್ದರು. ಇಲ್ಲಿಂದ ಇವರ ಅಸಲಿ ವೃತ್ತಿ ಬದುಕು ಶುರುವಾಗಿತ್ತು. ಈ ಬಗ್ಗೆನೂ ರಘುರಾಮ್ ಯೂಟ್ಯೂಬ್ ಚಾನೆಲ್‌ನಲ್ಲಿ ಸವಿಸ್ತಾರವಾಗಿ ಹೇಳಿಕೊಂಡಿದ್ದಾರೆ.
"ನಿವೇದಿತಾ ಜೈನ್ 9ನೇ ತರಗತಿ ಓದುತ್ತಿರುವಾಗಲೇ ಮಿಸ್ ಬೆಂಗಳೂರು ಆಗಿದ್ದರು. ನಮಗೆ ಯಾರೂ ಗೊತ್ತೇ ಇಲ್ಲ. ಅವರ ತಂದೆ ಮಿಸ್ ಬೆಂಗಳೂರು ಬಗ್ಗೆ ಪೇಪರ್‌ನಲ್ಲಿ ಬಂದಿತ್ತು. ಅದನ್ನು ತೆಗೆದು ಕಳಿಸಿಬಿಟ್ಟಿದ್ದಾರೆ. ಅವಳಿಗೆ ಕಾಲ್ ಬಂತು. ಅವಳ ಹೈಟ್ ನೋಡಿ 18 ಅಂತಲೇ ಅಂದುಕೊಂಡಿದ್ದರು. ಅವಳಿಗೂ ಈ ಕಾಂಪಿಟೇಷನ್‌ನಲ್ಲಿ ಭಾಗವಹಿಸಬೇಕು ಅನ್ನೋ ಇಷ್ಟವಿತ್ತು." ಎಂದು ಪ್ರಿಯಾ ಜೈನ್ ಹೇಳಿಕೊಂಡಿದ್ದಾರೆ.

ನಿವೇದಿತಾ ಜೈನ್ ಮಿಸ್ ಬೆಂಗಳೂರು ಆದ ಬಳಿಕ ಫೋಟೊಗಳನ್ನು ನ್ಯೂಸ್ ಪೇಪರ್ ಹಾಗೂ ಮ್ಯಾಗಜೀನ್‌ಗಳಲ್ಲಿ ಪಬ್ಲಿಷ್ ಮಾಡಲಾಗಿತ್ತು. ಆಗ ರಾಘಣ್ಣ ನಟಿಸುತ್ತಿದ್ದ 'ಶಿವರಂಜಿನಿ' ಸಿನಿಮಾಗೆ ನಿವೇದಿತಾ ಜೈನ್‌ರನ್ನು ಅಪ್ರೋಚ್ ಮಾಡಲಾಗಿತ್ತು.
"ಕಾಂಪಿಟೇಷನ್‌ನಲ್ಲಿ ಭಾಗವಹಿಸಿದ ಬಳಿಕ ಅವರ ಫೋಟೊಗಳನ್ನು ಪಬ್ಲಿಷ್ ಮಾಡಲಾಗಿತ್ತು. ಆ ಫೋಟೊಗಳನ್ನೆಲ್ಲ ನೋಡಿ ರಾಜ್‌ಕುಮಾರ್ ಅಪ್ಪಾಜಿ ಕಡೆಯಿಂದ ಫಸ್ಟ್ ಆಫರ್ ಬಂದಿತ್ತು. ತುಂಬಾ ಜನ ಬಂದಿದ್ದರು ನಮ್ಮ ಮನೆಗೆ. ಆಗ ನಮಗೇನು ಸಿನಿಮಾ ಬಗ್ಗೆ ಆಸಕ್ತಿ ಇರಲಿಲ್ಲ. ಅವಳು ತುಂಬಾನೇ ಚಿಕ್ಕವಳು ಇದ್ದಳು. ಆ ವೇಳೆ ಕೇಳಿದಾಗ, ಅವಳು ಕೂಡ ನನಗೆ ಇಂಟ್ರೆಸ್ಟ್ ಇಲ್ಲ ಎಂದಿದ್ದರು. ಆದರೆ, ಅಪ್ಪಾಜಿ (ಅಣ್ಣಾವ್ರು) ಜೊತೆ ನಟಿಸಬೇಕು ಅನ್ನೋ ಆಸೆಯಿದೆ ಎಂದು ಅವರ ಬ್ಯಾನರ್‌ನಲ್ಲಿ ನಟಿಸುತ್ತೇನೆ ಎಂದು ಹೇಳಿದಳು." ಎಂದು ಹೇಳಿಕೊಂಡಿದ್ದಾರೆ.
ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ನಿವೇದಿತಾ ಜೈನ್ ಕುಟುಂಬ ಸಮೇತ ಹೋಗಿದ್ದರು. ಆ ವೇಳೆ ಕೇರಳದಿಂದ ಬಂದವರು 45 ದಿನಗಳ ಕಾಲ ಉಪವಾಸವಿದ್ದು ಪೂಜೆ ಮಾಡುತ್ತಿದ್ದರು. ಇವರನ್ನು ನೋಡಿದ ಕೂಡಲೇ ಕರೆದು ನಿವೇದಿತಾ ಜೈನ್ ಅಲ್ಪ ಆಯುಷಿ ಎಂದು ಹೇಳಿದ್ದರು. ಆ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
"ನಾವು ಹೋಗುತ್ತಿರುವಾಗ ಅವರೇ ನಮ್ಮನ್ನು ಕರೆದರು. ಆಗ ನನ್ನ ಮಗಳನ್ನು ನೋಡಿ ಆಕೆಗೆ ಅಲ್ಪ ಆಯಸ್ಸು ಎಂದು ಹೇಳಿದರು. ನಮ್ಮ ಮನೆ ಬಗ್ಗೆನೂ ಸರಿಯಾಗಿ ಹೇಳಿದರು. ಇಲ್ಲಿ ಅಡುಗೆ ಮನೆಯಿದೆ. ಇಲ್ಲಿ ಹಾಲ್ ಇದೆ. ದೇವರ ಮೂಲೆ ಇದೆ ಅಂತೆಲ್ಲ ಹೇಳಿದರು. ಆ ಮನೆ ನಿವೇದಿತಾ ಜೈನ್ ಅನ್ನು ಆಹುತಿ ತೆಗೆದುಕೊಳ್ಳುತ್ತದೆ ಎಂದಿದ್ದರು." ಎಂದು ಆ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.
ಹಾಗೇ, ಕೇರಳದ ಅಪರಿಚಿತರು "ಅವಳ ಹಣೆ ಏಟು ಬೀಳುತ್ತೆ. ತಕ್ಷಣವೇ ನೀವು ಮನೆಯನ್ನು ಬದಲಾಯಿಸಿ ಎಂದು ಹೇಳಿದ್ದರು. ಸುರೇಶ್ ಗೌಡರು ಅಂತಿದ್ದರು. ಅವರು ಮನೆಯನ್ನು ಹುಡುಕುವುದಕ್ಕೆ ಶುರು ಮಾಡಿದ್ದರು. ಆದರೆ, ದುರಾದೃಷ್ಟವಶಾತ್ ನಮಗೆ ಮನೆ ಸಿಕ್ಕಿರಲಿಲ್ಲ. ಅವರು ಏನು ಹೇಳಿದ್ದರೋ ಹಾಗೇ ನಡೀತು. " ಎಂದು ತಾಯಿ ಪ್ರಿಯಾ ಜೈನ್ ಹೇಳಿದ್ದಾರೆ.
ಈ ವಿಷಯ ಕೇಳಿ ನಿವೇದಿತಾ ಜೈನ್ ತತ್ತರಿಸಿ ಹೋಗಿದ್ದರು ಎಂದು ವರದಿಗಳಾಗಿವೆ. ಆದರೆ, ನಿವೇದಿತಾ ಜೈನ್ ಪ್ರತಿಕ್ರಿಯೆ ಬೇರೆನೇ ಇತ್ತು. "ನಿವೇದಿತಾ ಜೈನ್ ನಮ್ಮದೇ ಒಂದು ಕರ್ಮಾ ಅಂತಿರುತ್ತೆ. ನನಗೆ ಅಷ್ಟು ಬೇಗ ಏನೂ ಆಗುವುದಿಲ್ಲ ಅಂತ ಹೇಳುತ್ತಿದ್ದಳು. ಅವಳು ಯಾವಾಗಲೂ ಪಾಸಿಟಿವ್ ಆಗಿದ್ದಳು. " ಎಂದು ಅವರ ತಾಯಿ ಹೇಳಿಕೊಂಡಿದ್ದಾರೆ.


Click it and Unblock the Notifications










