ನಟಿ ಕಾರುಣ್ಯ ರಾಮ್ ಕಿರುತೆರೆ ನಟಿಯ ಮದುವೆ ಮುರಿದ ವಿವಾದವೇನು? 8 ವರ್ಷಗಳ ಬಳಿಕ ಮತ್ತೆ ಆ ಮಾತೇಕೆ?
2017ರಲ್ಲಿ ದಿಢೀರನೇ ಒಂದು ಸುದ್ದಿ ಹಲ್‌ಚಲ್ ಎಬ್ಬಿಸಿತ್ತು. ಕಿರುತೆರೆ ನಟಿಯೊಬ್ಬರ ಮದುವೆ ಮುರಿದು ಬೀಳುವುದಕ್ಕೆ ನಟಿ ಕಾರುಣ್ಯ ರಾಮ್ ಅವರೇ ಕಾರಣ ಅನ್ನೋ ಆರೋಪ ಕೇಳಿ ಬಂದಿತ್ತು. ಅದು ದೊಡ್ಡ ವಿವಾದವನ್ನು ಹುಟ್ಟಾಕಿತ್ತು. ಆ ವೇಳೆ ಕಾರುಣ್ಯ ರಾಮ್ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿರಲಿಲ್ಲ.
ಸ್ಯಾಂಡಲ್‌ವುಡ್ ನಟಿ ಕಾರುಣ್ಯ ರಾಮ್ ಕನ್ನಡ ಕಿರುತೆರೆಯ ನಟಿಗೆ ಕಾಟ ಕೊಡುತ್ತಿದ್ದಾರೆ ಎಂದು ನ್ಯೂಸ್ ಚಾನೆಲ್‌ಗಳು ಪ್ರಸಾರ ಮಾಡಿದ್ದವು. 2017ರಲ್ಲಿ 'ಕಲರ್ಸ್ ಕನ್ನಡ'ದಲ್ಲಿ ಪ್ರಸಾರವಾಗುತ್ತಿದ್ದ 'ಲಕ್ಷ್ಮೀ ಬಾರಮ್ಮ' ಎನ್ನುವ ಧಾರಾವಾಹಿಯಲ್ಲಿ ಕುಮುದ ಎಂಬ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಅನಿಖಾ ಸಿಂಧ್ಯಾ ಆರೋಪವನ್ನು ಮಾಡಿದ್ದರು. ತಮಗೆ ಕಾರುಣ್ಯ ರಾಮ್ ಕಾಟ ಕೊಡುತ್ತಿದ್ದಾರೆ ಎಂದು ದೂರಿದ್ದರು.

ಅನಿಖಾ ಸಿಂಧ್ಯಾ ಇಂತಹ ಗಂಭೀರ ಆರೋಪ ಮಾಡುವುದಕ್ಕೂ ಕೇವಲ 11 ದಿನಗಳ ಹಿಂದೆಯಷ್ಟೇ ಉದ್ಯಮಿ ಸಚಿನ್ ಎಂಬುವವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ಫೋಟೊಗಳನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿಯೂ ಹಾಕಿಕೊಂಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಅನಿಖಾ ನಟಿ ಕಾರುಣ್ಯ ರಾವ್ ಅವರ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದರು. ತನ್ನ ನಿಶ್ಚಿತಾರ್ಥದ ಫೋಟೊಗಳನ್ನು ನೋಡಿ, ಉದ್ಯಮಿ ಸಚಿನ್ ಕುಟುಂಬಕ್ಕೆ ಕರೆ ಮಾಡಿ, ಅವರ ಪ್ರೇಮಿ ನಾನು ಎಂದು ಹೇಳಿ ತೊಂದರೆ ಕೊಡುತ್ತಿದ್ದಾರೆ. ಅಲ್ಲದೆ ಸಚಿನ್ ಅವರ ತಾಯಿ ಬಳಿ ಮಗನೊಂದಿಗೆ ಮದುವೆ ಮಾಡಿ ಕೊಡಿ ಎಂದೂ ಹೇಳಿದ್ದಾರೆಂದು ಆರೋಪಿಸಿದ್ದರು. ಇದು ದೊಡ್ಡ ಸುದ್ದಿಯಾಗಿತ್ತು.
ಅಂದು ಈ ವಿವಾದದ ಬಗ್ಗೆ ಸ್ಪಷ್ಟನೆ ಕೊಟ್ಟಿರದ ಕಾರುಣ್ಯ ರಾಮ್ ಈಗ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಪಾಡ್‌ಕಾಸ್ಟ್‌ನಲ್ಲಿ ಭಾಗವಹಿದ್ದ ನಟಿ ತನ್ನ ಮೇಲಿನ ವಿವಾದಕ್ಕೆ ಕ್ಲಾರಿಟಿ ಕೊಟ್ಟಿದ್ದಾರೆ. ಆ ವಿವಾದವನ್ನು ಹೇಗೆ ಎದುರಿಸಿದೆ? ಒಳ್ಳೆಯ ಹೆಸರು ಇದ್ದಾಗ ಈ ವಿವಾದ ಹೇಗೆ ಪರಿಣಾಮ ಬೀರಿತು? ಅನ್ನೋದನ್ನು ಓಪನ್ ಆಗಿ ಹೇಳಿಕೊಂಡಿದ್ದಾರೆ.
2017ರಲ್ಲಿ ಈ ವಿವಾದ ಎದ್ದಿದ್ದಾಗ ಕಾರುಣ್ಯ ರಾಮ್ ಕೈಯಲ್ಲಿ ಒಳ್ಳೊಳ್ಳೆ ಸಿನಿಮಾಗಳಿದ್ದವು. ಅಲ್ಲದೇ ಬಿಗ್ ಬಾಸ್ ರಿಯಾಲಿಟಿ ಶೋ ಅಂತೆಲ್ಲ ಹೋಗಿಬಂದಿದ್ದರು. ಆ ವೇಳೆಗೆ ಇಂತಹದ್ದೊಂದು ವಿವಾದದಲ್ಲಿ ಸಿಕ್ಕಿಕೊಂಡಿದ್ದರು. ಆಗ ಕಾರುಣ್ಯ ರಾಮ್ ಪ್ರತಿಕ್ರಿಯೆ ನೀಡುವುದಕ್ಕೆ ಮುಂದಾಗದೇ ಇದ್ದಿದ್ದು, ಅಂದು ಹಲವು ಅನುಮಾನಗಳನ್ನು ಹುಟ್ಟಾಕಿತ್ತು. ಅದಕ್ಕೆ ತಾನೇ ಪ್ರತಿಕ್ರಿಯೆ ನೀಡಿರಲಿಲ್ಲ ಅನ್ನೋದನ್ನು ಹೇಳಿಕೊಂಡಿದ್ದಾರೆ.
"ತುಂಬಾ ಒಳ್ಳೆಯ ಹೆಸರು ಇದ್ದಾಗ ಮತ್ತೆ ನನ್ನ ಹೆಸರು ಬಳಸಿಕೊಂಡು ವಿವಾದ ಮಾಡುತ್ತಾರೆ. 2017, ಡಿಸೆಂಬರ್ 1ನೇ ತಾರೀಕು ಅದನ್ನು ನಾನು ಹೇಗೆ ಮರೆಯುವುದಕ್ಕೆ ಸಾಧ್ಯ? ನನಗೆ ಅದಕ್ಕೆ ಏನೋ ಸಂಬಂಧವಿದೆ. ನಾನೇನೋ ಮಾಡಿದ್ದೀನಿ. ನನ್ನದು ಅದರಲ್ಲಿ ಏನೋ ಭಾಗ ಇದೆ ಅಂದರೆ, ನಾನು ಪ್ರತಿಕ್ರಿಯೆ ನೀಡುವುದರಲ್ಲಿ ಅರ್ಥವಿದೆ. ನನ್ನ ಪಾತ್ರವೇ ಇಲ್ಲ ಅಂದ್ಮೇಲೆ ಏನಂತ ರಿಯಾಕ್ಟ್ ಮಾಡುತ್ತೀರಾ? ಏನು ಸ್ಪಷ್ಟನೆ ಕೊಡುತ್ತೀರಾ? ಈ ಕಾರಣಕ್ಕೆ ನಾನು ಅದನ್ನು ಹಾಗೇ ಬಿಟ್ಟು ಬಿಟ್ಟೆ. ನನ್ನ ಬ್ರದರ್‌ದು ಆದ್ಮೇಲೆ ಎರಡನೇ ಬಾರಿ ಬ್ರೇಕ್ ಡೌನ್ ಆಗಿದ್ದು ಇದೂ ಒಂದು." ಎಂದು ಹೇಳಿಕೊಂಡಿದ್ದಾರೆ.
ತನ್ನ ಕರಿಯರ್‌ನ ಉತ್ತಮ ದಿನಗಳಲ್ಲಿ ತನ್ನ ಹೆಸರನ್ನು ಬಳಸಿಕೊಂಡಿದ್ದಕ್ಕೆ ಇದೇ ಸಂದರ್ಶನದಲ್ಲಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ. "ಲೈಫ್ ಏನೋ ತಿರುವು ತಗೊಂಡು, ಒಳ್ಳೆಯ ಸಿನಿಮಾ ಮಾಡಿಕೊಂಡು ಇದ್ದಾಗ ನನ್ನ ಹೆಸರನ್ನು ಬಳಸಿಕೊಂಡು ಹೀಗೆ ಮಾಡಿದ್ದು ತುಂಬಾನೇ ತಪ್ಪು. ರಿಯಾಲಿಟಿ ಗೊತ್ತಿಲ್ಲ. ನನಗೂ ತಂಗಿ ಇದ್ದಾಳೆ. ಹೆಣ್ಣು ಮಕ್ಕಳು ಕೆಲವೊಮ್ಮೆ ಮೋಸ ಹೋಗುತ್ತಾರೆ ಇಲ್ಲಾ ಅಂತಲ್ಲ. ಆ ಟೈಮ್‌ನಲ್ಲಿ ಅವರು ಸಡನ್ ಆಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಹಾಗೆ ತೆಗೆದುಕೊಳ್ಳಬಾರದು ಸ್ವಲ್ಪ ಆಲೋಚನೆ ಮಾಡಿ ತೆಗೆದುಕೊಂಡಿದ್ದರೆ, ಅವರಿಗೂ ರಿಯಾಲಿಟಿ ಗೊತ್ತಾಗುತ್ತಿತ್ತೇನೋ" ಎನ್ನುತ್ತಾರೆ ಕಾರುಣ್ಯ ರಾಮ್.
ವಿವಾದ ಎದ್ದು ರಂಪಾಟ ಆದ ಬಳಿ ಕಿರುತೆರೆ ನಟಿಯ ಬಳಿಗೆ ಹೋಗಿ ಕ್ಲಾರಿಟಿ ಕೊಟ್ಟು ಬಂದಿದ್ದಾಗಿ ಹೇಳಿಕೊಂಡಿದ್ದಾರೆ. "ಈ ಘಟನೆಯ ಬಳಿಕ ನಾನು ಭೇಟಿ ಮಾಡಿ ಕ್ಲಾರಿಟಿ ಕೊಟ್ಟೆ. ನನಗೆ ಆಕೆ ಯಾರು ಅಂತಾನೇ ಗೊತ್ತಿರಲಿಲ್ಲ. ಆ ಟೈಮ್‌ನಲ್ಲಿ ನನಗೆ ಬೇಡದೇ ಇರೋದನ್ನು ನಾನ್ಯಾಕೆ ಪ್ರತಿಕ್ರಿಯೆ ಕೊಡಲಿ ಅಂತ ಸುಮ್ಮನಿದ್ದೆ. ನ್ಯೂಸ್‌ನಲ್ಲಿ ಬರುತ್ತಿತ್ತು. ನಾನು ಒಬ್ಬರಿಗೆ ಮಾತ್ರ ಕ್ಲಾರಿಟಿ ಕೊಟ್ಟಿದ್ದೆ. ಆ ವ್ಯಕ್ತಿಯ ಜೊತೆ ಒಂದು ಫೋಟೊ ತೋರಿಸಿ, ನಾನು ಏನಾದರೂ ತಪ್ಪು ಮಾಡಿದ್ದರೆ, ನಾನು ಒಪ್ಪಿಕೊಳ್ಳುತ್ತೇನೆ. ಅಂತೆ ಕಂತೆಗೆ ಏನು ಪ್ರತಿಕ್ರಿಯೆ ಕೊಡುತ್ತೀರ. ಒಂದು ಫೋಟೊನಾದರೂ ಇದೆಯಾ? ಇಲ್ಲಾ ಯಾರಾದರೂ ಬಂದು ಈ ವ್ಯಕ್ತಿಗೂ ಈಕೆಗೂ ಇತ್ತಪ್ಪ ಅಂತ ಹೇಳಿದ್ದಾರಾ.. ಇಲ್ವಲ್ಲ?" ಎನ್ನುತ್ತಾರೆ ಕಾರುಣ್ಯ ರಾಮ್.
"ಈ ಘಟನೆ ನಡೆದ ನಾಲ್ಕೈದು ದಿನಗಳಾದ್ಮೇಲೆ ಆ ಹುಡುಗಿಗೆ ಕೇಳಿದೆ. ಯಾಕೆ ಹೀಗೆ ಮಾಡಿದ್ರಿ? ಹೀಗೆ ಮಾಡಿದ್ದು ತಪ್ಪು ಅಲ್ವಾ? ನಾನು ಕೇಳುವುದು ಅಂತ ಅಂದುಕೊಂಡಿದ್ದೆ. ಆದರೆ, ಅವರ ಮನೆಯವರೆಲ್ಲ ತಡೆದು ನಿಲ್ಲಿಸಿದ್ರು ಎಂದರು. ಅವರು ಯಾರು ಯಾಕೆ ಸ್ಟಾಪ್ ಮಾಡಿದ್ರು? ಗೊತ್ತಿಲ್ಲ. ಜನರು ತಮ್ಮ ಜೀವನದಲ್ಲಿ ಏನಾದರೂ ಒಂದು ವೃತ್ತಿ ಮಾಡಿಕೊಂಡು ಇರುತ್ತಾರೆ. ಒಂದು ಒಳ್ಳೆಯ ಹೆಸರು ಗಳಿಸಿರುತ್ತಾರೆ ಅಂದರೆ, ಕಾಲು ಎಳೆಯುವುದಕ್ಕೆ ಎಷ್ಟು ಜನ ಇರುತ್ತಾರೆ. ಆ ಕೆಲಸವನ್ನು ಅವರು ಮಾಡಿದ್ದಾರೆ. ಆ ಮೇಲೆ ಆ ಹುಡುಗಿಗೆ ಅರ್ಥ ಆಗಿ. ಆ ಹುಡುಗಿನೂ ಸಾರಿ ಕೇಳಿ, ನೀವು ಸ್ವೀಟ್ ಗರ್ಲ್ ಬಿಡಿ. ನಿಮಗೆ ಒಳ್ಳೆಯದಾಗುತ್ತೆ. ನೀವು ಚೆನ್ನಾಗಿ ಇರುತ್ತೀರ. ನನ್ನನ್ನು ನೀವು ಬಜಾವ್ ಮಾಡಿದ್ರಿ ಅಂತ ಆಕೆ ಹೇಳುತ್ತಾಳೆ" ಎಂದು ವಿವಾದ ಬಳಿಕ ಕಿರುತೆರೆ ನಟಿ ಹೇಳಿದ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಹಾಗೇ ಅಂದು ವಿವಾದದಲ್ಲಿ ಕೇಳಿ ಬಂದಿದ್ದ ಉದ್ಯಮಿ ಕಾರುಣ್ಯ ರಾಮ್‌ಗೆ ಕಾರು, ಬಂಗಲೆ ಕೊಡಿಸಿದ್ದಾರೆಂಬ ಮಾತು ಕೇಳಿ ಬಂದಿತ್ತು. ಅದಕ್ಕೂ ಪ್ರತಿಕ್ರಿಯೆ ಕೊಟ್ಟಿದ್ದಾರೆ. "ಯಾವ ಕಾರು ಯಾವ ಬಂಗಲೆ, ಈ ಸ್ಟೆಟ್ಮೆಂಟ್‌ಗಳನ್ನು ಯಾರು ಕೊಡುತ್ತಾರಲ್ಲ. ಅವರು ಮೊದಲ ಆ ವ್ಯಕ್ತಿಯ ಹಿನ್ನೆಲೆಯನ್ನು ಚೆಕ್ ಮಾಡಬೇಕು. ಅವರಿಗೆ ಕೊಡಿಸುವ ಆ ಯೋಗ್ಯತೆ ಇದೆಯಾ? ಮೊದಲು ಅವರ ಜೀವನವನ್ನು ಅವರು ನೋಡಿಕೊಳ್ಳುತ್ತಿದ್ದಾರಾ? ಅವರ ಬಗ್ಗೆ ತಿಳಿದುಕೊಂಡಾಗ, ಸುಲಭವಾಗಿ ಸಿಕ್ಕಿಕೊಂಡು ಬಿಡುತ್ತಾರೆ. ದೊಡ್ಡ ಬ್ಯುಸಿನೆಸ್ ಮ್ಯಾನ್ ಅಂತ ಹೆಸರು ಹಾಕಿಕೊಂಡರೇ ದೊಡ್ಡ ಬ್ಯುಸಿನೆಸ್‌ಮ್ಯಾನ್ ಆಗಿಬಿಡುತ್ತಾರಾ? ಅವರಿಗೆ ಅಷ್ಟು ಯೋಗ್ಯತೆಯಿದೆ ಕೊಡಿಸುವುದಕ್ಕೆ. ಅದನ್ನು ಸುಮ್ಮನೆ ಹಾಕಿದ್ರು. ಪರ್ವಾಗಿಲ್ಲ ನಾನು ಆ ನೋವನ್ನು ತೆಗೆದುಕೊಂಡಿದ್ದೇನೆ. ಅದನ್ನು ತೆಗೆದುಕೊಂಡು ಇಲ್ಲಿವರೆಗೂ ಅದ್ಭುತವಾದ ಜೀವನವನ್ನು ಕಟ್ಟಿಕೊಂಡಿ ಬಂದಿದ್ದೇನೆ." ಎನ್ನುತ್ತಾರೆ.
ಕಾರುಣ್ಯ ರಾಮ್ ತಮಗೆ ಯಾರೂ ಸ್ನೇಹಿತರೇ ಇಲ್ಲ ಎಂದಿದ್ದಾರೆ. ತಾನು ಯಾರನ್ನೂ ನಂಬುವುದಿಲ್ಲ. ಬೆಸ್ಟ್ ಫ್ರೆಂಡ್ ಅಂದುಕೊಂಡವರೆಲ್ಲ ಕಷ್ಟಕಾಲದಲ್ಲಿ ಬಿಟ್ಟು ಹೋದರು ಎಂದು ಹೇಳಿಕೊಂಡಿದ್ದಾರೆ. "ನಾನು ಕೆಳಗೆ ಬಿದ್ದಾಗ, ನನಗೆ ಏನೂ ಇಲ್ಲದೇ ಇದ್ದಾಗ ಯಾರೂ ಬಂದು ಜೊತೆಯಾಗಿ ನಿಲ್ಲಲಿಲ್ಲ. ನನಗೆ ಇದೂವರೆಗೂ ಬೆಸ್ಟ್ ಫ್ರೆಂಡ್ ಅನ್ನೋರು ಇಲ್ಲ. ನನ್ನನ್ನು ಕಷ್ಟದಲ್ಲಿ ಬಿಟ್ಟು ಹೋಗಿರುವವರೇ. ನನಗೆ ಯಾರ ಮೇಲೂ ನಂಬಿಕೆನೇ ಇಲ್ಲ. ನಾನು ಯಾರನ್ನೂ ನಂಬುವುದೇ ಇಲ್ಲ. ನಾನು ಯಾರನ್ನೇ ಆದರೂ ಅನುಮಾನಸ್ಪದವಾಗಿಯೇ ನೋಡುತ್ತೇನೆ. ನನ್ನ ಜೀವನದಲ್ಲಿ ಬಂದು ಹೋಗಿರುವುದೆಲ್ಲ ಅದೇ ತರಹದ ವ್ಯಕ್ತಿಗಳು." ಎಂದಿದ್ದಾರೆ.


Click it and Unblock the Notifications











