"ಚಿಕ್ಕಣ್ಣ, ಸಾಧು ಕೋಕಿಲಾ ಇವರೆಲ್ಲ ದೊಡ್ಡ ಕಲಾವಿದರು ನಮ್ಮನ್ನು ಯಾರು ಕರೀತಾರೆ?"; ಹಿರಿಯ ಹಾಸ್ಯ ನಟ ಬೇಸರ
ಕನ್ನಡ ಚಿತ್ರರಂಗದ ಸದ್ಯ ಅಳಿವಿನ ಅಂಚಿನಲ್ಲಿದೆ. ದೊಡ್ಡ ದೊಡ್ಡ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲುಗುತ್ತಿವೆ. ಇನ್ನೇನು ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತೆ ಅಂದುಕೊಂಡವರ ಲೆಕ್ಕಾಚಾರವೆಲ್ಲ ತಲೆ ಕೆಳಗಾಗಿದೆ. ಇನ್ನೊಂದು ಕಡೆ ಹಿರಿಯ ಕಲಾವಿದರು ಕೂಡ ಚಿತ್ರರಂಗ ತಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಬೇಸರ ಹೊರ ಹಾಕುತ್ತಿದ್ದಾರೆ.
ಕನ್ನಡ ಚಿತ್ರರಂಗ ಅದೆಷ್ಟೋ ಹಾಸ್ಯ ಕಲಾವಿದರನ್ನು ಕಂಡಿದೆ. ಅವರಲ್ಲಿ ಇಂದಿಗೂ ಕೆಲವು ಕಲಾವಿದರು ಆಕ್ಟಿವ್ ಆಗಿದ್ದಾರೆ. ಕನ್ನಡದಲ್ಲಿ ಬಿಗ್ ಬಜೆಟ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಮತ್ತೆ ಕೆಲವು ಹಿರಿಯ ಕಲಾವಿದರು ಕಿರುತೆರೆ ಕಡೆ ಮುಖ ಮಾಡಿದ್ದಾರೆ. ಅವರಲ್ಲಿ ಡಿಂಗ್ರಿ ನಾಗರಾಜ್ ಕೂಡ ಒಬ್ಬರು. ಒಂದು ಕಾಲದಲ್ಲಿ ಕನ್ನಡದ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಿದ್ದ ಹಾಸ್ಯ ಕಲಾವಿದರ ಇವರು.

ಇತ್ತೀಚೆಗೆ ಡಿಂಗ್ರಿ ನಾಗರಾಜ್ ಸಿನಿಮಾಗಳಿಗಿಂತ ಕಿರುತೆರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಎರಡೆರಡು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಆದರೆ, ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಈ ಹಿರಿಯ ಕಲಾವಿದ ಇತ್ತೀಚೆಗೆ ಸುದ್ದಿ ಮನೆ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ನಡೆಸಿಕೊಡುವ ಈ ಸಂದರ್ಶನದಲ್ಲಿ ಸಾಧು ಕೋಕಿಲ, ಚಿಕ್ಕಣ್ಣ ಅವರಂತಹ ಕಲಾವಿದರಿಂದ ಅವಕಾಶ ಸಿಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಆ ಸಂದರ್ಶನದ ಝಲಕ್ ಇಲ್ಲಿದೆ.
ಡಿಂಗ್ರಿ ನಾಗರಾಜ್ ಕಿರುತೆರೆಯಲ್ಲಿಯೂ ಬ್ಯುಸಿಯಾಗಿದ್ದಾರೆ. ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದು, ಅಲ್ಲೂ ಸಂಭಾವನೆಯನ್ನು ಸರಿಯಾದ ಸಮಯಕ್ಕೆ ನೀಡುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ. "ಈಗ ಸಂಬಂಳ ಕೊಡುತ್ತಿಲ್ಲ. 12 ರಿಂದ 13 ದಿನ ಕೆಲಸ ಮಾಡಿದ್ದೀನಿ. ಚನ್ನಪಟ್ಟಣಗೆ ಹೋಗಿ ಕೆಲಸ ಮಾಡಿದ್ದೇನೆ. ಅವರು ಇನ್ನೂ ಪೇಮೆಂಟ್ ಕೊಡುತ್ತಿಲ್ಲ. ಆದರೂ ಶೂಟಿಂಗ್‌ಗೆ ಕರೆಯುತ್ತಿದ್ದಾರೆ. ಮೊದಲು ನಾಲ್ಕು ತಿಂಗಳು ಕೆಲಸ ಮಾಡಿದ್ದೇನಲ್ಲ ಅದರ ಅಮೌಂಟ್ ಹಾಕಿ ಆಮೇಲೆ ಕರೆಯಿರಿ ಅಂದೆ. ಅಷ್ಟೇ ಏನು ಮಾಡುವುದಕ್ಕೆ ಆಗುತ್ತೆ. ಜಗಳ ಅಂತೂ ನಾನು ಮಾಡುವುದಿಲ್ಲ." ಎಂದು ಹೇಳಿದ್ದಾರೆ.

ಇನ್ನು ಸಿನಿಮಾಗಳಲ್ಲಿ ಕೆಲಸ ಮಾಡುವಾಗ ಯಾರೊಂದಿಗೂ ಜಗಳ ಮಾಡಿಕೊಂಡಿಲ್ಲ. ಆಗ ಅಂತಹ ಪ್ರಸಂಗವೇ ಬರುತ್ತಿಲ್ಲ ಎಂದು ಹೇಳಿದ್ದಾರೆ. "ಚಿತ್ರರಂಗದಲ್ಲಿ ಯಾರೊಂದಿಗೂ ಜಗಳ ಮಾಡಿಲ್ಲ. ಜಗಳ ಅನ್ನೋ ಪ್ರಸಂಗವೇ ಬರಲಿಲ್ಲ. ಆವಾಗ ಜಗಳ ಮಾಡುವಂತಹ ನಿರ್ಮಾಪಕರು ಇರಲಿಲ್ಲ. ಇವಾಗೇನೋ ಬಂದಿದ್ದಾರಂತೆ. ಅವರೊಂದಿಗೆ ಕೆಲಸವೇ ಇಲ್ವಲ್ಲ ನಮಗೆ." ಎಂದಿದ್ದಾರೆ.
ಇತ್ತೀಚೆಗೆ ಡಿಂಗ್ರಿ ನಾಗರಾಜ್ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಅವರ ಕಾಮಿಡಿಯನ್ನು ಹಾಸ್ಯಪ್ರಿಯರು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಸಿನಿಮಾಗಳಲ್ಲಿ ಅವಕಾಶಗಳು ಸಿಗದೆ ಇರುವುದಕ್ಕೆ ಕಾರಣ ತಬಲ ನಾನಿ, ಚಿಕ್ಕಣ್ಣ , ಸಾಧುಕೋಕಿಲ ಅಂತ ದೊಡ್ಡ ಕಲಾವಿದರು ಎಂದು ಹೇಳಿದ್ದಾರೆ. ಅಷ್ಟಕ್ಕೂ ಯಾಕೆ ಹೀಗಂದ್ರು?
"ಹೊಸ ನಿರ್ಮಾಪಕರು ಕರೆಯುವುದಿಲ್ಲ. ಯಾಕಂದ್ರೆ, ಈಗ ದೊಡ್ಡ ದೊಡ್ಡ ಕಲಾವಿದರು ಇದ್ದಾರಲ್ಲ. ತಬಲ ನಾಣಿಯವರು, ಚಿಕ್ಕಣ್ಣ, ಸಾಧು ಕೋಕಿಲಾ ಇವರೆಲ್ಲ ದೊಡ್ಡ ದೊಡ್ಡ ಕಲಾವಿದರು ಇರುವಾಗ ನಮ್ಮನ್ನೆಲ್ಲ ಯಾರು ಕರೆಯುತ್ತಾರೆ. ನಾವೂ ದೊಡ್ಡ ಕಲಾವಿದರೇ, ಅವರು ಹೇಳಿಕೊಳ್ಳುತ್ತಾರೆ. ನಾವು ಹೇಳಿಕೊಳ್ಳುವುದಿಲ್ಲ ಅಷ್ಟೇ." ಎಂದು ಡಿಂಗ್ರಿ ನಾಗರಾಜ್ ಅಭಿಪ್ರಾಯ ಪಟ್ಟಿದ್ದಾರೆ.
ಹಾಗೇ ಸಿನಿಮಾಗಳಲ್ಲಿ ನಟಿಸುವುದಕ್ಕೆ ನಮಗೆ ಡಿಮ್ಯಾಂಡ್ ಮಾಡಿದ್ದೇ ಕೊಟ್ಟಿಲ್ಲ. ಆದರೆ, ಈಗಿನ ಜಮಾನದ ಹಾಸ್ಯ ನಟರು ಪಡೆಯುವಷ್ಟು ಸಂಭಾವನೆಯನ್ನೂ ಪಡೆಯುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. "ಅವರು ಡಿಮ್ಯಾಂಡ್ ಮಾಡುತ್ತಾರೆ. ನಾವು ಮಾಡುವುದಿಲ್ಲ. ನಮ್ಮ ಹತ್ತಿರ ಬಂದು ಅಣ್ಣ 10 ಸಾವಿರ ಕೊಡುತ್ತೇವೆ ಅಂತಾರೆ. ಆಯ್ತು ಹೋಗಪ್ಪ ಅನ್ನುತ್ತೇವೆ. ಅಣ್ಣ ಐದು ಸಾವಿರ ರೂಪಾಯಿ ಕೊಡುತ್ತೇವೆ. ಅದರ ಮೇಲೆ ಕೊಡಲು ಆಗುವುದಿಲ್ಲ ಅಂತಾರೆ. ಆಯ್ತು ಹೋಗಣ್ಣ ಅಂತೀವಿ. ನಮ್ಮ ಮನೆಯಲ್ಲಿ ಬೈಯ್ಯುತ್ತಾರೆ. ನಿಮ್ಮ ಲೆವೆಲ್‌ನಲ್ಲಿ ಇರೋರು 75 ಸಾವಿರ ತೆಗೆದುಕೊಳ್ಳುತ್ತಾರೆ. ನೀವ್ಯಾಕೆ ಇಷ್ಟು ಕಡಿಮೆಗೆ ಹೋಗ್ತೀರ ಅಂತಾರೆ. ನಮಗೆ ಕೇಳುವುದಕ್ಕೆ ಮನಸ್ಸು ಬರೋದಿಲ್ಲ." ಎಂದಿದ್ದಾರೆ.


Click it and Unblock the Notifications










