KCN Mohan: ಥಿಯೇಟರ್ ಮಾಲೀಕರಾಗಿ ಕ್ರಾಂತಿ ಮಾಡಿದ್ದ ಕೆಸಿಎನ್ ಮೋಹನ್ ಚಿತ್ರರಂಗಕ್ಕೆ ಬಂದಿದ್ದು ಹೇಗೆ?
ಕನ್ನಡ ಚಿತ್ರರಂಗದ ಬೆಳವಣಿಗೆಗೆ ಬಹಳಷ್ಟು ಮಂದಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅದರಲ್ಲೂ ಕೆಸಿಎನ್ ಗೌಡ್ರು ಕುಟುಂಬದ ಪಾಲು ಕೂಡ ದೊಡ್ಡದೇ ಇದೆ. ತಂದೆಯ ಕಾಲದಿಂದಲೂ ಸಿನಿಮಾ ಕ್ಷೇತ್ರದಲ್ಲಿ ಈ ಕುಟುಂಬ ಹೆಚ್ಚು ದುಡಿದೆ.
ಕನ್ನಡದ ಹೆಸರಾಂತ ನಿರ್ಮಾಪಕ ಕೆಸಿಎನ್ ಗೌಡರಿಗೆ ಇಬ್ಬರು ಮಕ್ಕಳು. ಒಬ್ಬರು ಕೆಸಿಎನ್ ಚಂದ್ರಶೇಖರ್ ಮತ್ತೊಬ್ಬರು ಕೆಸಿಎನ್ ಮೋಹನ್. ಎರಡು ವರ್ಷಗಳ ಹಿಂದೆ ಕೆಸಿಎನ್ ಚಂದ್ರಶೇಖರ್ ನಿಧರಾಗಿದ್ದರು. ಇಂದು (ಜುಲೈ 2) ಕೆಸಿಎನ್ ಮೋಹನ್ ಕಿಡ್ನಿ ವೈಫಲ್ಯದಿಂದ ಕೊನೆಯುಸಿರೆಳೆದಿದ್ದಾರೆ.

ನಿರ್ಮಾಪಕರಾಗಿ, ವಿತರಕರಾಗಿ, ಥಿಯೇಟರ್ ಮಾಲೀಕರಾಗಿ ಕನ್ನಡ ಚಿತ್ರರಂಗಕ್ಕೆ ಕೆಸಿಎನ್ ಮೋಹನ್ ಅವರ ಕೊಡುವ ದೊಡ್ಡದಿದೆ. ಇವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿಯುತ್ತಿದೆ. ಈ ಸಂದರ್ಭದಲ್ಲಿ ಕೆಲವು ವರ್ಷಗಳ ಹಿಂದಷ್ಟೇ ಸ್ವತ: ಕೆಸಿಎನ್ ಮೋಹನ್ ತಮ್ಮ ಜರ್ನಿಯನ್ನು ಫಿಲ್ಮಿಬೀಟ್ ಜೊತೆ ಹಂಚಿಕೊಂಡಿದ್ದರು.
'ಹುಲಿಯ ಹಾಲಿನ ಮೇವು' ಸಿನಿಮಾ ಜರ್ನಿ ಶುರು
ಕೆಸಿಎನ್ ಮೋಹನ್ ಅವರ ತಂದೆ ಕೆಸಿಎನ್ ಗೌಡರು ಟೆಕ್ಸ್‌ಟೈಲ್ ಬ್ಯುಸಿನೆಸ್ ಮಾಡುತ್ತಿದ್ದರು. ಆಗ ನವರಂಗ್ ಥಿಯೇಟರ್ ಇದ್ದ ಜಾಗವನ್ನು ಹರಾಜಿನಲ್ಲಿ ಖರೀದಿ ಮಾಡಿ, ಅದೇ ಜಾಗದಲ್ಲಿ ಥಿಯೇಟರ್ ಕಟ್ಟಿಸಿದ್ದರು. ಅಲ್ಲಿಂದ ಈ ಕುಟುಂಬ ಸಿನಿಮಾ ಜರ್ನಿ ಆರಂಭ ಆಗಿತ್ತು. ಆದರೆ, ಕೆಸಿಎನ್ ಮೋಹನ್ ಅಣ್ಣಾವ್ರ ನಟಿಸಿದ 'ಹುಲಿಯ ಹಾಲಿನ ಮೇವು' ಸಿನಿಮಾದಿಂದ ಚಿತ್ರರಂಗ ಬಂದರು. ಈ ವಿಷಯವನ್ನು ಸ್ವತ: ಕೆಸಿಎನ್ ಮೋಹನ್ ಅವರೇ ವಿವರಿಸಿದ್ದಾರೆ.
"ನಾನು ಸಿನಿಮಾಗೆ ಬಂದಿದ್ದು ಹುಲಿಯ ಹಾಲಿನ ಮೇವು ಟೈಮ್‌ನಲ್ಲಿ. ಟೆಕ್ಸ್‌ಟೈಲ್ಸ್ ಬ್ಯುಸಿನೆಸ್ ಮಾಡಬೇಕು ಅಂತ ನಮ್ಮ ಫಾದರ್ ಎಲ್ಲಾ ರೆಡಿ ಮಾಡಿದ್ದರು. ಹುಲಿಯ ಹಾಲಿನ ಮೇವು ಟೈಮ್‌ನಲ್ಲಿ ಆಫೀಸ್‌ನಲ್ಲಿ ಕ್ರೌಡ್ ಇದೆ. ಇಲ್ಲಿ ಬಂದು ನೋಡಿ ಕೊಂಡು ಹೋಗಪ್ಪ ಅಂತ ಕರೆದಿದ್ದು, ಅಲ್ಲಿಂದ ಕೆಸಿಎನ್ ಮೂವೀಸ್‌ನಲ್ಲೆ ಸೆಟಲ್ ಆಗಿಬಿಟ್ಟೆ." ಎಂದು ಫಿಲ್ಮಿಬೀಟ್ ಜೊತೆ ಹಂಚಿಕೊಂಡಿದ್ದರು.
ವಿತರಕರು, ನಿರ್ಮಾಪಕರೂ ಹೌದು
ಕೆಸಿಎನ್ ಮೋಹನ್ ಕೇವಲ ಥಿಯೇಟರ್ ಮಾಲೀಕರಷ್ಟೇ ಅಲ್ಲ. ಅವರು ಸಾಕಷ್ಟು ಕನ್ನಡ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಅಲ್ಲದೆ ಅಂಬರೀಶ್, ವಿಷ್ಣುವರ್ಧನ್ ಅಂತಹ ದಿಗ್ಗಜರ ಸಿನಿಮಾಗಳನ್ನು ವಿತರಣೆ ಮಾಡಿದ್ದಾರೆ. 'ಭಕ್ತ ಸಿರಿಯಾಳ'ದಂತಹ ಭಕ್ತಿ ಪ್ರಧಾನ ಸಿನಿಮಾಗಳನ್ನೂ ಮಾಡಿದ್ದಾರೆ. ಅಂಬರೀಶ್ ಅವರದ್ದೇ 30 ರಿಂದ 40 ಸಿನಿಮಾ ವಿತರಣೆ ಮಾಡಿದ್ದಾರೆ. 15ಕ್ಕೂ ಹೆಚ್ಚು ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಅಣ್ಣ ಕೆಸಿಎನ್ ಚಂದ್ರಶೇಖರ್ ಜೊತೆ ಸೇರಿ ಪ್ರಗತಿ ಎಂಟರ್‌ಪ್ರೈಸಸ್ ಅಂತ ನಿರ್ಮಾಣ ಸಂಸ್ಥೆ ಕಟ್ಟಿಕೊಂಡರು. ಈ ಸಿನಿಮಾ ಮೂಲಕ ಇಬ್ಬರೂ ಒಳ್ಳೊಳ್ಳೆ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅಂಬರೀಶ್ ಅಭಿನಯದ 'ಅಂತಿಮ ತೀರ್ಪು', 'ಧರ್ಮಯುದ್ದ', 'ಒಂಟಿ ಧ್ವನಿ', 'ಒಂಟಿ ಸಲಗ', 'ನಮ್ಮೂರು ರಾಜ', 'ಜಯಸಿಂಹ', ಶಂಕರ್‌ನಾಗ್ ಅವರ 'ಭಲೇ ಚತುರ' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕೆಸಿಎನ್ ಸಹೋದದರು ಜಂಟಿಯಾಗಿ ನಿರ್ಮಾಣ ಮಾಡಿದ ಕೊನೆ ಸಿನಿಮಾವಿದು.

ಥಿಯೇಟರ್ ನಡೆಸೋದ್ರಲ್ಲಿ ಎಕ್ಸ್‌ಪರ್ಟ್
ಕೆಸಿಎನ್ ಮೋಹನ್ ಬೆಂಗಳೂರಿನ ನವರಂಗ್ ಅಂತಹ ಥಿಯೇಟರ್‌ಗಳ ಮಾಲೀಕರೂ ಹೌದು. ಮಾರ್ನಿಂಗ್ ಶೋಗಳನ್ನು ವಾರಪೂರ್ತಿ ಶುರು ಮಾಡಿದ್ದು ಇವರೇ. ಅದೇ ಸಂಸ್ಕೃತಿ ಈಗ ಹಾಗೇ ಮುಂದುವರೆದಿದೆ. ಅಣ್ಣಾವ್ರ ಸಿನಿಮಾ ವೀರಕೇಸರಿಯಿಂದ ಕೊನೆಯ ಸಿನಿಮಾವರೆಗೂ ಎಲ್ಲಾ ಸಿನಿಮಾಗಳನ್ನು ಪ್ರದರ್ಶನ ಮಾಡಿದ್ದಾರೆ.
ಇದೊಂದೇ ಅಲ್ಲದೆ ಕಪಾಲಿ ಚಿತ್ರಮಂದಿರವನ್ನು ಪಾರ್ಟ್ನರ್ ಜೊತೆ ಸೇರಿ ನಡೆಸುತ್ತಿದ್ದರು. 'ಪ್ರೇಮಲೋಕ'ದಂತಹ ಸಿಲ್ವರ್ ಜುಬ್ಲಿ ಸಿನಿಮಾವನ್ನು ರಿಲೀಸ್ ಮಾಡಿದ್ದು ಕೂಡ ಇವರೇನೇ. ರವಿಚಂದ್ರನ್ ಅವರ 'ಅಂಜದ ಗಂಡು','ಯುಗಪುರುಷ'ದಂತಹ ಸಿನಿಮಾಗಳನ್ನು ಇವರೇ ವಿತರಣೆ ಮಾಡಿದ್ದರು. ಇತ್ತೀಚೆಗೆ ಯೂಟ್ಯೂನ್ ಚಾನೆಲ್ ಒಂದರಲ್ಲಿ ಮುಕ್ತವಾಗಿ ನಮ್ಮ ಆಸ್ತಿ 600 ಕೋಟಿ ರೂ. ಎಂದು ಹೇಳಿಕೊಂಡಿದ್ದರು. ಇಂದು (ಜುಲೈ 2) ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ.


Click it and Unblock the Notifications











