ಅತ್ತ 'ಗೌರಿ ಕಲ್ಯಾಣ'.. ಇತ್ತ ಮತ್ತೊಂದು ಕಲ್ಯಾಣ; 2ನೇ ಮದುವೆಗೆ ಮೊದಲ ಪತ್ನಿಯನ್ನು ಒಪ್ಪಿಸಿದ್ದೇಗೆ?
'ಪ್ರಚಂಡ ಕುಳ್ಳ' ದ್ವಾರಕೀಶ್ ಅವರ 81 ವರ್ಷದ ಬದುಕು ಯಾವ ಸಿನಿಮಾಗೂ ಕಮ್ಮಿಯಿಲ್ಲ. ಇವರ ವೃತ್ತಿ ಬದುಕಿನ ಕಥೆ ಒಂದೆಡೆಯಾದರೆ, ವೈಯಕ್ತಿಕ ಬದುಕಿನ ಕಥೆಯೂ ಅಷ್ಟೇ ರೋಚಕ. ದ್ವಾರಕೀಶ್ ಧೈರ್ಯವಂತ ಅನ್ನೋದ ಸಿನಿಮಾ ಮಂದಿಗೆ ಗೊತ್ತಿತ್ತು. ಹಾಗೇ ಹೃದಯವಂತ ಅನ್ನೋದು ಎರಡನೇ ಮದುವೆ ಬಳಿಕ ಕನ್ಫರ್ಮ್ ಆಗಿತ್ತು.
ದ್ವಾರಕೀಶ್ ಚಿತ್ರರಂಗದಲ್ಲಿ ಸಕ್ಸಸ್‌ಫುಲ್ ನಟ, ನಿರ್ದೇಶಕ, ನಿರ್ಮಾಪಕರಾಗಿದ್ದರು. ಕನ್ನಡ ಚಿತ್ರರಂಗಕ್ಕೆ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಕೊಟ್ಟಿದ್ದರು. ಒಮ್ಮೆ ಸೋಲು, ಒಮ್ಮೆ ಗೆಲುವು ಇವರಿಗೆ ಕಾಮನ್ ಆಗಿ ಹೋಗಿತ್ತು. ಹೀಗಾಗಿ ಕುಗ್ಗದೆ ಮುಂದಕ್ಕೆ ಸಾಗುತ್ತಿದ್ದರು. ಆಗತಾನೇ 'ಶ್ರುತಿ' ಸಿನಿಮಾ ಗೆದ್ದಿತ್ತು. ಇದೇ ಜೋಷ್‌ನಲ್ಲಿ 'ಗೌರಿ ಕಲ್ಯಾಣ' ಅನ್ನೋ ಸಿನಿಮಾವನ್ನು ನಿರ್ಮಾಣಕ್ಕೆ ಕೈ ಹಾಕಿದ್ದರು.

ದ್ವಾರಕೀಶ್ ನಿರ್ಮಿಸುತ್ತಿದ್ದ 'ಗೌರಿ ಕಲ್ಯಾಣ' ಸಿನಿಮಾವೇ ಅವರ ಎರಡನೇ ಕಲ್ಯಾಣಕ್ಕೂ ಕಾರಣವಾಗಬಹುದು ಅನ್ನೋ ಚಿಕ್ಕ ಸುಳಿವು ಕೂಡ ಇರಲಿಲ್ಲ. ಇದೇ ಸಿನಿಮಾದ ಚಿತ್ರೀಕರಣದ ವೇಳೆ ದ್ವಾರಕೀಶ್ ಎರಡನೇ ಪತ್ನಿ ಶೈಲಜಾ ಪರಿಚಯವಾಗಿತ್ತು. ಅಕ್ಕನ ಮಗಳಿಗೆ ಚಾನ್ಸ್ ಕೇಳುವುದಕ್ಕೆ ಶೈಲಜಾ ಅವರು ಬಂದಿದ್ದರು. ಅಲ್ಲಿ ಆದ ಪರಿಚಯ ಮದುವೆವರೆಗೂ ಬಂದು ನಿಂತಿತ್ತು.
ಅಂದ್ಹಾಗೆ ಶೈಲಜಾ ಅವರು ಬ್ಯಾಂಕ್ ಉದ್ಯೋಗಿಯಾಗಿದ್ದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉನ್ನತ ಹುದ್ದೆಯಲ್ಲಿ ಇದ್ದರು. ಹೀಗೆ ಅಕ್ಕನ ಮಗಳಿಗೆ ಅವಕಾಶ ಕೇಳಲು ಬಂದವರಿಗೆ ದ್ವಾರಕೀಶ್ ಮನ ಸೋತಿದ್ದರು. ಆಗ ಅವರಿಗೆ 51 ವರ್ಷ ವಯಸ್ಸಾಗಿತ್ತು. ಹೀಗೆ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಸ್ನೇಹ ಪ್ರೀತಿಗೆ ತಿರುಗಿತ್ತು. ಪ್ರೀತಿ ಮದುವೆವರೆಗೂ ಬಂದು ನಿಂತಿತ್ತು.

ಅದಾಗಲೇ ದ್ವಾರಕೀಶ್ ಮದುವೆ ಅಂಬುಜಾ ಅವರೊಂದಿಗೆ ಆಗಿದ್ದರು. ಮೊದಲ ಮದುವೆಯಿಂದ ಐದು ಮಂದಿ ಮಕ್ಕಳು ಇದ್ದರು. ಅವರೆಲ್ಲರೂ ಟೀನೇಜ್‌ಗೆ ಬಂದಿದ್ದರು. ಇಂತಹ ಸಂದರ್ಭದಲ್ಲಿ ದ್ವಾರಕೀಶ್ ಎರಡನೇ ಮದುವೆ ಸಜ್ಜಾಗಿದ್ದರು. ಆದರೆ, ಮೊದಲ ಪತ್ನಿಗೆ ಈ ವಿಷಯ ಮುಟ್ಟಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಹೀಗೊಂದು ಸಂದರ್ಭದಲ್ಲಿ ಮೊದಲ ಪತ್ನಿ ಅಂಬುಜಾ ಅವರ ಬಳಿ ಎರಡನೇ ಮದುವೆ ಬಗ್ಗೆ ಹೇಳಿಕೊಂಡಿದ್ದರು.
ಆ ಘಟನೆ ಒಂದು ಸಿನಿಮಾದ ದೃಶ್ಯವಿದ್ದಂತೆ ಇದೆ. ದ್ವಾರಕೀಶ್ ಈ ವಿಷಯ ತಿಳಿಸುತ್ತಿದ್ದಂತೆ "ನೀನು ಮಾಡಿದ್ದು ತಪ್ಪು ಅಂತ ಹೇಳಲಿಲ್ಲ. ದ್ವಾರಕೀ ನಿನಗೆ ಯಾರು ಇಷ್ಟವೋ ನನಗೂ ಅವರು ಇಷ್ಟ" ಎಂದು ಮೊದಲ ಪತ್ನಿ ಅಂಬುಜಾ ಹೇಳಿದ್ದನ್ನು ದ್ವಾರಕೀಶ್ ಹಲವು ಸಂದರ್ಶನಗಳಲ್ಲಿ ನೆನಪಿಸಿಕೊಂಡಿದ್ದಾರೆ.
51ನೇ ವರ್ಷಕ್ಕೆ ದ್ವಾರಕೀಶ್ ಮೊದಲ ಪತ್ನಿ ಹಾಗೂ ಮಕ್ಕಳ ಸಮ್ಮುಖದಲ್ಲಿ ಎರಡನೇ ಮದುವೆ ಆದರು. ಶೈಲಜಾ ಹಾಗೂ ದ್ವಾರಕೀಶ್ ದಂಪತಿಗೆ ಒಬ್ಬ ಗಂಡು ಮಗ ಇದ್ದಾರೆ. ದ್ವಾರಕೀಶ್ ಇಬ್ಬರ ಹೆಂಡಿರ ಮುದ್ದಿನ ಗಂಡನಾಗಿ ಸುಖಕರವಾದ ಸಂಸಾರವನ್ನು ನಡೆಸಿದ್ದಾರೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಎರಡನೇ ಪತ್ನಿ ಶೈಲಜಾ, ದ್ವಾರಕೀಶ್ ಅವರ ಮೊದಲ ಪತ್ನಿ ಹಾಗೂ ಮಕ್ಕಳು ಪ್ರೀತಿಯಿಂದ ನೋಡಿ ಕೊಳ್ಳುತ್ತಿದ್ದಾರೆಂಬ ಪ್ರತಿಕ್ರಿಯೆ ನೀಡಿದ್ದರು.
ದ್ವಾರಕೀಶ್ ಮೊದಲ ಪತ್ನಿ ಅಂಬುಜಾ 2021, ಏಪ್ರಿಲ್ 16 ರಂದು ನಿಧನರಾಗಿದ್ದರು. ದ್ವಾರಕೀಶ್ ಕೂಡ ಏಪ್ರಿಲ್ 16, 2024ರಂದು ಕೊನೆಯುಸಿರೆಳೆದಿದ್ದಾರೆ.


Click it and Unblock the Notifications











