ಮಂಜುಳಾಗೆ ತಾಯಿಯಾಗಿ ನಟಿಸಲು ಜಯಂತಿ ಹಿಂದೇಟು; ವಜ್ರಮುನಿ ಮಾತಿಗೆ ಮತ್ತೆ ಒಪ್ಪಿದ್ದೇಗೆ?
ಕನ್ನಡ ಚಿತ್ರರಂಗದಲ್ಲಿ ಈ ನಟಿಗೆ ವಿಶೇಷವಾದ ಸ್ಥಾನವಿದೆ. ನಾಯಕಿಯಾಗಿ ನಟಿಸುವುದಕ್ಕೂ ಸೈ. ಗ್ಲಾಮರ್ ಗೊಂಬೆಯಾಗುವುದಕ್ಕೂ ಸೈ. ತಾಯಿ ಪಾತ್ರದಲ್ಲಿ ನಟಿಸುವುದಕ್ಕೂ ಸೈ. ಇಂತಹ ವಿಶಿಷ್ಠ ಪ್ರತಿಭೆಯುಳ್ಳ ನಟಿ ಜಯಂತಿ. ಹೀಗೆ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದ ದಿವಂಗತ ನಟಿ ಜಯಂತಿ. ಅದಕ್ಕೆ ಅಭಿಮಾನಿಗಳು ಪ್ರೀತಿಯಿಂದ ಅಭಿನಯ ಶಾರದೆ ಎಂದು ಕರೆಯುತ್ತಾರೆ.
ಜಯಂತಿ ಕನ್ನಡ ಸಿನಿಮಾಗಳಿಗೆ ಕೊಟ್ಟ ಕೊಡುಗೆ ಸಣ್ಣ ಪುಟ್ಟದಲ್ಲ. ಅಭಿನಯ ಶಾರದೆ ಅಂತ ಜಯಂತಿಗೆ ಸುಮ್‌ಸುಮ್ಮನೆ ಬಿರುದನ್ನೂ ಕೊಟ್ಟಿಲ್ಲ. ಸಿನಿಮಾಗಳಲ್ಲಿ ತಮ್ಮ ಪಾತ್ರದ ಮೇಲೆ ಆ ಮಟ್ಟಿಗೆ ಹಿಡಿತವನ್ನು ಇಟ್ಟಿಕೊಂಡಿದ್ದರು. ಬೇರೆ ಯಾವುದೇ ನಟಿನೂ ತಮ್ಮ ಇಮೇಜ್ ಅನ್ನು ಮರೆತು, ವೃತ್ತಿ ಬದುಕಿನಲ್ಲಿ ರಿಸ್ಕ್ ತೆಗೆದುಕೊಂಡ ಉದಾಹರಣೆಗಳು ಇಲ್ಲ.

ದಿವಂಗತ ನಟಿ ಜಯಂತಿ ನಾಯಕಿಯಾಗಿ ನಟಿಸುತ್ತಿದ್ದಾಗಲೇ ತಾಯಿ ಪಾತ್ರವನ್ನು ಮಾಡುತ್ತಿದ್ದರು. ತಾಯಿ ಪಾತ್ರದಲ್ಲಿ ನಟಿಸುವಾಗಲೇ ನಾಯಕಿಯಾಗಿಯೂ ಕಾಣಿಸಿಕೊಳ್ಳುತ್ತಿದ್ದರು. ಇಂತಹ ನಟಿ ಭಾರತೀಯ ಚಿತ್ರರಂಗದಲ್ಲೇ ಇಲ್ಲ ಅಂತ ಹಿರಿಯ ಪತ್ರಕರ್ತ ಎನ್ ಎಸ್ ಶ್ರೀಧರಮೂರ್ತಿ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅದರದ್ದೊಂದು ಝಲಕ್ ಇಲ್ಲಿದೆ.
ಜಯಂತಿ ಅವರ ವಯಸ್ಸಿಗೆ ಮೀರಿದ ಪಾತ್ರದಲ್ಲಿ ನಟಿಸುತ್ತಿದ್ದರು. ನಾಯಕಿ ಆಗಿದ್ದಾಗಲೇ ತಾಯಿ ಪಾತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಮಣ್ಣಿನ ಮಗಳು ಸಿನಿಮಾ ಜಯಂತಿ ತಾಯಿಯಾಗಿಯೂ ನಟಿಸಬಹುದು ಅಂತ ತೋರಿಸಿಕೊಟ್ಟ ಸಿನಿಮಾ ಎಂದು ಎನ್ ಎಸ್ ಶ್ರೀಧರಮೂರ್ತಿ ಹೇಳುತ್ತಾರೆ. "ಜಯಂತಿ ಎಷ್ಟು ಚೆನ್ನಾಗಿ ತಾಯಿಯ ಪಾತ್ರ ಮಾಡಬಲ್ಲರು ಅಂತ ತೋರಿಸಿಕೊಟ್ಟ ಸಿನಿಮಾ ಮಣ್ಣಿನ ಮಗಳು. ಈ ಸಿನಿಮಾ ಮಾಡಿದ ಬಳಿಕ ತಾಯಿ ಪಾತ್ರವನ್ನು ಮಾಡಿದರು. ಹಾಗೇ ನಾಯಕಿ ಕೂಡ ಆದರು. ಚಕ್ರತೀರ್ಥ ಅನ್ನೋ ಸಿನಿಮಾದಲ್ಲಿ ಜಯಂತಿ ದ್ವಿ ಪಾತ್ರದಲ್ಲಿ ನಟಿಸಿದ್ದರು. ಇದರಲ್ಲಿ ತಾಯಿಯ ಗಾಂಭೀರ್ಯತೆ ಹಾಗೂ ಮಗಳ ಚಂಚಲತೆ ಇವೆರಡನ್ನೂ ಪ್ರಯತ್ನ ಮಾಡಿದ್ದರು." ಎನ್ನುತ್ತಾರೆ.

ಜಯಂತಿ ತಾಯಿಯ ಪಾತ್ರ ಮಾಡುವ ಹೊತ್ತಿಗಾಗಲೇ ಪಂಡರೀಬಾಯಿ, ಲೀಲಾವತಿ ತಾಯಿ ಪಾತ್ರಕ್ಕೊಂದು ಮಾದರಿಯನ್ನು ಸೃಷ್ಟಿ ಮಾಡಿದ್ದರು. ತಾಯಿ ಅಂದರೆ ಹೀಗೆ ಇರಬೇಕು ಅನ್ನೋ ಇಮೇಜ್ ಇವರಿಬ್ಬರಿಗೆ ಬಂದು ಬಿಟ್ಟಿತ್ತು. ಇವರಿಗಿಂತ ಭಿನ್ನವಾದ ಮಾದರಿಯನ್ನು ಸೃಷ್ಟಿ ತಾಕತ್ತು ಜಯಂತಿಯವರಿಗೆ ಇತ್ತು. ಸಾಮಾನ್ಯವಾಗಿ ಕಲಾವಿದರು 50 ವರ್ಷ ದಾಟಿದ ಮೇಲೆ ತಾಯಿಯ ಪಾತ್ರ ಮಾಡುತ್ತಾರೆ. ಆದರೆ, ಜಯಂತಿ ನಾಯಕಿ ಪಾತ್ರ ಮಾಡುತ್ತಿರುವಾಗಲೇ ತಾಯಿ ಪಾತ್ರ ಮಾಡುವುದಕ್ಕೆ ಶುರು ಮಾಡಿದ್ದರು. ಹಾಗೇ ತಾಯಿ ಪಾತ್ರ ಮಾಡಿದ ಮೇಲೆ ನಾಯಕಿಯ ಪಾತ್ರ ಮಾಡಿದ್ದರು. ಇದು ಭಾರತೀಯ ಚಿತ್ರರಂಗದಲ್ಲೇ ಬೇರೆ ಯಾರೂ ಮಾಡಿಲ್ಲ.
ವಜ್ರಮುನಿ ಈ ನಟಿಯನ್ನು ಇಟ್ಟುಕೊಂಡು ಕಥೆಯನ್ನು ಹೆಣೆದಿರುತ್ತಾರೆ. ಅದರಲ್ಲಿ ಜಯಂತಿ ತಾಯಿಯಾಗಿ ನಟಿಸಬೇಕಿತ್ತು. ಮಂಜುಳಾ ಮಗಳಾಗಿ ಬಣ್ಣ ಹಚ್ಚಬೇಕಿತ್ತು. ಮೊದಲು ತನ್ನ ಸಮಕಾಲೀನ ನಟಿ ಮಂಜುಳಾಗೆ ಜಯಂತಿ ತಾಯಿ ಆಗುವುದಕ್ಕೆ ಹಿಂದೇಟು ಹಾಕಿದ್ದರು. "ವಜ್ರಮುನಿಯವರು ಒಂದು ಸಿನಿಮಾ ಮಾಡಬೇಕು ಅಂತ ಇಷ್ಟ ಪಡುತ್ತಾರೆ. ಆ ಜಯಂತಿ ಅವರನ್ನು ತಾಯಿ ಪಾತ್ರ ಮಾಡಬೇಕು ಅಂತ ಕೇಳುತ್ತಾರೆ. ಜಯಂತಿ ಈಗಾಗಲೇ ತಾಯಿಯ ಪಾತ್ರದಲ್ಲಿ ನಟಿಸಿರುತ್ತಾರೆ. ಆದರೆ, ಈ ಸಿನಿಮಾದಲ್ಲಿ ಅವರ ಸಮಕಾಲೀನ ನಟಿ ಮಂಜುಳಾಗೆ ತಾಯಿಯ ಪಾತ್ರ ಮಾಡಬೇಕು ಅಂದಾಗ ಸ್ವಲ್ಪ ಹಿಂದೆ ಮುಂದೆ ನೋಡುತ್ತಾರೆ." ಎಂದು ಘಟನೆಯನ್ನು ನೆನಪಿಸುತ್ತಾರೆ.
ಜಯಂತಿ ತಾಯಿಯ ಪಾತ್ರ ಒಪ್ಪದೇ ಇದ್ದಾಗ, " ವಜ್ರಮುನಿ ಒಂದು ಮಾತು ಹೇಳುತ್ತಾರೆ. ಈ ಸಿನಿಮಾಗೆ ಕಥೆ ಬರೆದಿರೋದೇ ನಿಮ್ಮನ್ನು ಗಮನದಲ್ಲಿ ಇಟ್ಟುಕೊಂಡು. ನೀವು ಈ ಪಾತ್ರ ಮಾಡುವುದಕ್ಕೆ ಆಗುವುದಿಲ್ಲ ಅಂದರೆ, ಈ ಪಾತ್ರವನ್ನು ಮತ್ತೆ ಯಾರೂ ಮಾಡುವುದಕ್ಕೆ ಆಗುವುದಿಲ್ಲ ಎನ್ನುತ್ತಾರೆ. ಆಗ ಜಯಂತಿ ಅವರು ಈ ಪಾತ್ರವನ್ನು ಒಪ್ಪಿಕೊಳ್ಳುತ್ತಾರೆ. ಆ ಸಿನಿಮಾಗೆ ಮೊದಲು ವಸಂತ ಗೀತಾ ಮೊದಲು ಹೆಸರಿಟ್ಟಿದ್ದರು. ಆ ಮೇಲೆ ತಾಯಿಗಿಂತ ದೇವರಿಲ್ಲ ಬದಲಾಯಿಸಿದರು." ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.


Click it and Unblock the Notifications










