ಕನ್ನಡ ಚಿತ್ರರಂಗದ 'ಪ್ರಚಂಡ ರಾವಣ' ಎಡವಿದ್ದೆಲ್ಲಿ? ನಟನೆಯಲ್ಲಿ ಗೆದ್ದಿದ್ದ ವಜ್ರಮುನಿ ಸೋತಿದ್ದೆಲ್ಲಿ?
ವಜ್ರಮುನಿ ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ನಟ. ಕನ್ನಡದ ಚಿತ್ರರಂಗದಲ್ಲಿ ಖಳನಟನಿಗೆ ಸ್ಟಾರ್ ಪಟ್ಟ ತಂದುಕೊಟ್ಟಿದ್ದು ವಜ್ರಮುನಿ. ಸಿನಿಮಾ ಪರದೆ ಮೇಲೆ ಕೋಪಿಷ್ಟನಾಗಿ, ಕ್ರೂರಿಯಾಗಿ ನಾನಾ ಅವತಾರದಲ್ಲಿ ಕಾಣಿಸಿಕೊಂಡು ಗೆದ್ದಿದ್ದ ಈ ನಟನಿಗೆ ಬದುಕು ಕೊಟ್ಟ ಪಾತ್ರ ರಾವಣ. ಇವರ ಅಭಿನಯಕ್ಕೂ, ಆ ಪಾತ್ರಕ್ಕೂ ಸರಿಯಾಗಿ ಹೊಂದಿಕೊಂಡಿತ್ತು.
ಕಣಗಲ್ ಪ್ರಭಾಕರ ಶಾಸ್ತ್ರಿಯವರ 'ಪ್ರಚಂಡ ರಾವಣ'ದಲ್ಲಿ ರಾವಣನಾಗಿ ನಟಿಸಿದ್ದರು. ಅದೇ ಪಾತ್ರ ಅವರಿಗೆ ಚಿತ್ರರಂಗದಲ್ಲಿ ಬದುಕು ಕೊಟ್ಟಿತ್ತು. 1969ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ 'ಮಲ್ಲಮ್ಮನ ಪವಾಡ' ಸಿನಿಮಾದಲ್ಲಿ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸಿದ್ದರು. ಇಲ್ಲಿಂದ ವಜ್ರಮುನಿ ಮತ್ತೆ ತಿರುಗಿ ನೋಡಲೇ ಇಲ್ಲ.

ಡಾ.ರಾಜ್‌ಕುಮಾರ್ ಅವರೊಂದಿಗೆ ನಟಿಸಿದ ಬಹುತೇಕ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. 'ಸಿಪಾಯಿ ರಾಮು', 'ಸಂಪತ್ತಿಗೆ ಸವಾಲ್', 'ಪ್ರೇಮದ ಕಾಣಿಕೆ', 'ಬಹದ್ಧೂರ್ ಗಂಡು', 'ಗಿರಿ ಕನ್ಯೆ', 'ಶಂಕರ್ ಗುರು' ಅಂತಹ ಸಿನಿಮಾಗಳಲ್ಲಿ ನಟಿಸಿ ಜೈ ಎನಿಸಿಕೊಂಡಿದ್ದರು. ಬಿಡುವಿಲ್ಲದೆ ನಟಿಸುತ್ತಿದ್ದ ವಜ್ರಮುನಿ ತಮ್ಮ ವೃತ್ತಿ ಬದುಕಿನಲ್ಲಿ ಕೆಲವು ತಪ್ಪು ಹೆಜ್ಜೆಗಳನ್ನು ಇಟ್ಟರು. ಇದರಿಂದ ಅವರ ಬದುಕಿನ ಕೊನೆಯ ದಿನಗಳು ದುರಂತಕ್ಕೆ ತಳ್ಳಿದ್ದವು. ಈ ಬಗ್ಗೆ ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಸಿನೆರಮಾ ಯೂಟ್ಯೂಬ್ ಚಾನೆಲ್‌ನಲ್ಲಿ ವಿವರಿಸಿದ್ದಾರೆ.
1994ರಲ್ಲಿ ವಜ್ರಮುನಿ ಹೊಸ ಸಾಹಸಕ್ಕೆ ಮುಂದಾಗಿದ್ದರು. ಸಿನಿಮಾಗೆ ಕೊಂಚ ಬ್ರೇಕ್ ಕೊಟ್ಟು ರಾಜಕೀಯದ ಕಡೆ ಮುಖ ಮಾಡಿದ್ದರು. ಬಸವನಗುಡಿ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುವುದಕ್ಕೆ ಮುಂದಾಗಿದ್ದರು. ಕಾಂಗ್ರೆಸ್ ಪಕ್ಷದಿಂದ ಎಲೆಕ್ಷನ್‌ಗೆ ನಿಂತಿದ್ದರು. ಮಿತ್ರರ ಸಹಕಾರ, ಜನರ ಹಾಗೂ ಪಕ್ಷದ ಬೆಂಬಲ ಕೂಡ ಇತ್ತು. ಆದರೆ, ಬಸವನಗುಡಿಯಂತಹ ಕ್ಷೇತ್ರದಲ್ಲಿ ವಜ್ರಮುನಿ ಎಷ್ಟೇ ಪ್ರಯತ್ನ ಪಟ್ಟರೂ ಗೆಲ್ಲುವುದಕ್ಕೆ ಸಾಧ್ಯವಾಗಲಿಲ್ಲ. ಇದು ವಜ್ರಮುನಿ ಬದುಕಿನ ದೊಡ್ಡ ಸೋಲಾಗಿತ್ತು.
"ಪ್ರಚಾರದ ವೇಳೆ ಮತ ಕೇಳುವುದಕ್ಕೆ ಹೋದಾಗ ಎಷ್ಟೋ ಮಂದಿ ಇವರನ್ನು ಮನೆಯೊಳಗೆ ಸೇರಿಸುತ್ತಿರಲಿಲ್ವಂತೆ. ತೆರೆಯ ಮೇಲಿನ ಪಾತ್ರ ನಿರ್ವಹಣೆ ಅವರು ನಿಜಕ್ಕೂ ವಿಲನ್ ಏನೋ ಅನ್ನುವಂತೆ ಬಿಂಬಿಸಿತ್ತು. ಹಾಗಾಗಿ ಎಷ್ಟೋ ಜನ ಬಾಗಿಲನ್ನೇ ತೆಗೆಯುತ್ತಿರಲಿಲ್ಲ. ಕೊನೆಗೆ ಅವರ ಪತ್ನಿಯನ್ನು ಕರೆದುಕೊಂಡು ಹೋಗಿ ಮತ ಕೇಳಿದ್ದರು. ಆದರೂ ಸೋಲನ್ನು ಕಂಡಿದ್ದರು. ಆದರೆ, ಜಯನಗರ ಸೊಸೈಟಿಯಲ್ಲಿ ಕೊನೆಯವರೆಗೂ ಅಧ್ಯಕ್ಷರಾಗಿ ಮುಂದುವರೆಯುತ್ತಾರೆ. ಅದ್ಭುತ ಕೆಲಸ ಮಾಡುತ್ತಾರೆ." ಎಂದು ಹರಿಹರಪುರ ಮಂಜುನಾಥ್ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.

ವಜ್ರಮುನಿಗೆ ಸಿನಿಮಾ ನಿರ್ಮಾಣದ ಮೇಲೆ ಆಸಕ್ತಿ ಹೆಚ್ಚಾಗಿತ್ತು. 1976ರಲ್ಲಿ ವಜ್ರಮುನಿ ವೈ ಆರ್ ಸ್ವಾಮಿಯವರ ನಿರ್ದೇಶನದಲ್ಲಿ 'ತಾಯಿಗಿಂತ ದೇವರಿಲ್ಲ' ಅನ್ನುವ ಒಂದು ಸಿನಿಮಾ ತೆಗೆಯುತ್ತಾರೆ. ಆ ಸಿನಿಮಾ ಬಿಡುಗಡೆ ವೇಳೆ ಚಂಡಮಾರುತ ಬಂದಿದ್ದರಿಂದ ಜನ ಜೀವನ ಅಸ್ತವ್ಯಸ್ತ ಆಗಿರುತ್ತೆ. ಹಾಗಾಗಿ ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸುತ್ತೆ. ಹಾಗಾಗಿ ಬಹಳ ದಿನಗಳ ಕಾಲ ನಿರ್ಮಾಣದ ಸಹವಾಸವೇ ಬೇಡ ಅಂತ ಸುಮ್ಮನಿರುತ್ತಾರೆ.
" ಆ ಬಳಿಕ 1984ರಲ್ಲಿ ರಾಜೇಂದ್ರ ಸಿಂಗ್ ಬಾಬು ಅವರು ಒಂದು ಸಿನಿಮಾ ತೆಗೆಯೋಣ ಅಂತ ಹೇಳುತ್ತಾರೆ. ಹೀಗೆ ಗಂಡಬೇರುಂಡ ಸಿನಿಮಾದ ನಿರ್ಮಾಣದಲ್ಲಿ ತೊಡಗಿಕೊಳ್ಳುತ್ತಾರೆ. ಅದೊಂದು ಬಿಳಿ ಆನೆಯಂತಹ ಪ್ರಾಜೆಕ್ಟ್. ರಾಜೇಂದ್ರ ಸಿಂಗ್ ಬಾಬು ಅವರು ತುಂಬಾನೇ ಖರ್ಚು ಮಾಡಿ ಸಿನಿಮಾ ತೆಗೆಸುತ್ತಾರೆ. ಆ ಸಿನಿಮಾ ತೆಗೆಯುವಾಗ ಟೆನ್ಷನ್‌ನಿಂದ ವಜ್ರಮುನಿಯವರ ಆರೋಗ್ಯದಲ್ಲೂ ಏರುಪೇರಾಗುತ್ತೆ. ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದರಿಂದ ನಟನೆ ಕಡಿಮೆ ಆಗುತ್ತೆ. ಇದರಿಂದ ಸಂಪಾದನೆಗಿಂತ ಖರ್ಚು ಹೆಚ್ಚಾಗುತ್ತೆ. ಮುಂದೆ ಅಂಬರೀಶ್ ಅವರ ಹಸಿದ ಹೆಬ್ಬುಲಿ, ಬ್ರಹ್ಮಾಸ್ತ್ರ, ಭೇಟೆ ಹೀಗೆ ಕೆಲವು ಚಿತ್ರಗಳನ್ನು ನಿರ್ಮಾಣ ಮಾಡಿ ಸಾಲ ತೀರಿಸಬೇಕಾಗುತ್ತೆ. ಆದರೂ ನಿರ್ಮಾಣ ಹುಚ್ಚು ಹೋಗಿರಲಿಲ್ಲ. ಮತ್ತೊಂದಿಷ್ಟು ಸಿನಿಮಾ ನಿರ್ಮಾಣ ಮಾಡಿ ಕೈ ಸುಟ್ಟುಕೊಳ್ಳುತ್ತಾರೆ. ಬಳಿಕ ಹಲವು ನಿವೇಶನವನ್ನು ಮಾರಿ ಸಾಲ ತೀರಿಸಬೇಕಾಗುತ್ತೆ." ಎಂದು ಹರಿಹರಪುರ ಮಂಜುನಾಥ್ ಹೇಳಿದ್ದಾರೆ.
1997ರಲ್ಲಿ ಅವರಿಗೆ ಕಿಡ್ನಿ ಸಮಸ್ಯೆ ಪ್ರಾರಂಭ ಆಗಿ ಡಯಾಲಿಸೀಸ್ ಮಾಡಿಸುವಂತಹ ಸ್ಥಿತಿ ಬರುತ್ತೆ. ಆ ಹೊತ್ತಿಗಾಗಲೇ ಅವರಿಗೆ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದ್ದರು. ಬೇರೆ ಬೇರೆ ಸಿನಿಮಾಗಳಲ್ಲಿ ನಟಿಸುತ್ತಿದ್ದಂತೆ ರಾಜ್‌ಕುಮಾರ್ ಅವರೊಂದಿಗೆ ನಟಿಸುವುದು ಕಡಿಮೆ ಆಗಿತ್ತು. ಹೀಗಾಗಿ ಆಗೊಂದು ಸುದ್ದಿ ಹಬ್ಬಿತ್ತು. ರಾಜ್‌ಕುಮಾರ್ ಹಾಗೂ ವಜ್ರಮುನಿಯವರ ಮಧ್ಯೆ ಏನೋ ನಡೆದಿದೆ. ಹಾಗಾಗಿ ಅವರು ಪಾತ್ರ ಮಾಡುತ್ತಿಲ್ಲ ಎಂದು ಸುದ್ದಿ ಹಬ್ಬಿತ್ತು. ಆಗ ದೂರದರ್ಶನದಲ್ಲಿ ಒಂದು ಸಂದರ್ಶನ ಕೊಟ್ಟು ಸ್ಪಷ್ಟನೆ ಕೊಡುತ್ತಾರೆ.
"ತಮ್ಮ ಕೊನೆಯ ದಿನಗಳಲ್ಲಿ ವಜ್ರಮುನಿ ತಮಗ್ಯಾಕೆ ಈ ಸ್ಥಿತಿ ಬಂತು ಅನ್ನೋದನ್ನು ಹೇಳಿಕೊಂಡಿದ್ದರು. ಸಿನಿಮಾದಲ್ಲಿ ನಟಿಸುವಾಗ ಕಣ್ಣು ಕೆಂಪಾಗಿ ಕಾಣಬೇಕು ಅಂತ ಸಿಗರೇಟಿನ ಹೊಗೆಯನ್ನು ಬಿಟ್ಟುಕೊಳ್ಳುತ್ತಿದ್ದರಂತೆ. ಬಹುಶ: ಹಾಗೇ ಮಾಡಿದ್ದಕ್ಕೆ ಇವತ್ತು ನನ್ನ ದೃಷ್ಠಿ ಕ್ಷೀಣಿಸಿದೆ ಎಂದು ಹೇಳಿದ್ದರು. ಅಲ್ಲದೆ ರಾತ್ರಿ ಶೂಟಿಂಗ್ ನಡೆಯುತ್ತಿದ್ದರಿಂದ ನಿದ್ದೆ ಬಾರದೆ ಇರಲಿ ಎಂದು ಸಿಗರೇಟ್ ಸೇದುವುದು, ಟೀ ಕಾಫಿ ಕುಡಿಯುವುದು, ಮಧ್ಯಪಾನ ಇವೆಲ್ಲದರಿಂದ ಆರೋಗ್ಯ ಕ್ಷೀಣಿಸಿತ್ತು ಎಂದು ಮುಚ್ಚುಮರೆ ಇಲ್ಲದೆ ಹೇಳಿಕೊಂಡಿದ್ದರು" ಎಂದು ಅವರ ಕೊನೆಯ ದಿನವನ್ನು ವಿವರಿಸಿದ್ದಾರೆ.
ಕನ್ನಡ ಚಿತ್ರರಂಗದ ದಿಗ್ಗಜ ವಜ್ರಮುನಿ 2006ನೇ ಇಸವಿ ಜನವರಿ 5ನೇ ತಾರೀಕು ಇಹಲೋಕವನ್ನು ತ್ಯಜಿಸುತ್ತಾರೆ. ರಾಜ್‌ಕುಮಾರ್ ಅಗಲುವ ಕೇವಲ ನಾಲ್ಕು ತಿಂಗಳು ಮೊದಲು ವಜ್ರಮುನಿ ಕೂಡ ನಿಧನರಾಗುತ್ತಾರೆ.


Click it and Unblock the Notifications











