Dr Rajkumar : "ವರದಪ್ಪ ಕರೆ ಕಳಿಸುತ್ತಾನೆ.. ಆಗ ನಾನು ಹೋಗ್ತೀನಿ" ಸಹೋದರ ಅಗಲಿದ 2 ತಿಂಗಳಲ್ಲೇ ದೇಹತ್ಯಾಗ ಮಾಡಿದ್ದ ಅಣ್ಣಾವ್ರು!
ಕರ್ನಾಟಕ ರತ್ನ, ನಟ ಸಾರ್ವಭೌಮ, ವರನಟ ಅಭಿಮಾನಿಗಳು ರಾಜ್‌ಕುಮಾರ್‌ಗೆ ಕೊಟ್ಟ ಬಿರುದು ಒಂದಾ ಎರಡಾ? ಇಂದಿಗೂ ಅಣ್ಣಾವ್ರ ಸಿನಿಮಾಗಳು ಅಂದ್ರೆ, ವಯಸ್ಸಿನ ಅಂತರ ಮರೆತು ಸಿನಿಮಾ ನೋಡುವವರ ದೊಡ್ಡ ವರ್ಗವೇ ಇದೆ. ರಾಜ್‌ಕುಮಾರ್ ಅವರನ್ನು ದೇವರಂತೆ ಆರಾಧಿಸುವ ದೊಡ್ಡ ಅಭಿಮಾನಿ ಬಳಗವೂ ಇದೆ.
ಇಂದು (ಏಪ್ರಿಲ್ 12) ಡಾ.ರಾಜ್‌ಕುಮಾರ್ ಅಪಾರ ಅಭಿಮಾನಿಗಳನ್ನು ಅಗಲಿ 17 ವರ್ಷಗಳಾಗಿವೆ. ಆದರೂ, ಅಣ್ಣಾವ್ರ ಸ್ಮರಣೆ ನಿರಂತರವಾಗಿ ನಡೆಯುತ್ತಲೇ ಇದೆ. ಆದರೆ, ರಾಜ್‌ಕುಮಾರ್ ಅಗಲಿಕೆ ಹಿಂದೆನೂ ಸಹೋದರ ಸಂಬಂಧವಿದೆ.

ಡಾ.ರಾಜ್‌ಕುಮಾರ್ ಹಾಗೂ ಅವರ ಸಹೋದರ ವರದಪ್ಪ ಬಾಂಧವ್ಯವೇ ಹಾಗಿತ್ತು. ಒಬ್ಬರನ್ನು ಬಿಟ್ಟು ಮತ್ತೊಬ್ಬರು ಇರುತ್ತಲೇ ಇರಲಿಲ್ಲ. ನಿಜಕ್ಕೂ ಅಣ್ಣಾವ್ರ ಬೆನ್ನೆಲುಬಾಗಿ ವರದಪ್ಪ ನಿಂತಿದ್ದರು. ಸಿನಿಮಾದ ಕಥೆಗಳ ಆಯ್ಕೆ, ನಿರ್ಮಾಣದ ಜವಾಬ್ದಾರಿ ಎಲ್ಲವನ್ನೂ ಅವರೇ ನೋಡಿಕೊಳ್ಳುತ್ತಿದ್ದರು. ಅಣ್ಣಾವ್ರ ಬದುಕಿನ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದು ವರದಪ್ಪ ಅವರೇ. ಸಹೋದರಿಬ್ಬರ ಸಂಬಂಧ ಎಷ್ಟು ಗಾಢವಾಗಿತ್ತು ಅಂದ್ರೆ, ವರದಪ್ಪ ಅಗಲಿದ ಎರಡು ತಿಂಗಳಲ್ಲೇ ಅಣ್ಣಾವ್ರು ಇಹಲೋಕ ತ್ಯಜಿಸಿದ್ದರು.
ವರದಪ್ಪ ರಾಜ್‌ಕುಮಾರ್ ಬಾಂಧವ್ಯ ಎಂತಹದ್ದು?
ಡಾ.ರಾಜ್‌ಕುಮಾರ್ ಅಭಿಮಾನಿಗಳ ಪಾಲಿಗೆ ವರನಟ, ಅಣ್ಣಾವ್ರು ಆಗುವುದಕ್ಕೆ ವರದಪ್ಪ ಅವರ ಶ್ರಮವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಡಾ.ರಾಜ್‌ಕುಮಾರ್ ಹಾಗೂ ವರದಪ್ಪ ಯಾವಾಗಲೂ ಜೊತೆಯಲ್ಲೇ ಇರುತ್ತಿದ್ದರು. ಹೀಗಾಗಿ ಇಬ್ಬರ ಬಾಂಧವ್ಯ ಬೆಲೆಕಟ್ಟಲು ಸಾಧ್ಯವಿಲ್ಲ.

ರಾಜ್‌ಕುಮಾರ್ ಹಾಗೂ ವರದಪ್ಪ ಅವರನ್ನು ಹತ್ತಿರದಿಂದ ನೋಡಿರೋ ಹಿರಿಯ ನಿರ್ಮಾಪಕ ಚಿನ್ನೇಗೌಡರು ಇವರ ಬಾಂಧವ್ಯವನ್ನು ನೆನೆದು ಭಾವುಕರಾಗಿದ್ದರು. "ರಾಜ್‌ಕುಮಾರ್ ಸಹೋದರ ವರದಪ್ಪ ಅವರು ಗೊತ್ತಿದೆ. ಆ ರೀತಿ ಅಣ್ಣಾ ತಮ್ಮಂದಿರನ್ನು ನೋಡುವುದಕ್ಕೆ ಆಗುವುದಿಲ್ಲ. ಒಂದೇ ನಾಣ್ಯದ ಎರಡು ಮುಖಗಳಂತೆ ಇದ್ದ ವ್ಯಕ್ತಿತ್ವ ಅವರದ್ದು. ಅವರ ತಮ್ಮ ಫೆಬ್ರವರಿಯಲ್ಲಿ ತೀರಿ ಹೋಗುತ್ತಾರೆ. ಅವರ ತಮ್ಮನ ಅಗಲಿಕೆಯ ನೋವನ್ನು ತಡೆದುಕೊಳ್ಳುವುದಕ್ಕೆ ಆಗದೇನೆ, ಇಲ್ಲಪ್ಪ ನಾನು ಬಂದು ಬಿಡುತ್ತೇನೆ ಅಂತ ಹೇಳಿದ್ದರು." ಎಂದು ಮಾಧ್ಯಮಗ ಮುಂದೆ ನೆನಪಿಸಿಕೊಂಡಿದ್ದರು.
ಏನ್ರಿ ಅದು ಅಣ್ಣ-ತಮ್ಮಂದಿರ ಸಂಬಂಧ?
ರಾಜ್‌ಕುಮಾರ್ ಹಾಗೂ ಸಹೋದರ ವರದಪ್ಪ ನಡುವಿನ ಬಾಂಧವ್ಯಕ್ಕೆ ಇಬ್ಬರ ಅಗಲಿಕೆನೇ ಸಾಕ್ಷಿ. ಫೆಬ್ರವರಿ 8, 2006ರಂದು ವರದಪ್ಪ ಹೃದಯ ಸಂಬಂಧಿ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದರು. ಈ ಘಟನೆ ಅಣ್ಣಾವ್ರಿಗೆ ಸಹಿಸಿಕೊಳ್ಳಲು ಆಗಿರಲಿಲ್ಲ. ತಮ್ಮನ ವಿದಾಯ ವರನಟನ ಮನಸ್ಸಿನ ಮೇಲೆ ತುಂಬಾನೇ ಪ್ರಭಾವ ಬೀರಿತ್ತು.
ರಾಜ್‌ಕುಮಾರ್ ಕುಟುಂಬದ ಸದಸ್ಯರು ಹಾಗೂ ನಿರ್ಮಾಪಕರೂ ಆಗಿರುವ ಚಿನ್ನೆಗೌಡರು ಸಹೋದರ ಸಂಬಂಧವನ್ನು ನೆನೆದಿದ್ದಾರೆ. "ಫೆಬ್ರವರಿಯಲ್ಲಿ ವರದಪ್ಪ ಹೋಗುತ್ತಾರೆ. ಏಪ್ರಿಲ್‌ನಲ್ಲಿ ಇವರು ಹೋಗುತ್ತಾರೆ ಅಂದ್ರೆ ಏನ್ರಿ ಇದು. ಅಣ್ಣ ತಮ್ಮಂದಿರ ಬಾಂಧವ್ಯದಲ್ಲಿರೋ ಸಂಬಂಧ ಎಂತಹದ್ದು ಅಂತ ನೀವೇ ಯೋಚನೆ ಮಾಡಿ" ಎಂದು ಸಹೋದರರ ಬಾಂಧವ್ಯವನ್ನು ಹಿರಿಯ ನಿರ್ಮಾಪಕ ಹಾಗೂ ಸಂಬಂಧಿ ಚಿನ್ನೇಗೌಡರು ನೆನಪಿಸಿಕೊಂಡಿದ್ದರು.
'ಅರಸು' ಬಗ್ಗೆ ಮಾತಾಡಿಲ್ಲ.. ವರದಪ್ಪ ನೆನೆದು ಭಾವುಕರಾಗಿದ್ರು
ನಿರ್ದೇಶಕರು ಹಾಗೂ ಅಣ್ಣಾವ್ರ ಕುಟುಂಬಕ್ಕೆ ಆಪ್ತರು ಆಗಿರುವ ಪ್ರಕಾಶ್ ರಾಜ್ ಮೆಹು ಅವರೂ ಕೂಡ ಅಣ್ಣಾವ್ರ ಕೊನೆಯ ದಿನಗಳನ್ನು ನೆನೆದಿದ್ದಾರೆ. "ಅರಸು ಸಿನಿಮಾ ಶುರುವಾಯ್ತು. ಇನ್ನೇನು ಪ್ರೀಪೊಡಕ್ಷನ್ ಎಲ್ಲಾ ಶುರುವಾಗಬೇಕು ಅನ್ನುವಷ್ಟರಲ್ಲಿ ವರದಣ್ಣ ಅವರು ತೀರಿಕೊಂಡರು. ಮತ್ತೆ ಸಿನಿಮಾ ನಿಂತು ಹೋಯ್ತು. ತಿಥಿ ಎಲ್ಲ ಆದ್ಮೇಲೆ ಮತ್ತೆ ಒಂದು ತಿಂಗಳಲ್ಲಿ ಸಿನಿಮಾ ಶುರುವಾಯ್ತು. ಸಿನಿಮಾ ಆರಂಭ ಆದಾಗ ಪ್ರೆಸ್‌ಮೀಟ್ ಕೂಡ ಮಾಡಿದ್ವಿ. ಆ ವೇಳೆ ಅಣ್ಣಾವ್ರ ಸಿನಿಮಾ ಬಗ್ಗೆ ಮಾತಾಡಿಲ್ಲ. ಅವರ ತಮ್ಮನ ಬಗ್ಗೆ ಮಾತಾಡಿದ್ರು." ಎಂದು ಕನ್ನಡ ಪಿಕ್ಚರ್‌ಗೆ ನೀಡಿದ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.
"ನಾವು ಎಲ್ಲಾದ್ರೂ ಹೋಗಬೇಕಾದರೆ ವರದಪ್ಪ ಮೊದಲು ಅಲ್ಲಿಗೆ ಹೋಗೋರು. ಹೋಗಿ ಅಲ್ಲಿ ಎನೂ ತೊಂದರೆ ಇಲ್ಲ ವಾತಾವರಣ ಎಲ್ಲಾ ಓಕೆ ಅಂದ್ಮೇಲೆ ನಮಗೆ ಕರೆ ಕಳಿಸೋನು. ಈಗಲೂ ಹಾಗೇ ಮೇಲೆ ಹೋಗಿದ್ದಾನೆ. ಅಲ್ಲಿ ವಾತಾವರಣ ನೋಡುತ್ತಿದ್ದಾನೆ. ಅಲ್ಲಿ ಎಲ್ಲಾ ಸರಿ ಹೋದ್ಮೇಲೆ ಕರೆ ಕಳಿಸುತ್ತಾನೆ. ನಾನು ಹೋಗುವುದಕ್ಕೆ ರೆಡಿಯಾಗಿದ್ದೀನಿ ಅಂದಿದ್ರು. ರಾಜ್‌ಕುಮಾರ್-ವರದಪ್ಪ ಅವರು ತೀರಿಹೋಗಿದ್ದಕ್ಕೆ ಎರಡು ತಿಂಗಳು ಅಷ್ಟೇ ಡಿಫ್ರೆನ್ಸ್." ಎಂದು ನಿರ್ದೇಶಕ ಪ್ರಕಾಶ್ ರಾಜ್ ಮೆಹು ಆ ದಿನವನ್ನು ನೆನೆದಿದ್ದಾರೆ.


Click it and Unblock the Notifications











