ಅನಂತ್‌ನಾಗ್ ಇನ್ಮುಂದೆ ಹೀರೋ ಆಗೋದಿಲ್ಲ ಅಂತ ನಿರ್ಧರಿಸಿದ್ದಕ್ಕೆ ಕಾರಣ ಸುಧಾರಾಣಿ; ಅಂತಹದ್ದೇನಾಯ್ತು?
ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ನಟರಲ್ಲಿ ಅನಂತ್‌ನಾಗ್ ಕೂಡ ಒಬ್ಬರು. ಈ ಹಿರಿಯ ನಟ ಕನ್ನಡ ಚಿತ್ರರಂಗದ ಆಸ್ತಿ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ. ಅಷ್ಟೇ ಯಾಕೆ ಕನ್ನಡ ಚಿತ್ರರಂಗ ಕಂಡ ಸುಂದರ ನಟರಲ್ಲಿ ಅನಂತ್‌ನಾಗ್ ಕೂಡ ಒಬ್ಬರು. ಇವರ ಸಿನಿಮಾಗಳಿಗೆ ಇಂದಿಗೂ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ.
ಅನಂತ್‌ನಾಗ್ ಸಿನಿಮಾಗಳಲ್ಲಿ ನಾಯಕ ನಟರಾಗಿಯೂ, ಪೋಷಕ ನಟರಾಗಿಯೂ ಯಶಸ್ಸು ಕಂಡ ಅಪರೂಪದ ನಟ. ಇಷ್ಟೇ ಯಾಕೆ ರಾಜಕೀಯದಲ್ಲಿಯೂ ಅನಂತ್ ನಾಗ್ ಗೆದ್ದಿದ್ದಾರೆ. ನಗರಾಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದ್ದರು. ಹೀಗಾಗಿ ಅನಂತ್ ನಾಗ್ ಅವರ ಹಾದಿ ಬೇರೆ ಎಲ್ಲರಿಗಿಂತೂ ವಿಭಿನ್ನವಾಗಿತ್ತು.

ರಾಜಕೀಯಕ್ಕೆ ಧುಮುಕಿದಾಗ ಅನಂತ್‌ನಾಗ್ ಸಿನಿಮಾಗಳಿಂದ ದೂರ ಉಳಿದಿದ್ದರು. ಕೊನೆಯ ರಾಜಕೀಯವೇ ಬೇಡ ಅಂತ ದೂರ ಉಳಿದಾಗ ಮತ್ತೆ ಸಿನಿಮಾ ಕಡೆಗೆ ಮುಖ ಮಾಡಿದ್ದರು. ಆಗಲೂ ಬೇಡಿಕೆಯೇನು ಕಮ್ಮಿಯಿರಲಿಲ್ಲ. ಈ ಸಂದರ್ಭದಲ್ಲಿ ಅನಂತ್‌ನಾಗ್ ಇನ್ಮುಂದೆ ಹೀರೊ ಆಗಿ ನಟಿಸುವುದಿಲ್ಲ ಅಂತ ತೀರ್ಮಾನಿಸಿದ್ದರು. ಅದಕ್ಕೆ ಕಾರಣ ನಟಿ ಸುಧಾರಾಣಿ. ಅಷ್ಟಕ್ಕೂ ಅಂತಹದ್ದೇನಾಯ್ತು? ಅನ್ನೋದನ್ನು ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಹಿರಿಯ ಪತ್ರಕರ್ತ ಎನ್. ಎಸ್. ಶ್ರೀಧರಮೂರ್ತಿ ಹೇಳಿಕೊಂಡಿದ್ದಾರೆ.
ಅನಂತ್‌ನಾಗ್ ರಾಜಕೀಯದ ಕೆಲವು ಬೆಳವಣಿಗಳ ಬಳಿಕ ಮತ್ತೆ ಸಿನಿಮಾ ಕಡೆ ಮುಖ ಮಾಡಿದ್ದರು. ಆ ವೇಳೆ ಅವರಿಗೆ ಹೀರೊ ಆಗಿ ನಟಿಸುವುದಕ್ಕೆ ಆಫರ್‌ಗಳು ಬರುತ್ತಿದ್ದವು. "1997ರಲ್ಲಿ ಗಣೇಶ ಐ ಲವ್ ಯು ಸಿನಿಮಾ ಬಂತು. ರಾಜಕೀಯದಿಂದ ಸಿನಿಮಾವನ್ನೂ ಕಡಿಮೆ ಮಾಡಿಕೊಂಡು ಬಂದಿದ್ದರು. 1999ರಲ್ಲಿ ನಿಂತು ಹೋಗಿದ್ದ ಸಿನಿಮಾ ಚಿತ್ರೀಕರಣ ಮಾಡಿ ವಿಶ್ವ ಅನ್ನೋ ಸಿನಿಮಾನೂ ಬಂತು. ರಾಜಕೀಯದಿಂದ ಸಂಪೂರ್ಣವಾಗಿ ದೂರವಾದ ಮೇಲೆ ಬಂದ ಸಿನಿಮಾ ನಾನೇನು ಮಾಡ್ಲಿಲ್ಲ. ಈ ಸಿನಿಮಾಗೆ ನಾಯಕಿಯಾಗಿದ್ದವರು ಸುಧಾರಾಣಿ." ಎಂದು ಆ ಸಿನಿಮಾ ಬಗ್ಗೆ ಎನ್. ಎಸ್. ಶ್ರೀಧರಮೂರ್ತಿ ಇಂಟ್ರೆಸ್ಟಿಂಗ್ ವಿಷಯವನ್ನು ರಿವೀಲ್ ಮಾಡುತ್ತಾರೆ.
ನಾಯಕಿ ಸುಧಾರಾಣಿ ಅನ್ನೋದನ್ನು ಕೇಳಿ ಅನಂತ್‌ನಾಗ್ ಅವರಿಗೆ ತುಂಬಾನೇ ಇರಿಸು ಮುರಿಸು ಆಗಿತ್ತಂತೆ. ಸುಧಾರಾಣಿ ಚಿಕ್ಕ ಹುಡುಗಿ ಇದ್ದಾಗಿನಿಂದ ಅವರನ್ನು ನೋಡಿದ್ದೇನೆ. ತನಗಿಂತ ಅರ್ಧ ವಯಸ್ಸಿನ ಹುಡುಗಿ. ಈಕೆಯನ್ನು ನನಗೆ ನಾಯಕಿಯಾಗಿ ಮಾಡಿದ್ದರಲ್ಲ ಅಂತ ಅನಿಸಿತ್ತಂತೆ. ಆ ವೇಳೆ ತನಗೆ ಇನ್ನು ಇದೆಲ್ಲ ಬೇಡ ಅಂತ ಅನಂತ್‌ನಾಗ್‌ಗೆ ಅನಿಸಿತ್ತಂತೆ.

"ಅನಂತ್ ನಾಗ್ ತಮ್ಮ 51ನೇ ವಯಸ್ಸಿಗೆ ನಾನು ಇನ್ಮುಂದೆ ನಾಯಕ ಆಗೋದಿಲ್ಲ ಅನ್ನೋ ನಿರ್ಧಾರವನ್ನು ತೆಗೆದುಕೊಂಡರು. ಬಹುಶ: ಭಾರತೀಯ ಚಿತ್ರರಂಗದಲ್ಲೇ ಕೈ ತುಂಬ ಸಿನಿಮಾಗಳಿದ್ದಾಗಲೂ ನಾನು ನಾಯಕ ಆಗೋದಿಲ್ಲ ಅಂತ ಹೇಳಿದ ಏಕೈಕ ನಟ ಅನಂತ್‌ನಾಗ್. ನಾಯಕನಾಗಿ ನಟಿಸುವುದಕ್ಕೆ 12 ಚಿತ್ರಗಳು ಅವರ ಕೈಯಲ್ಲಿ ಇತ್ತು. ಆ 12 ಸಿನಿಮಾಗಳನ್ನೂ ವಾಪಸ್ ಕೊಟ್ಟರು." ಎನ್ನುತ್ತಾರೆ ಹಿರಿಯ ಪತ್ರಕರ್ತ ಎನ್. ಎಸ್. ಶ್ರೀಧರಮೂರ್ತಿ.
ಅನಂತ್‌ನಾಗ್ ಪೋಷಕ ಕಲಾವಿದರಾಗಿ ನಟಿಸುತ್ತಿದ್ದರೂ ಬಹುಬೇಡಿಕೆಯ ನಟರಾಗಿ ಉಳಿದುಕೊಂಡರು. ಅದರಲ್ಲೂ 'ಮುಂಗಾರು ಮಳೆ' ಸಿನಿಮಾ ಬಂದ್ಮೇಲೆ ಪೋಷಕ ಪಾತ್ರಗಳಲ್ಲಿ ಇವರಿಗೆ ಬೇಡಿಕೆ ಹೆಚ್ಚಾಗಿತ್ತು. ಅನಂತ್ ನಾಗ್ ಈಗಲೂ ಕೂಡ ಬಹುಬೇಡಿಕೆಯ ನಟ. ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದ ಬಳಿಕ ಕೂಡ ಅನಂತ್‌ನಾಗ್ ಬಹುಬೇಡಿಕೆಯ ನಟನಾಗಿಯೇ ಉಳಿದುಕೊಂಡಿದ್ದಾರೆ.


Click it and Unblock the Notifications











