"ಅಮ್ಮನ ಹಳೇ ಸೀರೆಯಲ್ಲೇ ಬಟ್ಟೆ ಹೊಲಿಸಿಕೊಡ್ತಿದ್ರು": ಬಾಲ್ಯ ನೆನೆದು ಕಿಚ್ಚನ ಹೊಗಳಿದ ನಟಿ ಅಂಜಲಿ?
ಕನ್ನಡದ ಚಿತ್ರರಂಗದ ಹಿರಿಯ ನಟಿ ಅಂಜಲಿ ಯಾರಿಗೆ ಗೊತ್ತಿಲ್ಲ. 90ರ ದಶಕದಲ್ಲಿ ಇವರ ಸಿನಿಮಾಗಳಿಗೆ ದೊಡ್ಡ ಅಭಿಮಾನಿ ಬಳಗವೇ ಇತ್ತು. ಅಂಜಲಿಯ ಮೂಲ ಹೆಸರು ಶಾಂತ. ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ನಿರ್ದೇಶಕ ಕಾಶೀನಾಥ್ ಈ ನಟಿಯ ಹೆಸರನ್ನು ಅಂಜಲಿ ಎಂದು ಬದಲಾಯಿಸಿದ್ದರು.
ಕಾಶೀನಾಥ್ ಜೊತೆ ನಟಿಸಿದ 'ಅನಂತನ ಅವಾಂತರ', 'ನೀನು ನಕ್ಕರೆ ಹಾಲು ಸಕ್ಕರೆ', 'ತರ್ಲೆ ನನ್ ಮಗ','ಅಪ್ಪ ನಂಜಪ್ಪ ಮಗ ಗುಂಜಪ್ಪ', 'ಕ್ಷೀರ ಸಾಗರ','ಕಲಾವಿದ', 'ಬಂದು ಹೋದ ಕೊಂಡು ಹೋದ', 'ಉತ್ಕರ್ಷ'ದಂತಹ ಸಿನಿಮಾಗಳಲ್ಲಿ ನಟಿಸಿ ತನ್ನದೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದರು.

ಇತ್ತೀಚೆಗೆ 1998ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಅಂಜಲಿ ಸಿನಿಮಾದಿಂದ ದೂರವೇ ಉಳಿದಿದ್ದರು. ಆದರೆ, ಸಿನಿಮಾರಂಗಕ್ಕೆ ಕಾಲಿಡುವುದಕ್ಕೂ ಮುನ್ನ ಅಂಜಲಿ ಬದುಕು ಹೇಗಿತ್ತು? ತಂದೆ ಬಿಟ್ಟು ಹೋದ ಬಳಿಕ ಬದುಕು ನಡೆದಿದ್ದು ಹೇಗೆ? ಅನ್ನೋದನ್ನು ನಿರ್ದೇಶಕ ರಘುರಾಮ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ. ಹಬ್ಬಕ್ಕೆ ಅವರ ಹಳೆ ಸೀರೆಯಿಂದ ಬಟ್ಟೆ ಹೊಲಿಸಿಕೊಡುತ್ತಿದ್ದ ಸಂಗತಿ ನೆನಪಿಸಿಕೊಂಡಿದ್ದಾರೆ.
ಅಂಜಲಿ ಕನಕಪುರ ಮೂಲದವರು. ತಂದೆ ಸರ್ಕಾರಿ ಕೆಲಸ ಸಿಕ್ಕಿದ್ದರಿಂದ ಕುಟುಂಬ ಬೆಂಗಳೂರಿಗೆ ಬಂದಿದ್ದರು. ಆದರೆ, ಕಾರಣಾಂತರಗಳಿಂದ ತಂದೆ ಇವರ ಬಿಟ್ಟು ಹೋದರು. ಅಲ್ಲಿಂದ ಇವರ ಬದುಕು ಮೂರಾಬಟ್ಟೆಯಾಗಿತ್ತು. ಆ ದಿನಗಳಲ್ಲಿ ಅಮ್ಮ ನಾಲ್ಕು ಮಕ್ಕಳನ್ನು ಕಷ್ಟಪಟ್ಟು ಬೆಳೆಸಿದ್ದನ್ನು ನೆನಪಿಸಿಕೊಂಡಿದ್ದಾರೆ.
"ನಮ್ಮದು ಮಧ್ಯಮ ವರ್ಗದ ಕುಟುಂಬ. ಅಪ್ಪ ಅಮ್ಮನ ಊರು ಕನಕಪುರ. ಅಪ್ಪನಿಗೆ ಸರ್ಕಾರಿ ಕೆಲಸ ಸಿಕ್ಕಿತು ಅಂತ ಬೆಂಗಳೂರಿಗೆ ಬಂದೆವು. ಅದಾದ್ಮೇಲೆ ತಂದೆ ಕಾರಣಾಂತರದಿಂದ ದೂರ ಆಗಿದ್ದರು. ನಾವು ನಾಲ್ಕು ಜನ ಮಕ್ಕಳು. ಮಧ್ಯಮ ವರ್ಗದ ಕುಟುಂಬ ನಮ್ಮದು. ಆಗ ಅಮ್ಮ ನಾಲ್ಕು ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಂಡರು. ಆ ದಿನದಿಂದ ನಮಗೆ ಕಷ್ಟ ಏನು ಅಂತ ಗೊತ್ತಾಯ್ತು." ಎಂದು ಹಿರಿಯ ನಟಿ ಅಂಜಲಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

ಇದೇ ವೇಳೆ ಹಬ್ಬದ ದಿನಗಳಲ್ಲಿ ಅವರ ಸೆಲೆಬ್ರೆಷನ್ ಹೇಗಿರುತ್ತಿತ್ತು ಅನ್ನೋದನ್ನು ಹೇಳಿಕೊಂಡಿದ್ದಾರೆ. "ನಮಗೆ ಸರಸ್ವತಿ ಪೂಜೆ ಅಂದರೇನೆ ಸೆಲೆಬ್ರೆಷನ್. ಅಮ್ಮ ಅವರ ಹಳೇ ಸೀರೆಯಲ್ಲಿ ಒಂದು ಲಂಗ ಹೊಲಿಸಿ ಕೊಡೋರು. ಅದನ್ನೇ ಹಾಕಿಕೊಂಡು ಹೋಗುವುದಕ್ಕೆ ಖುಷಿ ಇತ್ತು. ಹೊಸದೇ ಬೇಕು ತಂದುಕೊಡು ಅಂತ ಹಠ ಮಾಡುತ್ತಿರಲಿಲ್ಲ. ಜೀವನ ಪಾಠ ಕಲಿಸುತ್ತೆ ಅಂತ ಅನಿಸಿತ್ತೋ ಏನೋ ಗೊತ್ತಿಲ್ಲ." ಎಂದು ಅಂಜಲಿ ಹೇಳಿದ್ದಾರೆ.
ಹೆಣ್ಣು ಅದೆಷ್ಟೇ ಕಷ್ಟ ಬಂದರೂ ಜಯಿಸಿ ಗೆಲ್ಲುತ್ತಾಳೆ. ಅದೇ ಅವಳ ಪವರ್. ಕಿಚ್ಚ ಸುದೀಪ್ ಬಿಗ್ ಬಾಸ್‌ನಲ್ಲಿ ಹೆಣ್ಣಿನ ಬಳೆಗಳ ಬಗ್ಗೆ ಮಾತಾಡಿದ್ದು ಅಂಜಲಿ ಮನಸ್ಸನ್ನು ಗೆದ್ದಿದೆ. "ಮೊನ್ನೆ ಶನಿವಾರ ತುಂಬಾನೇ ಖುಷಿಯಾಗಿತ್ತು ಸುದೀಪ್ ಸರ್ ಬಿಗ್ ಬಾಸ್‌ನಲ್ಲಿ ಹೆಣ್ಣು ಮಕ್ಕಳು ಬಳೆ ಬಳೆ ಅಂದಾಗ ಆಡಿದ ಮಾತು ಇಷ್ಟ ಆಯ್ತು. ಬಳೆಗೆ ಅಷ್ಟು ಪವರ್ ಇದೆ. ಅದಕ್ಕೆ ಸುದೀಪ್ ಸರ್‌ಗೆ ಬಳೆ ವಿಷಯ ಮಾತಾಡಿದ್ದಕ್ಕೆ ಥ್ಯಾಂಕ್ಸ್ ಹೇಳುತ್ತೇನೆ. ಹೆಣ್ಣುತನದ ಬಗ್ಗೆ ಮಾತಾಡಿದ್ರಿ. ಅದನ್ನು ನಾನು ಎಂದಿಗೂ ಮರೆಯೋದಿಲ್ಲ. ನಾನು ಬಳೆ ಹಾಕಿಕೊಂಡರೆ ಈಗ ಸುದೀಪ್ ಮಾತೇ ನೆನಪಿಗೆ ಬರುತ್ತೆ." ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Click it and Unblock the Notifications











