ಸುಧಾರಾಣಿ ಕಂಡಂತೆ ಡಾ.ರಾಜ್: "ಅವತ್ತು ಕಾಲು ಮುಟ್ಟಿ ನಮಸ್ಕಾರ ಮಾಡುವುದಕ್ಕೆ ಅಣ್ಣಾವ್ರು ಬಿಡಲೇ ಇಲ್ಲ"
ಏಪ್ರಿಲ್ 24, ಡಾ.ರಾಜ್‌ಕುಮಾರ್ ಅವರ ಹುಟ್ಟುಹಬ್ಬ. ಈ ದಿನ ಬಂತು ಅಂದರೆ, ಅಭಿಮಾನಿಗಳಿಗೆ ಹಬ್ಬ. ಹುಟ್ಟುಹಬ್ಬವನ್ನು ರಾಜ್ಯದ ಮೂಲೆ ಮೂಲೆಯಲ್ಲಿರುವ ಅಭಿಮಾನಿಗಳು ಸಂಭ್ರಮದಿಂದ, ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ಈ ವರ್ಷ ಅಣ್ಣಾವ್ರ 97ನೇ ಬರ್ತ್‌ಡೇಯನ್ನು ಆಚರಣೆ ಮಾಡಲಾಗುತ್ತಿದೆ. ದೊಡ್ಮನೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
ಈ ಸಂದರ್ಭದಲ್ಲಿ ಡಾ.ರಾಜ್‌ಕುಮಾರ್ ಅವರನ್ನು ಹತ್ತಿರದಿಂದ ಕಂಡಂತಹ ತಾರೆಯರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ನಟಿ ಸುಧಾರಾಣಿ ಕೂಡ ಒಬ್ಬರು. ಇತ್ತೀಚೆಗೆ ಗೋಲ್ಡ್ ಕ್ಲಾಸ್ ವಿಥ್ ಮಯೂರ ಯೂಟ್ಯೂಬ್ ಚಾನೆಲ್‌ನ ವಿಶೇಷ ಸಂಚಿಕೆ ಗೋಟ್ ಆಫ್ ಕನ್ನಡ ಸಿನಿಮಾ ಡಾ.ರಾಜ್‌ಕುಮಾರ್ ನಲ್ಲಿ ಭಾಗವಹಿಸಿದ್ದರು. ಹಿರಿಯ ನಿರ್ದೇಶಕ ಟಿ.ಎಸ್. ನಾಗಾಭರಣ, ವಿಜಯ ರಾಘವೇಂದ್ರ, ಹಿರಿಯ ಛಾಯಾಗ್ರಾಹಕ ಪ್ರವೀಣ್ ನಾಯಕ್ ಅವರು ಭಾಗವಹಿಸಿದ್ದರು.

ನಿರೂಪಕ ಮಯೂರ ರಾಘವೇಂದ್ರ ನಡೆಸಿಕೊಟ್ಟ ಈ ವಿಶೇಷ ಸಂಚಿಕೆಯಲ್ಲಿ ಅಣ್ಣಾವ್ರೊಂದಿಗೆ ನಟಿಸಿದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಒಳ್ಳೊಳ್ಳೆಯ ಸಂಗತಿಗಳನ್ನು ಸುಧಾರಾಣಿ ಹಂಚಿಕೊಂಡಿದ್ದಾರೆ. ಈ ಸಂದರ್ಶನದಲ್ಲಿ ಏನೇನು ಹೇಳಿದ್ದಾರೆ ಅನ್ನೋದರ ಒಂದು ಝಲಕ್ ಇಲ್ಲಿದೆ.
"ಅಣ್ಣಾವ್ರು ಅಂದರೆ ಪ್ರಾಣ, ಹುಚ್ಚು"
ಅಣ್ಣಾವ್ರ ಕುಟುಂಬಕ್ಕೆ ಉದಯ ಶಂಕರ್ ಅವರು ಆತ್ಮೀಯರು. ಉದಯ ಶಂಕರ್ ಅವರಿಗೆ ಸುಧಾರಾಣಿ ಕುಟುಂಬ ಹತ್ತಿರದ ಸಂಬಂಧ. ಈ ಕಾರಣಕ್ಕೆ ಡಾ.ರಾಜ್‌ಕುಮಾರ್ ಅವರ ಬಗ್ಗೆ ಒಂದು ವಿಶೇಷವಾದ ಅಭಿಮಾನ ಇತ್ತು. ಹೀಗಾಗಿ ಚಿಕ್ಕಂದಿನಿಂದಲೇ ಅಣ್ಣಾವ್ರು ಅಂದರೆ ಸುಧಾರಾಣಿ ಬಲು ಇಷ್ಟ. "ನನಗೆ ಅವರನ್ನು ಸಿನಿಮಾದಲ್ಲಿ ನೋಡಿದ್ದಾ? ಇಲ್ಲ ಉದಯ್ ಶಂಕರ್ ಅವರ ಮನೆಯಲ್ಲಿ ನೋಡಿದ್ದಾ? ಅನ್ನೋ ನೆನೆಪೇ ಇಲ್ಲ. ನಾನು ಅಷ್ಟು ಚಿಕ್ಕವಳಿದ್ದಾಗಿನಿಂದ ನೋಡಿದ್ದೇನೆ. ಆದರೆ, ಮೊದಲ ದಿನದಿಂದ ನನಗೆ ಅವರು ಅಂದರೆ, ಪ್ರಾಣ, ಹುಚ್ಚು. ಆ ಮಟ್ಟಿಗೆ ಕ್ರೇಜ್. ಒಂದು ಮ್ಯಾಗಜೀನ್‌ನಲ್ಲಿ ಒಂದು ಫೋಟೋ ಪ್ರಿಂಟ್ ಆಗಿತ್ತು. ಆಗತಾನೇ ಪ್ರಿಂಟ್ ಆಗಿತ್ತಂತೆ. ಅದನ್ನು ತೆಗೆದುಕೊಂಡು ಅದರಲ್ಲಿ ಬಂದ ಫೋಟೋಗೆ ಮುತ್ತು ಕೊಟ್ಟಿದ್ನಂತೆ. ಆಗ ಅದರ ಮಸಿಯೆಲ್ಲ ನನ್ನ ಮುಖಕ್ಕೆ ಅಂಟಿಕೊಂಡಿತ್ತು ಹೇಳಿದ ನೆನಪಷ್ಟೇ." ಎಂದು ಅಣ್ಣಾವ್ರ ಬಗ್ಗೆ ಅವರ ಮೊದಲ ನೆನಪನ್ನು ನಟಿ ಸುಧಾರಾಣಿ ಹಂಚಿಕೊಂಡಿದ್ದಾರೆ.
ಅಣ್ಣಾವ್ರ ಸ್ವಭಾವ ಹೇಗಿತ್ತು?
ಡಾ.ರಾಜ್‌ಕುಮಾರ್ ಅವರಿಗೆ ದೊರೈ ಹಾಗೂ ಭಗವಾನ್ ಇಬ್ಬರೂ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಇದರಲ್ಲಿ ಯಾರೂ ಮಾಡಿರದ ಬಾಂಡ್ ಸಿನಿಮಾಗಳು ಕೂಡ ಸೇರಿವೆ. ಇವರಿಬ್ಬರೊಂದಿಗೆ ಡಾ.ರಾಜ್‌ಕುಮಾರ್ ಹೇಗೆ ನಡೆದುಕೊಳ್ಳುತ್ತಿದ್ದರು ಎನ್ನುವುದನ್ನು ಘಟನೆಯ ಜೊತೆಗೆ ವಿವರಿಸಿದ್ದಾರೆ. "ದೊರೈ ಭಗವಾನ್ ಜೊತೆ ಏನಾದರೂ ಚರ್ಚೆ ಮಾಡಬೇಕು ಅಂದರೆ, ಭಗವಾನ್ ಅವರಿಗೂ ಹೇಳೋರು. ದೊರೈ ಅವರಿಗೂ ಪ್ರತ್ಯೇಕವಾಗಿ ಹೇಳೋರು. ಯಾಕಂದ್ರೆ ದೊರೈ ಅಂಕಲ್‌ಗೆ ಸ್ವಲ್ಪ ಕಿವಿ ಸಮಸ್ಯೆಯಿತ್ತು. ಭಗವಾನ್‌ಗೆ ಹೇಳಿದ್ದೇನಲ್ಲ ಬಿಡು ಅಂತೇನೂ ಇರಲಿಲ್ಲ. ದೊರೈ ಅಂಕಲ್ ಹತ್ತಿರನೂ ಹೋಗಿ ಅದೇ ವಿಷಯದ ಬಗ್ಗೆ ಚರ್ಚೆ ಮಾಡುತ್ತಿದ್ದರು." ಎಂದು ಅಣ್ಣಾವ್ರ ಸ್ವಭಾವವನ್ನು ಹೇಳಿಕೊಂಡಿದ್ದಾರೆ.
ಕಾಲು ಮುಟ್ಟಿ ನಮಸ್ಕರಿಸಲು ಬಿಡಲಿಲ್ಲ
"ಶಬರಿ ಮಲೆಸ್ವಾಮಿ ಅಯ್ಯಪ್ಪ ಸಿನಿಮಾದು ಶಂಕರ ಶಶಿಧರ ಸಾಂಗ್ ಶೂಟ್ ಕಂಠೀರವದಲ್ಲಿ ನಡೆಯುತ್ತಿತ್ತು. ಅವರು ಅವತ್ತು ಅಲ್ಲಿಗೆ ಯಾಕೆ ಬಂದಿದ್ದರೋ ಗೊತ್ತಿಲ್ಲ. ಸೆಟ್ಟಿಗೆ ಬಂದ ಕೂಡಲೆ ಎಲ್ಲರಿಗೂ ಒಂದು ಅಭ್ಯಾಸ. ಅವರನ್ನು ನೋಡಿದಾಗ ನಮಸ್ಕಾರ ಮಾಡೋದು. ಅವರು ಏನೇ ಮಾಡಿದರೂ ನಮಸ್ಕಾರ ಮಾಡಿಸಿಕೊಳ್ಳಲಿಲ್ಲ. ನಾನು ಶ್ರೀಧರ್ ಇಬ್ಬರೂ ಶಿವ ಪಾರ್ವತಿ ಗೆಟಪ್‌ನಲ್ಲಿ ಇದ್ವಿ ಅಂತ ಏನು ಮಾಡಿದರೂ ನಮಸ್ಕಾರ ಮಾಡಿಸಿಕೊಳ್ಳಲಿಲ್ಲ. ಈತರನೂ ಅವರಿಂದ ಕಲಿತಿದ್ದು ಬೇಕಾದಷ್ಟು ಇದೆ." ಶ್ರೀಧರ್ ಹಾಗೂ ಸುಧಾರಾಣಿ ಇಬ್ಬರೂ ಶಿವ ಹಾಗೂ ಪಾರ್ವತಿಯ ಗೆಟಪ್‌ನಲ್ಲಿ ಇದ್ದಿದ್ದರಿಂದ ಕಾಲು ಮುಟ್ಟಿ ನಮಸ್ಕಾರ ಮಾಡುವುದಕ್ಕೆ ಅಣ್ಣಾವ್ರು ಒಪ್ಪಿರಲಿಲ್ಲ.

ಅಣ್ಣಾವ್ರ ಡೆಡಿಕೇಷನ್
"ದೇವತಾ ಮನುಷ್ಯ ಅಂದಾಗ ನೆನಪಿಗೆ ಬರೋದು ಏನಂದರೆ, ಅವರ ಡೆಡಿಕೇಷನ್. ನಿರ್ದೇಶಕರಿಗೆ ಇದು ಇಷ್ಟ ಆಗಿಲ್ಲ ಅಂತ ಏನಾದರೂ ಅನಿಸಿದರೆ, ತಕ್ಷಣ ಇನ್ನೊಂದು ಸಾರಿ ಮಾಡುತ್ತೇನೆ ಅನ್ನೋರು. ನಿನ್ನಂಥ ಅಪ್ಪ ಸಾಂಗ್ ಶೂಟ್ ಮಾಡುವಾಗ ಅವರ ಪ್ರಕಾರ ನಾನು ಒಳ್ಳೆಯ ಡ್ಯಾನ್ಸರ್ ಅಂತ. ನನಗೆ ಅಯ್ಯಯ್ಯೋ ಅವರು ಯಾಕೆ ಇಷ್ಟೊಂದು ಬಾರಿ ರಿಹರ್ಸಲ್ ಮಾಡುತ್ತಾರೆ ಅಂತ. ಈ ಮಗು ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡುತ್ತಾಳೆ. ನಾನು ಸರಿಯಾಗಿ ಮಾಡಬೇಕು ಅಂತ ಮಾಡುತ್ತಲೇ ಇದ್ದಾರೆ. ನನಗೆ ಅಯ್ಯೋ ಬೇಡ ಅಂತ. ಯಾಕಂದ್ರೆ, ನನಗೆ ಕಾಲೆಲ್ಲಾ ನೋವು ಬಂದಿರೋದು. ಆ ಮೇಲೆ ಡ್ಯಾನ್ಸ್ ಮಾಡಿ, ಸರಿಯಾಗಿ ಮಾಡಿದ್ನಾ? ಸರಿಯಾಗಿದೆಯಾ ಅಂತ ಕೇಳಿದರು. ನಾನು ಸ್ಕೋಪ್ ತಗೊಂಡು ಕೈ ಹೀಗೆಲ್ಲ ಮಾಡಿದರೆ ಪರ್ವಾಗಿಲ್ಲ. ನಾನು ಹಾಗೆ ಮಾಡುತ್ತಿದ್ದೇನೆ ಅಂತ ಹೇಳಿದ್ದೆ. ದೂರದಿಂದ ನಮ್ಮ ಅಮ್ಮ ಬಾ ಇಲ್ಲಿ. ಇದೆ ನಿನಗೆ ಅಂತ ಲುಕ್ ಕೊಟ್ಟಿದ್ದರು." ಎಂದು ಹೇಳಿಕೊಂಡು ನಕ್ಕಿದ್ದಾರೆ.
ಅಣ್ಣಾವ್ರ ಸಹಾಯ ಮನೋಭಾವ
"ನನಗೆ ಅವರು ದೇವರೇನೆ. ಆಗೆಲ್ಲ ಮೊಬೈಲ್ ಇರಲಿಲ್ಲ. ಸೆಲ್ಫಿ ತೆಗೆದುಕೊಳ್ಳುವುದು, ಫೋಟೊ ತೆಗೆದುಕೊಳ್ಳುವುದೆಲ್ಲ ಇರಲಿಲ್ಲ. ನಾಯ್ಡು ಅಂತ ಇದ್ದರು. ಅವರಿಗೆ ಅದೇ ಒಂದು ಕೆಲಸ ಕೊಟ್ಟಿದ್ದರು. ಅಣ್ಣಾವ್ರ ಫ್ಯಾನ್ಸ್ ಯಾರೇ ಬಂದರೂ ಅವರೊಂದಿಗೆ ಫೋಟೊ ತೆಗೆಸಿಕೊಳ್ಳಬೇಕು. ಆ ಫೋಟೋಗ್ರಾಫರ್‌ಗೆ ಒಂದು ಜೀವನ ನಡೆಯುತ್ತಿತ್ತು. ಅವರಿಗೊಂದು ಕೆಲಸ ಸಿಕ್ಕಿತ್ತು. ಹೀಗೆ ಎಲ್ಲಾ ಆಯಾಮದಲ್ಲಿಯೂ ಕೆಲಸ ಮಾಡೋರು." ಎನ್ನುತ್ತಾರೆ ನಟಿ ಸುಧಾರಾಣಿ.

ಆ ಸಿನಿಮಾ ಶೂಟಿಂಗ್ ನಡೆಯುವಾಗ ಏನಾಯ್ತು?
"ಆಸೆಗೊಬ್ಬ ಮಾಡುವಾಗ ಅವರ ಮನೆಯಲ್ಲೇ ಶೂಟಿಂಗ್ ನಡೆದಿತ್ತು. ಬ್ರೇಕ್ ಕೊಟ್ಟಾಗ ನಾನು ಅಮ್ಮ ಇಬ್ಬರೂ ಮೇಕಪ್ ರೂಮ್‌ನಲ್ಲಿ ಕೂತಿದ್ದರೆ, ಅಮ್ಮ ಮಗಳಿಗೆ ಗೊತ್ತಾಯ್ತೋ ಇಲ್ಲವೋ ಅಂತ ಸ್ಟೇರ್ ಕೇಸ್‌ನಿಂದ ಇಳಿದು ಬಂದು ಕರೆಯುತ್ತಿದ್ದರು. ನೀವಿಬ್ಬರೂ ಇಲ್ಲೇ ಕೂತಿದ್ದೀರಲ್ಲ. ಬ್ರೇಕ್ ಆಯ್ತು ಬನ್ನಿ ಅಂತ. ಅವರಿಗೆ ಅವಶ್ಯಕತೆನೇ ಇರಲಿಲ್ಲ. ಅವರ ಪಾಡಿಗೆ ಅವರು ಊಟ ಮಾಡಿ ಹೋಗಬಹುದಿತ್ತು." ಎನ್ನುತ್ತಾರೆ.
ಅಣ್ಣಾವ್ರಿಗೆ ಪ್ರತ್ಯೇಕ ಕಾರು ಕಳಿಸಿರಲಿಲ್ಲ
"ಒಂದು ಥ್ರಿಲ್ಲಿಂಗ್ ಎಕ್ಸ್‌ಪೀರಿಯನ್ಸ್ ಅಂದರೆ, ನಿನ್ನಂಥ ಅಪ್ಪ ಸಾಂಗ್ ಶೂಟಿಂಗ್ ಟೈಮ್‌ನಲ್ಲಿ ಮಾಗಡಿಯ ತಿಪ್ಪಗೊಂಡನಹಳ್ಳಿಯಲ್ಲಿ ಶೂಟಿಂಗ್ ಆಗಿತ್ತು. ಅವತ್ತು ಕಾರು ಎಲ್ಲಿಂದ ಬಂತೋ ಗೊತ್ತಿಲ್ಲ. ನಮ್ಮನ್ನು ಪಿಕಪ್ ಮಾಡಿಕೊಂಡು, ಅಮ್ಮ ನಾನು ಯಾವಾಗಲೂ ಜೊತೆಯಲ್ಲೇ ಹೋಗುತ್ತಿದ್ವಿ. ಆ ಮೇಲೆ ಅವರ ಮನೆಗೆ ಹೋಗಿ, ಅವರನ್ನು ಪಿಕಪ್ ಮಾಡಿಕೊಂಡು ದೇ ಕಾರಿನಲ್ಲಿ ಹೋಗಿದ್ವಿ." ಎಂದು ಹೇಳುತ್ತಾರೆ ಸುಧಾರಾಣಿ.
ಅಣ್ಣಾವ್ರ ಬ್ಯಾನರ್‌ನಲ್ಲಿ ಸುಧಾರಾಣಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಶಿವಣ್ಣನ ಜೊತೆ ಸಿನಿಮಾ ಮಾಡಿ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ಸುಧಾರಾಣಿಗೆ ಡಾ.ರಾಜ್‌ಕುಮಾರ್ ಅವರೊಂದಿಗೆ ನಟಿಸುವ ಅವಕಾಶ ಕೂಡ ಸಿಕ್ಕಿತ್ತು. ಅಪ್ಪ ಹಾಗೂ ಮಗನೊಂದಿಗೆ ನಟಿಸುವ ಅವಕಾಶ ಕೆಲವೇ ನಟಿಯರಿಗೆ ಸಿಕ್ಕಿದೆ. ಅದರಲ್ಲಿ ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ಬ್ಯೂಟಿ ಸುಧಾರಾಣಿ ಕೂಡ ಸೇರಿಕೊಂಡಿದ್ದಾರೆ. ದೇವತಾ ಮನುಷ್ಯ ಸಿನಿಮಾದಲ್ಲಿ ನಟಿಸಿದ ಅವರ ಅನುಭವವನ್ನು, ಅಣ್ಣಾವ್ರೊಂದಿಗೆ ಆಡಿದ ಮಾತುಗಳನ್ನು ಈ ಸಂದರ್ಶನದಲ್ಲಿ ಸೊಗಸಾಗಿ ಹೇಳಿಕಂಡಿದ್ದಾರೆ.


Click it and Unblock the Notifications











