KGF Real Name: ಕೆಜಿಎಫ್ ನಗರದ ಅಸಲಿ ಹೆಸರೇನು? ಈ ಹೆಸರು ಹುಟ್ಟಿದ್ದು ಎಲ್ಲಿಂದ?
'ಕೆಜಿಎಫ್ 2' ವಿಶ್ವದ ಎಲ್ಲೆಡೆ ಬೇಜಾನ್ ಸದ್ದು ಮಾಡುತ್ತಿದೆ. ವಿಶ್ವದ ಮೂಲೆ ಮೂಲೆಯಲ್ಲೂ 'ಕೆಜಿಎಫ್ 2' ಸಿನಿಮಾದ್ದೇ ಸದ್ದು. ಸಿನಿಮಾದಲ್ಲಿ ಅಬ್ಬರಿಸಿದ ರಾಕಿ ಭಾಯ್, ನಾಯಕನಿಗೆ ಟಕ್ಕರ್ ಕೊಟ್ಟ ಅಧೀರ. ರಾಕಿ ಭಾಯಿಯ ನರಾಚಿ ಕೋಟೆ. ಅಲ್ಲಿನ ಕಾರ್ಮಿಕರು. ಅವರ ಗೋಳು. ಇವೆಲ್ಲವೂ 'ಕೆಜಿಎಫ್' ಫ್ರಾಂಚೈಸಿಯ ಹೈಲೈಟ್.
ಕರ್ನಾಟಕದ ಚಿನ್ನದ ನಾಡು 'ಕೆಜಿಎಫ್'ಗೆ ಹಲವು ವರ್ಷಗಳ ಇತಿಹಾಸವಿದೆ. ಭೂಗರ್ಭವನ್ನು ಅಗೆದು ಅಗೆದು ಚಿನ್ನವನ್ನು ಎತ್ತಿದ ಗಣಿಗಳು ನೂರಾರು ಕತೆಯನ್ನು ಕೇಳುತ್ತವೆ. ಇವೇ ಯಶ್ ಅಭಿನಯದ ಸಿನಿಮಾಗೂ ಪ್ರೇರಣೆಯಾಗಿರಬಹುದು. ಆದರೆ, ಈ ಇತಿಹಾಸದಲ್ಲಿ ತನ್ನದೇ ಕರಾಳ ಚರಿತ್ರೆಯನ್ನು ಹೊಂದಿರುವ ನಗರಕ್ಕೆ ಕೆಜಿಎಫ್ ಅಂತ ಹೆಸರು ಬಂದಿದ್ದೇಕೆ? ಅಸಲಿಗೆ ಈ ಕೆಜಿಎಫ್ ನಗರದ ಮೂಲ ಹೆಸರೇನು? ಎಂಬುದು ಬಹುತೇಕರಿಗೆ ಗೊತ್ತೇ ಇಲ್ಲ. ಈ ಸತ್ಯವನ್ನು ಪತ್ರಕರ್ತ ಆರ್ ಕೇಶವಮೂರ್ತಿ, 'ಬಂಗಾರ ಮನುಷ್ಯರು' ಎಂಬ ಕೃತಿ ಸವಿವರವಾಗಿ ವಿವರಿಸಿದ್ದಾರೆ. ಆ ಸಂಗತಿಯನ್ನು ಫಿಲ್ಮಿ ಬೀಟ್ ಜೊತೆ ಹಂಚಿಕೊಂಡಿದ್ದಾರೆ.

'ಕೆಜಿಎಫ್' ನಗರದ ಅಸಲಿ ಹೆಸರೇನು?
ಒಂದು ಹೆಸರು ಪತನಗೊಂಡ ಮತ್ತೊಂದು ಹೆಸರು ಚಾರಿತ್ರಿಕ ಮಹತ್ವ ಪಡೆದುಕೊಂಡಿದ್ದರ ಕತೆ ಇದು. ಪತನಗೊಂಡ ಅಥವಾ ಮರೆಯಾದ ಹೆಸರು ಯಾವ ಚರಿತ್ರೆಕಾರರಿಗೂ ತಿಳಿದಿಲ್ಲ ಅಂದರೆ ಅಚ್ಚರಿಯಾಗಬೇಕಿಲ್ಲ. ಯಾಕೆಂದರೆ ಆ ಹೆಸರಿನ ಪ್ರದೇಶ ಅಂದು ಕೇವಲ ಗುಡ್ಡ, ಬೆಟ್ಟಗಳಿಂದ ಕೂಡಿದ ಒಂದು ಸಾಮಾನ್ಯ ಬಯಲು ಪ್ರದೇಶ. ಹೀಗಾಗಿ ಕಣ್ಮರೆಯಾದ ಎರ್ರಗೊಂಡ ಎಂಬ ಹೆಸರಿನ ಕನ್ನಡಿಯಲ್ಲಿ ಪಳಪಳನೆ ಹೊಳೆದ ಮತ್ತು ಹೊಳೆದು ಕಳೆಗುಂದಿದ ಕೆಜಿಎಫ್ ನಗರದ ಬದುಕಿನ ಪುಟಗಳನ್ನು ನೋಡಬೇಕಿದೆ. ಆದರೆ, ಕೆಜಿಎಫ್ ಎಂಬುದು ಮೂರು ರಾಜ್ಯ, ನಾಲ್ಕು ಭಾಷೆಯ ಜನರಿಂದ ಜನ್ಮ ಪಡೆದುಕೊಂಡ ಬ್ರಿಟಿಷರ ನಗರ ಎಂಬುದು ಬಹುತೇಕರಿಗೆ ಗೊತ್ತಿಲ್ಲದಿರುವ ಸಂಗತಿ ಎಂಬುದು ಮಾತ್ರ ಸತ್ಯ. ಹೀಗಾಗಿ ಈ ಕೆಜಿಎಫ್ ನಿಜವಾದ ಹೆಸರು ಎಷ್ಟು ಮಂದಿಗೆ ಗೊತ್ತು ಎನ್ನುವ ಪ್ರಶ್ನೆ ಮುಂದಿಟ್ಟರೆ ಉತ್ತರಿಸುವವರು ಸಿಗುವುದು ತೀರಾ ಅಪರೂಪ.

ಸಂಶೋಧನೆ ಶುರುವಾಗಿದ್ದು ಯಾವಾಗ?
ಹೀಗಾಗಿ ಇಪ್ಪತ್ತೊಂದನೆ ಶತಮಾನದಲ್ಲಿ ಕೂತು, 17ನೇ ಶತಮಾನದತ್ತ, ಅಂದರೆ ಆಂಗ್ಲರ ಈಸ್ಟ್ ಇಂಡಿಯಾ ಕಂಪನಿಯ ಪಾದಗಳು ಭಾರತದ ನೆಲಕ್ಕೆ ತಾಕಿದ ದಿನಗಳತ್ತ ತಿರುಗಿ ವರ್ತಮಾನದ ಮನಸ್ಸಿಗೆ, ಗತ ಕಾಲದ ಕನ್ನಡಿ ಸರಿಸಿದಾಗ ಬೆಟ್ಟ, ಗುಡ್ಡ, ಮುಳ್ಳಿನ ಗಿಡಗಳಿಂದ ಕೂಡಿದ ಅರೆ ಬಯಲಿನ ಎರ್ರಗೊಂಡ ಎಂಬ ಪ್ರದೇಶವೊಂದರ ಪುಟವೊಂದು ನಿಧಾನಕ್ಕೆ ತೆರೆದುಕೊಳ್ಳುತ್ತದೆ. 'ನನ್ ಹೆಸ್ರು ಈಗ ನೀವು ಕೇಳುತ್ತಿರುವ, ಓದುತ್ತಿರುವ, ಬ್ರಿಟಿಷರು ನಾಮಕರಣ ಮಾಡಿ ಹೋಗಿರುವ ಕೆಜಿಎಫ್ ಅಲ್ಲ, ಎರ್ರಗೊಂಡ ಎಂದು ಮೆಲ್ಲಗೆ ಕಿವಿ ಬಳಿ ಬಂದು ಪಿಸುಗುಟ್ಟುತ್ತದೆ'. ಯಾಕೆಂದರೆ ಮತ್ತೆ ಪರಕೀಯರು ಬಂದು ತನ್ನ ಒಡಲಾಳವನ್ನು ಬಗೆಯುತ್ತಾರೆಂಬ ಆತಂಕ, ಭಯ ಮತ್ತು ಕೋಪ! 'ಭೂಮಿಯನ್ನು ನಡುಗಿಸಿದರು. ಸಾವಿರಾರು ಕುಟುಂಬಗಳನ್ನು ಅನಾಥರನ್ನಾಗಿಸಿದರು. ಹಾಡುಹಗಲೇ ಸಂಪತ್ತನ್ನು ಕೊಳ್ಳೆ ಹೊಡೆದರೂ, ಬದುಕಿದ್ದ ಜೀವಗಳನ್ನಾದರೂ ಅವಚಿಕೊಂಡು ತನ್ನ ಇರುವಿಕೆಯನ್ನು ಸಾಬೀತು ಮಾಡುತ್ತಲೇ ಬಂದ ಈ ಗುಡ್ಡದ ಪತ್ತೆಯ ಹಿಂದೆ 80 ವರ್ಷಗಳ, ನೂರಾರು ಮಂದಿ ತಜ್ಞರ ಸಂಶೋಧನೆಯ ಕಣ್ಣುಗಳ ಅಧ್ಯಯನದ ಸಾಹಸಗಳು ಅಡಗಿವೆ. ಈ ಸಾಹಸದ ಕೊಂಡಿ ಶುರುವಾಗುವುದು 15 ಮತ್ತು 16ನೇ ಶತಮಾನದಲ್ಲಿ.

ಭೂ ಸಂಪತ್ತು ಉಳ್ಳವರ ತಿಜೋರಿ ಸೇರಿತು
ಬಂಡವಾಳ, ಮಾರುಕಟ್ಟೆ, ಮಾರಾಟ, ಲಾಭ ಮತ್ತು ಹೂಡಿಕೆಯೇ ಪ್ರಧಾನವಾಗಿದ್ದ ವಾಣಿಜ್ಯ ದಿನಗಳು ಉಗಮವಾಗಿದ್ದು,ಯೂರೋಪಿನಲ್ಲಿ. 15 ಮತ್ತು 16ನೇ ಶತಮಾನದಲ್ಲಿ ಶುರುವಾದ ಈ ವಾಣಿಜ್ಯದ ಕಾರ್ಮೋಡಗಳು ಸರಕುಗಳನ್ನು ಮಾತ್ರವಲ್ಲ ಮನುಷ್ಯರನ್ನೇ ಮಾರಾಟದ ವಸ್ತುವನ್ನಾಗಿಸುವ ಮಟ್ಟಿಗೆ ಆವರಿಸಿಕೊಂಡವು. ಲಾಭದ ಹೊರತಾಗಿ ಬೇರೆ ಏನನ್ನೂ ನಿರೀಕ್ಷೆ ಮಾಡದ ಬಂಡವಾಳ ವ್ಯವಸ್ಥೆಯೇ ಬೇಟೆಗಾಗಿ ಎದ್ದು ನಿಂತಾಗ ಕಡಲು, ದರೋಡೆಗೆ ತುತ್ತಾಯಿತು. ಅರಣ್ಯ ಸಂಪತ್ತು, ಅಕ್ರಮವಾಗಿ ಲೂಟಿಯಾಯಿತು. 'ಭೂ ಸಂಪತ್ತು ಉಳ್ಳವರ ತಿಜೋರಿ ಸೇರಿತು. ಕಣ್ಣಿಗೆ ಕಂಡಿದ್ದೆಲ್ಲ ಬೇಟೆಯಾಡಿದ ಮೇಲೆ ಕಾಣದಿದ್ದನ್ನು ದೋಚುವುದಕ್ಕೆ ಮನುಷ್ಯ ದೇಹಗಳು ಬೇಕಿತ್ತು. ಅದು ಸತ್ತಿದ್ದರೂ ಸರಿ, ಉಸಿರಾಡುತ್ತಿದ್ದರೆ ಸಾಕು! ಹಾಗಂತ ನಿರ್ಧರಿಸಿಯೇ ವಾಣಿಜ್ಯ ವ್ಯವಸ್ಥೆಯ ರೂಲರ್‌ಗಳ ಕಣ್ಣುಗಳು ಶ್ರಮವೇ ಬದುಕಿನ ಚಾದರವಾಗಿಸಿಕೊಂಡು, ಹಸಿವನ್ನೇ ಹೊದ್ದು ಮಲಗಿದ್ದ ದಕ್ಷಿಣ ಆಫ್ರಿಕಾದ ಜನರತ್ತ ನೆಟ್ಟಿತು. ನೀರಿಗೆ ಎದುರಾಗಿ ಈಜುತ್ತ ಬದುಕುತ್ತಿದ್ದ ಮೀನುಗಳಂತೆ ಸಾವು- ಹಸಿವು, ಬಡತನಕ್ಕೆ ಎದುರಾಗಿ ನಿಂತ ಜೀವಗಳನ್ನು ಮೀನುಗಳಂತೆಯೇ ಬಲೆ ಹಾಕಿ ಹಿಡಿದರು. ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟರು. ತಂದೆ, ತಾಯಿ, ಅಣ್ಣ, ತಮ್ಮ, ಅಕ್ಕ, ತಂಗಿ, ದೊಡ್ಡಪ್ಪ- ಚಿಕ್ಕಪ್ಪ ಹೀಗೆ ಯಾವುದೇ ಸಂಬಂಧಗಳು ಅಲ್ಲಿ ಯಾರನ್ನೂ, ಯಾವುದನ್ನು ತಡೆಯದೆ ಬಿಕರಿಯಾದವು. ಹಾಗೆ ಬಿಕರಿಯಾದ ಜೀವಗಳ, ನೆತ್ತರಿನ ನೆಲದ ಮೇಲೆ ಕೆಂಪು ಸಾಮ್ರಾಜ್ಯ ಕಟ್ಟಿಕೊಂಡಿದ್ದ ಅಮೆರಿಕನ್ನರ ಸಂಪತ್ತಿನ ಬೇಟೆಗೆ ಜೀತದಾಳುಗಳಾದರು.

ನೈಸರ್ಗಿಕ ಸಂಪತ್ತಿನ ಮೇಲೆ ಕಣ್ಣು
ಪ್ರಪಂಚದ ಕಣ್ಣಿಗೆ ಶ್ರಮ ಜೀವಿಗಳಾಗಿ ಕಂಡರು. ಜಗತ್ತಿನ ಯಾವ ಮೂಲೆಗೆ ಬೇಕಾದರೂ ಅವರನ್ನು ಸಾಗಿಸಿ, ಸಾವೆಂಬ ದುಡಿಮೆಯ ಬೇಡಿಕೆಗಳನ್ನು ತೊಡಿಸಬಹುದಾಗಿತ್ತು. ಅಮೆರಿಕ, ಯೂರೋಪಿನಾದ್ಯಂತ ಹೀಗೆ ಮಾನವನ ಬೇಟೆಯನ್ನುವಂತೆ ಸಂಪತ್ತಿನ ಕೋಟೆಗಳನ್ನು ಕಟ್ಟುತ್ತಿರುವ ಹೊತ್ತಿನಲ್ಲೇ ಕಡಲುಗಳ ಮಾರ್ಗವಾಗಿ ಕಡಲಾಚೆಗಿನ ಕಳ್ಳರ ಆಗಮನವಾಯಿತು. ಅಧ್ಯಯನದ ದಸ್ತಾವೇಜುಗಳನ್ನೇ ಕೈಯಲ್ಲಿಡಿದು ಕರಿ ಮೆಣಸು ಮತ್ತು ಹೇರಳವಾಗಿದ್ದ ವಾಣಿಜ್ಯ ವಸ್ತುಗಳ ದರೋಡೆಗಾಗಿ 1534ರಲ್ಲಿ ಗೋವಾಗೆ ಬಂದಿಳಿಯಿತು ಪೋರ್ಚುಗೀಸರ ನೌಕೆ. 1558 ಹೊತ್ತಿಗೆ ಕರ್ನಾಟಕದ ಮಂಗಳೂರು ಕೂಡ ಇವರ ಬೇಟೆಯ ಕಣ್ಣುಗಳಿಗೆ ಗೋಚರಿಸಿತು. ಅಮಾನುಷವಾಗಿ ದಾಳಿ ಮಾಡಿದರು. ಸಾವು- ನೋವುಗಳನ್ನು ಸೃಷ್ಟಿಸಿದರು. ಹೀಗೆ ಕರ್ನಾಟಕದಲ್ಲೂ ವ್ಯಾಪಾರಿಗಳನ್ನು ಬೆದರಿಸುವ ಸಲುವಾಗಿಯೇ ಮಂಗಳೂರು 'ಭಾಗದಲ್ಲಿ ಪೋರ್ಸುಗೀಸರು ಹಚ್ಚಿದ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುತ್ತ ಅದರ ಕಾವು ಹೆಚ್ಚಿಸುವುದಕ್ಕಾಗಿಯೇ ಡಚ್ಚರು, ಫ್ರೆಂಚರು, ಇಂಗ್ಲೆಡ್ ದೇಶಗಳ ವಾಣಿಜ್ಯ ಕುಳಗಳ ಪ್ರವೇಶವಾಯಿತು. ಇವರೆಲ್ಲರ ಒಟ್ಟು ಕೂಟವಾಗಿ ಹುಟ್ಟಿಕೊಂಡ ಈಸ್ಟ್ ಇಂಡಿಯನ್ ಕಂಪನಿ, 1600ರಲ್ಲಿ 'ಭಾರತವನ್ನು ಆವರಿಸಿಕೊಳ್ಳುವ ಸಂಚು ರೂಪಿಸಿತು. ಆ ಸಂಚಿನ 'ಭಾಗವಾಗಿಯೇ ಈಸ್ಟ್ ಇಂಡಿಯನ್ ಕಂಪನಿ ತನ್ನ ಆಡಳಿತದ ಕಾಲದಲ್ಲಿ 'ಭಾರತದಲ್ಲಿನ ನೈಸರ್ಗಿಕ ಲೋಹ ಸಂಪತ್ತುಗಳ ಸರ್ವೇ ಕಾರ್ಯಕ್ಕೆ ಮುಂದಾಯಿತು.

ಕೆಜಿಎಫ್‌ನಲ್ಲಿ ಬಂಗಾರ ಪತ್ತೆಯಾಗಿದ್ದೇಗೆ?
ಆಗ ಮದ್ರಾಸ್ ರಾಜ್ಯದ ಪಶ್ಚಿಮ ಗಡಿ ಮತ್ತು ಮೈಸೂರು ರಾಜ್ಯದ ಪೂರ್ವ ಗಡಿಯನ್ನು ಸರ್ವೇ ಮಾಡುವ ಜವಾಬ್ದಾರಿಯನ್ನು 1802ರಲ್ಲಿ ಲೆಫ್ಟಿನೆಂಟ್ ವಾರನ್‌ಗೆ ವಹಿಸಲಾಯಿತು. ಈತನ ಸಾರಥ್ಯದಲ್ಲಿ ಸರ್ವೇ ಮಾಡುವಾಗ ಎರ್ರಗೊಂಡ ಗುಡ್ಡದ ಬಳಿ ಬಂಗಾರ ಸಿಗುತ್ತದೆಂಬ ಮಾಹಿತಿ ಸಿಕ್ಕಿತು. ಈ ಮಾಹಿತಿಯನ್ನು ಮುಂದಿಟ್ಟುಕೊಂಡು ಸತತ ಎರಡು ವರ್ಷಗಳ ಕಾಲ ಸಂಶೋಧನೆ ಮಾಡಿದಾಗ ಸಿಕ್ಕ ಮತ್ತಷ್ಟು ವಿವರಗಳನ್ನು ಸಂಗ್ರಹಿಸಿ 'The Annual Asiatic Register' ಎನ್ನುವ ಪತ್ರಿಕೆಯಲ್ಲಿ ಒಂದು ದೀರ್ಘ ಲೇಖನವನ್ನೇ ಬರೆದ. ಇದನ್ನು ಓದಿದ ಮೇಲೆ 'ಭಾರತದ ಭೂ ಭಾಗದಲ್ಲೊಂದು ಚಿನ್ನದ ಗುಡ್ಡವಿದೆ ಎಂದು ತಿಳಿಯಿತು. ಜಗತ್ತಿನ ಹಲವು 'ಭಾಗಗಳಲ್ಲಿ ಆಗಲೇ ಚಿನ್ನದ ಬೇಟೆಯಾಡಿ ಯಶಸ್ಸು ಗಳಿಸಿದ್ದ ಬ್ರಿಟಿಷರ ಕಣ್ಣಿಗೂ ಈ ಗುಡ್ಡ ಕಾಣದೆ ಇರಲಿಲ್ಲ. ನೇರವಾಗಿ ಪರದೇಶಿಗಳ ಪಾದ ಒಂದು ಸಾಮಾನ್ಯ ಜನರ ಗುಡ್ಡದ ಪ್ರದೇಶಕ್ಕೆ ಹೊಕ್ಕಿತು. ಹೀಗೆ 80 ವರ್ಷಗಳ ಕಾಲ ಅಧ್ಯಯನದ ಫಲವಾಗಿ ಕಂಡಿದ್ದೇ ಎರ್ರಗೊಂಡ ಎಂಬ ಗುಡ್ಡಗಳಿಂದ ಕೂಡಿದ ಬಯಲು ಪ್ರದೇಶ. ಈ ಪ್ರದೇಶವೇ ಬಂಗಾರದ ನಿಕ್ಷೇಪಗಳನ್ನು ಅಡಗಿಸಿಕೊಂಡಿರುವ ನಿರಾಧಾರಣ ಸುಂದರಿ ಎನ್ನುವ ನಿಗೂಢ ಬಯಲಾಯಿತು. ಮುಂದೆ ಅದೊಂದು ನೆತ್ತರಿನ ಚರಿತ್ರೆಗೂ ಮುನ್ನುಡಿಯಾಯಿತು. ಇದರ ಕಥಾನಾಯಕರು ಮೂವರು. ಅವರು ಕೆಜಿಎಫ್ ನಗರದ ಪಾಲಿಗೆ ಆಪರೇಷನ್ ಗೋಲ್ಡನ್ ಗ್ಯಾಂಗ್ ಆಗಿ ಕಂಡಿದ್ದರು. ಜತೆಗೆ ಎರ್ರಗೊಂಡ ಎಂಬ ಬೆಟ್ಟ ಗುಡ್ಡಗಳ ಪ್ರದೇಶ ಬಂಗಾರ ಕೊಡುವ ಬಯಲಾಗಿ, ಮುಂದೆ 'ಕೋಲಾರ್ ಗೋಲ್ಡ್ ಫೀಲ್ಡ್' ಎನ್ನುವ ನಾಮಾಂಕಿತಕ್ಕೂ ಪಾತ್ರವಾಯಿತು.


Click it and Unblock the Notifications











