ಮೊದಲ ಸಿನಿಮಾದಲ್ಲೇ ಸೂಪರ್ ಸಕ್ಸಸ್ ಕಂಡು ಚಿತ್ರರಂಗದಿಂದ ದೂರ ಉಳಿದ ಈ ನಟಿಯರು ನೆನಪಿದ್ದಾರಾ?
ಕನ್ನಡ ಚಿತ್ರರಂಗ ಆರಂಭ ಆದಲ್ಲಿಂದ ಇಲ್ಲಿವರೆಗೂ ಸಾಕಷ್ಟು ಜನಪ್ರಿಯ ನಟಿಯರನ್ನು ಕಂಡಿದೆ. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮೊದಲ ಸಿನಿಮಾದಲ್ಲೇ ಗೆದ್ದಿ ಬೀಗಿದ ಸಾಕಷ್ಟು ನಟಿಯರು ಕನ್ನಡ ಚಿತ್ರರಂಗದಲ್ಲಿ ಸಿಗುತ್ತಾರೆ. ಆದರೆ, ಮೊದಲ ಸಿನಿಮಾದಲ್ಲೇ ಜನಪ್ರಿಯತೆ ಕಂಡ ನಟಿಯರು ಕೆಲವೇ ವರ್ಷಗಳಲ್ಲಿ ಸಂಪೂರ್ಣವಾಗಿ ಕಣ್ಮರೆಯಾಗಿದ್ದಾರೆ. ಎಲ್ಲಿದ್ದಾರೆ? ಈಗೇನು ಮಾಡುತ್ತಿದ್ದಾರೆ? ಅನ್ನೋ ಸುಳಿವು ಇಲ್ಲದಂತೆ ಗಾಯಬ್ ಆಗಿದ್ದಾರೆ.
ಎಲ್ಲಾ ನಾಯಕ ನಟಿಯರ ವೃತ್ತಿ ಬದುಕಿನಲ್ಲಿ ಏರಿಳಿತಗಳು ಆಗಿದ್ದನ್ನು ನೋಡಿದ್ದೇವೆ. ಕೆಲವೊಮ್ಮೆ ಗೆದ್ದಿದ್ದಾರೆ. ಮತ್ತೆ ಕೆಲವೊಮ್ಮೆ ಸೋತಿದ್ದಾರೆ. ಸೋತು ಮತ್ತೆ ಗೆದ್ದಿದ್ದಾರೆ. ಸೂಪರ್‌ಸ್ಟಾರ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಆದರೆ, ಈ ನಟಿಯರ ವೃತ್ತಿ ಬದುಕು ಸ್ವಲ್ಪ ಬೇರೆನೇ ಇದೆ. ಇವರಿಗೆ ಸಿಕ್ಕ ಯಶಸ್ಸು ಕಂಡು ನಂ 1 ನಟಿಯಾಗುತ್ತಾರೆ ಭವಿಷ್ಯ ನುಡಿದವರೇ ಕಮ್ಮಿಯಿರಲಿಲ್ಲ. ಆದರೆ, ಅದೆಲ್ಲವೂ ಸುಳ್ಳಾಯ್ತು. ಮೊದಲ ಸಿನಿಮಾದಲ್ಲೇ ಗೆದ್ದ ನಟಿಯರು ಚಿತ್ರರಂಗಕ್ಕೆ ಗುಡ್ ಬೈ ಹೇಳಿ ದೂರು ಉಳಿದಿದ್ದಾರೆ. ಹಾಗಿದ್ದರೆ, ಈ ನಟಿಯರು ಸೋತಿದ್ದೆಲ್ಲಿ?

ದೀಪಾ ಸನ್ನಿಧಿ
ದೀಪಾ ಸನ್ನಿಧಿ ಮೂಲತ: ಚಿಕ್ಕಮಗಳೂರಿನ ಹುಡುಗಿ. ಆದರೆ, ಇವರಿಗೆ ಬೆಂಗಳೂರು ಹೊಸತೇನು ಆಗಿರಲಿಲ್ಲ. ಕನ್ನಡ ಚಿತ್ರರಂಗದ ಎತ್ತರದ ನಟರಿಗೆ ದೀಪಾ ಸನ್ನಿಧಿ ಉತ್ತಮ ನಾಯಕಿಯಾಗಬಹುದು ಅನ್ನೋದು ಮೊದಲ ಸಿನಿಮಾದಲ್ಲೇ ಸರ್ಫಿಕೇಟ್ ಸಿಕ್ಕಿತ್ತು. 2011 ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿದ 'ಸಾರಥಿ' ಇವರ ಚೊಚ್ಚಲ ಸಿನಿಮಾ. ಮೊದಲ ಸಿನಿಮಾದಲ್ಲಿಯೇ ದೊಡ್ಡ ಯಶಸ್ಸು ಸಿಕ್ಕಿತ್ತು. ಇಲ್ಲಿಂದ ದೀಪಾ ಸನ್ನಿಧಿ ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಪುನೀತ್ ಜೊತೆ ನಟಿಸಿದ 'ಪರಮಾತ್ಮ', ಯಶ್ ಜೊತೆ ನಟಿಸಿದ 'ಜಾನು' ಕೂಡ ಸೇರಿಕೊಳ್ಳುತ್ತೆ. ಕನ್ನಡದ ಚಿತ್ರರಂಗದಲ್ಲಿ ದೀರ್ಘಕಾಲ ಮೆರೆಯಬಹುದಾಗಿದ್ದ ನಟಿಯರಲ್ಲಿ ಸಾಲಿನಲ್ಲಿ ದೀಪಾ ಸನ್ನಿಧಿ ಸೇರುವ ಎಲ್ಲಾ ಅವಕಾಶಗಳಿತ್ತು. ಆದರೆ, ನಟನೆಯ ಮೇಲೆ ಆಸಕ್ತಿ ಕಳೆದುಕೊಂಡರೋ, ಇಲ್ಲ ಚಿತ್ರರಂಗ ಇವರಿಗೆ ಒಗ್ಗಿಕೊಳ್ಳಲಿಲ್ಲವೋ ಗೊತ್ತಿಲ್ಲ. ದರ್ಶನ್ ನಟಿಸಿದ 'ಚಕ್ರವರ್ತಿ'ಯೇ ಕೊನೆಯ ಸಿನಿಮಾ ಆಯ್ತು. 2017ರಲ್ಲಿ ತೆರೆಕಂಡ ಈ ಸಿನಿಮಾ ಬಳಿಕ ದೀಪಾ ಸನ್ನಿಧಿ ಸುಳಿವೇ ಇಲ್ಲ. ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಚಿತ್ರರಂಗಕ್ಕೆ ವಾಪಾಸ್ ಮರಳುತ್ತಾರಾ? ಅನ್ನೋದು ಚಿಕ್ಕ ಮಾಹಿತಿ ಕೂಡ ಇಲ್ಲ.

ನಂದಿತಾ ಶ್ವೇತಾ
ಮೊದಲ ಸಿನಿಮಾದಲ್ಲಿಯೇ ಯಶಸ್ಸು ಕಂಡ ಮತ್ತೊಬ್ಬ ನಟಿ ನಂದಿತಾ ಶ್ವೇತಾ. ಲೂಸ್ ಮಾದ ಯೋಗಿ ನಾಯಕನಾಗಿ ನಟಿಸಿದ 'ನಂದ ಲವ್ಸ್ ನಂದಿತಾ' ಸಿನಿಮಾದ ನಾಯಕಿ ಇವರು. 2008ರಲ್ಲಿ ತೆರೆಕಂಡಿಸಿದ್ದ ಈ ಸಿನಿಮಾ ಹಿಟ್ ಆಗಿತ್ತು. ಕನ್ನಡದಲ್ಲಿ ನಟಿಸಿದ್ದು ಅದೇ ಕೊನೆ. ಅಲ್ಲಿಂದ ತಮಿಳು, ತೆಲುಗು ಅಂತಲೇ ಬ್ಯುಸಿಯಾಗಿದ್ದ ನಟಿ ಮತ್ತೆ ಕನ್ನಡದಲ್ಲಿ ನಟಿಸಲೇ ಇಲ್ಲ. ಕನ್ನಡದ ಫಿಲ್ಮ್ ಮೇಕರ್ಸ್ ಅವಕಾಶ ಕೊಡಲಿಲ್ಲವೋ. ಇಲ್ಲ ಅವರಿಗೆ ಇಷ್ಟ ಇರಲಿಲ್ವೋ? ಅವರೇ ಹೇಳಬೇಕು. ಕನ್ನಡ ನಟಿಯಾಗಿ ಒಂದು ಸಿನಿಮಾ ಬಳಿಕ ಮತ್ತೊಂದು ಸಿನಿಮಾದಲ್ಲಿ ನಟಿಸಲೇ ಇಲ್ಲ. ಪರಭಾಷೆಯಲ್ಲೂ ಅಷ್ಟೇ 2024ರಲ್ಲಿ ಇವರ ಸಿನಿಮಾ ರಿಲೀಸ್ ಆಗಿದ್ದೇ ಕೊನೆ. ಹೊಸ ಸಿನಿಮಾಗಳ ಬಗ್ಗೆ ಮಾಹಿತಿನೇ ಇಲ್ಲ. ಕನ್ನಡಿಗರಂತೂ ಇವರನ್ನು ಮರೆತೇ ಬಿಟ್ಟಿದ್ದಾರೆ.

ರೇಖಾ ವೇದವ್ಯಾಸ
ಮೊದಲ ಸಿನಿಮಾದಲ್ಲೇ ಯಶಸ್ಸು ಕಂಡು ಕಾಣೆಯಾಗಿರುವ ನಟಿಯರಲ್ಲಿ ರೇಖಾ ವೇದವ್ಯಾಸ ಕೂಡ ಒಬ್ಬರು. ಕಿಚ್ಚ ಸುದೀಪ್ ನಟಿಸಿದ ಎರಡನೇ ಸಿನಿಮಾ 'ಹುಚ್ಚ' ಸಿನಿಮಾದಲ್ಲಿ ರೇಖಾ ನಾಯಕಿಯಾಗಿ ನಟಿಸಿದ್ದರು. ಇದು ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು. ಇಲ್ಲಿಂದ 'ಚಿತ್ರ' ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಕನ್ನಡದಿಂದ ತೆಲುಗು ಹಾಕಿದ್ದ ನಟಿ, ಮುಂಬೈ ಕಡೆಗೆ ಪಯಣ ಬೆಳೆಸಿದ್ದರು. ಬಾಲಿವುಡ್‌ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಆದರೆ, ಅಲ್ಲೂ ಯಶಸ್ಸು ಕಾಣಲಿಲ್ಲ. ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ರೇಖಾರನ್ನು ನೋಡಿ ಅವರ ಅಭಿಮಾನಿಗಳು ಶಾಕ್ ಆಗಿದ್ದರು. 2014ರಲ್ಲಿ ನಟಿಸಿದ 'ತುಳಸಿ' ಇವರ ಕೊನೆಯ ಕನ್ನಡ ಸಿನಿಮಾ.

ದಾಮಿನಿ
ಚೊಚ್ಚಲ ಸಿನಿಮಾದಲ್ಲಿ ಯಶಸ್ಸು ಕಂಡ ಮತ್ತೊಬ್ಬ ನಟಿ ದಾಮಿನಿ. ಉಪೇಂದ್ರ ನಿರ್ದೇಶಿಸಿದ ನಟಿಸಿದ 'ಉಪೇಂದ್ರ' ಸಿನಿಮಾದ ಮೂವರು ನಾಯಕಿಯರಲ್ಲಿ ಇವರು ಒಬ್ಬರಾಗಿದ್ದರು. ಮೊದಲ ಸಿನಿಮಾದಲ್ಲಿಯೇ ಇವರಿಗೆ ಒಳ್ಳೆಯ ಹೆಸರು ಕೂಡ ಸಿಕ್ಕಿತ್ತು. ಅಲ್ಲಿಂದ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಇದ್ದಕ್ಕಿದ್ದ ಹಾಗೇ ರೇಖಾ ಚಿತ್ರರಂಗದಿಂದ ನಾಪತ್ತೆಯಾಗಿಬಿಟ್ಟರು. ಇವರ ಬಗ್ಗೆ ಈಗ ಮಾಹಿತಿ ಇಲ್ಲದಂತೆ ಕಣ್ಮರೆಯಾಗಿದ್ದಾರೆ.


Click it and Unblock the Notifications











