"ಈ ನನ್ನ ಕಣ್ಣಾಣೆ.." ಅಂತ ಅಣ್ಣಾವ್ರು ಹಾಡಿದ್ದನ್ನು ಕೇಳುವ ಭಾಗ್ಯ ಸಿಕ್ಕಿದ್ದು ಕೆ. ಕಲ್ಯಾಣ್‌ಗೆ ಮಾತ್ರ!
ಅಣ್ಣಾವ್ರ ಯಶಸ್ಸಿಗೆ ಪಾರ್ವತಮ್ಮ ರಾಜ್‌ಕುಮಾರ್ ಎಷ್ಟು ಪ್ರಮುಖ ಪಾತ್ರ ವಹಿಸಿದ್ದರೋ ವರದಪ್ಪ ಅವರ ಪಾತ್ರ ಕೂಡ ಅಷ್ಟೇ ಇದೆ. ವರದಪ್ಪ ಹಾಗೂ ರಾಜ್‌ಕುಮಾರ್ ಇಬ್ಬರೂ ಒಟ್ಟಿಗೆ ಸೇರಿದರೆ ಸಿನಿಮಾದ ಕಥೆಯನ್ನು, ಸಾಹಿತ್ಯವನ್ನು, ಸಂಗೀತವನ್ನು ಓಕೆ ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಇನ್ನು ಪುನೀತ್ ರಾಜ್‌ಕುಮಾರ್ ನಟನೆಯ ಸಿನಿಮಾ ಬಗ್ಗೆ ಕಾಳಜಿ ವಹಿಸದೇ ಇರುತ್ತಾರಾ?
ಪುನೀತ್ ರಾಜ್‌ಕುಮಾರ್ ಆಗತಾನೇ 'ಅಪ್ಪು' ಸಿನಿಮಾ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟಿದ್ದರು. 'ಅಪ್ಪು' ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಹೀಗಾಗಿ ಎರಡನೇ ಸಿನಿಮಾ 'ಅಭಿ'ಗೆ ತಯಾರಿ ನಡೆದಿತ್ತು. ಗುರುಕಿರಣ್ ಟ್ಯೂನ್ ಹಾಕಿದ್ದರು. ಅಣ್ಣಾವ್ರ ಮನೆಯಲ್ಲಿ ಕೆ ಕಲ್ಯಾಣ್ "ಈ ನನ್ನ ಕಣ್ಣಾಣೆ.." ಹಾಡಿಗೆ ಸಾಹಿತ್ಯ ಬರೆಯಲು ಆರಂಭಿಸಿದ್ದರು.

ಈ ಸಾಹಿತ್ಯ ವರದಪ್ಪ ಹಾಗೂ ಅಣ್ಣಾವ್ರಿಗೆ ಒಪ್ಪಿಗೆಯಾಗಬೇಕಿತ್ತು. ಹೀಗಾಗಿ ಪಲ್ಲವಿಯನ್ನೇ ಐದಾರು ಬಾರಿ ಬರೆದ ಮೇಲೆ ಒಪ್ಪಿಗೆಯಾಗಿತ್ತು. ಅಣ್ಣಾವ್ರು ಹಾಗೂ ವರದಪ್ಪ ಅವರ ಮುಂದೆ "ಈ ನನ್ನ ಕಣ್ಣಾಣೆ.." ಸಾಹಿತ್ಯ ಬರೆಯುವಾಗ ಅನುಭವ ಹೇಗಿತ್ತು? ಅನ್ನುವುದನ್ನು ಪ್ರೇಮಕವಿ ಕೆ ಕಲ್ಯಾಣ್ ಯೂಟ್ಯೂಬ್ ಚಾನೆಲ್‌ನಲ್ಲಿ ವಿವರಿಸಿದ್ದಾರೆ.
ಗುರು ಕಿರಣ್ ಕಂಪೋಸ್ ಮಾಡಿದ್ದ ಈ ಹಾಡನ್ನು ಬಾಲಿವುಡ್ ಗಾಯಕ ಉದಿತ್ ನಾರಾಯಣ್ ಹಾಡಿದ್ದರು. ಆದರೆ, ಕೆ ಕಲ್ಯಾಣ್‌ಗೆ ಅಣ್ಣಾವರೇ ಈ ಹಾಡನ್ನು ಹಾಡಿದ್ದನ್ನು ಕೇಳುವ ಸೌಭಾಗ್ಯ ಸಿಕ್ಕಿತ್ತು. ಆ ಸಂಗತಿಯನ್ನು ಕಣ್ಣಿಗೆ ಕಟ್ಟುವಂತೆ ಹೇಳಿದ್ದಾರೆ.

"ನಾನು ಪಲ್ಲವಿಯನ್ನು ಬರೆಯುತ್ತಿದೆ. ಅದನ್ನು ವರದಪ್ಪ ಅವರಿಗೆ ಕೊಡುತ್ತಿದೆ. ಅದನ್ನು ಅವರು ಓದುತ್ತಿದ್ದರು. ಬಳಿಕ ಅಣ್ಣಾವ್ರು ಓದುತ್ತಿದ್ದರು. ಅವರು ಆ ಸಾಲುಗಳನ್ನು ನೋಡಿ ಯಾವತ್ತೂ ಚೆನ್ನಾಗಿಲ್ಲ ಅಂತ ಹೇಳಿದ್ದೇ ಇಲ್ಲ. ಅವರು ಯಾರಿಗೂ ಚೆನ್ನಾಗಿಲ್ಲ ಅಂತ ಹೇಳಿಯೇ ಇಲ್ಲ. ಅದು ಅವರ ದೈವಿ ಗುಣ. ಆ ಹಾಳೆಯನ್ನು ನೋಡಿದ ಬಳಿಕ ವರದಪ್ಪ ಅವರ ಕಡೆ ನೋಡ್ತಿದ್ರು. ಅದು ಸೈಲೆಂಟ್ ಆಗಿ ಇದ್ದರೆ, ಆ ಹಾಳೆಯನ್ನು ಪಕ್ಕಕ್ಕೆ ಇಡುತ್ತಿದ್ದರು. ಆಗ ನಾನು ಇನ್ನೊಂದು ಪಲ್ಲವಿಯನ್ನು ಬರೆದು ಕೊಡುತ್ತಿದೆ." ಎಂದು ಆ ಕ್ಷಣವನ್ನು ನೆನೆದಿದ್ದಾರೆ.
ವರದಪ್ಪ ಹಾಗೂ ಅಣ್ಣಾವ್ರು ಒಟ್ಟಿಗೆ ಕೂತು ಸಾಹಿತ್ಯ ಓಕೆ ಮಾಡುತ್ತಿದ್ದರು. ಹೀಗಾಗಿ ಕೆ. ಕಲ್ಯಾಣ್ ಒಮ್ಮೆಗೆ ಐದಾರು ಪಲ್ಲವಿಯನ್ನು ಬರೆದು ಕೊಟ್ಟಿದ್ದರು. ಆಗ ವರದಪ್ಪ ಅವರು ಒಂದು ಪಲ್ಲವಿಯನ್ನು ಗುನುಗುತ್ತಿದ್ದರು. ಅದನ್ನು ನೋಡಿ ರಾಜ್‌ಕುಮಾರ್ ಇದು ಚೆನ್ನಾಗಿದೆ ಅಲ್ವಾ? ಎಂದು ಅಲ್ಲೇ ಹಾಡಿದ್ದರು. ಅದನ್ನು ಕೇಳುವ ಸೌಭಾಗ್ಯ ಸಿಕ್ಕಿದ್ದು ಕೆ. ಕಲ್ಯಾಣ್‌ಗೆ ಮಾತ್ರ.
"ಹೀಗೆ ಪಲ್ಲವಿ ಒಂದು ಚರಣ ಓಕೆ ಆಗಿತ್ತು. ಇನ್ನೊಂದು ಚರಣ ಬೇಕಿದೆ. ಸಂಜೆ ನಾಲ್ಕೂವರೆ ಆಗಿತ್ತು. ಆಗ ಅಣ್ಣಾವ್ರು ನಾಳೆ ಬರೆಯಿರಿ ಪರ್ವಾಗಿಲ್ಲ. ಯಾವಾಗ ಶೂಟಿಂಗ್ ಅಂತ ಚೆನ್ನ ಅವರಿಗೆ ಕೇಳಿದ್ರು. ಇನ್ನೂ ಸಮಯ ಇದೆ ಅಂತ ಹೇಳಿದ್ರು. ಬಿಡಿ ಮತ್ತೆ ನಾಳೆ ಬರೋಣ ಅಂತ ಅಣ್ಣಾವ್ರು ಹೇಳಿದ್ದರು. ಆದರೆ, ನನಗೆ ಮಾತ್ರ ಹಾಡು ಒಂದೇ ಫ್ಲೋನಲ್ಲಿ ಮುಗೀಲಿ ಅಂತಿತ್ತು" ಎಂದು ಕೆ ಕಲ್ಯಾಣ್ ಕೇಳಿಕೊಂಡಿದ್ದಾರೆ.
ಹೀಗಾಗಿ ಕೆ. ಕಲ್ಯಾಣ್ ಇನ್ನೊಂದು ಚರಣ ಬರೆದು ಇಟ್ಟುಕೊಂಡಿದ್ದರು. ಒಪ್ಪುತ್ತಾರೋ ಇಲ್ಲವೋ ಅಂತ ಕೈಯಲ್ಲಿ ಇಟ್ಟುಕೊಂಡಿದ್ದರು. ಹೀಗಾಗಿ ನಾಳೆನೇ ಬರೋಣ ಅಂದುಕೊಂಡರು. ಆಗ ವರದಪ್ಪ ಆ ಹಾಳೆಯನ್ನು ನೋಡಿ ಏನದು ಅಂತ ಕೇಳಿದ್ದರು. ಆಗ ಕೆ. ಕಲ್ಯಾಣ್ ಭಯದಿಂದಲೇ ಕೊಡುವುದಕ್ಕೆ ಹಿಂದೇಟು ಹಾಕಿದ್ದರು. ಆ ಚರಣವನ್ನು ನೋಡಿದ ಕೂಡ ವರದಪ್ಪ ಅವರ ಕಣ್ಣು ಅರಳಿತ್ತು. ತಕ್ಷಣ ಅಣ್ಣಾವ್ರಿಗೆ ಕೊಟ್ಟಿದ್ದರು.
"ಈ ಸಾಲುಗಳು ಚೆನ್ನಾಗಿದೆ ಅಂತ ವರದಪ್ಪ ಅವರಿಗೆ ಹೇಳಿದ್ರು. ಅವರೂ ಕೂಡ ನನಗೂ ಹಾಗೆ ಅನಿಸುತ್ತಿದೆ ಅಂದರು. ಇದು ಮ್ಯಾಚ್ ಆಗುತ್ತೆ ಅಂದರು. ನನಗೆ ಯಾವ ಸಾಲನ್ನು ಇಷ್ಟ ಆಗಲ್ಲ ಅಂತ ಬರೆದಿಟ್ಟಿದ್ದೆ. ಆಗ ನಾನು ಸರ್ ಅದು ಪಂಚಭೂತಗಳನ್ನು ಇಟ್ಕೊಂಡು ಬರೆದಿದ್ದೇನೆ ಎಂದೆ. ಹೌದು, ಎಲ್ಲಾ ಇದೆ ಇದರಲ್ಲಿ ಎಂದು ಹೇಳಿದ್ದರು." ಎಂದು ಕೆ.ಕಲ್ಯಾಣ್ ನೆನಪಿಸಿಕೊಳ್ಳುತ್ತಾರೆ. "ಈ ನನ್ನ ಕಣ್ಣಾಣೆ.." ಹಾಡಿನ ಚರಣದ ಆ ಸಾಲುಗಳು ಹೀಗೆ ಶುರುವಾಗುತ್ತವೆ.
"ಪ್ರೀತಿ ಒಂದು ಗಾಳಿಯ ಹಾಗೆ.. ಗಾಳಿ ಮಾತಲ್ಲ.. (ಗಾಳಿ)
ಪ್ರೀತಿ ಹರಿಯೋ ನೀರಿನ ಹಾಗೆ.. ನಿಂತ ನೀರಲ್ಲ.. (ನೀರು)
ಅದು ಒಂದು ಜ್ಯೋತಿಯ ಹಾಗೆ.. ಸುಡೋ ಸುಡೋ ಬೆಂಕಿಯಲ್ಲ (ಬೆಂಕಿ)
ಅದು ಒಂದು ಭೂಮಿಯ ಹಾಗೆ.. ನಿರಂತರ ಈ ಪ್ರೇಮಸ್ವರ (ಭೂಮಿ)
ಈ ಪ್ರೀತಿ ಆಕಾಶಕ್ಕೂ ಎತ್ತರ.. (ಆಕಾಶ)"
ಈ ಸಾಲುಗಳನ್ನು ವರದಪ್ಪ ಅವರು ಅಣ್ಣಾವ್ರಿಗೆ ಹಾಡಿ ತೋರಿಸಿದ್ದರು. ಬಳಿಕ ಈ ಹಾಡನ್ನು ರಾಘಣ್ಣ ಅವರೇ ಪುನೀತ್ ರಾಜ್‌ಕುಮಾರ್ ಅವರಿಗೆ ಫೋನ್ ಮೂಲಕ ಹಾಡಿ ತೋರಿಸಿದ್ದರು. ಆ ವೇಳೆ ಶಿವಣ್ಣ ಶೂಟಿಂಗ್‌ನಲ್ಲಿ ಔಟ್ ಆಫ್ ಸ್ಟೇಷನ್‌ನಲ್ಲಿ ಇದ್ದರು. 'ಅಭಿ' ಸಿನಿಮಾದ "ಈ ನನ್ನ ಕಣ್ಣಾಣೆ.." ಹಾಡಿನ ಸಾಹಿತ್ಯವನ್ನು ವರದಪ್ಪ ಹಾಗೂ ಅಣ್ಣಾವ್ರು ಓಕೆ ಮಾಡಿದ್ದನ್ನು ಕೆ.ಕಲ್ಯಾಣ್ ನೆನಪಿಸಿಕೊಂಡಿದ್ದಾರೆ.


Click it and Unblock the Notifications











