ಕತಾರ್, ಕುವೈತ್‌ನಲ್ಲಿ ಮಮ್ಮುಟ್ಟಿ 'ಕಾತಲ್' ಬ್ಯಾನ್: ಗಲ್ಫ್ ದೇಶಗಳಲ್ಲಿ ಬ್ಯಾನ್ ಆದ ಭಾರತದ 7 ಸಿನಿಮಾಗಳು ಇವೇನೆ!
ಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿ ಹೊಸ ಸಿನಿಮಾ 'ಕಾತಲ್' ರಿಲೀಸ್‌ಗೆ ರೆಡಿಯಾಗಿದೆ. ಇದೇ ತಿಂಗಳು (ನವೆಂಬರ್) 23ರಂದು ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಸಜ್ಜಾಗಿದೆ. ಮಲಯಾಳಂ ಸಿನಿಮಾಗಳಿಗೆ ಕೇರಳದಷ್ಟೇ ಕ್ರೇಜ್ ಗಲ್ಫ್ ದೇಶಗಳಲ್ಲಿ ಇದೆ. ಆದ್ರೀಗ ಗಲ್ಫ್‌ನ ಕೆಲವು ದೇಶಗಳಲ್ಲಿ ಈ ಸಿನಿಮಾವನ್ನು ಬ್ಯಾನ್ ಮಾಡಲಾಗಿದೆ.
ಇತ್ತೀಚೆಗಷ್ಟೇ ಮಮ್ಮುಟ್ಟಿ ನಟಿಸಿದ 'ಕನ್ನುರ್ ಸ್ಕ್ವಾಡ್' ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೇ ಬೆನ್ನಲ್ಲೇ 'ಕಾತಲ್' ಸಿನಿಮಾ ಬಿಡುಗಡೆ ಸಜ್ಜಾಗಿದೆ. ಈಗಾಗಲೇ ರಿಲೀಸ್ ಆಗಿರೋ ಟೀಸರ್ ಹಾಗೂ ಟ್ರೈಲರ್‌ಗೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಇನ್ನೇನು ರಿಲೀಸ್‌ಗೆ ಮೂರು ದಿನಗಳಿವೆ ಅನ್ನುವಾಗ ಕತಾರ್, ಕುವೈತ್‌ನಲ್ಲಿ ಬ್ಯಾನ್ ಮಾಡಿ ಶಾಕ್ ಕೊಟ್ಟಿದೆ.

ಅಷ್ಟಕ್ಕೂ ಬ್ಯಾನ್ ಕುವೈತ್, ಕತಾರ್, ಮಲೇಷ್ಯಾ ಸೇರಿದಂತೆ ಹಲವು ಇಸ್ಲಾಂ ದೇಶಗಳಲ್ಲಿ ಭಾರತದ ಹಲವು ಸಿನಿಮಾಗಳನ್ನು ಬ್ಯಾನ್ ಮಾಡಲಾಗಿದೆ. ಅದರಲ್ಲಿ ಪ್ರಮುಖ ಐದು ಸಿನಿಮಾಗಳ ಪಟ್ಟಿ ಇಲ್ಲಿದೆ. ಇದರಲ್ಲಿ ಇತ್ತೀಚೆಗೆ ಬ್ಯಾನ್ ಆಗಿರುವ 'ಕಾತಲ್', 'ಟೈಗರ್ 3' ಕೂಡ ಸೇರಿಕೊಂಡಿದೆ.
ಮಮ್ಮುಟ್ಟಿಯ 'ಕಾತಲ್'
ಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿ ಸಿನಿಮಾ 'ಕಾತಲ್' ಯಾಕೆ ಬ್ಯಾನ್ ಆಯ್ತು? ಅನ್ನೋ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಇದರಲ್ಲಿ ಸಲಿಂಗಕಾಮಕ್ಕೆ ಸಂಬಂಧಿಸಿದ ದೃಶ್ಯಗಳಿರುವುದರಿಂದ ಕುವೈತ್, ಕತಾರ್‌ನಲ್ಲಿ ಬ್ಯಾನ್ ಮಾಡಲಾಗಿದೆ. ಈ ಸಿನಿಮಾದಲ್ಲಿ ಮಮ್ಮುಟ್ಟಿ ಜೊತೆ ಜ್ಯೋತಿಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ದಿ ಗ್ರೇಟ್ ಇಂಡಿಯನ್ ಕಿಚನ್' ಸಿನಿಮಾ ನಿರ್ದೇಶಿಸಿದ್ದ ಜೋ ಬೇಬಿ 'ಕಾತಲ್'ಗೆ ಆಕ್ಷನ್ ಕಟ್ ಹೇಳಿದ್ದಾರೆ.
ಸಲ್ಮಾನ್ ಖಾನ್ 'ಟೈಗರ್ 3'
ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ನಟಿಸಿದ 'ಟೈಗರ್ 3' ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿತ್ತು. ಈ ಸಿನಿಮಾವನ್ನೂ ಕುವೈತ್, ಕತಾರ್‌ನಲ್ಲಿ ಬ್ಯಾನ್ ಮಾಡಲಾಗಿತ್ತು. ಮುಸ್ಲಿಂ ಪಾತ್ರಗಳನ್ನು ಕೆಟ್ಟದಾಗಿ ತೋರಿಸಿದೆ ಎಂದು ಕಾರಣ ನೀಡಲಾಗಿತ್ತು.

ದಳಪತಿ ವಿಜಯ್ 'ಬೀಸ್ಟ್'
ದಳಪತಿ ವಿಜಯ್, ಪೂಜಾ ಹೆಗ್ಡೆ ನಟನೆಯ 'ಬೀಸ್ಟ್' ಸಿನಿಮಾವನ್ನು ಕುವೈತ್ ಹಾಗೂ ಕತಾರ್ ದೇಶಗಳಲ್ಲಿ ಬ್ಯಾನ್ ಮಾಡಿತ್ತು. ಮುಸ್ಲಿಂ ಪಾತ್ರಗಳನ್ನು ಉಗ್ರಗಾಮಿಗಳಂತೆ ಬಿಂಬಿಸಲಾಗಿದೆ ಎಂಬ ಕಾರಣಕ್ಕೆ ಪ್ರದರ್ಶನಕ್ಕೆ ಅವಕಾಶ ಕೊಡಲಿಲ್ಲ.
ದುಲ್ಖರ್ ಸಲ್ಮಾನ್ 'ಸೀತಾ ರಾಮಂ'
ದುಲ್ಖರ್ ಸಲ್ಮಾನ್ ಹಾಗೂ ಮೃಣಾಲ್ ಠಾಕೂರ್ ಕಾಂಬಿನೇಷನ್‌ನಲ್ಲಿ ಬಂದಿದ್ದ ಸೂಪರ್ ಹಿಟ್ ಸಿನಿಮಾ 'ಸೀತಾ ರಾಮಂ' ಭಾರತದಲ್ಲಿ ಸಕ್ಸಸ್ ಕಂಡಿತ್ತು. ಆದರೆ, ಈ ಸಿನಿಮಾ ಗಲ್ಫ್ ದೇಶಗಳಲ್ಲಿ ಬಿಡುಗಡೆಯಾಗಲಿಲ್ಲ. ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತೆ ಎಂಬ ಕಾರಣ ನೀಡಲಾಗಿತ್ತು.
ಮೋಹನ್‌ಲಾಲ್ 'ಮಾನ್‌ಸ್ಟರ್'
ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ನಟನೆಯ 'ಮಾನ್‌ಸ್ಟರ್' ಸಿನಿಮಾವನ್ನು ಗಲ್ಫ್ ದೇಶಗಳು ರಿಲೀಸ್ ಮಾಡುವುದಕ್ಕೆ ಬಿಡಲಿಲ್ಲ. ಈ ಸಿನಿಮಾದಲ್ಲಿ LGBTQ ಕಂಟೆಂಟ್ ಇದೆ ಎಂದು ಕಾರಣ ನೀಡಲಾಗಿತ್ತು.
ಕಮಲ್ ಹಾಸನ್ 'ವಿಶ್ವರೂಪಂ'
ಕಮಲ್ ಹಾಸನ್ ನಟಿಸಿದ ವಿವಾದಾತ್ಮಕ ಸಿನಿಮಾ 'ವಿಶ್ವರೂಪಂ' ಸಿನಿಮಾ ವಿರುದ್ಧ ತಮಿಳುನಾಡಿನಲ್ಲಿಯೇ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಮಲೇಷ್ಯಾದಲ್ಲಿ ರಿಲೀಸ್ ಆದ ಒಂದೇ ದಿನಕ್ಕೆ ಸಿನಿಮಾ ಪ್ರದರ್ಶನ ನಿಲ್ಲಿಸುವಂತೆ ಆದೇಶ ಹೊರಡಿಸಲಾಗಿತ್ತು. ಮುಸ್ಲಿಂ ಸಂಘಟನೆಗಳನ್ನು ಅವಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.
ತಮಿಳು ಸಿನಿಮಾ FIR
ತಮಿಳು ಚಿತ್ರರಂಗದ ಯುವ ನಟ ವಿಷ್ಣು ವಿಶಾಲ್ ನಟನೆಯ FIR ಸಿನಿಮಾವನ್ನು ಕತಾರ್, ಕುವೈತ್ ಹಾಗೂ ಮಲೇಷ್ಯಾದಲ್ಲಿ ಪ್ರದರ್ಶನ ಮಾಡಲು ಅವಕಾಶ ಕೊಟ್ಟಿರಲಿಲ್ಲ. ಈ ಸಿನಿಮಾ ಅಲ್ಲಿನ ಸೆನ್ಸಾರ್ ಅನ್ನೇ ಪಾಸ್ ಮಾಡಿರಲಿಲ್ಲ.


Click it and Unblock the Notifications











