24 ದಿನ ಕೋಮಾದಲ್ಲಿದ್ದ ನಿವೇದಿತಾ ಜೈನ್ ಎದ್ದು ಬರಲೇ ಇಲ್ಲ: ಆಕಸ್ಮಿಕ.. ಆತ್ಮಹತ್ಯೆ.. ಕೊಲೆ.. ಏನದು?
ಅತೀ ಚಿಕ್ಕ ವಯಸ್ಸಿನಲ್ಲಿಯೇ ನಿವೇದಿತಾ ಜೈನ್ ಸಿನಿಮಾರಂಗಕ್ಕೆ ಕಾಲಿಟ್ಟಿದ್ದರು. 16ನೇ ವಯಸ್ಸಿಗೆ ನಿವೇದಿತಾ ಜೈನ್ ಸಿನಿಮಾರಂಗಕ್ಕೆ ಕಾಲಿಟ್ಟಿದ್ದರು. ಅದೂ ಅಣ್ಣಾವ್ರ ಇಬ್ಬರು ಮಕ್ಕಳೊಂದಿಗೆ ಸಿನಿಮಾ ಮಾಡಲು ಅವಕಾಶ ಒದಗಿಬಂದಿತ್ತು. ಮೊದಲ ಸಿನಿಮಾವೇ ರಾಘವೇಂದ್ರ ರಾಜ್‌ಕುಮಾರ್ ನಟಿಸಿದ್ದ 'ಶಿವರಂಜಿನಿ'. ಆ ಬಳಿಕ ಶಿವರಾಜ್‌ಕುಮಾರ್ ನಟನೆಯ 'ಶಿವ ಸೈನ್ಯ'. ಈ ಎರಡೂ ಸಿನಿಮಾಗಳು ಗೆದ್ದಿದ್ದವು.
ಇಲ್ಲಿಂದ ನಿವೇದಿತಾ ಜೈನ್ ಬೇರೆ ಬೇರೆ ನಿರ್ಮಾಣ ಸಂಸ್ಥೆಗಳ ಸಿನಿಮಾಗಳನ್ನೂ ಒಪ್ಪಿಕೊಂಡಿದ್ದರು. ಆದರೆ, ಆರಂಭದಲ್ಲಿ ಸಿಕ್ಕ ಯಶಸ್ಸು ಮತ್ತೆ ನಿವೇದಿತಾಗೆ ಸಿಗಲೇ ಇಲ್ಲ. 16ನೇ ವಯಸ್ಸಿನಲ್ಲಿ ಶುರುವಾಗಿದ್ದ 19ನೇ ವಯಸ್ಸಿನ ಒಳಗೆ ಸಿನಿಮಾ ಜರ್ನಿ ಬಹುಬೇಗನೇ ಮುಗಿದು ಹೋಗಿತ್ತು.

ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೋತಿದ್ದವು. ಸಿನಿಮಾಗಳು ಕಡಿಮೆಯಾಗುತ್ತಾ ಬಂದಿದ್ದವು. ಮಾಡಲಿಂಗ್ ಪ್ರಪಂಚದಿಂದ ಬಂದಿದ್ದ ನಿವೇದಿತಾ ಮತ್ತೆ ಆ ಕಡೆಗೆ ಮರಳುವುದಕ್ಕೆ ನಿರ್ಧರಿಸಿದ್ದರು. ಮಿಸ್ ಬೆಂಗಳೂರು ಆಗಿದ್ದ ನಟಿ ಮಿಸ್ ಇಂಡಿಯಾ ಮೇಲೆ ಕಣ್ಣಿಟ್ಟಿದ್ದರು. ಅದಕ್ಕೆ ತಾಲೀಮು ನಡೆಸುತ್ತಿರುವಾಗಲೇ ನಿವೇದಿತಾ ಕೊನೆಯುಸಿರೆಳೆದಿದ್ದರು. ನಿವೇದಿತಾ ಸಾವಿನ ಬಗ್ಗೆ ಹರಿಹರಪುರ ಮಂಜುನಾಥ್ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಆಸಕ್ತಿಕರ ವಿಷಯಗಳನ್ನು ತಿಳಿಸಿದ್ದಾರೆ.
'ಅಮೃತ ವರ್ಷಿಣಿ' ಬಳಿಕ ಸೋಲು
ನಿವೇದಿತಾ ಜೈನ್ ಅಮೃತ ವರ್ಷಿಣಿ ಸಿನಿಮಾದಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಹೀಗೆ ಬಂದು ಹಾಗೇ ಹೋದರೂ ನಿವೇದಿತಾ ಶೈನ್ ಆಗಿದ್ದರು. ಆದರೆ, ಆ ಬಳಿಕ ನಟಿಸಿದ ಸಿನಿಮಾ ಗೆಲ್ಲಲಿಲ್ಲ. ಶಿವರಾಜ್‌ಕುಮಾರ್ ಜೊತೆನೇ ನಟಿಸಿದ್ದ 'ಪ್ರೇಮರಾಗ ಹಾಡು ಗೆಳತಿ' ಮಕಾಡೆ ಮಲಗಿತ್ತು. ಇಲ್ಲಿಂದ ನಿವೇದಿತಾ ಸೋಲು ಆರಂಭ ಆಗಿತ್ತು.

ಅಮೃತವರ್ಷಿಣಿ ಬಳಿಕ ನಿವೇದಿತಾ ಜೈನ್ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.'ನೀ ಮುಡಿದ ಮಲ್ಲಿಗೆ', 'ಬಾಳಿದ ಮನೆ', 'ಬಾಳಿನ ದಾರಿ', 'ಸೂತ್ರಧಾರ' ಹೀಗೆ ಅನೇಕ ಚಿತ್ರಗಳಲ್ಲಿ ನಿವೇದಿತಾ ನಟಿಸಿದ್ದರು. ಆದರೆ ಈ ಎಲ್ಲಾ ಸಿನಿಮಾಗಳೂ ನಿರೀಕ್ಷಿತ ಯಶಸ್ಸು ಕಾಣುವುದಿಲ್ಲ. ಹೀಗಾಗಿ ಮತ್ತೆ ಮಾಡಲಿಂಗ್ ಕಡೆ ಮುಖ ಮಾಡಲು ನಿರ್ಧರಿಸಿದ್ದರು. ಮಿಸ್ ಇಂಡಿಯಾಗೆ ತಯಾರಿ ನಡೆಸುತ್ತಿದ್ದರು. ಈ ವೇಳೆ ಯಡವಟ್ಟು ನಡೆದು ಹೋಗಿತ್ತು.
ಕ್ಯಾಟ್ ವಾಕ್ ಮಾಡುತ್ತಾ ಅಪಘಾತ
"ನಿವೇದಿತಾ ಜೈನ್ ಮಿಸ್ ಇಂಡಿಯಾಗಾಗಿ ತಯಾರಿಯನ್ನು ನಡೆಸುತ್ತಾ ಹೋಗುತ್ತಾರೆ. 1998ರ ಆರಂಭದಲ್ಲಿಯೇ ಮಿಸ್ ಇಂಡಿಯಾ ಸ್ಪರ್ಧೆಗಾಗಿ ತಯಾರಿ ಮಾಡಿಕೊಳ್ಳುತ್ತಾ ಇರುತ್ತಾರೆ. ಮೇ 17ನೇ ತಾರೀಕು, 1998 ರಾಜರಾಜೇಶ್ವರಿ ನಗರದಲ್ಲಿದ್ದ ತಮ್ಮ ಮನೆಯ ಎರಡನೇ ಮಹಡಿಯ ಟೆರೇಸ್‌ನಲ್ಲಿ ಕ್ಯಾಟ್ ವಾಕ್ ಅಭ್ಯಾಸ ಮಾಡುತ್ತಾ ಇರುತ್ತಾರೆ. ಆಗ ಅನಿರೀಕ್ಷಿತವಾಗಿ ಆಯಾ ತಪ್ಪಿ ಟೆರಾಸ್‌ನಿಂದ ಕುಸಿದು ಬೀಳುತ್ತಾರೆ. 35 ಅಡಿ ಎತ್ತರದಿಂದ ಅವರು ಕೆಳಗೆ ಬಿದ್ದಿದ್ದರಿಂದಾಗಿ ಅವರ ತಲೆಗೆ ಬಲವಾದ ಗಾಯವಾಗುತ್ತೆ. ತಕ್ಷಣ ಅವರನ್ನು ಮಲ್ಯ ಆಸ್ಪತ್ರೆಗೆ ಸೇರಿಸುತ್ತಾರೆ." ಎಂದು ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಹೇಳುತ್ತಾರೆ.
24 ಕೋಮದಲ್ಲಿದ್ದ ನಿವೇದಿತಾ ಜೈನ್
ನಿವೇದಿತಾ ಜೈನ್ 24 ದಿನಗಳ ಕಾಲ ಸಾವು ಬದುಕಿನೊಂದಿಗೆ ಹೋರಾಡುತ್ತಾರೆ. ಅವರ ತಂದೆ ಮಗಳು ಬದುಕಿ ಬರಲಿ ಅಂತ ಅದೆಷ್ಟೇ ಹಣ ಖರ್ಚು ಮಾಡಿದರೂ ಬದುಕಲಿಲ್ಲ. ದೊಡ್ಡ ವೈದ್ಯರ ತಂಡವೇ ಅವರ ಚಿಕಿತ್ಸೆಗೆ ನಿಂತಿತ್ತು. "ಯಾರೋ ಒಬ್ಬರು ಸಲಹೆ ನೀಡಿದಂತೆ ಕೋಮಾದಿಂದ ಎದ್ದು ಬರಲಿ ಎಂದ ನಿವೇದಿತಾ ರಿಂಕಿ ಎಂದು ಬದಲಾಯಿಸುತ್ತಾರೆ. ಆದರೆ, ವಿಧಿಯಾಟ ಬೇರೆನೇ ಇರುತ್ತೆ. 1998, ಜೂನ್ 10ನೇ ತಾರೀಕು, ಅಂದರೆ, ತನ್ನ 19ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ನಿವೇದಿತಾ ಹುಟ್ಟುಹಬ್ಬದ ಮರುದಿನವೇ ಬೆಳಗ್ಗೆ 11 ಗಂಟೆಗೆ ಕೊನೆಯುಸಿರೆಳೆಯುತ್ತಾರೆ." ಎಂದು ಆ ದಿನವನ್ನು ನೆನೆಯುತ್ತಾರೆ ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್.
ನಿವೇದಿತಾ ಬಗ್ಗೆ ಇದ್ದ ಊಹಾ ಪೋಹವೇನು?
ನಿವೇದಿತಾ ಜೈನ್ ಸಾವನ್ನಪ್ಪಿದಾಗ ಹಲವು ಊಹಾ ಪೋಹಗಳು ಹುಟ್ಟಿಕೊಂಡಿದ್ದವು. ನಿವೇದಿತಾ ಮಹಡಿಯಿಂದ ಜಾರಿ ಬಿದ್ರಾ? ಅಥವಾ ಆತ್ಮಹತ್ಯೆ ಮಾಡಿಕೊಂಡ್ರಾ? ಇಲ್ಲಾ ಆಗದವರು ಸೇಡು ತೀರಿಸಿಕೊಂಡ್ರಾ? ಇಂತಹದ್ದೇ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಇಷ್ಟೇ ಅಲ್ಲದೆ "ಕರ್ನಾಟಕದ ಒಬ್ಬ ಪ್ರಭಾವಿ ರಾಜಕಾರಣಿ ಪದೇ ಪದೇ ಕರೆಮಾಡುತ್ತಿದ್ದಾರೆ. ಕಿರಿ ಕಿರಿ ಮಾಡುತ್ತಿದ್ದಾರೆ. ತಮ್ಮ ಬಳಿಗೆ ಬರುವಂತೆ ಕೇಳಿಕೊಳ್ಳುತ್ತಿದ್ದಾರೆ. ಇಂತಹ ವಿಷಯಕ್ಕೆ ನಿವೇದಿತಾ ಜೈನ್ ಕಿರಿಕಿರಿಗೆ ಒಳಗಾಗಿದ್ದರು ಎನ್ನುವಂತಹ ಕಥೆಯೊಂದು ಹುಟ್ಟಿಕೊಂಡಿತ್ತು. ಆದರೆ, ಈ ಕಥೆ ನಿಜವೋ ಸುಳ್ಳೋ ಅನ್ನೋ ಆ ವ್ಯಕ್ತಿಗಳಿಗೆ ಮಾತ್ರ ಗೊತ್ತಿರುತ್ತೆ." ಎಂದು ಆ ಗಾಳಿಸುದ್ದಿಯನ್ನು ನೆನೆದಿದ್ದಾರೆ.


Click it and Unblock the Notifications











