ಎನ್‌ಟಿಆರ್ ರಾಮ.. ಅಣ್ಣಾವ್ರು ಆಂಜನೇಯನಾಗಬೇಕಿತ್ತು; ಆದರೆ, ಎನ್‌ಟಿಆರ್ ರಾಮನಾಗಲಿಲ್ಲ ಯಾಕೆ?
1963ರಲ್ಲಿ ತೆರೆಕಂಡಿದ್ದ ಕನ್ನಡ ಸಿನಿಮಾ 'ಶ್ರೀ ರಾಮಾಂಜನೇಯ ಯುದ್ಧ'. ಡಾ.ರಾಜ್‌ಕುಮಾರ್, ಉದಯ್ ಕುಮಾರ್ ನಟಿಸಿದ್ದ ಈ ಸಿನಿಮಾದಲ್ಲಿ ಅಣ್ಣಾವ್ರು ಶ್ರೀರಾಮನಾಗಿ ನಟಿಸಿದ್ದರು. ಆಂಜನೇಯನ ಪಾತ್ರದಲ್ಲಿ ಉದಯ್ ಕುಮಾರ್ ನಟಿಸಿದ್ದರು. ಈ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ವ್ಯಕ್ತವಾಗಿತ್ತು.
'ಶ್ರೀ ರಾಮಾಂಜನೇಯ ಯುದ್ಧ' ಅಣ್ಣಾವ್ರ 50ನೇ ಸಿನಿಮಾ ಸಿನಿಮಾ ಆಗಿತ್ತು. ಇದು ಅಣ್ಣಾವ್ರು ಇಷ್ಟ ಪಟ್ಟ ಪಾತ್ರ. ಇದೇ ಸಿನಿಮಾ ಮೂಲಕ ಸಂಗೀತ ನಿರ್ದೇಶಕ ಸತ್ಯಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಗೀತಾ ಪ್ರಿಯಾ ಚಿತ್ರ ಸಾಹಿತಿಯಾಗಿ ಬಂದಿದ್ದರು.

ಆದರೆ, ಈ ಸಿನಿಮಾವನ್ನು ನಿರ್ಮಾಪಕ ಎಂ ಎಸ್ ನಾಯಕ್ ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡುವುದಕ್ಕೆ ಹೊರಟಿದ್ದರು. ಶ್ರೀರಾಮನ ಪಾತ್ರದಲ್ಲಿ ಎನ್‌ಟಿಆರ್, ಆಂಜನೇಯನ ಪಾತ್ರದಲ್ಲಿ ಅಣ್ಣಾವ್ರು ನಟಿಸಬೇಕಿತ್ತು. ಕೊನೆಗೂ ಈ ಸಿನಿಮಾ ಮೂಲಕ ಎನ್‌ಟಿಆರ್ ಕನ್ನಡಕ್ಕೆ ಬರಲೇ ಇಲ್ಲ. ಅದ್ಯಾಕೆ ಅನ್ನೋದನ್ನು ಹಾಲು ಜೇನು ರಾಮ್‌ಕುಮಾರ್ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.
'ಶ್ರೀ ರಾಮಾಂಜನೇಯ ಯುದ್ಧ' ಸಿನಿಮಾ ನಿರ್ಮಾಪಕರಿಗೆ ಪೌರಾಣಿಕ ಸಿನಿಮಾ ಮಾಡಬೇಕು ಅನ್ನೋ ಆಸೆಯಿತ್ತು. ಹೀಗಾಗಿ 'ಶ್ರೀ ರಾಮಾಂಜನೇಯ ಯುದ್ಧ' ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದರು. "ಈ ಸಿನಿಮಾದ ನಿರ್ಮಾಪಕ ಎಂ ಎಸ್ ನಾಯಕ್ ಮೂಲತ: ದಕ್ಷಿಣ ಕನ್ನಡದವರು. ಅವರದ್ದು ಮದ್ರಾಸ್ ಮತ್ತು ಆಂಧ್ರದಲ್ಲಿ ವ್ಯಾಪಾರವಿತ್ತು. ಅವರೊಂದು ಹೋಟೆಲ್ ನಡೆಸುತ್ತಿದ್ದರು. ಅದರಲ್ಲಿ ಸಿನಿಮಾ ನಟ-ನಟಿಯರು ಬಂದು ಇಳಿದುಕೊಳ್ಳುತ್ತಿದ್ದರು. ಅವರಿಗೆ ಸಿನಿಮಾ ಮೇಲೆ ಆಸಕ್ತಿ ಬಂತು. ಆದರೆ, ಮೊದಲ ಸಿನಿಮಾ ತೆಗೆಯಲಿಲ್ಲ. ಸಿನಿಮಾಗೆ ಫೈನಾನ್ಸ್ ಮಾಡಿದ್ರು. ಇವರಿಗೆ ಪೌರಾಣಿಕ ಸಿನಿಮಾಗಳ ಬಗ್ಗೆ ಒಲವು ಇತ್ತು. " ಎಂದಿದ್ದರು.
ಅಣ್ಣಾವ್ರು ಹಾಗೂ ಎನ್‌ಟಿಆರ್ ಇಬ್ಬರನ್ನು ಇಟ್ಟುಕೊಂಡು ಎರಡು ಭಾಷೆಯಲ್ಲಿ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದರು. "ರಾಮಾಂಜನೇಯ ಯುದ್ಧವನ್ನು ಎರಡು ಭಾಷೆಯಲ್ಲಿ ಮಾಡೋಣ. ಆಗ ಬಜೆಟ್ ವರ್ಕ್‌ಔಟ್ ಆಗುತ್ತೆ ಅಂದುಕೊಂಡಿದ್ದರು. ತೆಲುಗು ಹಾಗೂ ಕನ್ನಡದಲ್ಲಿ ಮಾಡೋಣ ಅಂತಿದ್ದರು. " ಎಂದು ಹಾಲು ಜೇನು ರಾಮ್‌ಕುಮಾರ್ ಹೇಳಿಕೊಂಡಿದ್ದಾರೆ.

ನಿರ್ಮಾಪಕ ಎಂ ಎಸ್ ನಾಯಕ್ ಈ ಸಿನಿಮಾಗಾಗಿ ಎನ್‌ಟಿಆರ್ ಬಳಿ ಕೇಳಿಕೊಂಡಿದ್ದರು. ಅದಕ್ಕೆ ಅವರೂ ಅಣ್ಣಾವ್ರ ನಟಿಸಲು ಒಪ್ಪಿಕೊಂಡಿದ್ದರು. "ರಾಮಾಂಜನೇಯ ಯುದ್ಧದಲ್ಲಿ ರಾಮನ ಪಾತ್ರಕ್ಕೆ ಎನ್‌ಟಿಆರ್ ಕೇಳಿದ್ರು. ಅವರು ಒಪ್ಪಿಕೊಂಡರು. ರಾಜ್‌ಕುಮಾರ್ ಜೊತೆ ಸಿನಿಮಾ ಮಾಡುವುದಕ್ಕೆ ಆಸೆ. ಅವನು ನನ್ನ ತಮ್ಮ. ಅವನು ತೆಲುಗಿಗೆ ಬರಲ್ಲ ಅಂತಾನೆ. ನಾನೇ ಕನ್ನಡಕ್ಕೆ ಬರುತ್ತೇನೆ ಪರವಾಗಿಲ್ಲ. ಕನ್ನಡದಲ್ಲಿ ರಾಜ್‌ಕುಮಾರ್‌ಗೆ ಏನು ಸಂಭಾವನೆ ಕೊಡುತ್ತಿರೋ ಅದನ್ನೇ ಕೊಡಿ. ಹೆಚ್ಚು ಕೊಟ್ಟರೆ, ಆ ನಟನಿಗೆ ಅವಮಾನ ಮಾಡಿದಂತಾಗುತ್ತೆ." ಎಂದು ಹೇಳಿದ್ದರು.
"ನಿರ್ಮಾಪಕ ಎಂ ಎಸ್ ನಾಯಕ್ ಬಜೆಟ್ ಹಾಕಿ ನೋಡಿದ್ರು. ಬಜೆಟ್ ತುಂಬಾ ಆಗಿ ಹೋಯ್ತು. ಅವರು ಸಾಲ ಮಾಡುವವರಲ್ಲ. ಇರುವ ದುಡ್ಡಿನಲ್ಲೇ ಸಿನಿಮಾ ಮಾಡುವವರು. ಹೀಗಾಗಿ ತೆಲುಗು ಭಾಷೆಯನ್ನು ಡ್ರಾಪ್ ಮಾಡಿದ್ರು. ರಾಜ್‌ಕುಮಾರ್ ಬಳಿಕ ಬಂದು ರಾಮಾಂಜನೇಯ ಸಿನಿಮಾ ಮಾಡಬೇಕೆಂದಿದ್ದೇನೆ. ಎರಡು ಪಾತ್ರವಿದೆ. ರಾಮ ಮತ್ತು ಆಂಜನೇಯ ಯಾವ ಪಾತ್ರ ಮಾಡುತ್ತೀರಾ ಎಂದು ಕೇಳಿದ್ರು. ತಕ್ಷಣ ಅಣ್ಣಾವ್ರು ರಾಮನ ಪಾತ್ರ ಎತ್ತಿಕೊಂಡರು." ಎಂದು ಆ ಘಳಿಗೆಯನ್ನು ಹಾಲು ಜೇನು ರಾಮ್‌ಕುಮಾರ್ ನೆನಪಿಸಿಕೊಂಡಿದ್ದಾರೆ.
"ಆಂಜನೇಯನ ಪಾತ್ರ ಚೆನ್ನಾಗಿ ಮಾಡುತ್ತೀರ ಅಂತ ಕೇಳಿದ್ದೇನೆ. ಅದನ್ನು ಮಾಡಿ ಅಂದಾಗ, ಇಲ್ಲ ನನಗೆ ರಾಮನ ಪಾತ್ರ ತುಂಬಾನೇ ಇಷ್ಟ ಎಂದಿದ್ರು. ಆಗ ದ್ವಿಪಾತ್ರದಲ್ಲಿ ನಟಿಸಿ ಎಂದಿದ್ದರು. ಅದಕ್ಕೆ ರಾಜ್‌ಕುಮಾರ್ ಒಪ್ಪಲಿಲ್ಲ. ಆಂಜನೇಯ ಪಾತ್ರಕ್ಕೆ ಉದಯ್ ಕುಮಾರ್ ಹಾಕಿಕೊಳ್ಳಿ ಎಂದು ಅಣ್ಣಾವ್ರೇ ಹೇಳಿದ್ದರು." ಎಂದು ಶ್ರೀ ರಾಮಾಂಜನೇಯ ಯುದ್ಧ ಸಿನಿಮಾ ಬಗ್ಗೆ ಹೇಳಿದ್ದಾರೆ.


Click it and Unblock the Notifications











