ಅಣ್ಣಾವ್ರು ಅಭಿಮಾನಿಗಳಿಗೆ ದೇವರುಗಳೇ ಅಂತ ಕರೆದಿದ್ಯಾಕೆ ಗೊತ್ತೇ? ವೇದಿಕೆ ಮೇಲೆ ಅವರೇ ಹೇಳಿದ ಮಾತಿದು
ಅಣ್ಣಾವ್ರು ಮಾತುಗಳನ್ನು ಕೇಳುವುದಕ್ಕೆ ಚೆಂದ. ಕೇವಲ ಸಿನಿಮಾದಲ್ಲಷ್ಟೇ ಅಲ್ಲ. ರಿಯಲ್ ಲೈಫ್‌ನಲ್ಲೂ ವರನಟ ಮಾತುಗಳನ್ನು ಕೇಳುವುದಕ್ಕೆ ಜನರು ತುದಿಗಾಲಲ್ಲಿ ನಿಲ್ಲುತ್ತಿದ್ದರು. ಬಹಳ ಸಂದರ್ಭಗಳಲ್ಲಿ ವೇದಿಕೆ ಮೇಲೆ ಅಣ್ಣಾವ್ರು ತಮ್ಮ ಬಗ್ಗೆ, ಅಭಿಮಾನಿಗಳ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಆ ತುಣುಕುಗಳನ್ನು ಅಭಿಮಾನಿಗಳು ಈಗ ಹಂಚಿಕೊಳ್ಳುತ್ತಿದ್ದಾರೆ.
ವರನಟ ಡಾ.ರಾಜ್‌ಕುಮಾರ್ ಅವರ ಅಪಾರ ಅಭಿಮಾನಿಗಳನ್ನು ಅಗಲಿ ಬರೋಬ್ಬರಿ 20 ವರ್ಷಗಳಾಗುತ್ತೆ. ಹೀಗಾಗಿ ಅಭಿಮಾನಿಗಳು ಅಣ್ಣಾವ್ರ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಬೇರೆ ಬೇರೆ ಸಂದರ್ಭಗಳಲ್ಲಿ ರಾಜ್‌ಕುಮಾರ್ ವೇದಿಕೆ ಮೇಲೆ ನುಡಿದ ನುಡಿಮುತ್ತುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆ ವಿಡಿಯೋ ತುಣುಕುಗಳನ್ನು ನೋಡಿ ಫ್ಯಾನ್ಸ್ ಎಂಜಾಯ್ ಮಾಡುತ್ತಿದ್ದಾರೆ.

ಅಣ್ಣಾವ್ರು ಹಲವು ಸಂದರ್ಭಗಳಲ್ಲಿ ವೇದಿಕೆ ಮೇಲೆ ಅಭಿಮಾನಿಗಳನ್ನು ದೇವರು ಅಂತ ಯಾಕೆ ಕರೆಯೋದು ಅನ್ನೋದನ್ನು ಹೇಳಿಕೊಂಡಿದ್ದಾರೆ. ಬೇರೆ ಬೇರೆ ಬಿರುದುಗಳನ್ನು ಕೊಟ್ಟು ಅವರನ್ನು ಪ್ರೋತ್ಸಾಹಿಸಿದ್ದನ್ನು ನೆನೆಪಿಸಿಕೊಂಡಿದ್ದರು. ಆ ವಿಡಿಯೋಗಳು ಅಣ್ಣಾವ್ರ 20ನೇ ಪುಣ್ಯತಿಥಿಯಂದು ಸೋಶೀಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆ ತುಣುಕುಗಳ ಝಲಕ್ ಇಲ್ಲಿದೆ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿರುವ ಮಾಹಿತಿಯಂತೆ ವಾಟಿಕ ವರ್ಷದ ಕನ್ನಡಿಗ 2003 ರ ಪ್ರಶಸ್ತಿ ಸಮಾರಂಭದಲ್ಲಿ ಡಾ.ರಾಜ್‌ಕುಮಾರ್ ಮಾತುಗಳು ಹೀಗಿವೆ. "ನಾನು ಮಾಡಿದ್ದೀನಿ.. ನಾನು ಮಾಡಿದ್ದೀನಿ ಅಂತ ಹೇಳುವುದಕ್ಕಿಂತ ನನ್ನ ಕೈಯಲ್ಲಿ ಮಾಡಿಸಿದ್ದಾರೆ. ಅದೇ ಬಹಳ ಶ್ರೇಷ್ಠ. ಮೀಸೆ, ದಾಡಿ ಅಂಟಿಸಿಕೊಂಡು ನಾರಾಯಣ, ಪರಮಾತ್ಮ ಅಂತ ಪಾತ್ರ ಮಾಡುತ್ತಿದ್ದವನಿಗೆ ಜೇಮ್ಸ್ ಬಾಂಡ್‌ವರೆಗೂ ಕರೆದುಕೊಂಡು ಹೋದರು. ಯಾರೂ ನನಗೆ ಯಾವ ಪಾತ್ರ ಇಷ್ಟ ಆಗುತ್ತೆ ಅಂತ ಕೇಳಲಿಲ್ಲ. ಅವರವರೇ ಹಾಕ್ರಿ ಅವನಿಗೆ ಚೆನ್ನಾಗಿರುತ್ತೆ ಒಪ್ಪುತ್ತೆ ಅಂತ ಅವರವರೇ ಮಾಡಿಕೊಂಡರು. ಅವರೇ ಮೆರೆಸಿ, ಅವರೇ ಆನಂದ ಪಟ್ಟರು. ಆ ಆನಂದವನ್ನು ತಮಗೆ ಸಮರ್ಪಣೆ ಮಾಡಿಬಿಡುತ್ತೇನೆ." ಎಂದು ಅಣ್ಣಾವ್ರು ಹೇಳಿದ್ದರು.
ಇನ್ನು ಅಭಿಮಾನಿಗಳಿಗೆ ದೇವರು ಅಂತ ಕರೆಯಬೇಕು ಅಂತ ಅನಿಸಿದ್ದು ಯಾಕೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ."ಯಾವುದೇ ಒಂದು ದೇವರ ದರ್ಶನಕ್ಕೆ ಹೋದರೂ ದೇವರು ಇಲ್ಲೇ ಬಂದು ಬಿಟ್ಟಿದೆ ಅಂತ ಹೇಳುವಂತಹ ಸಂದರ್ಭ. ಆಗಲೇ ನಾನು, ಯಾವುದೇ ವೇದಿಕೆ ಮೇಲೆ ಹೋದರೂ ಅಭಿಮಾನಿ ದೇವರುಗಳೇ ಅನ್ನೋದಕ್ಕೆ ಅದೇ ಕಾರಣ ಆಯ್ತೋ ವಿನ: ಏನೋ ಮುಖ ಸ್ತುತಿಗೆ ಹೇಳುವಂತಹ ಮಾತಲ್ಲ. ನೀವೆಲ್ಲ ನನ್ನ ಹೃದಯದಲ್ಲಿ ತುಂಬಿಕೊಂಡು ಬಿಟ್ಟಿದ್ದೀರಿ. ಅದು ಇಷ್ಟು ಅಂತ ಹೇಳುವುದಕ್ಕೆ ನನಗೆ ಶಬ್ದಗಳೇ ಸಾಲುತ್ತಿಲ್ಲ. ಏನೂ ಗೊತ್ತಿಲ್ಲದೆ ಇರುವ ಒಬ್ಬ ಮನುಷ್ಯ ಈ ಮಟ್ಟಕ್ಕೆ ಬರಬೇಕಾದರೆ, ಎಷ್ಟರ ಮಟ್ಟಕ್ಕೆ ನೀವು ನನ್ನನ್ನು ಸಾಕಿದ್ದೀರಿ, ಎಷ್ಟರ ಮಟ್ಟಕ್ಕೆ ನೀವು ನನ್ನನ್ನು ಬೆಳೆಸಿದ್ದೀರಿ.. ಇದರಲ್ಲಿ ನನ್ನ ಸೇವೆ ಬಹಳ ಅಲ್ಪ. ಸಾಧಿಸಬೇಕಿರೋದು ಸಾಗರದಷ್ಟು ಉದ್ದವಿದೆ." ಎಂದಿದ್ದಾರೆ.
ಇನ್ನೊಂದು ಸಂದರ್ಭದಲ್ಲಿ ಡಾಕ್ಟರೇಟ್ ಅನೌನ್ಸ್ ಆದಾಗ ಏನು ಹೇಳಿದ್ದರು ಅನ್ನೋದನ್ನು ಹೇಳಿ ವೇದಿಕೆಯೊಂದರಲ್ಲಿ ಹೇಳಿಕೊಂಡಿದ್ದರು. "ಮೊದಲೇ ನಾನು ವಿದ್ಯಾವಂತನಲ್ಲ. ಓದಿದವನಲ್ಲ. ಯಾವುದೇ ಡಿಗ್ರಿಯನ್ನು ಪಡೆದುಕೊಂಡವನಲ್ಲ. ಮೈಸೂರು ವಿಶ್ವವಿದ್ಯಾನಿಲಯದವರು ನಿಮ್ಮ ರಾಜ್‌ಕುಮಾರನಿಗೆ ಡಾಕ್ಟರೇಟ್ ಕೊಟ್ಟರು. ಅಲ್ಲೇ ಕೇಳಿದೆ ನಾನು ಏನು ನೋಡಿ ಡಾಕ್ಟರೇಟ್ ಕೊಡುತ್ತಿದ್ದೀರಿ ಅಂತ. ನಾನು ಏನು ಮಾಡಿದ್ದೀನಿ. ನಾನು ಎಂಎ ಪಾಸ್ ಮಾಡಿದ್ದೀನಾ? ಇಲ್ಲ ಎಂಎ ಪಿಎಚ್‌ಡಿ ಏನಾದರೂ ಓದಿದ್ದೀನಾ? ಅಂತ ಕೇಳಿದೆ ಅವರಿಗೆ." ಎಂದು ವೇದಿಕೆ ಮೇಲೆ ಹೇಳಿಕೊಂಡಿದ್ದರು.
ಇಷ್ಟು ಮುಗ್ಧವಾಗಿ ಮಾತಾಡುತ್ತಿದ್ದ ಭಾರತೀಯ ಚಿತ್ರರಂಗದ ಮೇರು ನಟ ಮತ್ತೊಬ್ಬರಿಲ್ಲ. ಅದರಲ್ಲೂ ಅವರಿಗೆ ಅಭಿಮಾನಿಗಳು ಕೊಟ್ಟ ರಸಿಕರ ರಾಜ ಬಿರುದಿನ ಬಗ್ಗೆ ಹೀಗಂದಿದ್ದಾರೆ. "ನಾನು ಅವರಿಗೆ ರಸಿಕರ ರಾಜ ಅಂತೆ ಅವರಿಗೆ ನೋಡಿ. ನಾನು ರಸಿಕರಿಗೆ ರಾಜ ಅಂತೆ ನೋಡಿ ಎಷ್ಟು ಚೆನ್ನಾಗಿದೆ. ಎಲ್ಲ ನೀವು ಕಟ್ಟಿದ ಹೆಸರು. ಎಲ್ಲಾ ನೀವು ಕೊಟ್ಟ ಆಸ್ತಿ. ಎಲ್ಲಾ ನೀವು ಕೊಟ್ಟಂತಹ ಕರುಣೆ ವಿನ: ಈ ರಾಜ್‌ಕುಮಾರನಿಗೆ ಬೇರೆ ಏನೂ ಗೊತ್ತಾಗುವುದಕ್ಕೆ ಸಾಧ್ಯವೇ ಇಲ್ಲ" ಎಂದಿದ್ದರು.


Click it and Unblock the Notifications















