"ಆ ಹೆಂಗಸರಿಗೆ ಶ್ರೀರಾಮನಂತೆ ಕಾಣಿಸುತ್ತೀರ.. ನೀವು ಶ್ರೀರಾಮನ ಹಾಗೆ ಇದ್ದರೆ ಚೆನ್ನಾಗಿರುತ್ತೆ" ಎಂದು ಪಾರ್ವತಮ್ಮ ಹೇಳಿದ್ದೇಕೆ?

ಡಾ.ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಮೇರು ನಟನಾಗಿ ಮೆರೆಯುವುದಕ್ಕೆ ಅಡಿಪಾಯ ಹಾಕಿದ್ದು ನಾಟಕಗಳು. ಸಿನಿಮಾರಂಗಕ್ಕೆ ಕಾಲಿಡುವುದಕ್ಕೂ ಮುನ್ನ ಮುತ್ತುರಾಜನಾಗಿ ಹಲವು ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಇವರು ನಟಿಸುವ ನಾಟಕಗಳನ್ನು ತಪ್ಪದೇ ನೋಡುವಂತಹ ಒಂದು ವರ್ಗವೇ ಇತ್ತು. ಅಂತಹದ್ದೊಂದು ನಾಟಕ 'ರಾಮಾಯಣ'.

ಅಣ್ಣಾವ್ರ 'ರಾಮಾಯಣ' ನಾಟಕ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿತ್ತು. ನಾಟಕ ಹಮ್ಮಿಕೊಂಡ ಕಡೆಯೆಲ್ಲ ಉತ್ತಮ ಪ್ರತಿಕ್ರಿಯೆ ಸಿಗುತ್ತಿತ್ತು. ರಾಮನ ಅವತಾರದಲ್ಲಿ ಅಣ್ಣಾವ್ರು ಸಾಕ್ಷಾತ್ ಶ್ರೀರಾಮನಂತೆಯೇ ಕಾಣಿಸುತ್ತಿದ್ದರು. ಪಾರ್ವತಮ್ಮ ರಾಜ್‌ಕುಮಾರ್ ಈ ನಾಟಕವನ್ನು ನೋಡುವುದಕ್ಕೆ ಹೋದಾಗ ಅವರಿಗೆ ಕೆಲವು ಘಟನೆಗಳು ಕಣ್ಣಿಗೆ ಬಿದ್ದಿದ್ದವು. ಅದನ್ನು ನೋಡಿ ಅಚ್ಚರಿಗೊಂಡಿದ್ದರು.

Once Parvathamma Rajkumar asked Rajkumar to be like Lord Srirama in real life

ಒಮ್ಮೆ ಹಿರಿಯ ಸಾಹಿತಿ ಜಯಂತ್ ಕಾಯ್ಕಿಣಿ ಮಾಡಿದ ಸಂದರ್ಶನದಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಈ ನಾಟಕದ ಕೆಲವು ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಜಿಯೋಹಾಟ್‌ಸ್ಟಾರ್ ಕನ್ನಡ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇದರ ಕೆಲವು ತುಣುಕುಗಳನ್ನು ಹಂಚಿಕೊಂಡಿದೆ. ಈ ಸಂದರ್ಶನದಲ್ಲಿ ಶ್ರೀರಾಮನ ಪಾತ್ರದಲ್ಲಿದ್ದ ಅಣ್ಣಾವ್ರನ್ನು ನೋಡುವುದಕ್ಕೆ 40 ರಿಂದ 45 ವಯಸ್ಸಿನ ಹೆಂಗಸರು ತಪ್ಪದೆ ಬರುತ್ತಿದ್ದಿದ್ದನ್ನು ಗಮನಿಸಿದ್ದರು. ಈ ನಾಟಕ ಮುಗಿಸಿ ಮನೆಗೆ ಬಂದಿದ್ದ ಅಣ್ಣಾವ್ರಿಗೆ ಶ್ರೀರಾಮನಂತೆ ಇದ್ದರೆ ಚೆನ್ನಾಗಿರುತ್ತೆ ಎಂದಿದ್ದರು. ಅದಕ್ಕೆ ವರನಟ ಕೊಟ್ಟ ಉತ್ತರವೇನು? ಅನ್ನೋದನ್ನು ಹೇಳಿದ್ದಾರೆ.

ಶ್ರೀರಾಮನಾಗಿದ್ದ ಅಣ್ಣಾವ್ರಿಗೆ ಎದ್ದು ನಮಸ್ಕಾರ ಮಾಡುತಿದ್ರು

ಅಣ್ಣಾವ್ರು ನಟಿಸಿದ ನಾಟಕಗಳೇ ಸಿನಿಮಾಗಳಾಗಿದ್ದೂ ಇದೆ. ಇನ್ನು ಕೆಲವು ಪಾತ್ರಗಳು ನಾಟಕದಲ್ಲಿಯೇ ಸಖತ್ತಾಗಿದೆ ಅಂತ ಅನಿಸಿದ್ದೂ ಇದೆ. ಅದರಲ್ಲಿ 'ರಾಮಾಯಣ'ದ ಶ್ರೀರಾಮನ ಪಾತ್ರವೂ ಒಂದು. "ನನಗೆ ಸಿನಿಮಾದ ಕಣ್ಣಪ್ಪನ ಪಾತ್ರಕ್ಕಿಂತ ನಾಟಕದ ಕಣ್ಣಪ್ಪನ ಪಾತ್ರ ಇಷ್ಟ. ಆಮೇಲೆ ಇವರು ರಾಮನ ಪಾತ್ರ ಮಾಡೋರು. ಅಲ್ಲಿ 10-12 ಜನ ಹೆಂಗಸರು ಬರೋರು. ಎಲ್ಲಾ 40 ರಿಂದ 45 ವರ್ಷದವರು. ಎಲ್ಲರೂ ಸೆಕೆಂಡ್ ರೋನಲ್ಲಿ 10-20 ಸೀಟ್‌ಗಳನ್ನು ಬುಕ್ ಮಾಡೋರು. ರಾಮ ಎಂಟ್ರಿ ಕೊಟ್ಟ ಕೂಡಲೇ ಅವರು ಎಲ್ಲರೂ ಎದ್ದು ನಮಸ್ಕಾರ ಮಾಡಿ ಕೂರುತ್ತಿದ್ದರು. ಇದು ನನಗೆ ಹೊಸ ಅನುಭವ. ನಮ್ಮ ಹತ್ತಿರ ಇರೋರೆಲ್ಲರೂ ಬಂದು ನಿಮ್ಮ ಯಜಮಾನರಿಗೆ ಏನಿಷ್ಟ ಕೇಳಿ ಹೇಳಮ್ಮ. ಅವರಿಗೆ ಸೊಪ್ಪಿನ ಪಲ್ಯ, ಕೋಸಂಬರಿ ಇವೆಲ್ಲ ತುಂಬಾನೇ ಇಷ್ಟ. ಅದನ್ನು ಹೇಳುತ್ತಿದ್ದೆ. ಯಾವಾಗಲೂ ಅದನ್ನು ಮಾಡಿಕೊಂಡು ಕೊಡೋರು. ಇವರು ಅದನ್ನು ತಿನ್ಬೇಕು. ಕೆಲವರು ಇದ್ದು ತಿನಿಸಿ ಹೋಗೋರು. ಆ ನಾಟಕ ನನ್ನನ್ನು ಬಹಳ ಪರಿವರ್ತನೆ ಮಾಡಿತು" ಎಂದು ಪಾರ್ವತಮ್ಮ ಹೇಳಿಕೊಂಡಿದ್ದರು.

ಅಣ್ಣಾವ್ರು ಬಾರಿ ಕಿಲಾಡಿ ಅನಿಸಿದ್ದೇಕೆ?

ಶ್ರೀರಾಮನ ಪಾತ್ರ ಮಾಡುತ್ತಿದ್ದ ಅಣ್ಣಾವ್ರ 'ರಾಮಾಯಣ' ನಾಟಕ ನೋಡುವುದಕ್ಕೆ ಹೋಗಿದ್ದ ಪಾರ್ವತಮ್ಮ ಮಾರನೇ ದಿನ ಶ್ರೀರಾಮ ಹಾಗೆ ಇದ್ದರೆ ಚೆನ್ನಾಗಿರುತ್ತೆ ಎಂದು ಹೇಳಿದ್ದರು. ಈ ಮಾತು ಹೇಳಿದ್ದೇಕೆ? ಅದಕ್ಕೆ ಅಣ್ಣಾವ್ರ ಉತ್ತರವೇನು? ಅನ್ನೋದನ್ನು ಈ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. "ರಾಮಾಯಣದಲ್ಲಿ ನನಗೆ ಒಂದು ಇಷ್ಟ ಆಗಿದ್ದು ಏನಂದರೆ, ಸೀತೆಗೆ ಎಲ್ಲಾ ಹೇಳಿ ಬರುತ್ತಾನೆ. ಅದನ್ನು ಕಂದ ಪದ್ಯದ ಹಾಗೇ ಮಾಡಿದ್ದಾರೆ. ನೀನು ಸುಮಕೋಮಲೆ. ಅದು-ಇದು ಎಂದು ಹೇಳಿ. ಕೆನ್ನೆ ಹಿಡಿದು ಕೊಂಡು ಹಾಡುವ ದೃಶ್ಯವಿದೆ. ಅದನ್ನು ನೋಡಿ ಈ ಮನುಷ್ಯ ಬಾರಿ ಕಿಲಾಡಿ ಇದ್ದಾರೆ. ನನಗೂ ಕೋಪ ಬಂದರೆ, ಹೀಗೆ ಏನಾದರೂ ಹೇಳುತ್ತಾರಾ ಅನ್ನೋ ಊಹೆ ನನಗೆ. ಆ ನಾಟಕ ನೋಡಿಕೊಂಡು ಬಂದು ನಾನು ಕೇಳಿದೆ. ನಾಟಕ ಮುಗಿಸಿಕೊಂಡು ಬೆಳಗ್ಗೆ ಬಂದರು. ಸ್ನಾನ ಮಾಡಿ, ಪೂಜೆ ಮಾಡಿ ಮಲಗುವಾಗ ನಾನು ಕೇಳಿದೆ. ಆ ಹೆಂಗಸರಿಗೆ ಶ್ರೀರಾಮನಂತೆ ಕಾಣಿಸುತ್ತೀರ. ನಿಮ್ಮನ್ನು ಎಷ್ಟು ಇಷ್ಟ ಪಡುತ್ತಾರೆ ಅಂದೆ. ಸರಿ ನಾನು ನಿಮಗೆ ಹೇಗೆ ಕಾಣಿಸುತ್ತೇನೆ ಅದು ಹೇಳು ಮೊದಲು ಅಂದರು. ನನಗೂ ನೀವು ರಾಮನ ಹಾಗೇ ಕಾಣಿಸುತ್ತೀರ.. ನೀವು ರಾಮ ಹಾಗೆ ಇದ್ದರೆ ಚೆನ್ನಾಗಿರುತ್ತೆ ಎಂದು ಹೇಳಿದೆ. ಆಗ ಅವರು ಆಹಾ ನೀನು ನನಗಿಂತ ಕಿಲಾಡಿ. ರಾಮನ ತರ ಇದ್ದರೆ ಅಂತ ಹೇಳುತ್ತೀಯ. ರಾಮನ ತರ ಇದೀಯಾ ಅಂತ ಹೇಳಲ್ಲ. ಎಷ್ಟೇ ಆಗಲಿ, ನಿನಗೂ ಸ್ವಲ್ಪ ಎಜ್ಯುಕೇಷನ್ ಇದೆ ಎಂದು ಹೇಳಿದರು" ಎಂದು ಪಾರ್ವತಮ್ಮ ರಾಜ್‌ಕುಮಾರ್ ಆ ಘಟನೆಯನ್ನು ನೆನಪಿಸಿಕೊಂಡಿದ್ದರು.

ಬಸವಣ್ಣನ ಪಾತ್ರ ನೋಡುವುದಕ್ಕೆ ಆಗಲಿಲ್ಲ

ಪಾರ್ವತಮ್ಮ ಅವರಿಗೆ ಅಣ್ಣಾವ್ರನ್ನು ಬಸವಣ್ಣನ ಪಾತ್ರದಲ್ಲಿ ನೋಡುವುದಕ್ಕೆ ಇಷ್ಟಪಟ್ಟಿದ್ದರು. ಅದು ಕೊನೆವರೆಗೂ ಸಾಧ್ಯವಾಗಲೇ ಇಲ್ಲ. "ನನಗೆ ಇದೆಲ್ಲ ಹೊಸದು. ನಮ್ಮ ತಂದೆ ನಾಟಕ ನೋಡಿಕೊಂಡು ಬಂದು ಏನು ಚಂದ ಇರುತ್ತೆ ಎಂದು ಹೇಳೋರು. ನಾನು ನೋಡಬೇಕಲ್ಲ. ನಾನು ನೋಡುತ್ತೇನಾ ಅಂದುಕೊಂಡಿದ್ದೆ. ಆಮೇಲೆ ನಮ್ಮ ತಂದೆ ಬಸವಣ್ಣ ಪಾತ್ರದ ಬಗ್ಗೆ ಯಾವಾಗಲೂ ಹೇಳೋರು. ಅದನ್ನು ನಾನು ನೋಡಲಿಕ್ಕೆ ಆಗಲೇ ಇಲ್ಲ. ನಾನು ಒಂದು ಸೀರಿಯಲ್‌ ಆದರೂ ಮಾಡಿ, ಅವರನ್ನು ಬಸವಣ್ಣನ ರೂಪದಲ್ಲಿ ನೋಡಬೇಕು ಅಂತಿತ್ತು. ಚಿತ್ರದುರ್ಗದಲ್ಲಿ ಪ್ರತಿಯೊಬ್ಬರೂ ಹೇಳೋರು. ಆ ಬಸವಣ್ಣನನ್ನು ಯಾರೂ ಮಾಡೋಕೂ ಆಗಲ್ಲ. ನೋಡುವುದಕ್ಕೂ ಆಗೋದಿಲ್ಲ ಅನ್ನೋರು. ಆ ಬಸವಣ್ಣ ಅಲ್ಲಿ ಕೂತಿದ್ದರೆ, ಬಸವಣ್ಣ ಹಾಗೇ ಇರೋದು ಅಂತ. ಅವರಿಗೆ ಮೇಕಪ್ ಹಾಕಿಸಿ, ಒಂದು ಫೋಟೊವನ್ನಾದರೂ ತೆಗೆದಿಟ್ಟುಕೊಳ್ಳಬೇಕಿತ್ತು. ಅದೊಂದು ಇಷ್ಟ ನನಗಿತ್ತು. ಒಂದು ದಿನ ಹಿರಿಯ ಮುರುಘಾ ಸ್ವಾಮಿಗಳು ಬಂದು ನಾಟಕ ನೋಡಿದ್ದರಂತೆ. ಮಾರನೇ ದಿನ ಅವರೆಲ್ಲನ್ನೂ ಕರೆಸಿ ಹೇಳಿದರಂತೆ. ಮಾಂಸ ತಿನ್ನೋನಾದರೇನು? ಬೇಡರವನು ವಾಲ್ಮೀಕಿ ಆಗಲಿಲ್ಲವೇ? ಆ ಪಾರ್ಟ್ ಅನ್ನು ಯಾರಾದರೂ ಮಾಡುವುದಕ್ಕೆ ಸಾಧ್ಯನಾ ಅಂತ ಅನಿಸುತ್ತಿದೆ" ಎಂದು ಪಾರ್ವತಮ್ಮ ಹೇಳಿದ್ದರು.

English summary
Once Parvathamma Rajkumar asked Rajkumar to be like Lord Srirama in real life.
Read more about: rajkumar parvathamma rajkumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X