ಸರೋಜಾ ದೇವಿ ಕೈಯಲ್ಲೇ ಪ್ರಾಣಬಿಟ್ಟ ಪತಿ; ಕಣ್ಮುಂದೆ ಸಾವನ್ನಪ್ಪಿದ್ದರೂ ಕಣ್ಣೀರು ಹಾಕಲಿಲ್ಲ..ವೈದ್ಯರು ಕೆನ್ನೆಗೆ ಬಾರಿಸಿದ್ದೇಕೆ?
ಬಹುಭಾಷಾ ನಟಿ ಸರೋಜಾ ದೇವಿಯವರು ಇಂದು (ಜುಲೈ 14) ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ನಟಿ 87ನೇ ವಯಸ್ಸಿಗೆ ತಮ್ಮ ಇಹಲೋಕದ ಪಯಣವನ್ನು ಮುಗಿಸಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿ ನಟಿಸಿ ಸೈ ಎನಿಸಿಕೊಂಡು ಅಪ್ಪಟ ಬೆಂಗಳೂರಿನ ನಟಿ ಸಾಧಿಸಿದ್ದು ಬೆಟ್ಟದಷ್ಟು. ಇವರ ಸಾಧನೆಯನ್ನು ಗುರುತಿಸಿ ಭಾರತದ ಸರ್ಕಾರ ಅತ್ಯುನ್ನತ ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿ ನೀಡಿದೆ.
70, 80ರ ದಶಕದಲ್ಲಿ ಈ ಮಟ್ಟಿಗೆ ಪುರುಷ ಪ್ರಧಾನವಾಗಿದ್ದ ಸಮಾಜದಲ್ಲಿ ಸರೋಜಾ ದೇವಿ ಸ್ಟಾರ್ ಪಟ್ಟಕ್ಕೆ ಏರಿದರು. ಡಾ.ರಾಜ್‌ಕುಮಾರ್, ಎಂಜಿಆರ್, ಎನ್‌ಟಿಆರ್, ಶಿವಾಜಿ ಗಣೇಶನ್ ಅಂತ ದಿಗ್ಗಜರೊಂದಿಗೆ ನಟಿಸಿ ಸಿನಿಮಾ ಪ್ರೇಮಿಗಳ ಪಾಲಿಗೆ ಮೇರು ನಟಿ ಎನಿಸಿಕೊಂಡರು. ಈಗ ಅವರು ಬಿಟ್ಟು ಹೋದ ಸಿನಿಮಾಗಳಷ್ಟೇ ನೆನಪು. ಸರೋಜಾ ದೇವಿ ವೃತ್ತಿ ಬದುಕಿನ ಬಗ್ಗೆ ಬಹುತೇಕ ಮಂದಿಗೆ ಗೊತ್ತಿದೆ. ಆದರೆ, ಅವರ ವೈಯಕ್ತಿಕ ಬದುಕಿನ ಬಗ್ಗೆ ಅಷ್ಟಾಗಿ ಎಲ್ಲಿಯೂ ಹೇಳಿಕೊಂಡಿಲ್ಲ.

ಹಿರಿಯ ನಟಿ ಸರೋಜಾ ದೇವಿಗೆ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವುದಕ್ಕೆ ಪೋಷಕರಿಂದ ಬೆಂಬಲವಿತ್ತು. ಅವರೇ ಮಗಳನ್ನು ಪ್ರೋತ್ಸಾಹಿಸುತ್ತಿದ್ದರು. ಆದರೆ, ಮದುವೆ ವಿಷಯಕ್ಕೆ ಬಂದರೆ ಮಾತ್ರ ಕಟ್ಟು ನಿಟ್ಟಾಗಿದ್ದರು. ಪ್ರೀತಿ ಗೀತಿ ಮಾಡುವಂತಿಲ್ಲ ಎಂದು ಕಟ್ಟಪ್ಪಣೆ ಮಾಡಿದ್ದರು. ಹೀಗಾಗಿ ಸರೋಜಾ ದೇವಿ ಆ ಕಡೆ ಮುಖ ಹಾಕುವುದಕ್ಕೂ ಹೋಗಲಿಲ್ಲ. ಸರೋಜಾ ದೇವಿ ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ಮನೆಯವರೇ ನೋಡಿ ಶ್ರೀಹರ್ಷ ಎಂಬುವವರೊಂದಿಗೆ ಮದುವೆ ಮಾಡಿದ್ದರು. ಮರು ಮಾತಾಡದೇ ಸರೋಜಾ ದೇವಿ ಒಪ್ಪಿಕೊಂಡಿದ್ದರು.
ತಮ್ಮ ಮದುವೆ ಹೇಗಾಯ್ತು? ಮನೆಯಲ್ಲಿ ಸರೋಜಾ ದೇವಿಯವರ ಅಮ್ಮ ವಿಧಿಸಿದ್ದ ಷರತ್ತು ಏನು? ಪತಿ ಶ್ರೀಹರ್ಷ ವೃತ್ತಿ ಏನಾಗಿತ್ತು? ಮದುವೆ ಬಗ್ಗೆ ಹನಿಮೂನ್‌ಗೆ ಎಲ್ಲಿಗೆ ಹೋಗಿದ್ದರು? ಪತಿ ದಿಢೀರ್ ನಿಧನ ಹೊಂದಿದ್ದೇಗೆ? ಆ ದಿನ ಅವರು ಅಳಲಿಲ್ಲ ಯಾಕೆ? ವೈದ್ಯರೊಬ್ಬರು ಬಂದು ಕೆನ್ನೆಗೆ ಬಾರಿಸಿದ್ದು ಯಾಕೆ? ಅನ್ನೋದನ್ನು ಸರೋಜಾ ದೇವಿಯವರು ಜೀ ಕನ್ನಡದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ವಿವರವಾಗಿ ಹೇಳಿದ್ದರು.
ಹೌದು ಸರೋಜಾ ದೇವಿ ಯಶಸ್ಸಿನ ಉತ್ತುಂಗದಲ್ಲಿ ಇದ್ದರು. ಅಂತಹ ಸಮಯದಲ್ಲಿಯೇ ಸರೋಜಾ ದೇವಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಜರ್ಮನಿಯಲ್ಲಿ ಎಂಜಿನಿಯರ್ ಆಗಿದ್ದ ಶ್ರೀಹರ್ಷ ಅವರೊಂದಿಗೆ 1986, ಮಾರ್ಚ್ 1ರಂದು ಸಪ್ತಪದಿ ತುಳಿದಿದ್ದರು. ಮದುವೆ ಬಳಿಕ ಸರೋಜಾ ದೇವಿ ಸಾಂಸಾರಿಕ ಜೀವನದಲ್ಲೂ ಖುಷಿಯಾಗಿದ್ದರು. ಪತಿ ಶ್ರೀಹರ್ಷ ಕೂಡ ಇವರ ಸಿನಿಮಾ ಕರಿಯರ್‌ಗೆ ಬೆಂಬಲ ನೀಡಿದ್ದರು.
ಸರೋಜಾ ದೇವಿಯವರಿಗೆ ಸಿನಿಮಾದಲ್ಲಿ ನಟಿಸುವುದಕ್ಕೆ ಪ್ರೋತ್ಸಾಹಿಸಿದ್ದೇನೋ ಸರಿ. ಆದರೆ, ಯಾರನ್ನೂ ಲವ್ ಮಾಡಬಾರದು. ತಮ್ಮ ಜಾತಿಯ ಹುಡುಗನನ್ನೇ ಮದುವೆ ಆಗಬೇಕು ಎಂದು ಕಟ್ಟಪ್ಪಣೆ ಮಾಡಿದ್ದರು. ಹೀಗಾಗಿ ಲವ್ ಮಾಡುವುದು ಸಾಧ್ಯವೇ ಇರಲಿಲ್ಲ ಎಂದು ಸರೋಜಾ ದೇವಿ ಹೇಳಿಕೊಂಡಿದ್ದರು. ಅವರು ಹೇಳಿದಂತೆ ಮನೆಯವರೇ ಜರ್ಮನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಶ್ರೀಹರ್ಷ ಎಂಬುವವರೊಂದಿಗೆ ಮದುವೆ ನಿಶ್ಚಯ ಮಾಡಿದ್ದರು. ಆಗ ಪತಿ ಶ್ರೀಹರ್ಷ "ನಾನು ಎಂಜಿನಿಯರ್.. ನೀವು ಆಕ್ಟರ್.. ಇಬ್ಬರಿಗೂ ಅಡ್ಜೆಸ್ಟ್ ಆಗುತ್ತಾ? ಎಂದು ಕೇಳಿದ್ದರು. ಆಗ ಸರೋಜಾ ದೇವಿ 'ಹೂಂ' ಎಂದು ತಲೆ ಅಲ್ಲಾಡಿಸಿದ್ದರಂತೆ.

ಸರೋಜಾ ದೇವಿ ದಾಂಪತ್ಯ ಜೀವನಕ್ಕೆ ಕಾಲಿಡುವಾಗ ಅವರ ಕೈಯಲ್ಲಿ ಕೈ ತುಂಬಾ ಸಿನಿಮಾಗಳಿದ್ದವು. ಮನೆಯಲ್ಲೇ ನಿಶ್ಚಿತಾರ್ಥ ನಡೆದಿತ್ತು. ಬೆಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲ್‌ನಲ್ಲಿ ಮದುವೆ ಸಮಾರಂಭ ನಡೆದಿತ್ತು. ಮದುವೆ ಬಗ್ಗೆ ಕಾಶ್ಮೀರಕ್ಕೆ ಹನಿಮೂನ್‌ಗೆ ಹೋಗಿದ್ವಿ ಅಂತಾನೂ ಸರೋಜಾ ಹೇಳಿಕೊಂಡಿದ್ದರು. ಮದುವೆ ಬಳಿಕ ಹೇಗೋ ಅಂದುಕೊಂಡಿದ್ವರಿಗೆ ಪತಿ ಸಂಪೂರ್ಣ ಸಾಥ್ ನೀಡಿದ್ದರು. "ಮದುವೆ ಬಳಿಕವೇ ನನಗೆ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಸಿಕ್ಕಿದ್ದು ಎಂದು ಹೇಳಿಕೊಂಡಿದ್ದರು.
ಸರೋಜಾ ದೇವಿ ಹಾಗೂ ಶ್ರೀಹರ್ಷ ಅವರಿಗೆ ಮಕ್ಕಳು ಇರಲಿಲ್ಲ. ಹೀಗಾಗಿ ಹೆಣ್ಣು ಮಗುವನ್ನು ದತ್ತು ಪಡೆದಿಕೊಂಡಿದ್ದರು. ಸರೋಜಾದೇವಿಯವರಿಗೆ ಇಬ್ಬರು ಮೊಮ್ಮಕ್ಕಳು. ಇಂದಿರಾ ಗಾಂಧಿ ಅಭಿಮಾನಿಯಾಗಿದ್ದರಿಂದ ಮಗಳಿಗೆ ಇಂದಿರಾ ಅಂತಲೂ, ಎಂಜಿಆರ್ ಮಗನನ್ನು ಎತ್ತಿಕೊಂಡು ರಾಮಚಂದ್ರ ಎನ್ನುತ್ತಿದ್ದರಿಂದ ಗೌತಮ್ ರಾಮಚಂದ್ರನ್ ಅಂತಲೂ ಹೆಸರಿಟ್ಟಿದ್ದಾಗಿ ಸರೋಜಾ ದೇವಿ ಹೇಳಿಕೊಂಡಿದ್ದಾರೆ. ಆದರೆ, ಪತಿ ಶ್ರೀಹರ್ಷಿ 1986ರಲ್ಲಿ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇಲ್ಲಿಂದ ಅವರ ಬದುಕಿನ ಕಷ್ಟದ ದಿನಗಳು ಆರಂಭ ಆಯ್ತು ಎಂದಿದ್ದಾರೆ.
ಪತಿ ಶ್ರೀಹರ್ಷ ತೀರಿಕೊಂಡಾಗ ಸರೋಜಾ ದೇವಿಯವರು ಅಳಲಿಲ್ಲ. ಆ ಶಾಕ್‌ನಿಂದ ಹೊರಬರುವುದಕ್ಕೆ ಆಗಿರಲಿಲ್ಲ. "ಆ ವಿಷಯ ಹೇಳಿ ನಾನು ಕಣ್ಣೀರು ಹಾಕಲಿಲ್ಲ. ಹಾಗೇ ಸುಮ್ಮನೆ ನಿಂತುಬಿಟ್ಟಿದ್ದೆ. ಎಲ್ಲರೂ ಅತ್ತುಬಿಡಿ, ಇಲ್ಲಾ ಅಂದ್ರೆ ಶಾಕ್ ಆಗುತ್ತೆ ಅಂತಿದ್ರು. ಆಗ ಡಾಕ್ಟರ್ ಬಂದು ಕಪ್ಪಾಳಕ್ಕೆ ಬಾರಿಸಿದರು. ಆ ಮೇಲೆ ನಾನು ಜೋರಾಗಿ ಕಿರುಚಿಕೊಂಡೆ. ಫಿಯೆಟ್ ಕಾರ್‌ನ ಜಜ್ಜಿ ಹಾಕ್ಬಿಟ್ಟೆ" ಎಂದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿದ್ದರು.


Click it and Unblock the Notifications











